ಶನಿವಾರ, ಜೂನ್ 19, 2021
27 °C

ಅಣುಸ್ಥಾವರ ವಿರೋಧಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೂಡುಂಕುಳಂ ಅಣು ಸ್ಥಾವರದ ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಹಲವು ಸಂಘಟನೆಗಳ ಕಾರ್ಯಕರ್ತರು ನಗರದ ಪುರಭವನದ ಮುಂದೆ ಭಾನುವಾರ ಪ್ರತಿಭಟನೆ ನಡೆಸಿದರು.ಕಳೆದ ವರ್ಷ ಸಂಭವಿಸಿದ ಫುಕೋಶಿಮಾ ಅಣು ಸ್ಥಾವರ ಸ್ಫೋಟದಿಂದ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಈಗ ಮತ್ತೊಂದು ಅಣು ಸ್ಥಾವರವನ್ನು ಸ್ಥಾಪಿಸಲು ಚಿಂತನೆ ನಡೆಸಿದ್ದು, ಅದನ್ನು ವಿರೋಧಿಸಿ ಹೋರಾಟ ಮಾಡಿದವರನ್ನು ಬಂಧಿಸಲು ಸರ್ಕಾರ ಮುಂದಾಗಿದೆ.ಇದಕ್ಕಾಗಿ ಕೂಡುಂಕುಳಂ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲಿ ಸಾವಿರಾರು ಪೊಲೀಸರನ್ನು ಹಾಗೂ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳದಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವುದರಿಂದ ಅಗತ್ಯ ವಸ್ತುಗಳ ಪೂರೈಕೆಯಾಗದೇ ಜನ ಪರದಾಡುತ್ತಿದ್ದಾರೆ. ಭಾರತದಲ್ಲಿ ಮತ್ತೊಂದು ಅಣು ಸ್ಥಾವರ ವಿಪತ್ತು ಸಂಭವಿಸಿದರೆ ದೇಶ ಸುಧಾರಿಸಿಕೊಳ್ಳುವುದು ಕಷ್ಟ ಎಂದು ಜಪಾನ್ ಸರ್ಕಾರ ಕೂಡಾ ಸಲಹೆ ನೀಡಿದೆ. ಆದರೂ, ಸರ್ಕಾರ ಈ ಬಗ್ಗೆ ಚಿಂತಿಸುತ್ತಿಲ್ಲ. ಅಣು ಸ್ಥಾವರದ ಸ್ಥಾಪನೆಯಾದರೆ ಸುತ್ತಮುತ್ತಲ ನಿವಾಸಿಗಳು ಮಾರಕ ರೋಗಗಳಿಗೆ ಗುರಿಯಾಗುವುದಲ್ಲದೆ, ಅಲ್ಲಿರುವ ಅರಣ್ಯ ಸಂಪತ್ತು ಕೂಡ ಸಂಪೂರ್ಣ ನಾಶವಾಗಲಿದೆ ಎಂದರು.ಈಗಾಗಲೇ ಪೊಲೀಸರು ಕೂಡುಂಕುಳಂ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ 300 ಜನರನ್ನು ಬಂಧಿಸಿದ್ದಾರೆ.ಕೂಡಲೇ ಅವರನ್ನು ಬಿಡುಗಡೆಗೊಳಿಸಿ, ಆರೋಪ ಮುಕ್ತರನ್ನಾಗಿ ಮಾಡಬೇಕು ಹಾಗೂ ಸ್ಥಳದಲ್ಲಿ ವಿಧಿಸಿರುವ ನಿಷೇಧಾಜ್ಞೆಯನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ರಾಜ್ಯ ಮಾನವ ಹಕ್ಕುಗಳ ಸಂಘಟನೆ, ತಮಿಳರನ್ನು ರಕ್ಷಿಸಿ ಆಂದೋಲನ, ಪೆರಿಯಾರ್ ದ್ರಾವಿಡ ಕಜಗಂ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.