ಭಾನುವಾರ, ಮೇ 16, 2021
22 °C

ಅಥ್ಲೆಟಿಕ್ಸ್: ಫೈನಲ್‌ಗೆ ಉಸೇನ್ ಬೋಲ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೇಗು (ದಕ್ಷಿಣ ಕೊರಿಯಾ): 100 ಮೀಟರ್ ಓಟದಲ್ಲಿ ಅನರ್ಹಗೊಂಡು ನಿರಾಸೆಗೆ ಒಳಗಾಗಿದ್ದ ಜಮೈಕಾದ ಉಸೇನ್ ಬೋಲ್ಟ್ 200 ಮೀ.ನಲ್ಲಿ ಫೈನಲ್ ತಲುಪಿದ್ದಾರೆ.ಇಲ್ಲಿ ನಡೆಯುತ್ತಿರುವ 13ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 200 ಮೀ. ಓಟದ ಸೆಮಿಫೈನಲ್ ಹೀಟ್ಸ್‌ನಲ್ಲಿ ಬೋಲ್ಟ್ 20.31 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಡೇಗು ಕ್ರೀಡಾಂಗಣದಲ್ಲಿ ಸಂಘಟಕರು 200 ಮೀ. ಓಟದ ಸ್ಪರ್ಧೆಗೆ ಬೋಲ್ಟ್ ಹೆಸರು ಕೂಗಿದಾಗ ಎಲ್ಲರ ಗಮನ ಅವರತ್ತ ಸರಿಯಿತು. ಬೋಲ್ಟ್ ಎಚ್ಚರಿಕೆಯಿಂದಲೇ ಆರಂಭ ಪಡೆದರು. 100 ಮೀ.ಓಟದಲ್ಲಿ ತಪ್ಪು ಆರಂಭ ಪಡೆದ ಕಾರಣ ಅವರು ಅನರ್ಹರಾಗಿದ್ದರು.`ನನ್ನಿಂದ ಸದಾ ಅತ್ಯುತ್ತಮ ಫಲಿತಾಂಶವನ್ನು ನಿರೀಕ್ಷಿಸಿ. ನಾನು ಖಂಡಿತ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ~ ಎಂದು ಸೆಮಿಫೈನಲ್ ಬಳಿಕ ಬೋಲ್ಟ್ ನುಡಿದರು.ಆದರೆ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಅಥ್ಲೀಟ್‌ಗಳ ಸವಾಲು ಅಂತ್ಯಗೊಂಡಿದೆ. ಮಹಿಳೆಯರ 800 ಮೀ. ಓಟದ ಸೆಮಿಫೈನಲ್‌ನಲ್ಲಿಯೇ ಟಿಂಟು ಲೂಕಾ ಹೊರಬಿದ್ದರು. ತಮ್ಮ ಸೆಮಿಫೈನಲ್ ಹೀಟ್ಸ್‌ನಲ್ಲಿ ಕೇರಳದ ಈ ಓಟಗಾರ್ತಿ ಆರನೇ ಸ್ಥಾನ ಪಡೆದರು. ಅವರು 2:00.95 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಆದರೆ ಟಿಂಟು ತಮ್ಮ ಸಾಧನೆಯನ್ನು ಉತ್ತಮಗೊಳಿಸುವಲ್ಲಿ ಇಲ್ಲಿ ಯಶಸ್ವಿಯಾದರು.ಸೆಮಿಫೈನಲ್‌ನಲ್ಲಿ ಸ್ಪರ್ಧೆಯಲ್ಲಿದ್ದ 24 ಸ್ಪರ್ಧೆಗಳಲ್ಲಿ ಟಿಂಟುಗೆ 15ನೇ ಸ್ಥಾನ ಲಭಿಸಿತು. `ಇದಕ್ಕಿಂತ ಉತ್ತಮ ಪ್ರದರ್ಶನ ನೀಡಬಹುದಾಗಿತ್ತು~ ಎಂದು ಟಿಂಟು ನುಡಿದರು. ಆದರೆ ಟಿಂಟು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದರು.ಷಾಟ್‌ಪಟ್ ಸ್ಪರ್ಧಿ ಓಂಪ್ರಕಾಶ್ ಸಿಂಗ್ ಹಾಗೂ ಟ್ರಿಪಲ್ ಜಂಪ್ ಸ್ಪರ್ಧಿ ರೆಂಜಿತ್ ಮಹೇಶ್ವರ್ ಕೂಡ ವಿಫಲರಾದರು. ಸ್ಪರ್ಧೆಯಲ್ಲಿದ್ದ 27 ಮಂದಿಯಲ್ಲಿ ಓಂಪ್ರಕಾಶ್ ಸಿಂಗ್ 23ನೇ ಸ್ಥಾನ ಪಡೆದರು. ರೆಂಜಿತ್ ತಮ್ಮ ಮೂರೂ ಅವಕಾಶಗಳಲ್ಲಿ ಫೌಲ್ ಮಾಡಿದರು.ಉದ್ದೀಪನ ಮದ್ದು ಪರೀಕ್ಷೆ: ಈ ಬಾರಿ ಕೂಡ ಭಾರತದ ಅಥ್ಲೀಟ್‌ಗಳು ಪದಕ ಗೆಲ್ಲುವಲ್ಲಿ ವಿಫಲರಾದರು. ಕರ್ನಾಟಕದ ವಿಕಾಸ್ ಗೌಡ ಷಾಟ್‌ಪಟ್‌ನಲ್ಲಿ ಏಳನೇ ಸ್ಥಾನ ಗಳಿಸಿದ್ದೇ ಈ ಬಾರಿಯ ದೊಡ್ಡ ಸಾಧನೆ. ಭಾರತದ ಎಲ್ಲಾ ಅಥ್ಲೀಟ್‌ಗಳನ್ನು ಈ ಬಾರಿ ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ ಒಳಪಡಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.