ಭಾನುವಾರ, ಮಾರ್ಚ್ 7, 2021
27 °C
ನಾಲ್ಕನೇ ಲೋಕಸಭಾ ಚುನಾವಣೆ– 1962

ಅಖಾಡಕ್ಕೆ ಧುಮುಕಿದ್ದು 4 ಮಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಖಾಡಕ್ಕೆ ಧುಮುಕಿದ್ದು 4 ಮಂದಿ

ಚಾಮರಾಜನಗರ: ಮೈಸೂರು ಮತ್ತು ಚಾಮರಾಜನಗರಕ್ಕೆ ಅವಿನಾಭಾವ ಸಂಬಂಧವಿದೆ. ಗಡಿಜಿಲ್ಲೆಯ ಜನರ ಹೃದಯದ ಮಿಡಿತ ಮೈಸೂರಿನಲ್ಲಿ ಮಿಳಿತಗೊಂಡಿದೆ. ಲೋಕಸಭಾ ಚುನಾವಣೆ ಕೂಡ ಇದರಿಂದ ಹೊರತಲ್ಲ.ಕರ್ನಾಟಕದಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದಿದ್ದು 1952ರಲ್ಲಿ. 1957ರಲ್ಲಿ ಎರಡನೇ ಲೋಕಸಭಾ ಚುನಾವಣೆ ನಡೆಯಿತು. ಆಗ ಚಾಮರಾಜನಗರ ಜಿಲ್ಲೆಯು ದ್ವಿಸದಸ್ಯ ಲೋಕಸಭಾ ಕ್ಷೇತ್ರವಾಗಿದ್ದ ಮೈಸೂರು ಜಿಲ್ಲೆಗೆ ಒಳಪಟ್ಟಿತ್ತು. ಹೀಗಾಗಿ, ಆರಂಭದ ಎರಡು ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರ ಅಸ್ತಿತ್ವದಲ್ಲಿ ಇರಲಿಲ್ಲ.ದ್ವಿಸದಸ್ಯ ಕ್ಷೇತ್ರದಲ್ಲಿ ಒಂದು ಸ್ಥಾನವನ್ನು ಪರಿಶಿಷ್ಟ ಜಾತಿಗೆ ಮೀಸಲಿಡಲಾಗುತ್ತಿತ್ತು. 1962ರ ಚುನಾವಣೆ ವೇಳೆಗೆ ರಾಜ್ಯದಲ್ಲಿ ದ್ವಿಸದಸ್ಯ ಕ್ಷೇತ್ರದ ಪರಿಕಲ್ಪನೆ ಕೊನೆಗೊಂಡಿತು. ಜನಸಂಖ್ಯೆವಾರು ಕ್ಷೇತ್ರಗಳನ್ನು ಪರಿಶಿಷ್ಟ ಜಾತಿಗೆ ಮೀಸಲಿಡಬೇಕು ಎಂಬ ಭಾರತ ಚುನಾವಣಾ ಆಯೋಗದ ನಿರ್ಧಾರದ ನ್ವಯ ಮೀಸಲು ಕ್ಷೇತ್ರಗಳು ಜನ್ಮ ತಾಳಿದವು. ಅಂತಹ ಕ್ಷೇತ್ರಗಳಲ್ಲಿ ಚಾಮರಾಜನಗರವೂ ಒಂದಾಗಿತ್ತು.

1962ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರ (ಪರಿಶಿಷ್ಟ ಜಾತಿ) ಜನ್ಮ ತಳೆಯಿತು. ಚಾಮರಾಜ ನಗರ, ನಂಜನಗೂಡು, ತಿ. ನರಸೀಪುರ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಸಂತೇಮರಹಳ್ಳಿ ಹಾಗೂ ಬನ್ನೂರು ವಿಧಾನಸಭಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದವು.ಹೊಸ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಉಮೇದುವಾರರ ಭರಾಟೆ ಇರಲಿಲ್ಲ. ಆಗ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಸಂಖ್ಯೆ ಕೇವಲ 4. ಕ್ಷೇತ್ರದಲ್ಲಿ ಒಟ್ಟು 4,14,982 ಮತದಾರರು ಇದ್ದರು. ಇವರಲ್ಲಿ 2,56,966 ಮತದಾರರು ಮಾತ್ರ ಮತದಾನದ ಹಕ್ಕು ಚಲಾಯಿಸಿದ್ದರು. ಶೇ 61.92ರಷ್ಟು ಮತದಾನವಾಗಿತ್ತು. ಮತದಾನವಾಗಿದ್ದ ಪೈಕಿ 2,43,067 ಮತಗಳು ಸಿಂಧುಗೊಂಡಿದ್ದವು. 13,899 ಮತಗಳು ಅಸಿಂಧುಗೊಂಡಿದ್ದವು.ಚಾಮರಾಜನಗರ ಕ್ಷೇತ್ರದಲ್ಲಿ ಮೂರು ಬಾರಿ ಸಂಸದರಾಗಿದ್ದ ಎಸ್‌.ಎಂ. ಸಿದ್ದಯ್ಯ ಅಪ್ಪಟ ಅಂಬೇಡ್ಕರ್‌ವಾದಿ. ಮೈಸೂರು ದ್ವಿಸದಸ್ಯ ಕ್ಷೇತ್ರದ ಪಲ್ಲಟಗೊಂಡಾಗ ಚಾಮರಾಜನಗರ ಕ್ಷೇತ್ರದತ್ತ ಅವರು ಮುಖ ಮಾಡಿದರು. ಸಿದ್ದಯ್ಯ ಅವರು 1952ರ ಪ್ರಥಮ ಚುನಾವಣೆಯಲ್ಲಿ ಮೈಸೂರು ದ್ವಿಸದಸ್ಯ ಕ್ಷೇತ್ರದಲ್ಲಿ ಕಿಸಾನ್‌ ಮಜ್ದೂರ್‌ ಪ್ರಜಾ ಪಕ್ಷದಿಂದ ಕಣಕ್ಕೆ ಇಳಿದು ಸೋಲು ಕಂಡಿದ್ದರು. ನಂತರ 1957ರ ಚುನಾವಣೆ ವೇಳೆಗೆ ಕೈಪಾಳಯಕ್ಕೆ ಸೇರ್ಪಡೆಗೊಂಡಿದ್ದರು. ಹೀಗಾಗಿ, ಎರಡನೇ ಚುನಾವಣೆಯಲ್ಲಿ ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದರು.ಚಾಮರಾಜನಗರ ಕ್ಷೇತ್ರಕ್ಕೆ 1962ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಸಿದ್ದಯ್ಯ ಮತ್ತೆ ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದರು. ಈ ಭಾಗದ ಮತದಾರರು ಅವರನ್ನು ಕೈಬಿಡಲಿಲ್ಲ. ಎದುರಾಳಿಯಾಗಿದ್ದ ಪ್ರಜಾ ಸಮಾಜವಾದಿ ಪಕ್ಷದಿಂದ(ಪಿಎಸ್‌ಪಿ) ಅಖಾಡಕ್ಕೆ ಇಳಿದಿದ್ದ ಎಂ. ಶಿವಣ್ಣ ವಿರುದ್ಧ ಗೆಲುವಿನ ನಗೆ ಬೀರಿದರು. ಸಿದ್ದಯ್ಯ 1,17,810 ಮತ ಪಡೆದರು. ಶಿವಣ್ಣ 70,412 ಮತ ಪಡೆದರು. ಕಣದಲ್ಲಿದ್ದ ಪಕ್ಷೇತರ ಅಭ್ಯರ್ಥಿಗಳಾದ ಸಿ.ಎಚ್‌. ಬಸವಯ್ಯ– 28,655 ಹಾಗೂ ಡಿ. ಧರ್ಮರತ್ನಾಕರ 26,190 ಮತ ಪಡೆದರು. ಸಿಂಧುಗೊಂಡಿದ್ದ ಮತಗಳಲ್ಲಿ ಶೇ 48ರಷ್ಟು ಮತ ಪಡೆದು ಸಿದ್ದಯ್ಯ ಜಯಗಳಿಸಿದ್ದು, ಈ ಚುನಾವಣೆಯ ವಿಶೇಷವಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.