ಭಾನುವಾರ, ಏಪ್ರಿಲ್ 11, 2021
20 °C

ಅಗ್ನಿಶಾಮಕ ಠಾಣೆಗಳ ಸ್ಥಾಪನೆಗೆ ಕ್ರಿಯಾ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ರಾಜ್ಯದ ದೊಡ್ಡ ದೊಡ್ಡ ನಗರಗಳಲ್ಲಿ ಅತಿ ಎತ್ತರದ ಕಟ್ಟಡಗಳು ತಲೆಯೆತ್ತುತ್ತಿವೆ. ಇಂತಹ ನಗರಗಳಲ್ಲಿ ಅಗ್ನಿ ಅನಾಹುತಗಳನ್ನು ತಡೆಯಲು ಹೆಚ್ಚು ಹೆಚ್ಚು ಅಗ್ನಿಶಾಮಕ ಠಾಣೆಗಳನ್ನು ತೆರೆಯುವ ಸಂಬಂಧ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್ ಸೋಮವಾರ ಇಲ್ಲಿ ಹೇಳಿದರು.ನಗರದ ಅಗ್ನಿಶಾಮಕ ಠಾಣೆಯ ಪಕ್ಕದಲ್ಲಿ ಜಿಲ್ಲಾ ಗೃಹರಕ್ಷಕ ದಳದ ನೂತನ ತರಬೇತಿ ಕೇಂದ್ರವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ವಿಭಾಗಕ್ಕೆ ಹಣದ ಕೊರತೆ ಇಲ್ಲ. ಬೇರೆ ಬೇರೆ ಯೋಜನೆಗಳ ಮೂಲಕ ಸಾಕಷ್ಟು ಅನುದಾನ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗ ಸಿಕ್ಕ ಕಡೆಗಳಲ್ಲಿ ಹೊಸ ಅಗ್ನಿಶಾಮಕ ಠಾಣೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ’ ಎಂದರು.‘ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ರಾಜ್ಯದ 169ನೇ ಅಗ್ನಿಶಾಮಕ ಠಾಣೆಯನ್ನು ಉದ್ಘಾಟಿಸಲಾಗಿದೆ. ಈ ವರ್ಷಾಂತ್ಯದೊಳಗೆ ಇನ್ನೂ 25 ಅಗ್ನಿಶಾಮಕ ಠಾಣೆಗಳನ್ನು ವಿವಿಧೆಡೆ ತೆರೆಯಲಾಗುತ್ತಿದೆ. ಕೆಲವೆಡೆ ಈಗಾಗಲೇ ಹೊಸ ಅಗ್ನಿಶಾಮಕ ಠಾಣೆಗಳ ಕಟ್ಟಡ ಕೆಲಸ ಪ್ರಗತಿಯಲ್ಲಿದೆ’ ಎಂದು ಅವರು ತಿಳಿಸಿದರು.‘ರಾಜ್ಯದ ಬಹಳಷ್ಟು ಕಡೆಗಳಲ್ಲಿ ಗೃಹರಕ್ಷಕ ದಳಕ್ಕೆ ಸ್ವಂತ ಕಟ್ಟಡಗಳಿಲ್ಲ. ಹೀಗಾಗಿ, ಕೊಡಗು ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಗೃಹರಕ್ಷಕ ದಳಕ್ಕೆ ಹೆಚ್ಚು ಜನ ಸೇರಲು ಮುಂದೆ ಬರುತ್ತಿಲ್ಲ. ಪ್ರಸ್ತುತ ಅಬಕಾರಿ ಹಾಗೂ ಸಾರಿಗೆ ಇಲಾಖೆಗಳಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯ ಸೇವೆಯನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಅದೇ ರೀತಿ, ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾಸ್ಪತ್ರೆ ಸೇರಿದಂತೆ ಅವಶ್ಯವಿರುವ ಕಡೆಗಳಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ಬದಲಿಗೆ ಗೃಹ ರಕ್ಷಕ ದಳದ ಸಿಬ್ಬಂದಿಯ ಸೇವೆಯನ್ನು ಬಳಸಿಕೊಳ್ಳುವಂತೆ ಕೋರಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಅದಕ್ಕೆ ಜಿಲ್ಲಾಧಿಕಾರಿಗಳಿಂದಲೂ ಸೂಕ್ತ ಸ್ಪಂದನೆ ಸಿಕ್ಕಿದೆ’ ಎಂದು ಗುರುಪ್ರಸಾದ್ ಹೇಳಿದರು.ಪೌರ ರಕ್ಷಣಾ ಘಟಕ ಸ್ಥಾಪನೆ: ‘ಜಪಾನ್‌ನಲ್ಲಿ ಸಂಭವಿಸಿದ ಭೂಕಂಪ ಹಾಗೂ ಸುನಾಮಿ ದುರಂತದ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ಜಿಲ್ಲೆಗಳಲ್ಲಿ ‘ಪೌರ ರಕ್ಷಣಾ’ (ಸಿವಿಲ್ ಡಿಫೆನ್ಸ್) ಘಟಕಗಳನ್ನು ಸ್ಥಾಪಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಅವರು ತಿಳಿಸಿದರು.‘ಬೆಂಗಳೂರು, ಕೈಗಾ ಹಾಗೂ ರಾಯಚೂರಿನ ಶಕ್ತಿ ನಗರಗಳಲ್ಲಿ ‘ಪೌರ ರಕ್ಷಣಾ’ ಘಟಕಗಳನ್ನು ಸ್ಥಾಪಿಸಲು ಸರ್ಕಾರದ ಮಂಜೂರಾತಿ ದೊರೆತಿದೆ. ನಾಗರಿಕರ ಸಹಕಾರದಲ್ಲಿ ಆಯಾ ಬಡಾವಣೆಗಳಲ್ಲಿ ಸುರಕ್ಷತಾ ಕಾರ್ಯಗಳನ್ನು ಕೈಗೊಳ್ಳಲು ‘ಪೌರ ರಕ್ಷಣಾ’ ಘಟಕಗಳನ್ನು ಬಳಸಿಕೊಳ್ಳಲಾಗುವುದು. ನಾಗರಿಕರು ಸ್ವಯಂಪ್ರೇರಣೆಯಿಂದ ಈ ಘಟಕಗಳಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.ನಾಪೋಕ್ಲುವಿನಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಮನವಿ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ನಾಪೋಕ್ಲುವಿನಲ್ಲಿ ಇನ್ನೊಂದು ಅಗ್ನಿಶಾಮಕ ಠಾಣೆ ಪ್ರಾರಂಭಿಸಲು ಪ್ರಯತ್ನ ನಡೆಸುವಂತೆ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ. ಗುರುಪ್ರಸಾದ್ ಅವರಲ್ಲಿ ಮನವಿ ಮಾಡಿದರು.

ಇದರಿಂದ ಭಾಗಮಂಡಲ, ಸಂಪಾಜೆ, ಕರಿಕೆ ಮತ್ತಿತರ ಭಾಗಗಳಲ್ಲಿ ಅಗ್ನಿ ಅನಾಹುತ ಸಂಭವಿಸಿದಾಗ ಅಗ್ನಿಶಾಮಕ ಸಿಬ್ಬಂದಿ ಸಕಾಲದಲ್ಲಿ ಸ್ಥಳಕ್ಕೆ ಧಾವಿಸಲು ಸಹಕಾರಿಯಾಗಲಿದೆ ಎಂದು ಅವರು ಪ್ರತಿಪಾದಿಸಿದರು.ಕೊಡಗು ಜಿಲ್ಲೆಯಲ್ಲಿ ಗೃಹ ರಕ್ಷಕ ದಳದ ಸೇವೆಗೆ ಸೇರಲು ಜನತೆ ನಿರಾಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ 98 ಗ್ರಾಮ ಪಂಚಾಯ್ತಿಗಳಿಗೆ ಪತ್ರ ಬರೆದು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಈ ಸೇವೆಗೆ ತೊಡಗಿಸಿಕೊಳ್ಳಲು ಪ್ರಯತ್ನ ನಡೆಸುತ್ತೇನೆ ಎಂದು ಆಶ್ವಾಸನೆ ನೀಡಿದರು.ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥನಾರಾಯಣಗೌಡ ಮಾತನಾಡಿ, ‘ಇದೊಂದು ಸಾಮಾಜಿಕ ಸೇವೆ. ಇಲಾಖೆಯಲ್ಲಿ ಸಂಬಳ ರೂಪದಲ್ಲಿ ಹೆಚ್ಚಿನ ಹಣ ನಿರೀಕ್ಷಿಸಲು ಸಾಧ್ಯವಿಲ್ಲ. ಸೇವಾ ಮನೋಭಾವನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಗೃಹರಕ್ಷಕ ದಳಕ್ಕೆ ಸೇರಲು ಮುಂದಾಗಬೇಕು’ ಎಂದು ಕೋರಿದರು.ನಿವೃತ್ತ ಮೇಜರ್ ಬಿ.ಎ. ನಂಜಪ್ಪ ಮಾತನಾಡಿ, ‘ಕಾನೂನು ಕೈ ಮೀರಿ ಹೋದ ಸಂದರ್ಭಗಳಲ್ಲಿ ಮಾತ್ರ ಗೃಹರಕ್ಷಕ ದಳದ ಸಿಬ್ಬಂದಿ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ, ಇದು ಸರಿಯಲ್ಲ. ಚಿಕ್ಕ ಪುಟ್ಟ ಅಹಿತಕರ ಘಟನೆಗಳು ಸಂಭವಿಸಿದಾಗಲೆಲ್ಲಾ ಈ ಸಿಬ್ಬಂದಿ ಸೇವೆಯನ್ನು ಬಳಸಿಕೊಳ್ಳಬೇಕು. ಆಗ ಅದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ’ ಎಂದು ಸಲಹೆ ಮಾಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಕೆ. ಅಣ್ಣಿಗೇರಿ, ಗೃಹರಕ್ಷಕ ದಳದ ಕಮಾಂಡೆಂಟ್ ಓ.ಎಸ್. ಚಿಂಗಪ್ಪ ವೇದಿಕೆಯಲ್ಲಿದ್ದರು. ವಿನಯ್ ಪ್ರಾರ್ಥಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಘಟನಾ ಆಯುಕ್ತ ಜಿಮ್ಮಿ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.