ಅಡ್ವಾಣಿ- ಮೋದಿ ಮುಖಾಮುಖಿ

ಶುಕ್ರವಾರ, ಜೂಲೈ 19, 2019
29 °C
ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆ

ಅಡ್ವಾಣಿ- ಮೋದಿ ಮುಖಾಮುಖಿ

Published:
Updated:

ನವದೆಹಲಿ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಪ್ರಚಾರ ಸಮಿತಿ ಸಾರಥ್ಯ ವಹಿಸಿದ್ದನ್ನು ಬಹಿರಂಗವಾಗಿ ಪ್ರತಿಭಟಿಸಿ ರಾಜೀನಾಮೆ ನೀಡಿದ್ದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಆ ಪ್ರಕರಣದ ನಂತರ ಇದೇ ಮೊದಲ ಬಾರಿಗೆ ಪಕ್ಷದ ವೇದಿಕೆಯಲ್ಲಿ ಗುರುವಾರ ಮೋದಿ ಅವರೊಂದಿಗೆ ಮುಖಾಮುಖಿಯಾದರು.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅನುಸರಿಸಬೇಕಾದ ತಂತ್ರಗಳನ್ನು ಕುರಿತು ಚರ್ಚಿಸಲು ಕರೆಯಲಾಗಿದ್ದ ಬಿಜೆಪಿ ಸಂಸದೀಯ ಪಕ್ಷದ ಸಭೆ ದಿಗ್ಗಜರ ಸಮಾಗಮಕ್ಕೆ ವೇದಿಕೆಯಾಯಿತು. ಮೂರು ತಾಸುಗಳ ಕಾಲ ನಡೆದ ಪಕ್ಷದ ಸಭೆಯಲ್ಲಿ ಅಕ್ಕಪಕ್ಕ ಕುಳಿತಿದ್ದ ಇಬ್ಬರೂ ನಾಯಕರು ನಂತರವೂ ಒಟ್ಟಿಗೆ ಕಾಣಿಸಿಕೊಂಡರು.ಯಾವುದೇ ಹಮ್ಮುಬಿಮ್ಮು ಇಲ್ಲದೆ ಮುಕ್ತವಾಗಿ ಮೋದಿ ಅವರೊಂದಿಗೆ ಬೆರೆತ ಅಡ್ವಾಣಿ ಸಲಹೆ, ಸೂಚನೆಗಳನ್ನು ನೀಡಿದರು. ಮೋದಿ ಹಾಗೂ ಇತರರು ವ್ಯಕ್ತಪಡಿಸಿದ ಕೆಲವು ವಿಚಾರಗಳನ್ನು ಅನುಮೋದಿಸಿದರು ಎಂದು ಮೂಲಗಳು ತಿಳಿಸಿವೆ.ಇಶ್ರತ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಸಿಬಿಐ ದುರ್ಬಳಕೆ, ಸುಗ್ರೀವಾಜ್ಞೆ ಮೂಲಕ ಉದ್ದೇಶಿತ ಆಹಾರ ಮಸೂದೆ ಜಾರಿಗೆ ಮುಂದಾಗಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಕ್ರಮ ಹಾಗೂ ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿದುಬಂದಿದೆ. ವಿರೋಧ ಪಕ್ಷಗಳ ನಾಯಕರ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ಕೇಂದ್ರ ಸರ್ಕಾರ ಸಿಬಿಐಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ತಾಜಾ ನಿದರ್ಶನ ಎಂದು ಕೆಲವು ನಾಯಕರು ಆರೋಪಿಸಿದರು. ಆಹಾರ ಭದ್ರತಾ ಮಸೂದೆಯನ್ನು ಯಥಾವತ್ತಾಗಿ ಜಾರಿ ಮಾಡುವುದನ್ನು ವಿರೋಧಿಸುವಂತೆಯೂ ನಿರ್ಧರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry