ಸೋಮವಾರ, ಮೇ 23, 2022
20 °C

ಅಗ್ಗದ ಪಿ.ಸಿ ಆಕಾಶ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ವಿದ್ಯಾರ್ಥಿಗಳ ಬಳಕೆಗಾಗಿಯೇ ವಿಶ್ವದ ಅತಿ ಕಡಿಮೆ ಬೆಲೆಯ ಪುಟ್ಟ ಕಂಪ್ಯೂಟರ್         (ಟ್ಯಾಬ್ಲೆಟ್ ಪಿಸಿ) `ಆಕಾಶ್~ ಅನ್ನು ದೇಶಿ ಸಾಫ್ಟ್‌ವೇರ್ ಸಂಸ್ಥೆ ಡಾಟಾವಿಂಡ್ ತಯಾರಿಸಿದ್ದು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ರೂ 2,276 ಬೆಲೆಯ 7 ಇಂಚುಗಳಷ್ಟು ಸ್ಪರ್ಶ ಪರದೆಯ ಈ ಪುಟ್ಟ ಕಂಪ್ಯೂಟರ್ ಅನ್ನು, ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನದ ನೆರವಿನ ಶಿಕ್ಷಣ ವಿಸ್ತರಿಸುವ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುವುದು. ಶೈಕ್ಷಣಿಕ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಇದನ್ನು ತಯಾರಿಕಾ ವೆಚ್ಚದ ಅರ್ಧ ಬೆಲೆಗೆ ಒದಗಿಸಲಾಗುವುದು. ಶೇ 50ರಷ್ಟು ಸಬ್ಸಿಡಿ ಬೆಲೆಯಲ್ಲಿ ಇದನ್ನು ಶೈಕ್ಷಣಿಕ ಸಂಸ್ಥೆಗಳಿಗೆ ಪೂರೈಸಲಾಗುವುದು.12ನೇ ಪಂಚವಾರ್ಷಿಕ ಯೋಜನಾ ಅವಧಿಯಲ್ಲಿ  9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಈ `ಪಿಸಿ~ ಒದಗಿಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ. ಇಲ್ಲಿ ನಡೆದ ಪುಟ್ಟ ಕಂಪ್ಯೂಟರ್‌ನ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

 

ಈ ಪುಟ್ಟ `ಪಿಸಿ~ಯ ತಯಾರಿಕೆ ಮತ್ತು ಸಾಗಣೆ ವೆಚ್ಚ ಸೇರಿ ಬೆಲೆ ರೂ 2,276ರಷ್ಟಾಗುತ್ತದೆ.  ಶೈಕ್ಷಣಿಕ ಸಂಸ್ಥೆಗಳಿಗೆ ಶೇ 50ರಷ್ಟು ರಿಯಾಯ್ತಿ ದರದಲ್ಲಿ ವಿತರಿಸುವುದರಿಂದ ಇದರ ಬೆಲೆ ರೂ1,100ರಿಂದ ರೂ1,200ರಷ್ಟು ಆಗಲಿದೆ. ಇಂತಹ ಸಾಧನಗಳ ಬೆಲೆಯನ್ನು ಕನಿಷ್ಠ ್ಙ500 ರಷ್ಟಕ್ಕೆ ಇಳಿಸಲೂ ಸರ್ಕಾರ ಮಹತ್ವಾಕಾಂಕ್ಷೆ ಹೊಂದಿದೆ. ತಯಾರಿಕೆ ಸಾಮರ್ಥ್ಯ ಹೆಚ್ಚಿದಂತೆ ಮಕ್ಕಳಿಗಾಗಿ ಅಗ್ಗದ ಬೆಲೆಗೆ ದೊರೆಯುವಂತೆ ಮಾಡುವುದು ನನ್ನ ಉದ್ದೇಶವಾಗಿದೆ ಎಂದು ಸಿಬಲ್ ನುಡಿದರು.ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿರುವ ಈ `ಪಿಸಿ~ಯನ್ನು ಕೇಂದ್ರೀಯ ಮತ್ತು ತಂತ್ರಜ್ಞಾನ ಸಂಸ್ಥೆಗಳಿಗೆ ಪೂರೈಸಲಾಗುವುದು. 10 ಲಕ್ಷ `ಪಿಸಿ~ಗೆ ಬೇಡಿಕೆ ಮಂಡಿಸಿದರೆ ಸರ್ಕಾರ ಖರೀದಿಸುವ ಬೆಲೆ ರೂ 1,750ಕ್ಕೆ ಇಳಿಯುವ ನಿರೀಕ್ಷೆ ಇದೆ.ಆಕಾಶ್ ವೈಶಿಷ್ಟ್ಯಗಳು

* 7 ಇಂಚುಗಳ ಸ್ಪರ್ಶ ಪರದೆ

* ಗೂಗಲ್‌ನ ಆಂಡ್ರಾಯ್ಡ 2.2 ಕಾರ್ಯನಿರ್ವಹಣಾ ವ್ಯವಸ್ಥೆ ಆಧಾರಿತ

* 256 ಎಂಬಿ ರ‌್ಯಾಮ್

* 2ಜಿಬಿ ಮಾಹಿತಿ ಸಂಗ್ರಹ ಸಾಮರ್ಥ್ಯ. 32 ಜಿಬಿವರೆಗೆ ಬಾಹ್ಯ ಮಾಹಿತಿ ಸಂಗ್ರಹ ಸಾಮರ್ಥ್ಯ ವಿಸ್ತರಣೆ ಸೌಲಭ್ಯ

* 180 ನಿಮಿಷಗಳ ಬ್ಯಾಟರಿ ಬೆಂಬಲ

* ಇಂಟರ್‌ನೆಟ್ ಜಾಲಾಟ, ವಿಡಿಯೊ ಸಂವಾದ ಸೌಲಭ್ಯಡಾಟಾವಿಂಡ್ ಸಂಸ್ಥೆಯು ನವೆಂಬರ್‌ನಲ್ಲಿ ಜನಸಾಮಾನ್ಯರ ಬಳಕೆಗೆ  ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಮಾರಾಟ ಬೆಲೆ ರೂ 2,999 ಬೆಲೆ ಇರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.