ಭಾನುವಾರ, ಮೇ 9, 2021
26 °C
ತುಮಕೂರಿನ ಸರ್ಕಾರಿ ಮುದ್ರಣಾಲಯ

ಅಘೋಷಿತ ಬಂದ್: ಬದುಕು ಬೀದಿಗೆ

ಪ್ರಜಾವಾಣಿ ವಾರ್ತೆ/ಸಿ.ಕೆ.ಮಹೇಂದ್ರ Updated:

ಅಕ್ಷರ ಗಾತ್ರ : | |

ತುಮಕೂರು: ಉಚಿತ ಶಾಲಾ ಪಠ್ಯ ಪುಸ್ತಕಗಳ ಮುದ್ರಣಕ್ಕಾಗಿಯೇ ಕೋಟ್ಯಂತರ ರೂಪಾಯಿ ಬಂಡವಾಳದಲ್ಲಿ ಸ್ಥಾಪಿಸಿದ್ದ ಜಿಲ್ಲಾ ಸರ್ಕಾರಿ ಮುದ್ರಣಾಲಯವು ನಾಲ್ಕು ವರ್ಷಗಳಿಂದ ಅಘೋಷಿತವಾಗಿ  ಬಂದ್ ಆಗಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನಾಲ್ಕು ನೂರಕ್ಕೂ ಹೆಚ್ಚು ಉದ್ಯೋಗಿಗಳ ಬದುಕು ಬೀದಿಗೆ ಬಿದ್ದಿದೆ.ಯಂತ್ರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಹಿಂದೆ ನಿಲ್ಲಿಸಿದ್ದ ಮುದ್ರಣಾಲಯವನ್ನು ಇಂದಿಗೂ ತೆರೆದಿಲ್ಲ. `ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು' ಎಂಬತ್ತಾಗಿದೆ ಇಲ್ಲಿನ ಪರಿಸ್ಥಿತಿ.  ಕಳಪೆ ಯಂತ್ರಗಳನ್ನು ಖರೀದಿಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಬದಲು  ಮುದ್ರಣಾಲಯದಲ್ಲಿ ಕೆಲಸವನ್ನೇ ನಿಲ್ಲಿಸಿ  ಕಾರ್ಮಿಕರನ್ನು ಹೊರ ಹಾಕಿ  ಅವರ ಬದುಕಿನ ಮೇಲೆ ಬರೆ ಎಳೆಯಲಾಗಿದೆ.ಮುದ್ರಣಾಲಯ ಪುನರಾರಂಭಿಸಲು ಶಿಕ್ಷಣ ಇಲಾಖೆ ಯಾವುದೇ ಉತ್ಸಾಹ ತೋರುತ್ತಿಲ್ಲ. ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕಗಳ ಸಂಘವು ಶಾಲಾ ಪಠ್ಯ ಪುಸ್ತಕಗಳನ್ನು ಮುದ್ರಿಸುವ ಕೆಲಸವನ್ನು ಈಗ ಖಾಸಗಿ ಮುದ್ರಕರಿಗೆ ನೀಡತೊಡಗಿದೆ. ಮುದ್ರಣಾಲಯ ಪುನರಾರಂಭಿಸದಂತೆ ಖಾಸಗಿ ಮುದ್ರಕರ ಲಾಬಿಗೆ ಇಲಾಖೆ ಮಣಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಅವ್ಯವಹಾರ ಆರೋಪವನ್ನು ಲೋಕಾಯುಕ್ತ ತನಿಖೆಗೆ ವಹಿಸಿ ಶಿಕ್ಷಣ ಇಲಾಖೆಯು ಕೈತೊಳೆದುಕೊಂಡಿದೆ. ತನಿಖೆ ಪ್ರಗತಿಯ ಕಡೆಗೂ ಗಮನ ಹರಿಸುತ್ತಿಲ್ಲ.  ಖರೀದಿ ಅವ್ಯವಹಾರದಲ್ಲಿ ಉನ್ನತ ಅಧಿಕಾರಿಗಳು ಭಾಗಿಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನಷ್ಟೇ ಅಲ್ಲ, ಮುದ್ರಣಾಲಯವನ್ನೇ ಹಾಳು ಬಿಡಲಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿ ಹಾಳು ಸುರಿಯುತ್ತಿದೆ.ಎಸ್.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ, 1999-2000ನೇ ಸಾಲಿನಲ್ಲಿ ಈ ಮುದ್ರಣಾಲಯ ಆರಂಭಿಸಲಾಯಿತು. ಬೆಂಗಳೂರಿನಲ್ಲಿ ವಿಕಾಸಸೌಧ ಕಟ್ಟಲು ಅಲ್ಲಿದ್ದ ಕೇಂದ್ರ ಮುದ್ರಣಾಲಯ ತೆರವುಗೊಳಿಸಿದ ನಂತರ ಪರ್ಯಾಯವಾಗಿ ಆರಂಭಿಸಿದ ಮುದ್ರಣಾಲಯಗಳಲ್ಲಿ ಇದೂ ಒಂದಾಗಿದೆ.ಬೆಂಗಳೂರಿನಲ್ಲಿರುವ ಮುದ್ರಣಾಲಯ ಬಿಟ್ಟರೆ ಅತಿ ದೊಡ್ಡ ಮುದ್ರಣಾಲಯ ಇದಾಗಿದೆ. ಇದು ಬಹುವರ್ಣ ಮುದ್ರಣ  ಸಾಮರ್ಥ್ಯ ಹೊಂದಿದೆ. ಶಾಲಾ ಪಠ್ಯ ಪುಸ್ತಕಗಳ ಮುದ್ರಣಕ್ಕೆಂದು ಸರ್ಕಾರ ತುರ್ತು ಹಾಗೂ ತ್ವರಿತ ಎಂದು ಪರಿಗಣಿಸಿ 2004ರಲ್ಲೇ ರೂ20 ಕೋಟಿ ಮೌಲ್ಯದ ಯಂತ್ರ ಖರೀದಿಸಿತ್ತು. ಎರಡು ಪಾಳಿಗಳಲ್ಲಿ ಕೆಲಸ ಕೂಡ ನಡೆಯುತ್ತಿತ್ತು. ಯಂತ್ರೋಪಕರಣಗಳ ವಿಭಾಗದಲ್ಲಿ 98 ಕಾರ್ಮಿಕರು, ಬೈಂಡಿಂಗ್ ವಿಭಾಗದಲ್ಲಿ 300 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು.ಆರೋಪ

ಕಾರ್ಮಿಕರನ್ನು ಹೊರ ಗುತ್ತಿಗೆ ಮೂಲಕ ಪಡೆಯಲಾಗಿತ್ತು ಎಂದು ಇಲಾಖೆ ಈಗ ವಾದಿಸುತ್ತಿದ್ದರೂ ಈ ಕಾರ್ಮಿಕರಿಗೆ ವೇತನವನ್ನು ಜಿಲ್ಲಾ ಖಜಾನೆ ಮೂಲಕ ಪಾವತಿ ಮಾಡಿರುವುದಕ್ಕೆ ದಾಖಲೆಗಳಿವೆ. ಕಾರ್ಮಿಕರಿಂದ ವೃತ್ತಿ ತೆರಿಗೆ ಕೂಡ ಪಡೆಯಲಾಗಿದೆ. `ಲಾಭದಾಯಕವಾಗಿ ನಡೆಯುತ್ತಿದ್ದ ಮುದ್ರಣಾಲಯವನ್ನು ಕಾಣದ ಕೈಗಳ ಹಿತಾಸಕ್ತಿ ಕಾಪಾಡುವ ಸಲುವಾಗಿಯೇ ಮುಚ್ಚಲಾಗಿದೆ' ಎಂದು ಕೆಲಸ ಇಲ್ಲದೆ ಅತಂತ್ರರಾಗಿರುವ ಕಾರ್ಮಿಕರು ಆರೋಪಿಸುತ್ತಾರೆ.2004-05ರಲ್ಲೇ 23.84 ಲಕ್ಷ ಪಠ್ಯ ಪುಸ್ತಕಗಳು ಇಲ್ಲಿ ಮುದ್ರಣಗೊಂಡಿದ್ದವು. 2007-08ರಲ್ಲಿ 2.4 ಕೋಟಿ, 2008-09ರಲ್ಲಿ 1.16 ಕೋಟಿಗಳಷ್ಟು ಪಠ್ಯಪುಸ್ತಕ ಮುದ್ರಿಸಿರುವುದು ಮುದ್ರಣಾಲಯ ಅತ್ಯುತ್ತಮವಾಗಿ ಕೆಲಸ ನಿರ್ವಹಣೆ ಮಾಡುತ್ತಿತ್ತು ಎಂಬುದಕ್ಕೆ ಸಾಕ್ಷಿ ಹೇಳುತ್ತವೆ.`ಮುದ್ರಣಾಲಯ  ಮುಚ್ಚಿಲ್ಲ, ಯಥಾಸ್ಥಿತಿಯಲ್ಲಿ ಇಡಲಾಗಿದೆ. ಗುಣಮಟ್ಟದ ಕೆಲವು ಯಂತ್ರಗಳನ್ನು ಮೈಸೂರು ಮುದ್ರಣಾಲಯಕ್ಕೆ ಸಾಗಿಸಲಾಗಿದೆ. ಸರ್ಕಾರ ಈ ಕುರಿತು ನಿರ್ಧಾರ ಪ್ರಕಟಿಸಬೇಕಾಗಿದೆ ಎಂದು ಮುದ್ರಣ ಮತ್ತು ಲೇಖನ ಸಾಮಾಗ್ರಿಗಳ ಪ್ರಕಟಣೆಗಳ ಇಲಾಖೆಯ ಸಹಾಯಕ ನಿರ್ದೇಶಕ ರವಿಶಂಕರ್ `ಪ್ರಜಾವಾಣಿ'ಗೆ ತಿಳಿಸಿದರು.`ಮುದ್ರಣಾಲಯದಲ್ಲಿ ಹತ್ತು ವರ್ಷ ಕಾಲ ಕೆಲಸ ಮಾಡಿದ್ದೇವೆ. ಕೆಲಸ ಕಾಯಂ ಮಾಡುವುದಾಗಿ ಇಲಾಖೆ ಅಧಿಕಾರಿಗಳು ವಾಗ್ದಾನ ಮಾಡಿದ್ದರು. ಆದರೆ ಏಕಾಏಕಿ ಮಾರ್ಚ್ 31, 2009ರಂದು ಮುದ್ರಣಾಲಯಕ್ಕೆ ಬೀಗ ಹಾಕಲಾಯಿತು. ಅಂದಿನಿಂದ ಸಂಬಳ  ನೀಡಿ ಇಲ್ಲ. ಕನಿಷ್ಠ ಪರಿಹಾರವನ್ನೂ ಕೊಡಲಿಲ್ಲ' ಎಂದು ಕಾರ್ಮಿಕರಾಗಿದ್ದ ರಾಜೇಶ್ ದೊಡ್ಮನೆ ಹೇಳುತ್ತಾರೆ.ದೊರೆಯದ ಪರಿಹಾರ

ಕೆಲಸದ ವೇಳೆ ಪೇಪರ್ ರೋಲ್ ಬಿದ್ದು ಎಡಗಣ್ಣು ಕಳೆದುಕೊಂಡಿರುವ ಕೆ.ಎಸ್.ಶಂಕರ್, ಬೆರಳು ಕಳೆದುಕೊಂಡಿರುವ ರಂಗನಾಥ್‌ಗೂ ನಯಾ ಪೈಸೆ ಪರಿಹಾರ ನೀಡಿಲ್ಲ. ಮೂವರು ಕಾರ್ಮಿಕರು ಜೀವನ ನಿರ್ವಹಣೆ ಮಾಡಲಾಗದೆ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಂಡರು ಎದೂ ರಾಜೇಶ್  ಅಳಲು ತೋಡಿಕೊಳ್ಳುತ್ತಾರೆ.ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದಾಗ ಮುದ್ರಣಾಲಯ ಮುಚ್ಚದಂತೆ ಸರ್ಕಾರವನ್ನು ಒತ್ತಾಯಿಸಿದ್ದರು.

ಕಳಪೆ ಗುಣಮಟ್ಟ

ಕಳಪೆ ಗುಣಮಟ್ಟದ ಯಂತ್ರೋಪಕರಣ ಖರೀದಿ ಆರೋಪದ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿಧಾನಸಭೆ, ವಿಧಾನ ಪರಿಷತ್ ಭರವಸೆ ಸಮಿತಿ ಪರಿಶೀಲನೆಗೂ ಒಪ್ಪಿಸಲಾಗಿತ್ತು. ಕಳಪೆ ಯಂತ್ರಗಳನ್ನು ಖರೀದಿಸಲಾಗಿದೆ ಎಂಬುದನ್ನು ಈ ಎರಡೂ  ಸಮಿತಿಗಳು ಹೇಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.