ಮಂಗಳವಾರ, ಆಗಸ್ಟ್ 11, 2020
26 °C

ಅಥಣಿ ಬಟ್ಟೆ ಅಂಗಡಿಗೆ ಬೆಂಕಿ: ಐವರು ಸಜೀವ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ (ಬೆಳಗಾವಿ): ಪಟ್ಟಣದ ಕರಣಿಗಲ್ಲಿಯ ಐದು ಮಹಡಿಯ ಬಟ್ಟೆ ಅಂಗಡಿಯೊಂದಕ್ಕೆ ಬುಧವಾರ ಬೆಳಗಿನಜಾವ ಬೆಂಕಿ ಬಿದ್ದ ಪರಿಣಾಮ ಐವರು ಸಜೀವವಾಗಿ ದಹನವಾಗಿದ್ದು, ಅಂದಾಜು 5 ಕೋಟಿ ರೂಪಾಯಿ ಹಾನಿ ಸಂಭವಿಸಿದೆ.ಬೆಳಗಿನಜಾವ 4.30ರ ಸಮೀಪ ಶಾರ್ಟ್ ಸಕ್ಯೂಟ್‌ನಿಂದಾಗಿ ದಾನಯ್ಯ ಹಿರೇಮಠ ಎಂಬುವವರಿಗೆ ಸೇರಿದ್ದ ಐದು ಮಹಡಿಯ ‘ಸ್ವಾಮಿ ಕಲೆಕ್ಷನ್ಸ್’ ಎಂಬ ಬಟ್ಟೆ ಅಂಗಡಿಯ ಕಟ್ಟಡಕ್ಕೆ ಭಾರಿ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿದೆ. ಅಗ್ನಿಶಾಮದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿದರೂ ಮಧ್ಯಾಹ್ನ ಒಂದು ಗಂಟೆಯವರೆಗೂ ಕಟ್ಟಡದ ಒಳಗೆ ಪ್ರವೇಶಿಸಲು ಆಗಿರಲಿಲ್ಲ. ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಬಾಗಿಲು ಒಡೆದು ಅಗ್ನಿಶಾಮಕ ಸಿಬ್ಬಂದಿ ಒಳ ನುಗ್ಗಿದಾಗ ಬೆಂದಿರುವ ಎರಡು ಶವಗಳು ಸಿಕ್ಕಿವೆ. ಘಟನೆಯಲ್ಲಿ ಅಂಗಡಿಯ ಮಾಲೀಕನ ಮಗ ಮೃತ್ಯುಂಜಯ ಹಿರೇಮಠ ಹಾಗೂ ಲಕ್ಷ್ಮೀ ಹಿರೇಮಠ ಸೇರಿದಂತೆ ಇನ್ನೂ ಮೂವರ ನೌಕರರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.ಅಂಗಡಿಯ ಕಟ್ಟಡದ ಕೆಳಭಾಗದಲ್ಲಿ ಹೊಗೆ ಕಾಣಿಸಿಕೊಂಡಿರುವುದರಿಂದ ಎಚ್ಚೆತ್ತುಕೊಂಡ ಮೃತ್ಯುಂಜಯ ಹಿರೇಮಠ, ಕುಟುಂಬದವರಿಗೆ ದೂರವಾಣಿಯಲ್ಲಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕ್ರಮೇಣ ಬೆಂಕಿ ಹೆಚ್ಚುತ್ತ ಹೋಗಿದ್ದರಿಂದ ಐದನೇ ಮಹಡಿಯಲ್ಲಿದ್ದ ಹಿರೇಮಠರಿಗೆ ಕೆಳಗೆ ಇಳಿದು ಬರಲಿಕ್ಕಾಗಲಿಲ್ಲ ಎಂದು ಸ್ಥಳದಲ್ಲಿ ಕುಟುಂಬದ ಸದಸ್ಯರು ತಿಳಿಸಿದರು. ಘಟನೆಯಿಂದಾಗಿ ಸುಮಾರು 5 ಕೋಟಿ ರೂಪಾಯಿ ಹಾನಿ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

 

ಅಂಗಡಿಯಲ್ಲಿ ನಿತ್ಯ ಸುಮಾರು ಒಂದು ಲಕ್ಷ ರೂಪಾಯಿಗೂ ಹೆಚ್ಚು ವಹಿವಾಟು ನಡೆಯುತ್ತಿತ್ತು ಎನ್ನಲಾಗಿದೆ.ಸುಮಾರು ಹತ್ತು ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಘಟನೆಯನ್ನು ವೀಕ್ಷಿಸಲು ಸಾವಿರಾರು ಜನರು ಬೆಳಿಗ್ಗೆಯಿಂದಲೇ ಸ್ಥಳಕ್ಕೆ ಆಗಮಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.