ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತುಲರ ವಿಭಿನ್ನ ‘ಗುರುಕುಲ’

Last Updated 21 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

‘ಶಿಕ್ಷಣವಿಲ್ಲದ, ಸರಿಯಾದ ಉದ್ಯೋಗವಿಲ್ಲದ ಬಡವರಿಗೆ ಸೂಕ್ತ ತರಬೇತಿ ನೀಡಿ, ಅವಕಾಶದ ಹಾದಿ ತೋರಿಸಿದರೆ ಸಾಕು. ನಮ್ಮಲ್ಲಿನ ಬಡತನದ ಮಟ್ಟವನ್ನು ಗಣನೀಯವಾಗಿ ಇಳಿಸುವುದು ಕಷ್ಟವಾಗಲಾರದು’ ಬಡ ಕುಟುಂಬಗಳ ಯುವಜನರನ್ನು ‘ಗುರುಕುಲ’ಕ್ಕೆ ಕರೆತಂದು ಅವರನ್ನು ಸ್ಪರ್ಧಾತ್ಮಕ ಜಗತ್ತಿನೊಳಗೆ ಕಾಲಿರಿಸುವಂತೆ ಮಾಡುವ ಯೋಜನೆಯ ಮೊದಲ ಹೆಜ್ಜೆಯಲ್ಲಿ ಯಶ ಕಂಡಿರುವ ಅತುಲ್‌ ಸತಿಜಾ ಅವರ ಮಾತಿದು.

‘ದಿ ನಡ್ಜ್‌’ ಎಂಬ ಪ್ರತಿಷ್ಠಾನದ ಮೂಲಕ ಬಡಕುಟುಂಬಗಳ ಯುವಜನರಿಗೆ ವೃತ್ತಿ ಕೌಶಲ ತರಬೇತಿ ನೀಡುವ 24X7 ಕಾರ್ಯನಿರ್ವಹಿಸುವ ‘ಗುರುಕುಲ’ ನಡೆಸುತ್ತಿದ್ದಾರೆ ಅದರ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅತುಲ್‌. ಉತ್ತರ ಭಾರತದಿಂದ ಬಂದ ಅತುಲ್‌, ವಿವಿಧ ಕಾರ್ಪೊರೇಟ್‌ ಕಂಪೆನಿಗಳಲ್ಲಿ ದುಡಿದವರು. ಕಾರ್ಪೊರೇಟ್‌ ವಲಯಗಳ ಬೆಂಬಲದೊಂದಿಗೆ ಬಡತನ ನಿರ್ಮೂಲನೆಯ ಯೋಜನೆಗಳನ್ನು ರೂಪಿಸುವುದು ಅವರ ಬಯಕೆ. ಅದಕ್ಕಾಗಿ ಅವರು ಆಯ್ದುಕೊಂಡಿರುವುದು ಬೆಂಗಳೂರನ್ನು.

ಇಲ್ಲಿ ಎಲ್ಲ ವರ್ಗದ ಜನರೂ ಇರುವುದು ಮುಖ್ಯ ಕಾರಣ. ಲಗ್ಗೆರೆ, ಆಡುಗೊಡಿ, ಲಿಂಗರಾಜಪುರ, ಎಚ್‌ಎಸ್‌ಆರ್‌ ಲೇಔಟ್‌ ಮುಂತಾದ ಕೊಳೆಗೇರಿಗಳಲ್ಲಿ ಸುತ್ತಾಡಿ ಅಲ್ಲಿನ ಬದುಕನ್ನು ಅರ್ಥಮಾಡಿಕೊಂಡ ಅವರಲ್ಲಿ, ಬಡತನ ನಿರ್ಮೂಲನೆ ಮಾಡುವ ತಮ್ಮ ಹಲವು ವರ್ಷಗಳ ಗುರಿಯನ್ನು ಇಲ್ಲಿಂದಲೇ ಪ್ರಾರಂಭಿಸುವ ಆಲೋಚನೆ ಮೂಡಿತ್ತು. ಕಾರ್ಪೊರೇಟ್‌ ಕಂಪೆನಿಗಳ ನಂಟು ಹೊಂದಿದ್ದ ಅವರಿಗೆ ಅಗತ್ಯ ನೆರವೂ ದೊರಕಿತು.

ಭಾರತದಲ್ಲಿ ಪ್ರತಿವರ್ಷ ಕೆಲಸ ಹುಡುಕುವ 10 ಲಕ್ಷ ಯುವಜನರು ಸೃಷ್ಟಿಯಾಗುತ್ತಾರೆ. ಇವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶ, ಕೊಳೆಗೇರಿಗಳ ಬಡಕುಟುಂಬದವರು. ಈ ಪರಿಸ್ಥಿತಿ ಕನಿಷ್ಠ 15 ವರ್ಷಗಳವರೆಗೆ ಮುಂದುವರಿಯಲಿದೆ. ಸಣ್ಣ ಪುಟ್ಟ ನೌಕರಿ ಹಿಡಿಯುವ ಅವರಿಗೆ ಸಿಗುವುದೂ ಕಡಿಮೆ ವೇತನ. ಹೀಗಾಗಿ ಅವರು ಬಡತನದಲ್ಲಿಯೇ ಉಳಿಯುತ್ತಾರೆ.

ಇದೇ ಸನ್ನಿವೇಶ ಅವರ ನಂತರದ ಪೀಳಿಗೆಗೂ ವರ್ಗಾವಣೆಯಾಗುತ್ತದೆ. ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗದವರು ಕೆಲವು ನಿರ್ದಿಷ್ಟ ವೃತ್ತಿಯಲ್ಲಿ ಪರಿಣತಿ ಪಡೆಯಲು ಮುಂದಾಗುತ್ತಾರೆ. ಆದರೆ ವೃತ್ತಿ ಕೌಶಲವೊಂದೇ ಈ ಬಡತನದ ಸರಪಣಿಯನ್ನು ತುಂಡರಿಸಲಾರದು. ಇದನ್ನು ಬದಲಿಸಬೇಕೆಂದರೆ ಅವರಿಗೆ ವೃತ್ತಿ ಕೌಶಲದ ಜತೆಗೆ, ವ್ಯವಹಾರ ಮತ್ತು ಭಾಷಾ ಜ್ಞಾನ, ಜೀವನ ನಿರ್ವಹಣೆಯ ತಿಳಿವಳಿಕೆ ಮತ್ತು ವೇದಿಕೆ ಅಗತ್ಯ ಎನ್ನುವುದು ಅತುಲ್‌ ಅವರ ಅಭಿಪ್ರಾಯ.

ಗುರುಕುಲದಲ್ಲಿ...
‘ಗುರುಕುಲ’ ಶುರುವಾದದ್ದು ಕಳೆದ ನವೆಂಬರ್‌ನಲ್ಲಿ. ನಗರದ ಕೊಳೆಗೇರಿಗಳು ಮಾತ್ರವಲ್ಲ, ರಾಜ್ಯದ ವಿವಿಧ ಮೂಲೆಗಳ ಯುವಜನರು ಇದರ ವಿದ್ಯಾರ್ಥಿಗಳು. ಕಲಿಯಲು ಬರುವ ವಿದ್ಯಾರ್ಥಿಗಳಿಗೆ ನಾಲ್ಕು ತಿಂಗಳ ಅವಧಿಗೆ ಕಲಿಕೆಯ ಜತೆ 24X7 ಉಚಿತ ಊಟ ಮತ್ತು ವಸತಿ ವ್ಯವಸ್ಥೆಯೂ ಇದೆ. ‘ಗುರುಕುಲ’ ನಾಲ್ಕು ತಿಂಗಳ ಅವಧಿಯ ಕೋರ್ಸ್‌ ನಡೆಸುತ್ತದೆ. ಇಲ್ಲಿ ಯುವಕರು ಮತ್ತು ಯುವತಿಯರಿಗೆ ಪ್ರತ್ಯೇಕವಾದ ವ್ಯವಸ್ಥೆ ಇದೆ. ಸದ್ಯ ಯುವಕರಿಗೆ ವಾಹನ ಚಾಲನೆ ಮತ್ತು ಯುವತಿಯರಿಗೆ ಬ್ಯೂಟೀಷಿಯನ್‌ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ.

‘ಗುರುಕುಲ’ಕ್ಕೆ ಸೇರಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ ಇಲ್ಲದಿದ್ದರೂ ಯುವಜನರಿಗೆ ಆದ್ಯತೆ. ಇದಕ್ಕೆ ಅತುಲ್ ಅವರು ನೀಡುವ ಕಾರಣ, ‘ಪ್ರಾಪ್ತ ವಯಸ್ಸಿಗೆ ಬಂದ ಯುವಜನರು ಮದುವೆಯ ಸಿದ್ಧತೆ ನಡೆಸುತ್ತಿರುತ್ತಾರೆ. ಅವರಿಗೆ ಒಳ್ಳೆಯ ಉದ್ಯೋಗದ ಅನಿವಾರ್ಯತೆ ಇರುತ್ತದೆ. ಇಂತಹವರು ಕಡಿಮೆ ಆದಾಯ ಹೊಂದಿದ್ದರೆ, ಅವರ ಬಡತನದ ಚಕ್ರ ಮುಂದಿನ ಪೀಳಿಗೆಗೂ ದಾಟುತ್ತದೆ. ಆದರೆ ಅವರಿಗೆ ಉತ್ತಮ ಆದಾಯವಿದ್ದರೆ, ಮಕ್ಕಳ ಶಿಕ್ಷಣಕ್ಕಾಗಿ ಕಷ್ಟಪಡುವ ಅಗತ್ಯವಿಲ್ಲ. ಹೀಗೆ ಬಡತನದಿಂದ ಅವರನ್ನು ಹೊರತರಲು ಸಾಧ್ಯ’ ಎನ್ನುತ್ತಾರೆ ಅತುಲ್‌.

ಪ್ರಸ್ತುತ ಎರಡೇ ಕೋರ್ಸ್‌ಗಳಿದ್ದರೂ ಅವುಗಳ ಜತೆ ಕಂಪ್ಯೂಟರ್‌ ತಂತ್ರಜ್ಞಾನ, ಹಣಕಾಸು ವ್ಯವಹಾರ ನಿರ್ವಹಣೆ, ಇಂಗ್ಲಿಷ್‌ ಭಾಷೆ, ಸಂವಹನ ಮತ್ತು ವ್ಯವಹಾರ ಜ್ಞಾನಗಳನ್ನು ಸಹ ಕಲಿಸಲಾಗುತ್ತದೆ. ‘ಯುವಜನರಿಗೆ ಯಾವುದಾದರೊಂದು ಉದ್ಯೋಗಕ್ಕೆ ಸಂಬಂಧಿಸಿದ ಕೋರ್ಸ್‌ ನೀಡಿದರೆ ಸಾಲದು. ಅವರಲ್ಲಿ ವ್ಯವಹಾರ ಜ್ಞಾನ, ಜೀವನ ನಿರ್ವಹಣೆಯ ಸಾಮರ್ಥ್ಯ ಬೆಳೆಸಬೇಕು. ಅವರಿಗೆ ಉದ್ಯೋಗದ ಮಾರ್ಗವನ್ನೂ ತೋರಿಸಬೇಕು ಎನ್ನುವುದು ಆಶಯ.

ಇಲ್ಲಿ ಕೋರ್ಸ್‌ ಮುಗಿಯುತ್ತಿದ್ದಂತೆ ತಮ್ಮ ಕಂಪೆನಿಯೊಂದಿಗೆ ಸಂಪರ್ಕ ಹೊಂದಿರುವ ವಿವಿಧ ಕಾರ್ಪೊರೇಟ್‌ ಕಂಪೆನಿಗಳಿಗೆ ಸಂದರ್ಶನ ನಡೆಸಲು ಆಹ್ವಾನ ನೀಡಲಾಗುತ್ತದೆ. ಇಲ್ಲಿ ಕಲಿತವರು ಪರಿಣತರಾಗುವುದರಿಂದ ಅವರಿಗೆ ಉದ್ಯೋಗ ಸಿಗುವುದು ಕಷ್ಟವಾಗುವುದಿಲ್ಲ’ ಎನ್ನುತ್ತಾರೆ ಅವರು. ಫೆಬ್ರುವರಿಯಲ್ಲಿ ‘ಗುರುಕುಲ’ದ 46 ವಿದ್ಯಾರ್ಥಿಗಳ ಮೊದಲ ತಂಡ ಹೊರಬಂದಿದೆ. ಇದರಲ್ಲಿ 19 ಯುವತಿಯರು ಮತ್ತು 27 ಯುವಕರು. ಇಲ್ಲಿ ಪ್ರತಿಯೊಬ್ಬರೂ ಕನಿಷ್ಠ ₹8 ಸಾವಿರದ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಕೆಲವರು ಎರಡೆರಡು ಸಂಸ್ಥೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ವಿವರಿಸುತ್ತಾರೆ.

ಮರುಪಾವತಿ
‘ಗುರುಕುಲ’ದಲ್ಲಿ ಆರಂಭದಲ್ಲಿ ಸೇರಿಕೊಳ್ಳಲು ₹500 ಠೇವಣಿ ಇರಿಸುವುದರ ಹೊರತಾಗಿ ಬೇರೆ ಶುಲ್ಕವಿಲ್ಲ. ಆದರೆ ಅವರಿಗೆ ಉದ್ಯೋಗ ದೊರೆತ ಬಳಿಕ ಮಾಸಿಕ ₹1500ರಂತೆ 18 ತಿಂಗಳು ಹಣ ನೀಡಬೇಕು. ಇದು ಮುಂದಿನ ಬ್ಯಾಚ್‌ನ ವಿದ್ಯಾರ್ಥಿಗಳ ಕಲಿಕೆಗೆ ಬಳಕೆಯಾಗುತ್ತದೆ. ಇದು ದೊಡ್ಡ ಮೊತ್ತವಲ್ಲದಿರುವುದರಿಂದ ಅವರಿಗೆ ಹೊರೆಯಾಗುವುದಿಲ್ಲ ಎನ್ನುವ ಅನಿಸಿಕೆ ಅವರದು. ಸಂಸ್ಥೆಯ ಮೂಲಕ ಉದ್ಯೋಗ ಪಡೆಯಲು ಇಚ್ಛಿಸದವರು ಈ ನಿಯಮಕ್ಕೆ ಒಳಪಡಬೇಕಾಗಿಲ್ಲ ಎನ್ನುತ್ತಾರೆ.

ಸದ್ಯ ಕಾಡುಗೋಡಿಯಲ್ಲಿ ಮಾತ್ರ ‘ಗುರುಕುಲ’ದ ಎರಡು ವಿಭಾಗಗಳಿವೆ. ಈ ವರ್ಷದ ಅಂತ್ಯದೊಳಗೆ ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಕನಿಷ್ಠ ಆರು ‘ಗುರುಕುಲ’ಗಳನ್ನು ಸ್ಥಾಪಿಸುವುದು ಸಂಸ್ಥೆಯ ಗುರಿ. ಕ್ರಮೇಣ ರಾಜ್ಯದ ಇತರೆ ಭಾಗಗಳಿಗೂ ವಿಸ್ತರಿಸುವ ಗುರಿ ಅದರದು. ಜತೆಗೆ ಇನ್ನಷ್ಟು ವೈವಿಧ್ಯಮಯ ಕೋರ್ಸ್‌ಗಳನ್ನು ಅಳವಡಿಸುವ ಉದ್ದೇಶವೂ ಇದೆ.

‘ಗುರುಕುಲ’ಕ್ಕೆ ವಿವಿಧ ಕಾರ್ಪೊರೇಟ್‌ ಸಂಸ್ಥೆಗಳು ನೆರವಾಗುತ್ತವೆ. ಮಾರುತಿ, ಗೋದ್ರೆಜ್‌, ಇಂಟೆಲ್‌, ಆಕ್ಸಿಸ್‌ ಬ್ಯಾಂಕ್‌, ಎಂಫಸಿಸ್‌ ಐಟಿ ಸಂಸ್ಥೆ ಮುಂತಾದ ಅನೇಕ ಕಂಪೆನಿಗಳು ಪ್ರಾಯೋಜಕತ್ವ ನೀಡುತ್ತಿವೆ. ತಂತ್ರಜ್ಞಾನ, ವಿಜ್ಞಾನ, ಕಲೆ, ಆರ್ಥಿಕ, ಸಾಮಾಜಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದ ಉತ್ಸಾಹಿ ಯುವಜನರ ತಂಡ ‘ದಿ ನಡ್ಜ್‌’ ಜತೆ ಕೈ ಜೋಡಿಸಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳನ್ನು ಇದರೊಳಗೆ ಅಡಕ ಮಾಡಲು ಸ್ಥಳೀಯ ಸರ್ಕಾರಗಳ ನೆರವನ್ನೂ ಪಡೆಯುವ ಉದ್ದೇಶ ಈ ಸಂಸ್ಥೆಯದು. ಮಾಹಿತಿಗೆ 8971337172 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು.

ಚಂಡಿಗಡದಿಂದ ಬೆಂಗಳೂರಿಗೆ
ಹರಿಯಾಣದ ಚಂಡಿಗಡದವರಾದ ಅತುಲ್‌ ಸತಿಜಾ ಎಂಬಿಎ ಮತ್ತು ಬಿ–ಟೆಕ್‌ ವಿಷಯಗಳಲ್ಲಿ ಪದವಿ ಪಡೆದವರು. 1998ರಲ್ಲಿ ಇನ್ಫೊಸಿಸ್‌ನ ಉದ್ಯೋಗಿಯಾಗಿ ಮೊದಲ ಬಾರಿಗೆ ಬೆಂಗಳೂರಿಗೆ ಕಾಲಿಟ್ಟರು. ಬಳಿಕ ತವರಿನ ಗುರೂಗ್ರಾಮದಲ್ಲಿ ಗೂಗಲ್‌ನ ಮೊಬೈಲ್‌ ವಿಭಾಗದಲ್ಲಿ ಕೆಲಸ ಮಾಡಿದರು. ಆಗ ವಾರದ ರಜಾ ದಿನಗಳಲ್ಲಿ ಅಲ್ಲಿನ ಕೊಳೆಗೇರಿಗಳಿಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಅರಿಯುವುದು ಅವರ ಚಟುವಟಿಕೆಯ ಭಾಗವಾಗಿತ್ತು.

ಅಲ್ಲಿ ಎಂಡ್‌ ಪಾವರ್ಟಿ ಎಂಬ ಎನ್‌ಜಿಒದ ಅಧ್ಯಕ್ಷರೂ ಆಗಿದ್ದರು. 2006ರಲ್ಲಿ ಇನ್‌ಮೊಬಿ ಸಂಸ್ಥೆಯ ಮಾರಾಟ, ಮಾರುಕಟ್ಟೆ, ವ್ಯವಹಾರ ಅಭಿವೃದ್ಧಿ ಮತ್ತು ಕಾರ್ಯಾಚರಣೆ ವಿಭಾಗಗಳ ಮುಖ್ಯಸ್ಥರಾಗಿ ಮತ್ತೆ ಬೆಂಗಳೂರಿಗೆ ಬಂದರು. 15 ದೇಶಗಳ 430 ತಂಡಗಳ ಉಸ್ತುವಾರಿ ನಿರ್ವಹಿಸುತ್ತಿದ್ದರು. ಈಗ ಹುದ್ದೆ ತ್ಯಜಿಸಿದ್ದರೂ, ಸಂಸ್ಥೆಯ ಸಲಹೆಗಾರರಾಗಿ ಮುಂದುವರಿದಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎನ್ನುವುದು ಅವರ ಗುರಿ. ಇದು ಕಾರ್ಪೊರೇಟ್‌ ಸಂಸ್ಥೆಯಂತೆಯೇ ವ್ಯವಸ್ಥಿತವಾಗಿ ಕೆಲಸ ನಿರ್ವಹಿಸಬೇಕು ಎನ್ನುವುದು ಅವರ ಗುರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT