ಭಾನುವಾರ, ಆಗಸ್ಟ್ 9, 2020
21 °C

ಅಜ ಮತ್ತು ಗಜ ; ಚಿತ್ರ: ಬಿಲ್ಲಾ 2 (ತಮಿಳು)

ಡಿ.ಕೆ.ಆರ್ Updated:

ಅಕ್ಷರ ಗಾತ್ರ : | |

ಅಜ ಮತ್ತು ಗಜ ; ಚಿತ್ರ: ಬಿಲ್ಲಾ 2 (ತಮಿಳು)

ನಿರ್ಮಾಪಕರು: ಸುನೀರ್ ಕೆ., ಸುರೇಶ್ ಬಾಲಾಜಿ, ಜಾರ್ಜ್ ಪೀಯುಷ್

ನಿರ್ದೇಶಕ: ಚಕ್ರಿ ತೊಲೇಟಿ

ತಾರಾಗಣ: ಅಜಿತ್ ಕುಮಾರ್, ಪಾರ್ವತಿ ಒಮನ್‌ಕುಟ್ಟನ್, ಬ್ರೂನಾ ಅಬ್ದುಲ್ಲಾ, ವಿದ್ಯುತ್ ಜಾಮ್ವಾಲ್, ಸುಧಾಂಶು ಪಾಂಡೆ, ಯೋಗ್ ಜಪೀ ಮತ್ತಿತರರು.

ತಮಿಳುನಾಡು ಕರಾವಳಿ ತೀರದ ಸಾಮಾನ್ಯ ಹುಡುಗನೊಬ್ಬ ಹೇಗೆ ಭೂಗತ ದೊರೆಯಾಗಿ ಬೆಳೆಯುತ್ತಾನೆ ಎಂಬುದನ್ನು ತಿಳಿಸುವ ಚಿತ್ರ `ಬಿಲ್ಲಾ 2~. 2007ರ `ಬಿಲ್ಲಾ~ ಚಿತ್ರದ ಎರಡನೇ ಅವತರಣಿಕೆಯಾಗಿ ಇದು ಮೂಡಿ ಬಂದಿದೆ. ಅಜಿತ್ ಕುಮಾರ್ ಅವರೇ ಎರಡೂ ಚಿತ್ರಗಳ ನಾಯಕ.ಡೇವಿಡ್ ಬಿಲ್ಲಾ ನಿರುದ್ಯೋಗಿ. ತಮಿಳುನಾಡಿನ ನಿರಾಶ್ರಿತರ ಕಾಲೋನಿಯಲ್ಲಿ ಆತನ ಸದ್ಯದ ವಾಸ. ಉತ್ತಮ ಕುಟುಂಬದಿಂದ ಬಂದ ಆತನಿಗೆ ಅಕ್ಕ ಹಾಗೂ ಆಕೆಯ ಮಗಳನ್ನು ಹೊರತುಪಡಿಸಿ ಬೇರಾರೂ ಇಲ್ಲ. ರಕ್ಕಸ ಪೊಲೀಸ್ ಅಧಿಕಾರಿಯೊಬ್ಬ ನಾಯಕನ ವೈರಿ.ಹೀಗಿರುವಾಗ ನಿರಾಶ್ರಿತರ ಕಾಲೋನಿಯಲ್ಲಿ ಕೆಲಸವೊಂದು ಆತನನ್ನು ಅರಸಿ ಬರುತ್ತದೆ. ಅದು ಆತನಿಗರಿವಿಲ್ಲದ ವಜ್ರ ಕಳ್ಳಸಾಗಣೆಯ ಕಸುಬು. ಅಲ್ಲಿಂದ ಮುಂದೆ ಬಿಲ್ಲಾ ಬದುಕು ಹಲವು ಮಗ್ಗಲುಗಳಿಗೆ ಹೊರಳುತ್ತದೆ. ವಜ್ರ ಸಾಗಣೆಯಿಂದ, ಮಾದಕ ವಸ್ತುಗಳ ಮಾರಾಟಕ್ಕೆ ಅಲ್ಲಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಆತ `ಬಡ್ತಿ~ ಪಡೆಯುತ್ತಾನೆ. ಗುರಿ ಸಾಧಿಸುವ ಛಲದಲ್ಲಿ ಎದುರಿದ್ದವರನ್ನು ಕಳೆಯುತ್ತಾನೆ, ತನ್ನವರನ್ನು ಕಳೆದುಕೊಳ್ಳುತ್ತಾನೆ.ಕೌತುಕದ ಕತೆ, ವೈವಿಧ್ಯಮಯ ತಿರುವು, ನಾಯಕನ ಬುದ್ಧಿಮತ್ತೆ, ನಾಯಕಿಯ ನಯವಂಚಕತನ ಈ ಎಲ್ಲ ಸ್ವಾರಸ್ಯಗಳ ಮಿಶ್ರಣದಿಂದಾಗಿ ಬಿಲ್ಲಾ (2007), ತಮಿಳು ಚಿತ್ರರಂಗದಾಚೆಗೂ ಸುದ್ದಿ ಮಾಡಿತ್ತು. ಮೊದಲ ಚಿತ್ರಕ್ಕೂ ಎರಡನೇ ಚಿತ್ರಕ್ಕೂ ಗುಣದಲ್ಲಿ ಅಜಗಜಾಂತರ ವ್ಯತ್ಯಾಸವಿದೆ.

 

ಮೊದಲನೇ ಬಿಲ್ಲಾ ಗಜದಂತೆ ಆವರಿಸಿಕೊಂಡರೆ ಎರಡನೇ ಬಿಲ್ಲಾ ಕೇವಲ ಅಜನಾಗಿ ಉಳಿಯುತ್ತಾನೆ.ಮೊದಲನೆಯವನಿಗಿಂತಲೂ ಭಿನ್ನವಾಗಿ ತೋರಿಸಬೇಕೆಂಬ ನಿರ್ದೇಶಕರ ಹಂಬಲವೇ ಚಿತ್ರಕ್ಕೆ ಮುಳುವಾಗಿದೆ. ಕತೆಯಲ್ಲಿ ಗುಂಡಿನ ಮೊರೆತವಿದೆಯೇ ಹೊರತು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಬಲ್ಲ ಕುತೂಹಲದ ತಿರುವುಗಳಿಲ್ಲ.

 

ಎರಡೂ ಚಿತ್ರಗಳ ತುಲನೆಯನ್ನು ಮರೆತರೆ ಅಥವಾ ಮೊದಲನೇ ಚಿತ್ರವನ್ನು ನೋಡದ ಪ್ರೇಕ್ಷಕರಿಗೆ ಇದು ಹೆಚ್ಚು ಇಷ್ಟವಾಗಬಲ್ಲದು.ಅಜಿತ್ ನಟನೆಯೇನೋ ಉತ್ತಮವಾಗಿದೆ. ಗಾಂಭೀರ್ಯ, ನಿರ್ಲಿಪ್ತತೆ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಗುಂಡು ಹಾರಿಸುವ ತುಪಾಕಿಯಂತೆಯೇ ಅವರ ಮಾತುಗಳಿವೆ.ಅಲ್ಲದೆ ಬಿಟ್ಟೂ ಬಿಡದಂತೆ ಇಡೀ ಚಿತ್ರವನ್ನು ಅವರು ಆವರಿಸಿಕೊಂಡಿದ್ದಾರೆ. ಆದರೆ ಮೊದಲ ಬಿಲ್ಲಾನ ನಾಯಕಿಯರಂತೆ ಇಲ್ಲಿನ ನಾಯಕಿಯರು ಪ್ರಭಾವಿಸುವುದಿಲ್ಲ. ಅಲ್ಲಿ ನಯನತಾರಾ ಹಾಗೂ ನಮಿತಾ ತಮ್ಮ ಚಾಣಾಕ್ಷತೆಯಿಂದ ಕಂಗೊಳಿಸಿದ್ದರು. ಬಾಂಡ್ ಸಿನಿಮಾಗಳ ನಾಯಕಿಯರೇ ಖಳರಾಗುವಂತೆ ಅಲ್ಲಿಯೂ ಅವರನ್ನು ಬಿಂಬಿಸಲಾಗಿತ್ತು.

 

ಇಲ್ಲಿನ ನಾಯಕಿಯರಾದ ಪಾರ್ವತಿ ಒಮನ್‌ಕುಟ್ಟನ್, ಬ್ರೂನಾ ಅಬ್ದುಲ್ಲಾರಿಗೆ ಹೆಚ್ಚಿನ ಕೆಲಸವಿಲ್ಲ. ಒಬ್ಬಾಕೆ ಮಮಕಾರಕ್ಕೆ, ಮತ್ತೊಬ್ಬಾಕೆ ಮೈಮಾಟಕ್ಕೆ ಸೀಮಿತ. ವಿದ್ಯುತ್ ಹಾಗೂ ಸುಧಾಂಶು ಖಳರಾಗಿ ದುಡಿದಿದ್ದಾರೆ. ಡೇವಿಡ್‌ನ ನೆಚ್ಚಿನ ಬಂಟನಾಗಿ ಯೋಗ್ ಜಪೀ ಕಾಣಿಸಿಕೊಂಡಿದ್ದಾರೆ.ತಾಂತ್ರಿಕವಾಗಿ ಚಿತ್ರ ಮುಂದಿದೆ. ವಿದೇಶದ ಸುಂದರ ತಾಣಗಳಲ್ಲಿ ಚಿತ್ರೀಕರಿಸಿ ವೈಭವದ ಸ್ಪರ್ಶ ನೀಡಲಾಗಿದೆ. ನೀರವ್ ಷಾರ ಛಾಯಾಗ್ರಹಣ ಮೋಡಿ ಮಾಡುವಂಥದ್ದು.

 

ಯುವನ್ ಶಂಕರ್ ರಾಜಾರ ಸಂಗೀತ ಆಕರ್ಷಕ. ಸುರೇಶ್ ಅರಸ್ ಸಂಕಲನ ಮೊನಚಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ರೋಚಕ. ಆದರೆ ತಂತ್ರಜ್ಞಾನದ ಜತೆ ಕತೆ ಮಿಳಿತವಾಗದಿದ್ದರೆ ಏನಾಗಬಲ್ಲದು ಎಂಬುದಕ್ಕೆ `ಬಿಲ್ಲಾ 2~ ತಾಜಾ ಉದಾಹರಣೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.