ಸೋಮವಾರ, ಮೇ 23, 2022
27 °C

ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸದಸ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ, ನಡವಳಿಕೆಗಳು, ಲಂಚಾವತಾರ ಶುಕ್ರವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾದವು.

ನೂತನವಾಗಿ ಆಯ್ಕೆಯಾದ ಜಿ.ಪಂ. ಸದಸ್ಯರಿಗೆ ಇದು ಪ್ರಥಮ ಸಭೆಯಾಗಿತ್ತು. ಆದರೂ, ಇದುವರೆಗೆ ತಮಗಾದ ಅನುಭವಗಳನ್ನು ಸಭೆಯಲ್ಲಿ ಮಂಡಿಸಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ಬೆಸ್ಕಾಂ ಅಧಿಕಾರಿಗಳ ಕಾರ್ಯ ನಿರ್ವಹಣೆಯನ್ನು ಪ್ರಸ್ತಾಪಿಸಿದ ಸದಸ್ಯ ಬಾಬುರೆಡ್ಡಿ, ಚಿತ್ರದುರ್ಗ ತಾಲ್ಲೂಕು ತುರುವನೂರು ಹೋಬಳಿಯ ಚಿಕ್ಕಪ್ಪನಹಳ್ಳಿಯಲ್ಲಿ ವಿದ್ಯುತ್ ಪರಿವರ್ತಕ ಸುಟ್ಟು 15ಕ್ಕೂ ಹೆಚ್ಚು ದಿನಗಳು ಕಳೆದಿದ್ದರೂ ಬದಲಾವಣೆಗೆ ಯಾವುದೇ ಕ್ರಮಕೈಗೊಂಡಿರಲಿಲ್ಲ. ವಿದ್ಯುತ್ ಪರಿವರ್ತಕ ದುರಸ್ತಿ ಮಾಡುವಂತೆ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಸುಚೇತನ ಅವರಿಗೆ ತಿಳಿಸಿದರೆ ಸರಿಯಾಗಿ ಗೌರವದಿಂದ ಮಾತನಾಡಿಸಲಿಲ್ಲ. ಏಕವಚನದಲ್ಲಿ ಮಾತನಾಡಿಸಿದರು. ಅಧಿಕಾರಿಗಳು ಸ್ಪಂದಿಸದ ಕಾರಣ ನಾನೇ ರೂ 7,500 ನೀಡಿ ವಿದ್ಯುತ್ ಪರಿವರ್ತಕ ದುರಸ್ತಿ ಮಾಡಿಸಿದೆ. ಆದರೆ, ಅದನ್ನು ಮತ್ತೆ ಅದೇ ಸ್ಥಳಕ್ಕೆ ಅಳವಡಿಸಲು ಬೆಸ್ಕಾಂ ಶಾಖಾಧಿಕಾರಿ ಸುನೀಲ್‌ಗೆ ರೂ. 1500 ಲಂಚ ನೀಡಬೇಕಾದ ಪರಿಸ್ಥಿತಿ ಬಂತು ಎಂದು ಬೆಸ್ಕಾಂನಲ್ಲಿ ಭ್ರಷ್ಟಾಚಾರ  ತಾಂಡವವಾಡುತ್ತಿರುವುದನ್ನು ಬಿಚ್ಚಿಟ್ಟರು.ಜಿ.ಪಂ. ಅಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ಮೊದಲು ಸರಿಯಾಗಿ ಮಾತನಾಡುವುದನ್ನು ಕಲಿತುಕೊಳ್ಳಿ. ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಎಂದು ಸೂಚಿಸಿದರು.

ವಿದ್ಯುತ್ ಪರಿವರ್ತಕ ದುರಸ್ತಿ ವೆಚ್ಚವನ್ನು ಮತ್ತು ಲಂಚ ಪಡೆದಿರುವ ಹಣವನ್ನು ಗೌರವವಯುತವಾಗಿ ಸದಸ್ಯರಿಗೆ ವಾಪಸ್ ನೀಡಬೇಕು. ಲಂಚ ತೆಗೆದುಕೊಂಡಿರುವ ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆ ಸಿಇಒ ರಂಗೇಗೌಡ ಬೆಸ್ಕಾಂ ಅಧಿಕಾರಿಗಳಿಗೆ ಆದೇಶ ನೀಡಿದರು.ಪಿಡಿಒ ವಿರುದ್ಧ ಕ್ರಮ: ಸದಸ್ಯರ ಜತೆ ಅಸಭ್ಯವಾಗಿ ವರ್ತಿಸಿದ ಚಳ್ಳಕೆರೆ ತಾಲ್ಲೂಕಿನ ಪಗಡಲಬಂಡೆ ಗ್ರಾ.ಪಂ.ನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು. ನಮಗೆ ಅವಮಾನವಾಗಿದೆ ಎಂದು ಕವಿತಾ ಮಹೇಶ್ ಒತ್ತಾಯಿಸಿದರು.ಅಧಿಕಾರಿಗಳಿಗೆ ಸೌಜನ್ಯತೆ ಇಲ್ಲ. ಗೌರವ ಕೊಡುವುದಿಲ್ಲ. ಪಿಡಿಒ ಅವರನ್ನು ಅಮಾನತು ಮಾಡಿದರೆ ಮಾತ್ರ ಸಭೆ ನಡೆಸಲು ಅವಕಾಶ ನೀಡುತ್ತೇವೆ ಎಂದು ಬಾಬುರೆಡ್ಡಿ ಮತ್ತಿತರರು ನುಡಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಸಿಇಒ ರಂಗೇಗೌಡ, ಪಿಡಿಒ ವರ್ತನೆ ಕುರಿತು ವರದಿ ನೀಡಲು ಯೋಜನಾಧಿಕಾರಿಗಳಿಗೆ ಸೂಚಿಸಿದ್ದೇನೆ. ವಸ್ತುಸ್ಥಿತಿ ಸಮರ್ಪಕವಾಗಿ ತಿಳಿದುಕೊಳ್ಳದೆ ತರಾತುರಿಯಲ್ಲಿ ಕ್ರಮಕೈಗೊಳ್ಳುವುದಿಲ್ಲ. ಈ ಪ್ರಕರಣದ ಹಿನ್ನೆಲೆ ಸಂಶಯಾಸ್ಪದವಾಗಿರುವುದರಿಂದ ವರದಿ ಪಡೆದ ನಂತರ ಶೀಘ್ರ ಕ್ರಮಕೈಗೊಳ್ಳುತ್ತೇನೆ. ನೀವು ಹೇಳಿದ ತಕ್ಷಣ ಅಮಾನತು ಮಾಡಲು ಸಾಧ್ಯವಿಲ್ಲ ಎಂದು ಸದಸ್ಯರ ಮನವೊಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.