ಭಾನುವಾರ, ಜೂನ್ 20, 2021
25 °C

ಅಗಣಿತ ಚಹರೆಗಳ ಅಂಡಮಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ಯಾವ ತುದಿಯಲ್ಲಿ ನಿಂತರೂ ಅಲ್ಲಿಂದ ಅಗಾ ಅಷ್ಟು ದೂರ ಇರುವ ಅಂಡಮಾನ್ ನಮ್ಮದಾಗಿದ್ದು ಹೇಗೆ? ಯಾವಾಗ? ಸೆಲ್ಯುಲಾರ್ ಜೈಲಿನ ಕತೆಗಳನ್ನೋ, ಆದಿವಾಸಿಗಳ ಕುರಿತೋ, ಭಾರತದ ಏಕೈಕ ಅಗ್ನಿಪರ್ವತ ಇರುವ ಪ್ರದೇಶವೆಂದೋ ಅಥವಾ ಕೇಂದ್ರಾಡಳಿತ ಪ್ರದೇಶಗಳ ಹೆಸರು ಉರುಹೊಡೆವಾಗ ಆ ಪಟ್ಟಿಯಲ್ಲಿ ಈ ಹೆಸರೂ ಬಂದಿತೆಂದೋ ಅಲ್ಲದೆ ಅಂಡಮಾನ್ ನಮ್ಮ ಪ್ರಜ್ಞೆಯಲ್ಲಿ ಇಳಿದಿರುವುದು ಕಡಿಮೆ.

 

ಭಾರತ ಎಂದು ಊಹಿಸಿಕೊಂಡರೆ ಕಣ್ಮುಂದೆ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ, ರಾಜಸ್ತಾನದಿಂದ ಮಣಿಪುರದ ತನಕ ಹರಡಿರುವ ನಕಾಶೆ ಕಣ್ಣೆದುರಿಗೆ ಬಂದಂತೆ ಅಂಡಮಾನ್ ಬರುವುದಿಲ್ಲ. ಹೀಗೆ ನಮ್ಮ ಮನಸ್ಸಿನಿಂದಷ್ಟೇ ಅಲ್ಲ, ಭೌಗೋಳಿಕವಾಗಿಯೂ ದೂರವಿರುವ ಈ ನಾಡು ದೂರವೇ ಉಳಿಯುವಂತೆ ಮಾಡಿದ್ದು ಸಮುದ್ರ ಹಾಗೂ ಅಲ್ಲಿನ ಆದಿವಾಸಿಗಳ ಕುರಿತಾದ ವರ್ಣರಂಜಿತ ಊಹಾಪೋಹಗಳು.ಬರ್ಮಾದ ಕೇಪ್‌ನೆಗ್ರಿಸ್ ಹಾಗೂ ಸುಮಾತ್ರಾ ದ್ವೀಪಗಳ ಅಕಿನ್‌ಹೆಡ್ ಪರ್ವತ ಶ್ರೇಣಿಗಳ ಬಾಗಿದ ಮುಂದುವರಿಕೆಯೇ ಅಂಡಮಾನ್ ನಿಕೋಬಾರ್ ದ್ವೀಪಗಳು ಎನ್ನಲಾಗುತ್ತದೆ.ವಿಮಾನದಲ್ಲಿ ಅಂಡಮಾನ್ ಸಮೀಪಿಸುತ್ತಿದ್ದಂತೆಯೇ ನೀಲಸಾಗರದ ನಡುವೆ ಕಾಣುವ ಹಚ್ಚಹಸಿರಿನ ನಯನ ಮನೋಹರ ದ್ವೀಪಗಳು ಆಯಿಲ್‌ಪೇಂಟ್ ನೋಡುತ್ತಿರುವ ಭಾವನೆ ಮೂಡಿಸುತ್ತವೆ. ವರ್ಷದ ಆರು ತಿಂಗಳು ಬೀಳುವ 320 ಸೆ.ಮೀ ಮಳೆಗೆ ದ್ವೀಪಗಳಲ್ಲಿ ದಟ್ಟಕಾಡು ಆವರಿಸಿದ್ದರೆ ದ್ವೀಪಗಳ ನಡುವಿನ ಕ್ರೀಕ್‌ಗಳಲ್ಲಿ ಕಾಂಡ್ಲ ಕಾಡುಗಳು ಹಸಿರನ್ನು ಸಾಗರದೊಳಗೂ ವಿಸ್ತರಿಸಿವೆ.ಮಲಯಾ ಭಾಷೆಯಲ್ಲಿ ಹಂಡುಮಾನ್ ಎಂದರೆ ರಾಮಾಯಣದ ಹನುಮಾನ್. ಹಂಡುಮನ್ ದ್ವೀಪಗಳೆಂದು ಇವನ್ನು ಕರೆದು ಅದಕ್ಕೇ ಅಂಡಮಾನ್ ಎಂಬ ಹೆಸರು ಬಂದಿರಬೇಕೆಂದು ಊಹಿಸಲಾಗಿದೆ. 2ನೇ ಶತಮಾನದಲ್ಲಿ ವಿಶ್ವ ಭೂಪಟ ರಚಿಸಿದ ಅಲೆಕ್ಸಾಂಡ್ರಿಯಾದ ಟಾಲೆಮಿ ಅಂಡಮಾನ್ ದ್ವೀಪಗಳನ್ನು `ನರಭಕ್ಷಕರ ನಾಡು~ ಎಂದು ಗುರುತಿಸಿದ್ದ.

 

7ನೇ ಶತಮಾನದಲ್ಲಿ ಪರ್ಷಿಯನ್ ಹಡಗನ್ನೇರಿ ಭಾರತಕ್ಕೆ ಬಂದ ಇತ್ಸಿಂಗ್ ಎಂಬ ಚೀನಾ ಪ್ರವಾಸಿ ಇವುಗಳನ್ನು ಅಂದಬನ್ ದ್ವೀಪಗಳೆಂದೂ, ಅವು ನರಭಕ್ಷಕರ ನಾಡೆಂದೂ ತನ್ನ ಡೈರಿಯಲ್ಲಿ ಬರೆದಿದ್ದಾನೆ. ದ್ವೀಪವಾಸಿಗಳನ್ನು ಬಣ್ಣಿಸುತ್ತಾ, `ಈ ದ್ವೀಪದ ಜನ ನರಮಾಂಸವನ್ನು ಹಸಿಹಸಿಯಾಗಿ ತಿನ್ನುತ್ತಾರೆ. ಭಯಾನಕ ಮುಖ-ಕಣ್ಣುಗಳಿರುವ ಅವರು ದೊಡ್ಡ ಪಾದಗಳನ್ನು ಹೊಂದಿದ್ದಾರೆ. ನಗ್ನರಾಗಿರುತ್ತಾರೆ. ಅವರ ಬಳಿ ದೋಣಿಯಿಲ್ಲ.ಇದ್ದಿದ್ದರೆ ಆ ದ್ವೀಪ ದಾಟಿ ಹತ್ತಿರ ಬಂದ ಹಡಗುಗಳನ್ನೆಲ್ಲ ಹಿಡಿದು ಮನುಷ್ಯರನ್ನು ತಿಂದಿರುತ್ತಿದ್ದರು!? ಎಂದು ಬರೆದಿದ್ದಾನೆ. ಕ್ರಿ.ಶ 1050ರ ತಂಜಾವೂರು ಶಾಸನವು ದ್ವೀಪಗಳನ್ನು `ತಿಮೈತ್ತೂರು~ ಎಂದು ಉಲ್ಲೇಖಿಸಿದೆ. ಎಂದರೆ ಅಪವಿತ್ರ ಸ್ಥಳ ಎಂದರ್ಥ. ನರಭಕ್ಷಕ ದ್ವೀಪವಾಸಿಗಳಿರುವರೆಂಬ ನಂಬಿಕೆ ಈ ಹೆಸರಿಗೆ ಕಾರಣವಾಗಿರಬಹುದು.   1260ರಲ್ಲಿ ಈ ದ್ವೀಪ ಹಾದುಹೋದ ಮಾರ್ಕೋ ಪೋಲೋ ಇವನ್ನು ದೊಡ್ಡ ದ್ವೀಪಗಳೆಂದು ಕರೆದಿದ್ದಾನೆ. 1322ರಲ್ಲಿ ಹಾದುಹೋದ ಫ್ರೇರ್ ಒಡೊರಿಕ್ ದ್ವೀಪವಾಸಿಗಳನ್ನು ನಾಯಿಮುಖದ ನರಭಕ್ಷಕರೆಂದೂ, 15ನೇ ಶತಮಾನದ ನಿಕೋಲ್ಡ್ರಾ ಕೊಂಟಿ ದ್ವೀಪವಾಸಿಗಳು ಅಪರಿಚಿತರನ್ನು ಸಿಗಿಯುತ್ತಾರೆ ಎಂದೂ ಬರೆದ.

 

ನರಭಕ್ಷಣೆ ಮತ್ತು ದ್ವೀಪವಾಸಿಗಳ ಭಯಾನಕತೆ ಕುರಿತ ಊಹಾಪೋಹಗಳಿಗೆ ಕೊನೆ ಬಿದ್ದಿದ್ದು 1625ರಲ್ಲಿ ಸೀಸರ್ ಫ್ರೆಡೆರಿಕ್ ಎಂಬಾತ ತನ್ನ 18 ವರ್ಷಗಳ ಅನುಭವಕಥನ ಪ್ರಕಟಿಸಿದ ನಂತರ. ಅದೇ ವೇಳೆಗೆ ಈಸ್ಟ್ ಇಂಡಿಯಾ ಕಂಪನಿ ಈ ದ್ವೀಪಗಳ ಕುರಿತು ಆಸಕ್ತಿ ತಳೆಯಿತು.

 

1777ರಲ್ಲಿ ಜಾನ್ ರಿಚಿ ಈ ದ್ವೀಪಗಳಿಗೆ ಭೇಟಿಯಿತ್ತು ಆಗ ಗವರ್ನರ್ ಜನರಲ್ ಆಗಿದ್ದ ವಾರೆನ್ ಹೇಸ್ಟಿಂಗ್ಸ್‌ಗೆ ದ್ವೀಪಸಮೂಹಗಳ ಉಪಯುಕ್ತತೆಯ ಕುರಿತು ವಿವರಿಸಿದ. ನಂತರ ಈ ದ್ವೀಪಗಳ ಸರ್ವೆ ಮಾಡುವಂತೆ 1789ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಹೈಡ್ರೋಗ್ರಾಫರ್ ಆರ್ಕಿಬಾಲ್ಡ್ ಬ್ಲೇರ್‌ನನ್ನು ಕಳಿಸಲಾಯಿತು. ಈಸ್ಟ್ ಇಂಡಿಯಾ ಕಂಪನಿ ಹಡಗುಗಳ ತಂಗುದಾಣವಾಗಿ ಒಡೆದ ಹಡಗುಗಳಲ್ಲಿರುವವರ ರಕ್ಷಣೆಗಾಗಿ ಈ ದ್ವೀಪ ಬಳಸಲು ನಿರ್ಧರಿಸಲಾಯಿತು.ನಿಕೋಬಾರ್ ದ್ವೀಪ ಸಮೂಹಗಳ ಹೆಸರಿಗೆ ಕಾರಣವೂ ಹೀಗೇ ಇದೆ. `ನಕ್ಕಾವರಂ~ (ನಗ್ನರ ನಾಡು) ಎಂದು ತಂಜಾವೂರು ಶಾಸನದಲ್ಲಿ ಉಲ್ಲೇಖಿಸಿದ್ದು ಅದು ನಿಕೋಬಾರ್‌ಗೆ ಅನ್ವಯಿಸುತ್ತದೆ. ಉಳಿದ ನಾವಿಕರು, ಪ್ರವಾಸಿಗಳು ನಿಕೋಬಾರ್ ದ್ವೀಪಗಳನ್ನು ನಕವರಂ, ನಿಕೊವೆರನ್, ನೆಕುವೆರನ್ ಎಂದು ಸಂಬೋಧಿಸಿದ್ದಾರೆ.ಗುಡ್‌ಹೋಪ್ ಭೂಶಿರದ ಜಲಮಾರ್ಗ ಕಂಡು ಹಿಡಿದ ಮೇಲೆ ಯೂರೋಪಿನ ನಾವಿಕರು ಪೌರ್ವಾತ್ಯ ದೇಶಗಳತ್ತ ಪ್ರಯಾಣ ಮಾಡುವಾಗ ನಿಕೋಬಾರ್ ದ್ವೀಪಗಳ ಸಂಪರ್ಕಕ್ಕೆ ಬಂದರು. ಕ್ಯಾ. ಫ್ರೆಡರಿಕ್ ಮೊದಲು ನಿಕೋಬಾರ್ ದ್ವೀಪಗಳನ್ನು 1556ರಲ್ಲಿ ಸಂದರ್ಶಿಸಿದ. ನಂತರ ಈಸ್ಟ್ ಇಂಡಿಯಾ ಕಂಪನಿಯ ಜೇಮ್ಸ, ಸ್ಪ್ಯಾನಿಷ್ ಮಿಷನರಿ ಡೊಮಿನಿಕ್ ಫರ್ನಾಂಡಿಸ್ ಭೇಟಿ ಕೊಟ್ಟರು.ಜಾನ್ ಫ್ರಾನ್ಸಿಸ್ ಗೊಮೆಲಿ ಎಂಬ ಇಟಲಿ ವೈದ್ಯ, `ಈ ದ್ವೀಪವಾಸಿಗಳು ವಾರ್ಷಿಕವಾಗಿ ನರಬಲಿ ಕೊಡುತ್ತಾರೆ. ಅದನ್ನೇ ತಿನ್ನುತ್ತಾರೆ. ಗಾಯಗೊಂಡು ಶತ್ರು ಓಡುವಾಗ ಅವನ ಹಿಂದೆ ರಕ್ತ ಕುಡಿಯಲು ಓಡುತ್ತಾರೆ. ಇವರನ್ನು ಮನುಷ್ಯರೆನ್ನುವುದಕ್ಕಿಂತ ಪ್ರಾಣಿಗಳೆನ್ನುವುದೇ ಸೂಕ್ತ~ ಎಂದು ಬರೆದ. ನಂತರ ಫ್ರೆಂಚ್ ಜೆಸೂಟ್ ಪಾದ್ರಿಗಳು ನೇಟಿವ್ ಜನರನ್ನು ಮತಾಂತರಿಸುವ ಉದ್ದೇಶ ಹೊತ್ತು ಬಂದರಾದರೂ ಒಂದೆರೆಡು ಕುಟುಂಬಗಳ ಹೊರತು ಉಳಿದವರನ್ನು ತಲುಪಲಾಗಲಿಲ್ಲ.1793ರಲ್ಲಿ ಚತ್ತಾಂ ದ್ವೀಪದಲ್ಲಿ ಬಂದಿಗಳಿಗೆ ಮೊದಲ ಬಸ್ತಿ ನಿರ್ಮಿಸಲಾಯಿತು. 1796ರಲ್ಲಿ ಕೆಟ್ಟ ಹವಾಮಾನದ ಪ್ರಯುಕ್ತ ಅಪರಾಧಿಗಳನ್ನು ಪೆನಾಂಗ್‌ಗೆ ಸ್ಥಳಾಂತರಿಸಲಾಗಿತ್ತು.ನಂತರ ಮೇನ್‌ಲ್ಯಾಂಡಿನಿಂದ ಇರುವ ದೂರ, ಕಾಡು, ಕಾಡುಜನ, ನೀರಿನ ತೊಂದರೆ, ಸಂಪನ್ಮೂಲಗಳ ಕೊರತೆ ಈ ಎಲ್ಲದರಿಂದ ಬ್ರಿಟಿಷರು 1857ರವರೆಗೆ ಅಂಡಮಾನಿನ ಯೋಚನೆಯನ್ನೇ ಬಿಟ್ಟಿದ್ದರು. 1857ರ ಸಿಪಾಯಿ ದಂಗೆಯ ನಂತರ ಅವರಿಗೆ ಅಂಡಮಾನ್ ಕುರಿತು ಮರುಚಿಂತನೆಯ ಅವಶ್ಯಕತೆ ಬಂತು.

 

ಮೊದಲು ಬಂದಿಗಳೊಂದಿಗೆ ಬಂದ ವೈದ್ಯ ಡಾ. ವಾಕರ್ ಯೂನಿಯನ್ ಜ್ಯಾಕ್ ಧ್ವಜ ಹಾರಿಸಿದರು. ಮೊದಲು ಚತ್ತಾಂ, ನಂತರ ವೈಪರ್ ಮತ್ತು ರಾಸ್ ದ್ವೀಪದಲ್ಲಿ ಅಪರಾಧಿಗಳ ಬಸ್ತಿ ಶುರುವಾದವು. ಆದರೆ ಕುಡಿಯುವ ನೀರಿನ ಸಮಸ್ಯೆ ಶುರುವಾಗಿ ಆಡಳಿತ ಕೇಂದ್ರವನ್ನು ರಾಸ್ ದ್ವೀಪಕ್ಕೆ ಸ್ಥಳಾಂತರಿಸಿದರು. ಬಂದ ಕೂಡಲೇ ಅವರಿಗೆ ಎಲ್ಲವೂ ಸುಲಲಿತವಾಗಲಿಲ್ಲ.

 

1859ರಲ್ಲಿ 220 ಬಂದಿಗಳು ತಪ್ಪಿಸಿಕೊಂಡು ಅವರಲ್ಲಿ 140 ಜನ ಸತ್ತರು. ಉಳಿದವರನ್ನು ಹಿಡಿಯಲಾಯಿತು. ಒಬ್ಬ ಆತ್ಮಹತ್ಯೆ ಮಾಡಿಕೊಂಡರೆ ಉಳಿದ 87 ಜನರನ್ನು ಗಲ್ಲಿಗೇರಿಸಲಾಯಿತು. 1870ರಲ್ಲಿ ಪೀನಲ್ ಸೆಟಲ್‌ಮೆಂಟ್ ಕಲಕತ್ತಾ ಹೈಕೋರ್ಟಿಗೆ ಅಧೀನವಾಗಿದ್ದು ಇಂದೂ ಕಲಕತ್ತಾ ಹೈಕೋರ್ಟಿನ ವಿಭಾಗೀಯ ಪೀಠ ಪೋರ್ಟ್‌ಬ್ಲೇರ್‌ನಲ್ಲಿದೆ.

 

1904-05ರವೇಳೆಗೆ ಅಂಡಮಾನಿನಲ್ಲಿದ್ದ ಬಂದಿಗಳ ಸಂಖ್ಯೆ 11974. ಹೀಗೆ ಅಂಡಮಾನಿಗೆ 1857ರ ಸಿಪಾಯಿ ದಂಗೆಯಲ್ಲಿ ಭಾಗವಹಿಸಿದವರು, 1864-72ರವರೆಗೆ ಗದರ್/ವಹಾಬಿ ಬಂಡುಕೋರರು, ಬ್ರಿಟಿಷ್ ರಾಜ್ ವಿರುದ್ಧ ತಿರುಗಿ ಬಿದ್ದವರು, ಕೊನೆಗೆ ಮೋಪ್ಳಾ ದಂಗೆಕೋರರು ಬಂದರು. ಸೆಲ್ಯುಲಾರ್ ಜೈಲ್ ನಿರ್ಮಾಣವಾಯಿತು.ಈಗ ಭಾರತದ ಅವಿಭಾಜ್ಯ ಅಂಗವಾಗಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಿಂದೂಮಹಾಸಾಗರದ ರಕ್ಷಣಾನೆಲೆಯಾಗಿ ದೇಶದ ಸಮಗ್ರತೆ ಕಾಯುವ ಆಯಕಟ್ಟಿನ ಸ್ಥಳಗಳಾಗಿವೆ. ಹಾಗೆ ನೋಡಿದರೆ ಭಾರತ ಭೂಪ್ರದೇಶದ ಅಧೀನದಲ್ಲಿ ಎಂದೂ ಇರದಿದ್ದ ಈ ದ್ವೀಪಗಳನ್ನು ಬ್ರಿಟಿಷರು ಭಾರತಕ್ಕಿತ್ತ ಕಾಣಿಕೆಯೆಂದೇ ತಿಳಿಯಬಹುದು.

 

ಆದರೆ ಬ್ರಿಟಿಷರು ಈ ದ್ವೀಪಗಳನ್ನು ಕೈಯೆತ್ತಿ ಭಾರತಕ್ಕೆ ಕೊಡಲಿಲ್ಲ. ಎರಡನೇ ಮಹಾಯುದ್ಧದ ನಂತರ ಜಪಾನೀಯರು ಅಂಡಮಾನನ್ನು ತೊರೆದ ಮೇಲೆ ಮತ್ತೆ ಆ ಜಾಗ ಆಕ್ರಮಿಸಿದ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದರೂ ಅಂಡಮಾನನ್ನು ಬ್ರಿಟಿಷ್ ಸುಪ್ರೀಂಕಮ್ಯಾಂಡಿನ ರಕ್ಷಣಾ ನೆಲೆಯಾಗಿ ಉಳಿಸಿಕೊಳ್ಳಬಯಸಿದ್ದರು. ಪೋರ್ಟ್‌ಬ್ಲೇರ್ ಮತ್ತು ನಿಕೋಬಾರಿನಲ್ಲಿ ವಾಯುನೆಲೆ ಹೊಂದುವ ಆಲೋಚನೆಯೂ ಇತ್ತು.

 

ಭಾರತ ಕುರಿತು ವಸ್ತುನಿಷ್ಠ ಹಾಗೂ ನ್ಯಾಯಯುತ ಧೋರಣೆ ತಳೆದಿದ್ದ ಮೌಂಟ್‌ಬ್ಯಾಟನ್ ಈ ವಿಷಯದಲ್ಲಿ ಭಾರತಕ್ಕೆ ಸಹಾಯ ಮಾಡಿದ್ದಾರೆ. ನಿರಂತರ ನಡೆದ ಪತ್ರ ವ್ಯವಹಾರಗಳಲ್ಲಿ ಪ್ರಧಾನಿ ಅಟ್ಲೀ ಹಾಗೂ ಭಾರತ ವ್ಯವಹಾರಗಳ ಸಚಿವರಿಗೆ ಅಂಡಮಾನನ್ನು ಬ್ರಿಟನ್ ಉಳಿಸಿಕೊಂಡರೆ ಅದು ಭಾರತ ಬ್ರಿಟನ್ ಸಂಬಂಧವನ್ನು ಶಾಶ್ವತವಾಗಿ ಹಾಳುಗೆಡವುತ್ತದೆಂದು ಮೌಂಟ್‌ಬ್ಯಾಟನ್ ಪ್ರತಿಪಾದಿಸಿದರು.

 

ನಂತರ ಮಹಮದ್ ಅಲಿ ಜಿನ್ನಾ ದೇಶವಿಭಜನೆ ಮಾಡುವಾಗ ಅಂಡಮಾನ್ ದ್ವೀಪಗಳನ್ನು ಪಾಕಿಸ್ತಾನಕ್ಕೆ ನೀಡಬೇಕೆಂದೂ, ರಕ್ಷಣೆಯ ದೃಷ್ಟಿಯಿಂದ ಅದು ಭಾರತಕ್ಕಿಂತ ತಮಗೇ ಹೆಚ್ಚು ಅವಶ್ಯವಿದೆಯೆಂದು ಪ್ರತಿಪಾದಿಸಿದರು. ಆಗ ನೆಹರೂ 1941ರ ಜನಗಣತಿಯ ಪ್ರಕಾರ ಅಂಡಮಾನಿನಲ್ಲಿ 34 ಸಾವಿರ ಹಿಂದೂಗಳು ಹಾಗೂ 8 ಸಾವಿರ ಮುಸ್ಲಿಮರಿದ್ದಾರೆಂದೂ, ಹಿಂದೂ ಬಹುಸಂಖ್ಯಾತರಿರುವ ಕಾರಣ ಭಾರತಕ್ಕೇ ಸೇರಬೇಕೆಂದೂ ಹೇಳಿದರು. ಅಂತೂ ಚೌಕಾಶಿಯ ಹಗ್ಗಜಗ್ಗಾಟದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪಸಮೂಹ ಭಾರತದಲ್ಲಿ ಉಳಿಯಿತು.

 

ಉತ್ತರ ಅಂಡಮಾನಿಗೆ ಕೋಕೊ ದ್ವೀಪ ಮತ್ತು ಟೇಬಲ್ ದ್ವೀಪ ಕೇವಲ 80 ಕಿಮೀ ದೂರದಲ್ಲಿದ್ದು ಅವು ಬರ್ಮಾಕ್ಕೆ ಸೇರಿವೆ. 1879ರಲ್ಲಿ ಬ್ರಿಟಿಷರು ಆ ಎರಡು ದ್ವೀಪಗಳನ್ನು ದೀಪಸ್ತಂಭ ಮತ್ತು ಮರೈನ್ ಅಥಾರಿಟಿಯಿದ್ದ ರಂಗೂನಿಗೆ ಹಸ್ತಾಂತರಿಸಿದ್ದರು. ಅವು ಸ್ವಾತಂತ್ರ್ಯಾನಂತರವೂ ಬರ್ಮಾದಲ್ಲೇ ಉಳಿದವು.ಈಗ ಭಾರತಕ್ಕೆ ರಕ್ಷಣೆಯ ದೃಷ್ಟಿಯಿಂದ ಇದು ಪ್ರಮುಖ ಸ್ಥಳ. ಸುತ್ತಮುತ್ತ ಅಷ್ಟೇನೂ ಮಿತ್ರರಲ್ಲದ ದೇಶಗಳ ನಡುವೆ ಅಲ್ಲೊಂದು ವಾಯು ಮತ್ತು ನೌಕಾ ನೆಲೆ ಹೊಂದಿ ಆಯಕಟ್ಟಿನ ಜಾಗವನ್ನು ಭಾರತೀಯ ರಕ್ಷಣಾ ಪಡೆಗಳು ಹಿಡಿದಿವೆ ಎನ್ನಬಹುದು.ಅಂಡಮಾನಿನ ಸುತ್ತಮುತ್ತಲ ಜಲರಾಶಿಯಲ್ಲಿ ಎಷ್ಟೆಷ್ಟು ಹಡಗುಗಳು ಮಳುಗಿದವೋ, ಎಷ್ಟು ಜನರ ಆಶೋತ್ತರಗಳು ಕಾಲಾಪಾನಿ ಶಿಕ್ಷೆಯಲ್ಲಿ ಕೊಚ್ಚಿಹೋದವೋ!? ದೂರದ ಯಾವುದೋ ನೆಲಕ್ಕೆ ಉದ್ಯೋಗಕ್ಕೆಂದು ಹೋದ ಮಕ್ಕಳು ಅಲ್ಲೇ ಕಾಯಂ ಗೋರಿಯಲ್ಲಿ ಮಲಗುವಂತಾದಾಗ ಎಷ್ಟು ತಾಯಂದಿರು ಕಣ್ಣೀರಿಟ್ಟರೋ? ಈಗದೆಲ್ಲ ಹಳೆಯ ಮಾತು.ಇವತ್ತು ಅಂಡಮಾನ್ ಮಿನಿ ಭಾರತವಾಗಿ ಎಲ್ಲರನ್ನೂ ಸೆಳೆಯುತ್ತಿದೆ. 1941ರಲ್ಲಿ 34 ಸಾವಿರ ಇದ್ದ ಜನಸಂಖ್ಯೆ ಈಗ 10 ಪಟ್ಟಿಗಿಂತಲೂ ಅಧಿಕ, 3.8 ಲಕ್ಷ ಆಗಿದೆ! ನಿತ್ಯವೂ ಹಲವಾರು ಜನ ಉದ್ಯೋಗ, ನೆಲೆ ಅರಸಿಕೊಂಡು ಅವಕಾಶಗಳಿಗಾಗಿ ಅಂಡಮಾನಿಗೆ ಬರುತ್ತಲೇ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.