ಶನಿವಾರ, ಮೇ 15, 2021
26 °C

ಅಧಿಕಾರವಿಲ್ಲ: ಮೇಯರ್ ಅಸಹಾಯಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಜನರ ಸಮಸ್ಯೆಗಳನ್ನು ಬಿಂಬಿಸಲು ಸಭೆ ನಡೆಸುವುದನ್ನು ಬಿಟ್ಟರೆ ಮೇಯರ್ ಸೇರಿದಂತೆ ಬಿಬಿಎಂಪಿ ಸದಸ್ಯರಿಗೆ ಬೇರೆ ಯಾವುದೇ ಅಧಿಕಾರ ಇಲ್ಲ. ಸದಸ್ಯರು ಸೂಚಿಸುವ ಕೆಲಸವನ್ನು ಅಧಿಕಾರಿಗಳು ಮಾಡುವುದೂ ಇಲ್ಲ' ಎಂದು ಮೇಯರ್ ಡಿ. ವೆಂಕಟೇಶಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.ವಾರ್ಡ್ ಸಮಿತಿಗಳ ರಚನೆಗೆ ಸಂಬಂಧಿಸಿದಂತೆ ಚರ್ಚಿಸಲು ಸಿವಿಕ್ ಸಂಸ್ಥೆ ಶನಿವಾರ ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. `ವಾರ್ಡ್‌ಗಳಲ್ಲಿ ಆಗಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುವ ಅಧಿಕಾರ ಸದಸ್ಯರಿಗೆ ಇಲ್ಲ. ದೊಡ್ಡ ಯೋಜನೆಗಳಿಗೆ ಸಂಬಂಧಿಸಿದ ಯಾವ ವಿವರವನ್ನೂ ಅಧಿಕಾರಿಗಳು ನಮಗೆ ನೀಡುವುದಿಲ್ಲ' ಎಂದು ವಿಷಾದದಿಂದ ಹೇಳಿದರು.`ಬಿಬಿಎಂಪಿ ಸದಸ್ಯರಿಗೆ ಅಧಿಕಾರ ನೀಡುವಲ್ಲಿ ಸರ್ಕಾರ ಎಡವುತ್ತಲೇ ಬಂದಿದೆ. ಅದರ ಪ್ರಯೋಜನವನ್ನು ಅಧಿಕಾರಿಗಳ ವರ್ಗ ಪಡೆಯುತ್ತಿದೆ' ಎಂದ ಅವರು, `ಮುಂಬೈ ಮಾದರಿಯಲ್ಲಿ ಜನರೇ ನೇರವಾಗಿ ಮೇಯರ್ ಆಯ್ಕೆ ಮಾಡಬೇಕು ಮತ್ತು ಆ ಹುದ್ದೆಗೆ ಐದು ವರ್ಷಗಳ ಅಧಿಕಾರ ನೀಡಬೇಕು' ಎಂದು ಆಗ್ರಹಿಸಿದರು.`ಸದ್ಯದ ವ್ಯವಸ್ಥೆಯನ್ನು ಇಟ್ಟುಕೊಂಡು ಬೆಂಗಳೂರಿನ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಗದಂತಹ ಸ್ಥಿತಿ ಎದುರಾಗಿದೆ. ಮಹಾನಗರ ವ್ಯಾಪ್ತಿಯಲ್ಲಿ ಸೇವೆ ಒದಗಿಸುವ ಬಿಡಿಎ, ಬಿಎಂಟಿಸಿ, ಬೆಸ್ಕಾಂ, ಜಲ ಮಂಡಳಿ, ಕೊಳಚೆ ಪ್ರದೇಶ ನಿರ್ಮೂಲನೆ ಮಂಡಳಿ ಸೇರಿದಂತೆ ಎಲ್ಲ ಸಂಸ್ಥೆಗಳನ್ನು ಬಿಬಿಎಂಪಿ ವ್ಯಾಪ್ತಿಗೆ ತರಬೇಕು' ಎಂದು  ಪ್ರತಿಪಾದನೆ ಮಾಡಿದರು.`ಹತ್ತಾರು ಲಕ್ಷ ಮೊತ್ತದ ಮೋರಿ ನಿರ್ಮಾಣದ ಕುರಿತು ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗುತ್ತದೆ. ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸುವ ವರ್ಲ್ಡ್ ಟ್ರೇಡ್ ಸೆಂಟರ್ ತರಹದ ಕಟ್ಟಡಗಳು ಬರುವ ಬಗೆಗೆ ಸದಸ್ಯರಿಗೆ ಯಾವುದೇ ಮಾಹಿತಿ ಇರುವುದಿಲ್ಲ' ಎಂದು ಹೇಳಿದರು. `ತಪ್ಪು ಮಾಡಿದ ನೌಕರನನ್ನು ಅಮಾನತು ಮಾಡುವಂತೆ ಮೇಯರ್ ಆದೇಶಿಸಿದರೂ ಅದು ಜಾರಿಯಾಗುವುದಿಲ್ಲ. ಇದು ಈಗಿನ ವ್ಯವಸ್ಥೆ' ಎಂದು ವಾಸ್ತವಾಂಶ ಬಿಚ್ಚಿಟ್ಟರು.`ಬಿಬಿಎಂಪಿ ಸದಸ್ಯರ ಅಭಿಪ್ರಾಯವನ್ನೇ ಆಲಿಸದೆ ನಗರದ 216 ರಸ್ತೆಗಳ ವಿಸ್ತರಣೆಗೆ ಅಧಿಕಾರಿಗಳು ಪಟ್ಟಿ ಸಿದ್ಧಪಡಿಸಿ ಅಧಿಸೂಚನೆ ಹೊರಡಿಸಿದರು. ವಾಸ್ತವವಾಗಿ ವಿಸ್ತರಣೆಯಾದ ರಸ್ತೆಗಳು ಎಂಟು ಮಾತ್ರ. ಉಳಿದ ರಸ್ತೆಗಳ ವಿಸ್ತರಣೆ ವಿಚಾರ ಒಂದಲ್ಲ ಒಂದು ಕಾರಣಕ್ಕೆ ನೆನೆಗುದಿಗೆ ಬಿತ್ತು. ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಇಲ್ಲಿ ಮನ್ನಣೆ ಇಲ್ಲ' ಎಂದು ದೂರಿದರು.`ಹೈಕೋರ್ಟ್ ಕೊಟ್ಟ ಕರಡು ಮಾರ್ಗಸೂಚಿ ಅನುಸಾರವೇ ವಾರ್ಡ್ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿ ರಚನೆಗೆ ಕೇವಲ ಎಂಟು ದಿನ ಕಾಲಾವಕಾಶ ನೀಡಿದ್ದರಿಂದ ಚರ್ಚೆಗೆ ಸಮಯವೇ ಇರಲಿಲ್ಲ. ಕೋರ್ಟ್ ಆದೇಶದ ಪ್ರಕಾರವೇ ನಿಯಮಾವಳಿ ರೂಪಿಸಲಾಗಿದೆ. ಅದರಲ್ಲಿ ಬದಲಾವಣೆ ಮಾಡಬೇಕಿದ್ದರೆ ಸಂಘ-ಸಂಸ್ಥೆಗಳು ಮೊದಲು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟು ಅಲ್ಲಿಂದ ನಿರ್ದೇಶನ ಕೊಡಿಸಬೇಕು' ಎಂದು ಸಲಹೆ ನೀಡಿದರು.`ಕೆಲವೆಡೆ ವಾರ್ಡ್ ಸಮಿತಿಗಳು ನಿಯಮಾನುಸಾರ ರಚನೆಯಾಗಿಲ್ಲ ಎಂಬ ದೂರುಗಳಿವೆ. ಸಭೆಗಳನ್ನು ನಡೆಸದ ವಿಷಯವಾಗಿಯೂ ಆಕ್ರೋಶ ವ್ಯಕ್ತವಾಗಿದೆ. ನಿಯಮಬದ್ಧವಾಗಿ ಸಮಿತಿಗಳು ರಚನೆಯಾಗಿ, ಕಾಲಮಿತಿಯಲ್ಲಿ ಸಭೆಗಳು ನಡೆಯುವುದು ಅಗತ್ಯವಾಗಿದೆ. ಅದನ್ನೂ ಕೋರ್ಟ್ ಮೂಲಕವೇ ಕೇಳುವಂತಹ ಸ್ಥಿತಿ ಎದುರಾಗಿದೆ' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.