ಶನಿವಾರ, ಮೇ 28, 2022
27 °C

ಅಡ್ಡ ಮತ: ಕಾಂಗ್ರೆಸ್ ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಡ್ಡಮತದಾನ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಪಕ್ಷದ ನಿರ್ದೇಶನ  ಉಲ್ಲಂಘಿಸಿದ ಶಾಸಕರನ್ನು ಪತ್ತೆಹಚ್ಚಲು ಪರಿಷತ್ ಸದಸ್ಯ ವಿ.ಆರ್.ಸುದರ್ಶನ್ ನೇತೃತ್ವದಲ್ಲಿ ಸಮಿತಿ ರಚಿಸಿದೆ.



 




ಮುಖ್ಯಾಂಶಗಳು

-ತಮ್ಮ ಸೋಲಿಗೆ ಸಿದ್ದರಾಮಯ್ಯ ಹೊಣೆ: ಸರಡಗಿ ನೇರ ದೂಷಣೆ



-ಪಕ್ಷದಿಂದ ಉಚ್ಚಾಟನೆ ಇಲ್ಲವೇ ಟಿಕೆಟ್ ನಿರಾಕರಣೆ



-ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದ ಅಲ್ಪಸಂಖ್ಯಾತ ಮುಖಂಡರು



-ಅಡ್ಡ ಮತದಾನ ಪರಿಣಾಮ: ಬಹುಮತಕ್ಕೆ ಎರವಾದ ಸರ್ಕಾರ?

ಅಡ್ಡಮತದಾನದ ಪರಿಣಾಮವಾಗಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹ್ಮದ್ ಸರಡಗಿ ಸೋಲು ಅನುಭವಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಲ್ಪಸಂಖ್ಯಾತ ಸಮುದಾಯದ 30ಕ್ಕೂ ಹೆಚ್ಚು ಮುಖಂಡರು ಮಂಗಳವಾರ ಪಕ್ಷದ ಕಚೇರಿಯಲ್ಲಿ ಸಭೆ ಸೇರಿ ಚರ್ಚಿಸಿದರು. ಪಕ್ಷದ ವಿವಿಧ ಪದಾಧಿಕಾರಿಗಳ ಹುದ್ದೆಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡುವ ಬೆದರಿಕೆಯನ್ನೂ ಹಾಕಿದರು.



ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೂಡಲೇ ಮಧ್ಯ ಪ್ರವೇಶಿಸಿ ಅಲ್ಪಸಂಖ್ಯಾತ ಮುಖಂಡರಿಗೆ ಸಮಾಧಾನ ಹೇಳಿದ್ದಾರೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಆಗಿರುವ ನಷ್ಟವನ್ನು ಬೇರೆ ರೂಪದಲ್ಲಿ ತುಂಬಿಕೊಡಲಾಗುವುದು ಎಂದರು.



ಸುದರ್ಶನ್ ನೇತೃತ್ವದ ಸಮಿತಿಗೆ ಮುಖಂಡರಾದ ಅಲ್ಲಂ ವೀರಭದ್ರಪ್ಪ, ಎಚ್.ಕೆ.ಪಾಟೀಲ್, ಬಿ.ಎಲ್.ಶಂಕರ್, ನಜೀರ್ ಅಹಮದ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಶೀಘ್ರ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ. ವರದಿಯ ಆಧಾರದ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಅಡ್ಡಮತದಾನ ಮಾಡಿದವರನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು ಇಲ್ಲವೇ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗುವುದು ಎಂದು ಪರಮೇಶ್ವರ್ ಅವರು ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.



`ನನ್ನ ಸೋಲಿನ ಪೂರ್ಣ ಹೊಣೆಯನ್ನು ಸಿದ್ದರಾಮಯ್ಯ ಅವರೇ ಹೊರಬೇಕು. ಐವರು ಪಕ್ಷೇತರ ಸದಸ್ಯರ ಮತ ಹಾಕಿಸುವ ಜವಾಬ್ದಾರಿ ಅವರದೇ ಆಗಿತ್ತು~ ಎಂದು ಅನಿರೀಕ್ಷಿತ ಸೋಲಿನಿಂದ ಬೇಸತ್ತ ಸರಡಗಿ ಸಭೆಯಲ್ಲಿ ನೇರವಾಗಿ ಸಿದ್ದರಾಮಯ್ಯ ಅವರನ್ನು ದೂಷಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.



ಇದಕ್ಕೆ ಪ್ರತಿಕ್ರಿಯೆಯಾಗಿ ಸಿದ್ದರಾಮಯ್ಯ, `ಸೋಲಿಗೆ ನಾನೊಬ್ಬನೇ ಹೇಗೆ ಹೊಣೆ ಆಗುತ್ತೇನೆ. ಅದು ಎಲ್ಲರ ಜವಾಬ್ದಾರಿ. ಈ ವಿಷಯದಲ್ಲಿ ನನ್ನ ಮೇಲೆ ಅನುಮಾನ ಪಡುವುದರಲ್ಲಿ ಅರ್ಥ ಇಲ್ಲ. ಬಿ.ಎಸ್.ಸುರೇಶ್ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ನಮ್ಮ ಮನೆಗೆ ಬಂದು ಬೆಂಬಲ ಕೋರಿದ್ದು ನಿಜ. ಆದರೆ, ಎಂ.ಆರ್.ಸೀತಾರಾಂ ಅವರನ್ನು ನಾಲ್ಕನೇ ಅಭ್ಯರ್ಥಿಯಾಗಿ ಪಕ್ಷ ಕಣಕ್ಕೆ ಇಳಿಸಿದ ನಂತರ ನಾನು ಕೂಡ ಅವರನ್ನೇ ಬೆಂಬಲಿಸಿದೆ.



ಸುರೇಶ್ ಅವರಿಗೆ ಬೆಂಬಲವಾಗಿ ನಿಂತಿದ್ದೆ ಎಂದು ಇಲ್ಲಸಲ್ಲದ ಸುದ್ದಿ ಹಬ್ಬಿಸಿದ್ದಾರೆ. ಇದರಲ್ಲಿ ಹುರುಳಿಲ್ಲ. ಬೇಕಿದ್ದರೆ ತನಿಖೆ ನಡೆಸಲಿ~ ಎಂದು ಸವಾಲು ಹಾಕಿದರು ಎನ್ನಲಾಗಿದೆ. `ಸರಡಗಿ ಸೋಲು ಅವರ ವೈಯಕ್ತಿಕ ಸೋಲಲ್ಲ. ಕಾಂಗ್ರೆಸ್ ಪಕ್ಷಕ್ಕೆ ಆಗಿರುವ ನೈತಿಕ ಸೋಲು. ಅಧಿಕೃತ ಅಭ್ಯರ್ಥಿಗಳ ಪಟ್ಟಿಯಲ್ಲಿ ಇವರದೇ ಮೊದಲ ಹೆಸರು. ಇವರು ಗೆಲ್ಲಬೇಕಿತ್ತು. ನಾಲ್ಕನೇ ಅಭ್ಯರ್ಥಿ ಪರಾಭಾವಗೊಂಡಿದ್ದರೆ ಇಷ್ಟೊಂದು ನೋವು ಆಗುತ್ತಿರಲಿಲ್ಲ.

ಸರಡಗಿ ಅವರ ಸೋಲಿನಿಂದ ಅಲ್ಪಸಂಖ್ಯಾತರಿಗೆ ತಪ್ಪು ಸಂದೇಶ ರವಾನೆ ಆಗುತ್ತದೆ. ಇದನ್ನು ಕೆಲವರು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಾರೆ. ಅದಕ್ಕೆ ಅವಕಾಶ ನೀಡಬಾರದು. ರಾಷ್ಟ್ರೀಯ ಪಕ್ಷದಲ್ಲಿ ಅಡ್ಡಮತದಾನ ಆಗಬಾರದಿತ್ತು. ಅಧಿಕೃತ ಅಭ್ಯರ್ಥಿಯ ಸೋಲಿನಿಂದ ಪಕ್ಷಕ್ಕೆ ಹಾಗೂ ನಾಯಕತ್ವಕ್ಕೆ ಪೆಟ್ಟು ಬಿದ್ದಿದೆ~ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.



ಸಭೆಯಲ್ಲಿ ಅಲ್ಪಸಂಖ್ಯಾತ ಮುಖಂಡರಾದ ಬಿ.ಎ.ಮೊಹಿದ್ದೀನ್, ಆರ್.ರೋಷನ್ ಬೇಗ್, ತನ್ವೀರ್ ಸೇಠ್, ಖಮರುಲ್ ಇಸ್ಲಾಂ, ನಜೀರ್ ಅಹಮದ್, ರಹೀಂ ಖಾನ್, ಎನ್.ಎ.ಹ್ಯಾರಿಸ್, ಅಬ್ದುಲ್ ಜಬ್ಬಾರ್, ಬಿ.ಎ.ಹಸನಬ್ಬ, ಸೈಯದ್ ಯಾಸಿನ್, ಎನ್.ಎಂ.ನಬಿ, ಜಿ.ಎ.ಬಾವ, ನಹೀಮಾ ಬೇಗಂ ಮತ್ತಿತರರು ಭಾಗವಹಿಸಿದ್ದರು.

ಬಿಜೆಪಿ: ಟಿಕೆಟ್‌ಗೆ ಕತ್ತರಿ

ಬೆಂಗಳೂರು: ಆಡಳಿತಾರೂಢ ಬಿಜೆಪಿಗೂ ಅಡ್ಡಮತದಾನದ ಬಿಸಿ ತಟ್ಟಿದೆ. ಪಕ್ಷದ 12 ಶಾಸಕರು ಅಡ್ಡಮತ ಹಾಕಿದ್ದಾರೆ. ಇದು ಪಕ್ಷದ ಪಾಳೆಯದಲ್ಲಿ ತೀರ್ವ ಚರ್ಚೆಗೆ ಗ್ರಾಸ ಒದಗಿಸಿದೆ.



ಅಡ್ಡಮತ ಹಾಕಿದವರ ವಿವರ ಗೊತ್ತಾಗಿದೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡದಿರಲು ಪಕ್ಷ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಅಡ್ಡಮತ ಹಾಕಿದವರ ವಿರುದ್ಧ ತಕ್ಷಣ ಕ್ರಮ ಕೈಗೊಂಡರೆ ಸರ್ಕಾರಕ್ಕೆ ಕಂಟಕ ಎದುರಾಗಬಹುದು ಎಂಬ ಭೀತಿ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಗೊತ್ತಾಗಿದೆ. ಅಡ್ಡಮತ ಪರಿಣಾಮವಾಗಿ ಸರ್ಕಾರ ಒಂದು ಅರ್ಥದಲ್ಲಿ ಬಹುಮತ ಕಳೆದುಕೊಂಡಂತಾಗಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿಯೇ ಕೇಳಿಬರುತ್ತಿವೆ. 



ಈ ಹಿಂದೆ ವಿಜಯ್ ಮಲ್ಯ ಅವರು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗಲೂ ಇದೇ ರೀತಿ ಅಡ್ಡಮತದಾನ ನಡೆದಿತ್ತು. ಆ ಸಂದರ್ಭದಲ್ಲಿ ಪಕ್ಷದ ನಿರ್ದೇಶನದ ವಿರುದ್ಧ ನಡೆದುಕೊಂಡವರಿಗೆ ಸರಿಯಾದ ಪಾಠ (ಟಿಕೆಟ್ ನಿರಾಕರಣೆ) ಕಲಿಸಲಾಗಿದೆ. ಅದೇ ಸೂತ್ರವನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಲು ಪಕ್ಷ ನಿರ್ಧರಿಸಿದೆ ಎಂದು ಮುಖಂಡರೊಬ್ಬರು ತಿಳಿಸಿದರು.





 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.