ಸೋಮವಾರ, ಮೇ 10, 2021
28 °C

ಅಣ್ಣಾ ತಂಡದ ಮೂರಂಶ ಒಪ್ಪುವ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಲೋಕಪಾಲ ಮಸೂದೆಗೆ ಸಂಬಂಧಿಸಿ ಅಣ್ಣಾ ಹಜಾರೆ ನೇತೃತ್ವದ ಸಮಿತಿ ಮುಂದಿಟ್ಟಿದ್ದ ಮೂರು ಅಂಶಗಳನ್ನು ಸಂಸತ್ತು `ಸದನದ ಅಭಿಪ್ರಾಯ ಆಧರಿಸಿ~ ಅನುಮೋದಿಸಿದ್ದು, ಅದನ್ನು ಸಂಸತ್ತಿನ ಸ್ಥಾಯಿ ಸಮಿತಿ ಒಪ್ಪಬೇಕೆಂದೇನೂ ಇಲ್ಲ. ಆದರೂ ಸಮಿತಿಯು ಅದನ್ನು ತಿರಸ್ಕರಿಸುವ ಸಾಧ್ಯತೆ ಕಡಿಮೆ ಎಂದು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಹೇಳಿದ್ದಾರೆ.`ಇಡೀ ರಾಷ್ಟ್ರದ ಜನರ ಮುಂದೆ ಸದನ ಈ ಅಂಶಗಳನ್ನು ಅನುಮೋದಿಸಿದೆ. ಈಗ ಅವನ್ನು ತಿರಸ್ಕರಿಸುವ ಸಾಧ್ಯತೆ ಕಡಿಮೆ~ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕರೂ ಆದ ಚೇಟ್ಲಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.ಅಣ್ಣಾ ಅವರ ಅಂಶಗಳನ್ನು ಮಸೂದೆಯಲ್ಲಿ ಸೇರಿಸಲು ಸಂಸತ್ತು ನಿರ್ಣಯ ಕೈಗೊಂಡಿದೆ ಎನ್ನುವುದು ಅಷ್ಟು ಸೂಕ್ತವಲ್ಲ. ಆ ಅಂಶಗಳನ್ನು ಸೇರಿಸಲು ಸಂಸತ್ತು ಒಕ್ಕೊರಲಿನಿಂದ ಸಮ್ಮತಿ ವ್ಯಕ್ತಪಡಿಸಿದೆ ಎನ್ನುವುದು ಸರಿಯಾಗುತ್ತದೆ. ಇದೇ ವೇಳೆ, ಸ್ಥಾಯಿ ಸಮಿತಿಯ ಘನತೆಗೆ ಧಕ್ಕೆಯಾಗದಂತೆ ಕೂಡ ಸಂಸತ್ತು ಕಾಳಜಿ ವಹಿಸಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಅಣ್ಣಾ ಬಳಗ ಮತ್ತು ಬಿಜೆಪಿ ಹೇಳುತ್ತಿರುವ ಅಂಶಗಳಲ್ಲಿ ಹೆಚ್ಚಿನಂಶ ಸಾಮ್ಯತೆ ಇದೆ. ಪ್ರತಿ ಇಲಾಖೆಯ ಪ್ರತಿ ಕಾರ್ಯಕ್ಕೆ ಕಾಲಮಿತಿ ನಿಗದಿ, ಅಧೀನ ನ್ಯಾಯಾಂಗವನ್ನು ಲೋಕಾಯುಕ್ತ ವ್ಯಾಪ್ತಿಗೆ ತರುವುದು ಹಾಗೂ ಪ್ರತಿ ರಾಜ್ಯದಲ್ಲಿ ಲೋಕಾಯುಕ್ತರ ನೇಮಕ- ಈ ವಿಷಯಗಳಲ್ಲಿ ನಮ್ಮಿಬ್ಬರ ನಿಲುವು ಒಂದೇ ಆಗಿದೆ ಎಂದರು.ಉದ್ದೇಶಿತ ಲೋಕಪಾಲ ಮಸೂದೆಯ ಕೆಲವು ಅಂಶಗಳನ್ನು ಶಾಸನಬದ್ಧಗೊಳಿಸಲು ಸಾಧ್ಯವಿಲ್ಲ. ಆದರೆ ಅದಕ್ಕೆ ಪೂರಕವಾಗಿ ಮಾದರಿ ಕಾನೂನನ್ನು ಸಿದ್ಧಪಡಿಸಬಹುದು. ಈ ಕಾನೂನನ್ನು ಒಪ್ಪುವುದು ಅಥವಾ ಒಪ್ಪದಿರುವುದು ರಾಜ್ಯಗಳಿಗೆ ಬಿಟ್ಟ ವಿಷಯ ಎಂದೂ ಅವರು ಹೇಳಿದ್ದಾರೆ.ಇಡೀ ಆಡಳಿತಶಾಹಿಯನ್ನು ಲೋಕಪಾಲ ಪರಿಧಿಯೊಳಗೆ ತರಬೇಕೆಂಬುದು ಅಣ್ಣಾ ಬಳಗದ ಒತ್ತಾಯ. ವೈಯಕ್ತಿಕವಾಗಿ ತಾನು ಹಾಗೂ ತಮ್ಮ ಪಕ್ಷ ಎರಡೂ ಇದನ್ನು ಒಪ್ಪುತ್ತವೆ ಎಂದರು. ಕೆಲವು ಷರತ್ತುಗಳನ್ನು ಅಡಕಗೊಳಿಸಿ ಪ್ರಧಾನಿಯನ್ನೂ ಲೋಕಪಾಲ ಮಸೂದೆ ವ್ಯಾಪ್ತಿಗೆ ತರುವುದು ಈಗಿನ ಉದ್ದೇಶ. ಅಣ್ಣಾ ತಂಡ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದೆ. ಆದರೆ ಉನ್ನತ ನ್ಯಾಯಾಂಗ, ಸಂಸದರ ಬಾಧ್ಯತೆಗಳು, ದೂರವಾಣಿ ಕದ್ದಾಲಿಕೆಗೆ ಸಂಬಂಧಿಸಿದಂತೆ ಅಣ್ಣಾ ಬಳಗದ ಒತ್ತಾಯವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಜೇಟ್ಲಿ ಸ್ಪಷ್ಟಪಡಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.