ಸೋಮವಾರ, ಏಪ್ರಿಲ್ 12, 2021
28 °C

ಅಧಿಕಾರಿಗಳದ್ದೇ ಕಾರುಬಾರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೈನ್ನೈ: ಇದುವರೆಗೆ ರಾಜಕಾರಣಿಗಳ ಆಟವೇ ನಡೆಯುತ್ತಿದ್ದ ತಮಿಳುನಾಡಿನಲ್ಲಿ ಇನ್ನು ಕೆಲವು ತಿಂಗಳು ಸರ್ಕಾರಿ ಅಧಿಕಾರಿಗಳದ್ದೇ ಕಾರುಬಾರು. ಚುನಾವಣೆ ಪ್ರಕ್ರಿಯೆಗೆ ಚಾಲನೆ ದೊರೆತಿರುವುದೇ ಇದಕ್ಕೆ ಕಾರಣ.  ಏಪ್ರಿಲ್ 13ರಂದು ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮತ ಎಣಿಕೆ ಕಾರ್ಯ ಮೇ 13ರಂದು ನಡೆಯಲಿದ್ದು, ಈ ಅವಧಿಯಲ್ಲಿ ಪ್ರಮುಖ ನಾಲ್ಕು ಸಾರ್ವಜನಿಕ ಕಾರ್ಯಕ್ರಮ ನಡೆಯಲಿವೆ. ಚುನಾವಣೆ ನೀತಿ ಸಂಹಿತೆ ಅಡ್ಡಬರುವುದರಿಂದ ರಾಜಕಾರಣಿಗಳಿಗೆ ಈ ಕಾರ್ಯಕ್ರಮಗಳಲ್ಲಿ ದೊಡ್ಡಪ್ರಮಾಣದಲ್ಲಿ ತೊಡಗಿಸಿಕೊಂಡು ಜನರ ಗಮನಸೆಳೆಯಲು ಸಾಧ್ಯವಿಲ್ಲ. ಹಾಗಾಗಿ ಈ ಬಾರಿ ಸರ್ಕಾರಿ ಅಧಿಕಾರಿಗಳೇ ಈ ಕಾರ್ಯಕ್ರಮಗಳಲ್ಲಿ ಗಮನಸೆಳೆಯಲಿದ್ದಾರೆ.ಮಾರ್ಚ್ 8ರಂದು ವಿಶ್ವ ಮಹಿಳಾ ದಿನದ ಅಂಗವಾಗಿ ಇಲ್ಲಿನ ಮರಿನಾಬೀಚ್‌ನಲ್ಲಿರುವ ತಮಿಳು ಕವಯಿತ್ರಿ ಅವ್ವೈಯ್ಯಾರ್ ಪ್ರತಿಮೆಗೆ ಪುಷ್ಪಗುಚ್ಛ ಇರಿಸಲು ರಾಜಕಾರಣಿಗಳು ಅಥವಾ ಮಹಿಳಾ ಸಂಸದರಿಗೆ ಸಾಧ್ಯವಿಲ್ಲ. ಅವರು ಈ ಕಾರ್ಯಕ್ರಮಕ್ಕೆ ಆಗಮಿಸಬಹುದಾದರೂ,ಎಲ್ಲಾ ಜವಾಬ್ದಾರಿಗಳು ಅಧಿಕಾರಿಗಳದ್ದು.ಈ ವರ್ಷ ಚುನಾವಣಾ ನೀತಿ ಸಂಹಿತೆ ಅಡ್ಡ ಬರುವುದರಿಂದ ಈ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡುವಂತಿಲ್ಲ. ಇದರ ಹೊರತಾಗಿ, ಕಾರ್ಮಿಕರ ದಿನಾಚರಣೆ, ಬಾಬು ಜಗ್‌ಜೀವನ್ ರಾಮ್ ಜನ್ಮಾದಿನಾಚರಣೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಂದೂ ಸರ್ಕಾರಿ ಅಧಿಕಾರಿಗಳದ್ದೇ ಕಾರುಬಾರು.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಸಾರ್ವಜನಿಕರಾಗಿ ಭಾಗವಹಿಸಬಹುದೇ ಹೊರತು, ಆ ಸಂದರ್ಭವನ್ನು ಪ್ರಚಾರಕ್ಕೆ ಬಳಸುವಂತಿಲ್ಲ. ಇನ್ನು ತಮಿಳುನಾಡು ಸರ್ಕಾರದ ಅಧಿಕೃತ ವೈಬ್‌ಸೈಟ್‌ನಲ್ಲೂ ಚುನಾವಣಾ ಪ್ರಕ್ರಿಯೆ ತಂದಿರುವ ವ್ಯತ್ಯಾಸವನ್ನು ಕಾಣಬಹುದು. ತಮಿಳುನಾಡಿನ ರಾಜ್ಯಪಾಲರ, ರಾಜ್ಯದ ಸಂವಿಧಾನದ ಮುಖ್ಯಸ್ಥರು, ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಮಾಹಿತಿಯನ್ನು ವೆಬ್‌ಸೈಟ್ ಪ್ರತ್ಯೇಕ ಪುಟಗಳಲ್ಲಿ ತಿಳಿಯಬಹುದು.ವೆಬ್‌ಸೈಟ್‌ನಲ್ಲಿದ್ದ ಮುಖ್ಯಮಂತ್ರಿ ಎಂ.ಕರುಣಾನಿಧಿ, ಉಪಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹಾಗೂ ಇತರ ಸಚಿವರ ಛಾಯಾಚಿತ್ರಗಳನ್ನೂ ತೆಗೆಯಲಾಗಿದೆ. ‘ಚುನಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗ ಸಾರ್ವಜನಿಕ ಬೊಕ್ಕಸದಿಂದ ಖರ್ಚುಮಾಡಿ ಯಾವುದೇ ರಾಜಕಾರಣಿಗೆ ಪ್ರಚಾರ ನೀಡಲು ಸಾಧ್ಯವಿಲ್ಲ’ ಎಂದು ಈ ಬೆಳವಣಿಗೆಗಳ ಕುರಿತು ತಮಿಳುನಾಡಿನ ಮುಖ್ಯ ಚುನಾವಣಾ ಆಯುಕ್ತ ಪ್ರವೀಣ್ ಕುಮಾರ್ ವಿವರಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.