ಬುಧವಾರ, ಜೂನ್ 16, 2021
23 °C

ಅಡಿಗರ ಸ್ಪರ್ಧೆಗೆ ಹೆದರಿದ್ದ ಹನುಮಂತಯ್ಯ!

ಬಿ.ಎನ್‌.ಶ್ರೀಧರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಗ್ರೆಸ್‌ ವಿಭಜನೆ (1969) ನಂತರ ಆಗಿನ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ನಿಜಲಿಂಗಪ್ಪ ನೇತೃತ್ವದ ಸಂಸ್ಥಾ ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷಗಳು ಮಹಾಮೈತ್ರಿ ಕೂಟ ರಚಿಸಿಕೊಂಡ ಕಾಲ ಅದು.1971ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕೂಟದ ಮೂಲಕ ಇಂದಿರಾರನ್ನು ಎದುರಿಸಲು ರಣತಂತ್ರ ರೂಪಿಸಲಾಯಿತು.

ಅದರಂತೆ ಬೆಂಗಳೂರು ಕ್ಷೇತ್ರದಲ್ಲೂ (ಈಗ ಅದು ಬೆಂಗಳೂರು ದಕ್ಷಿಣ) ಸಂಸ್ಥಾ ಕಾಂಗ್ರೆಸ್‌ (ಕಾಂಗ್ರೆಸ್‌ ಓ), ಭಾರತೀಯ ಜನಸಂಘ, ಭಾರತೀಯ ಲೋಕದಳ, ಪ್ರಜಾ ಸೋಷಿಯಲಿಸ್ಟ್‌, ಸಂಯುಕ್ತ ಸೋಷಿಯಲಿಸ್ಟ್‌, ಸ್ವತಂತ್ರ ಪಾರ್ಟಿ... ಹೀಗೆ ಹಲವು ಪಕ್ಷಗಳು ಒಂದಾಗಿ ಮೈತ್ರಿ ಕೂಟ ರಚಿಸಿಕೊಂಡವು. ಅದನ್ನು ‘ಗ್ರ್ಯಾಂಡ್ ಅಲಯನ್ಸ್’ ಎಂದೂ ಕರೆಯಲಾಯಿತು.ನಂತರ ಎಲ್ಲರೂ ಒಪ್ಪುವಂತಹ ಅಭ್ಯರ್ಥಿಗಾಗಿ ಹುಡುಕಾಟ ನಡೆ­ಯಿತು. ಕೆಲವರು ನಿವೃತ್ತ ಅಧಿಕಾರಿಗಳ ಹೆಸರುಗಳು ಹೇಳಿದರೆ ಇನ್ನೂ ಕೆಲವರು ಸಾಹಿತಿಗಳು, ಚಿಂತಕರ ಹೆಸರುಗಳನ್ನು ಪ್ರಸ್ತಾಪಿಸಿದರು.ಹೀಗೆ ಸುದೀರ್ಘ ಚರ್ಚೆ ನಡೆಯುತ್ತಿದ್ದಾಗ ಕೆಲವರು ಕವಿ ಎಂ.ಗೋಪಾಲಕೃಷ್ಣ ಅಡಿಗ ಅವರ ಹೆಸರನ್ನು ಸೂಚಿಸಿದರು. ಅದಕ್ಕೆ ಮೈತ್ರಿಕೂಟದ ಎಲ್ಲ ಪಕ್ಷಗಳೂ ಒಪ್ಪಿಗೆ ಸೂಚಿಸಿದವು. ನಂತರ ಅಡಿಗರು ಭಾರತೀಯ ಜನಸಂಘದ ‘ಹಣತೆ’ ಚಿಹ್ನೆ ಮೇಲೆ ಸ್ಪರ್ಧಿಸಿದರು.ವಿರೋಧಿ ಪಾಳಯದಲ್ಲಿ ಹೀಗೆ ಸಿದ್ಧತೆ ನಡೆ ಸು ತ್ತಿದ್ದಾಗಲೇ ಇಂದಿರಾ ಕಾಂಗ್ರೆಸ್‌ (ಕಾಂಗ್ರೆಸ್‌– ರೂಲಿಂಗ್‌) ಪಕ್ಷದಿಂದ ರೈಲ್ವೆ ಮಂತ್ರಿ ಕೆಂಗಲ್‌ ಹನುಮಂತಯ್ಯ ಅವರನ್ನು ಕಣಕ್ಕೆ ಇಳಿಸ ಲಾಯಿತು. ಅವರು ಆ ಕ್ಷೇತ್ರದ ಹಾಲಿ ಸದಸ್ಯರು ಕೂಡ ಆಗಿದ್ದರು.  ಹೇಗಾದರೂ ಮಾಡಿ ಇಂದಿರಾ ಗಾಂಧಿಯವರ ಪಕ್ಷವನ್ನು (ಹನುಮಂತಯ್ಯ ಅವರಿಗಿಂತ ಪಕ್ಷ ಮುಖ್ಯ) ಸೋಲಿಸಬೇಕೆಂದು ನಿಜಲಿಂಗಪ್ಪ ಸೇರಿದಂತೆ ಮೈತ್ರಿಕೂಟದ ಹಲವರು ಪಣತೊಟ್ಟರು.ಘಟಾನುಘಟಿ ಹನುಮಂತಯ್ಯ ವಿರುದ್ಧ ಸೆಣಸುವುದು ಹೇಗೆ ಎಂದು ಸಾಹಿತ್ಯ ವಲಯದಲ್ಲಿ ಚರ್ಚೆ ನಡೆಯು­ತ್ತಿದ್ದಾ­ಗಲೇ ಪ್ರಚಾರದ ಭರಾಟೆ ತಾರಕಕ್ಕೇರಿತು. ಅಡಿಗರ ಪರ ಪ್ರಚಾರಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಕೂಡ ಬಂದರು. ಆ ಸಂದರ್ಭ­ದಲ್ಲಿ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನ­ದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಅಂದಿನ ಮಟ್ಟಿಗೆ ಅದೇ ಅತಿ ದೊಡ್ಡ ಸಮಾ­ವೇಶ. ಇದರಲ್ಲಿ ಎಚ್‌.ಡಿ.ದೇವೇಗೌಡರೂ  ಭಾಗವಹಿಸಿದ್ದರು.ಅಡಿಗರ ಪರ ಜನ ಸೇರಿದ್ದು ಮತ್ತು ಪ್ರಚಾರಕ್ಕೆ ರಾಷ್ಟ್ರೀಯ ನಾಯಕರು ಬರುತ್ತಿದ್ದನ್ನು ನೋಡಿ ಹನುಮಂತಯ್ಯ ಅವರು ಒಂದು ಹಂತದಲ್ಲಿ ಗಲಿಬಿಲಿಗೊಂಡಿದ್ದರಂತೆ. ಅವರು  ಭಾಷಣ ಮಾಡಲು ಹೋಗುವ ಕಡೆಯಲೆಲ್ಲ ಅವರ ಪಕ್ಷದ ಚಿಹ್ನೆಯಾದ ‘ಹಸು–ಕರು’ಗಳು ಕಾಣಿಸುತ್ತಿದ್ದವು. ಅವುಗಳಿಗೆ ಮೇವು ತಿನ್ನಿಸುವುದರ ಮೂಲಕ ಚಿಹ್ನೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದರು.ಮೈತ್ರಿಕೂಟದ ಪಕ್ಷಗಳು ಎಷ್ಟೇ ಪ್ರಯತ್ನ ನಡೆಸಿದರೂ ಅಡಿಗರು ಗೆಲುವಿನ ದಡ ಸೇರಲಿಲ್ಲ. 1,04,030 ಮತಗಳ ಭಾರಿ ಅಂತರದಿಂದ ಹನುಮಂತಯ್ಯ ಗೆದ್ದರು.ತುರ್ತು ಪರಿಸ್ಥಿತಿಯ ಬಿಸಿ: 1967 ಮತ್ತು 1971ರಲ್ಲಿ ಬೆಂಗಳೂರು ಕ್ಷೇತ್ರದಿಂದ ಸತತವಾಗಿ ಎರಡು ಬಾರಿ ಗೆದ್ದಿದ್ದ ಹನುಮಂತಯ್ಯ ಅವರು 1977ರ ಚುನಾವಣೆಯಲ್ಲಿ ಸೋತರು. ಇದಕ್ಕೆ ಕಾರಣ ತುರ್ತು ಪರಿಸ್ಥಿತಿ. ಇಂದಿರಾ ಗಾಂಧಿ ವಿರುದ್ಧ ಇದ್ದ ಆಕ್ರೋಶಕ್ಕೆ ಹನುಮಂತಯ್ಯ ‘ಬಲಿ’ ಆದರು ಎಂದು ವಿಶ್ಲೇಷಿಸಲಾಯಿತು. ನಿವೃತ್ತ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅವರ ತಂದೆ ಕೆ.ಎಸ್‌.ಹೆಗ್ಡೆ (ಭಾರತೀಯ ಲೋಕದಳ) ವಿರುದ್ಧ ಹನುಮಂತಯ್ಯ ಅವರು 41,165 ಮತಗಳ ಅಂತರದಿಂದ ಸೋತರು.ಯಾರು ಆ ಶಾಮಣ್ಣ?: 1980ರ ಲೋಕಸಭಾ ಚುನಾವಣೆ. ದೇಶದಲ್ಲಿ ಇಂದಿರಾ ಗಾಂಧಿ ಅಲೆ. ಆ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಬೆಂಗಳೂರು ದಕ್ಷಿಣ ಬಿಟ್ಟರೆ ಬಹುತೇಕ ಎಲ್ಲ ಕಡೆ ಕಾಂಗ್ರೆಸ್‌ ಜಯಭೇರಿ ಬಾರಿಸಿತ್ತು. ಆಗ ಜನತಾ­ಪಕ್ಷ­ದಿಂದ ಗೆದ್ದಿದ್ದು ಟಿ.ಆರ್‌.ಶಾಮಣ್ಣ ಮಾತ್ರ.‘ಎಲ್ಲ ಕಡೆ ಕಾಂಗ್ರೆಸ್‌ ಗೆದ್ದರೂ ಬೆಂಗಳೂರು ದಕ್ಷಿಣದಲ್ಲಿ ಹೇಗೆ ಸೋತಿದ್ದು? ಗೆದ್ದ ಶಾಮಣ್ಣ ಅವರನ್ನು ಒಮ್ಮೆ ತೋರಿಸಿ’ ಎಂದು ಸಂಸತ್ತಿನಲ್ಲಿ ಇಂದಿರಾ ಗಾಂಧಿ ಕೇಳಿದ್ದರಂತೆ. ಶಾಮಣ್ಣ ಅವರ ಬಳಿಗೇ ಹೋಗಿ ಇಂದಿರಾ ಶುಭ ಹಾರೈಸಿದ್ದರು.ಹೆಸರು ಬದಲಾಯಿತು..: ಮೊದಲ ಲೋಕಸಭಾ ಚುನಾವಣೆಗೆ 1952ರಲ್ಲಿ ಚುನಾವಣೆ ನಡೆದಾಗ ‘ಬೆಂಗಳೂರು ದಕ್ಷಿಣ’ ಎಂದೇ ಇದ್ದ ಕ್ಷೇತ್ರ 1957ರ ಚುನಾವಣೆ ವೇಳೆಗೆ ‘ಬೆಂಗಳೂರು’ ಆಯಿತು. ಅದು 1962, 67, 71ರ ಚುನಾವಣೆಗೂ ಹಾಗೆಯೇ ಇತ್ತು. 1977ರ ಚುನಾವಣೆಗೆ ಪುನಃ ಅದರ ಹೆಸರನ್ನು ‘ಬೆಂಗಳೂರು ದಕ್ಷಿಣ’ ಎಂದು ನಾಮಕರಣ ಮಾಡಲಾಯಿತು. 2008ರ ಕ್ಷೇತ್ರ ಪುನರ್‌ವಿಂಗಡಣೆ ನಂತರವೂ ಅದು ಹಾಗೆಯೇ ಉಳಿದಿದೆ.ಟಿ.ಮಾದಯ್ಯಗೌಡ (1952), ಎಚ್‌.ಸಿ.­ದಾಸಪ್ಪ (1957, 1962), ಕೆಂಗಲ್‌ ಹನುಮಂ­ತಯ್ಯ (1967, 1971), ಆರ್‌.ಗುಂಡೂರಾವ್‌ (1989) ಕಾಂಗ್ರೆಸ್‌ನಿಂದ ಗೆದ್ದವರು. ಭಾರತೀಯ ಲೋಕದಳದಿಂದ ಕೆ.ಎಸ್‌.ಹೆಗ್ಡೆ (1977), ಜನತಾ ಪಕ್ಷದಿಂದ ಟಿ.ಆರ್‌.ಶಾಮಣ್ಣ (1980) ಮತ್ತು ವಿ.ಎಸ್‌.ಕೃಷ್ಣ ಅಯ್ಯರ್‌ (1984) ಗೆದ್ದಿದ್ದರು.1991ರಿಂದ ಇಲ್ಲಿವರೆಗೂ ಭಾರತೀಯ ಜನತಾಪಕ್ಷ ಈ ಕ್ಷೇತ್ರದಲ್ಲಿ ಜಯ ಗಳಿಸಿದೆ. 1991ರಲ್ಲಿ ವೆಂಕಟಗಿರಿಗೌಡ ಅವರು ಮಾಜಿ ಮುಖ್ಯಮಂತ್ರಿ ಆರ್‌.ಗುಂಡೂರಾವ್‌ ಅವರನ್ನು 27,248 ಮತಗಳ ಅಂತರದಿಂದ ಸೋಲಿಸಿದ್ದರು.  1996ರಲ್ಲಿ ಬಿಜೆಪಿಯ ಅನಂತಕುಮಾರ್‌ ಆರಂಭಿ­ಸಿದ ಜಯದ ಬೇಟೆ 1998, 1999, 2004 ಮತ್ತು 2009ರಲ್ಲೂ ಮುಂದುವರಿ­ಯಿತು.2014ರ ಚುನಾವಣೆಗೂ ಅನಂತ­ಕುಮಾರ್‌ ಅವರೇ ಬಿಜೆಪಿ ಅಭ್ಯರ್ಥಿ. ಅವರ ವಿರುದ್ಧ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರದ ಅಧ್ಯಕ್ಷ ನಂದನ್‌ ನಿಲೇಕಣಿ ಅವರನ್ನು ಕಾಂಗ್ರೆಸ್‌ ಕಣಕ್ಕೆ ಇಳಿಸುತ್ತಿದೆ. ಕಾಂಗ್ರೆಸ್‌ 1991ರಿಂದ ಈವರೆಗೆ ನಡೆದ ಎಲ್ಲ ಚುನಾವಣೆಗಳಲ್ಲೂ ಹೊಸಬರನ್ನೇ ಕಣಕ್ಕೆ ಇಳಿಸಿದೆ. ಈ ಕ್ಷೇತ್ರ ಕಾಂಗ್ರೆಸ್‌ಗೆ ಒಂದು ರೀತಿಯ ಪ್ರಯೋಗಾಲಯ ಇದ್ದಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.