ಶನಿವಾರ, ಜನವರಿ 25, 2020
16 °C
‘ಬೆಂಗಳೂರು ಪುಸ್ತಕೋತ್ಸವ’ಕ್ಕೆ ಸಿಗದ ಅನುಮತಿ

ಅಕ್ಷರ ಲೋಕಕ್ಕೆ ಎಸಗಿದ ಅಪಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು  ಹತ್ತು ದಿನಗಳ ಪುಸ್ತಕೋತ್ಸವಕ್ಕೆ ಅರಮನೆ ಮೈದಾನದಲ್ಲಿ ಅನುಮತಿ ದೊರೆಯದೇ ಇರುವುದಕ್ಕೆ ನಾಡಿನ ಸಾಹಿತಿಗಳು ಬೇಸರ ವ್ಯಕ್ತಪಡಿಸಿದ್ದು, ಅವರ ಅಭಿಪ್ರಾಯ ಇಲ್ಲಿದೆಮೊಟಕುಗೊಳಿಸುವುದು ಸರಿಯಲ್ಲ

ಪುಸ್ತಕೋತ್ಸವ ಪ್ರಾಮುಖ್ಯದ  ಬಗ್ಗೆ ಸರ್ಕಾರಕ್ಕೆ  ಅರಿವಿರಬೇಕು. ಇತರೆ ಭಾಷೆಗಳಿಗೆ ಹೋಲಿಸಿದರೆ ರಾಜ್ಯದಲ್ಲಿ  ಪುಸ್ತಕ ಖರೀದಿಸಿ, ಓದುವವರ ಸಂಖ್ಯೆ ಕಡಿಮೆಯಿದೆ. ಈಚಿನ ದಿನಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಪುಸ್ತಕೋತ್ಸವಗಳಿಂದಲೇ  ಪುಸ್ತಕ ಖರೀದಿಸಿ, ಓದುವ ಸಂಸ್ಕೃತಿ ಬೆಳೆಯುತ್ತಿದೆ.

ಈ ಸಂದರ್ಭದಲ್ಲಿ  ಸರ್ಕಾರವೇ ಮುಂದೆ ನಿಂತು ಉತ್ಸವವನ್ನು ಆಯೋಜನೆ ಮಾಡಬೇಕೇ  ಹೊರತು, ಹೀಗೆ 10 ದಿನದ ಉತ್ಸವವನ್ನು ಮೂರೇ ದಿನಕ್ಕೆ ಮೊಟಕುಗೊಳಿಸಿದ್ದು ಸರಿಯಲ್ಲ. 

-ಡಾ.ಮಮತಾ ಜಿ.ಸಾಗರ್, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ.ನಿರಾಸೆಯಾಗಿದೆ

ಬೆಂಗಳೂರು  ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದಲೂ ಜನ ಬರುತ್ತಾರೆ. ಅರಮನೆ ಮೈದಾನದಲ್ಲಿ ಹತ್ತು ದಿನಗಳ ಕಾಲ  ಪುಸ್ತಕೋತ್ಸವ ನಡೆದರೂ ಜನ ಕಿಕ್ಕಿರಿದು ಸೇರುತ್ತಾರೆ. ಮಕ್ಕಳನ್ನು, ಮನೆಗೆ ಬರುವ ನೆಂಟರಿಷ್ಟರನ್ನು ಉತ್ಸವಕ್ಕೆ ಕರೆದುಕೊಂಡು ಹೋಗುವುದೇ ಒಂದು ಸಂಭ್ರಮ. ಇದಕ್ಕೆ ತಡೆ ಹಾಕಿರುವುದಕ್ಕೆ ನಿರಾಸೆಯಾಗಿದೆ.

-ಪ್ರೊ.ಸಿ.ಜಯಶ್ರೀ ಕಂಬಾರ, ಕವಯತ್ರಿ.

ಸಾಂಸ್ಕೃತಿಕ ದುರಂತ

ಪುಸ್ತಕ ಸಂಸ್ಕೃತಿಯೇ ದೊಡ್ಡ  ವಿದ್ಯಾನಿಧಿ. ವರ್ಷಕ್ಕೊಮ್ಮೆ ನಡೆಯುವ ಪುಸ್ತಕ ಜಾತ್ರೆಯಲ್ಲಿ ಸದಭಿರುಚಿಯ ಪುಸ್ತಕಗಳನ್ನು ನೋಡುವುದೇ ಒಂದು ಹಬ್ಬ. ಪುಸ್ತಕೋತ್ಸವವನ್ನು ವಾಣಿಜ್ಯ ಉದ್ದೇಶವೆಂಬ ಸೀಮಿತ ಚೌಕಟ್ಟಿನಲ್ಲಿಟ್ಟು ನೋಡುವುದು ಸರಿಯಲ್ಲ. ಹತ್ತು ದಿನಗಳ ಪುಸ್ತಕೋತ್ಸವಕ್ಕೆ ಅನುಮತಿ ದೊರೆಯದೇ ಇರುವುದು ಸಾಂಸ್ಕೃತಿಕ ದುರಂತ.

-ಪ್ರೊ.ಕಮಲಾ ಹಂಪನಾ-, ಹಿರಿಯ ಸಾಹಿತಿ.ನೋವಿನ ಸಂಗತಿ


ಪುಸ್ತಕವೆಂದರೆ ದೊಡ್ಡ ಅರಿವಿನ ಕಣಜ. ವಿಭಿನ್ನ ಭಾಷೆಯ, ಅಭಿರುಚಿಯ ಪುಸ್ತಕಗಳನ್ನು ನೋಡುವುದೇ ಒಂದು ಚಂದ. ಪುಸ್ತಕೋತ್ಸವದಲ್ಲಿ ನಡೆಯುವ ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದೆ. ಈ ಬಾರಿ ಉತ್ಸವಕ್ಕೆ ಅನುಮತಿ ದೊರೆಯದೇ ಇರುವುದು ನೋವಿನ ಸಂಗತಿ.

-ಸುಬ್ಬು ಹೊಲೆಯಾರ್, ಕವಿ.ಕೇವಲ ಪುಸ್ತಕ ಮಾರಾಟವಲ್ಲ..


‌ಪುಸ್ತಕೋತ್ಸವದಲ್ಲಿ ಕೇವಲ ಪುಸ್ತಕ ಮಾರಾಟ ಮಾತ್ರ ನಡೆಯುವುದಿಲ್ಲ. ಬದಲಿಗೆ ಕವಿಗೋಷ್ಠಿ, ಸಾಹಿತಿಗಳೊಂದಿಗೆ ಸಂವಾದ ನಡೆಯುತ್ತದೆ.   ಇದೊಂದು ಬಗೆಯ ಸಾಹಿತ್ಯ ಜಾತ್ರೆ. ಇದಕ್ಕೆ ಅನುಮತಿ ದೊರೆಯದೇ ಇರುವುದು ಅಕ್ಷರ ಲೋಕಕ್ಕೆ ಆದ ಅಪಚಾರ--.

-ಎಚ್.ಎಲ್.ಪುಷ್ಪಾ, ಸಾಹಿತಿ.

ಪ್ರತಿಕ್ರಿಯಿಸಿ (+)