ಶುಕ್ರವಾರ, ಏಪ್ರಿಲ್ 23, 2021
31 °C

ಅನವಶ್ಯಕ ವಿವಾದ ನಿಲ್ಲಲಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಗ ಮತ್ತೊಂದು ವಿವಾದಕ್ಕೆ ಕನ್ನಡ ಸಾಹಿತಿಗಳು ಜನಕರಾಗಿದ್ದಾರೆ. ಬೆಳಗಾವಿಯಲ್ಲಿ ಜರುಗಲಿರುವ ವಿಶ್ವಕನ್ನಡ ಸಮ್ಮೇಳನದ ಉದ್ಘಾಟನೆಗೆ ಐ.ಟಿ. ಉದ್ಯಮಿ ಎನ್.ಆರ್. ನಾರಾಯಣಮೂರ್ತಿಯವರನ್ನು ರಾಜ್ಯ ಸರ್ಕಾರ ಆಮಂತ್ರಣ ಕೊಟ್ಟಿದೆ. ಆಮಂತ್ರಣವನ್ನು ಒಪ್ಪಿಕೊಂಡಿದ್ದಾರೆ. ಮೂರ್ತಿಯವರನ್ನು ಕರೆದಿರುವ ಬಗ್ಗೆ ಸಾಹಿತಿ ಬರಗೂರು ರಾಮಚಂದ್ರಪ್ಪ ಮತ್ತು ಅವರ ಗುಂಪಿನ ಇತರರು ಆಕ್ಷೇಪಣೆ ಎತ್ತಿದ್ದಾರೆ. ಅವರನ್ನು ಕರೆದಿರುವುದು ಸರಿಯಲ್ಲವೆಂದು, ಆಕ್ಷೇಪಣಾಕಾರರು ಕೊಡುವ ಕಾರಣ ಅವರು ಕರ್ನಾಟಕಕ್ಕೆ ಏನು ಸೇವೆ ಸಲ್ಲಿಸಿದ್ದಾರೆ? ಏನು ಪ್ರಯೋಜನವಾಗಿದೆ?ಅವರನ್ನು ಕರೆದಿದ್ದನ್ನು ಸಮರ್ಥಿಸುವವರು ನಾರಾಯಣಮೂರ್ತಿಯವರ ಐ.ಟಿ. ಉದ್ಯಮ ಇನ್ಫೋಸಿಸ್ ಸ್ಥಾಪಿಸಿ ಸಹಸ್ರಾರು ಜನರಿಗೆ ತಂತ್ರಜ್ಞಾನವನ್ನು ಕೊಟ್ಟು ಅವರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿದ್ದಾರೆ. ತತ್ಪರಿಣಾಮ ಕರ್ನಾಟಕ ಐ.ಟಿ. ಕ್ಷೇತ್ರದಲ್ಲಿ ಭಾರತದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲಿಯೇ ಒಂದು ಉಜ್ವಲ ಸ್ಥಾನವನ್ನು ದೊರಕಿಸಿದ್ದಾರೆ. ಅವರಿಂದ ಜ್ಞಾನ ಸಂಪಾದನೆ ಮಾಡಿದವರು ಲಕ್ಷಾಂತರ ಜನರು ಲಕ್ಷಾಂತರ ರೂಪಾಯಿಗಳ ಸಂಬಳ ಪಡೆಯಲು ಶಕ್ತರಾಗಿದ್ದಾರೆ.ಇದಲ್ಲದೆ ಅವರು ಅನೇಕ ಸಂಘ ಸಂಸ್ಥೆಗಳಿಗೆ ಉದಾರವಾಗಿ ಲಕ್ಷೋಪಲಕ್ಷ ಧನ ಸಹಾಯ ಮಾಡಿದ್ದಾರೆ. ಅವರೇ ಗ್ರಾಮಾಂತರ ಪ್ರದೇಶದಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೆ ಪುಸ್ತಕ ಭಂಡಾರಗಳನ್ನು ಸ್ಥಾಪಿಸಲು ಕೋಟಿಗಟ್ಟಲೆ ಧನ ಸಹಾಯ ಮಾಡಿದ್ದಾರೆ. ಉಚಿತವಾಗಿ ಸಹಸ್ರಾರು ಕಂಪ್ಯೂಟರ್‌ಗಳನ್ನು ದಾನ ಮಾಡಿದ್ದಾರೆ. ಆದ್ದರಿಂದ ಅವರನ್ನು ಕರೆದಿದ್ದು ಉಚಿತವೆಂದು ಸಮರ್ಥಿಸಿದ್ದಾರೆ.ಸರ್ಕಾರದ ನಿರ್ಣಯದ ಪರ ಮತ್ತು ವಿರೋಧ ಅಭಿಪ್ರಾಯಗಳಲ್ಲಿ ಯಾವುದು ಸಾಧು ಎಂಬುದನ್ನು ಜನ ತಿಳಿಯಬೇಕು. ಸರ್ಕಾರ ಅವರನ್ನು ಉದ್ಘಾಟನೆ ಮಾಡಲು ಕರೆದಿದ್ದಾರೆ. ಅವರು ಒಪ್ಪಿಕೊಂಡಿದ್ದಾರೆ. ಈ ಹಂತದಲ್ಲಿ ಅವರನ್ನು ಕರೆಯಬೇಡಿ; ಕರೆದರೂ ಅವರು ಬರಬಾರದು ಎಂಬುದು ಸಂಸ್ಕೃತಿಯ ಲಕ್ಷಣವೆ? ಸರ್ಕಾರವೇ ಅವರ ಬಾಗಿಲಿಗೆ ಹೋಗಿ ಬನ್ನಿ ಎಂದು ಕರೆದರು ಅವರು ಬರಲು ಒಪ್ಪಿದರು.ಈಗ ಬರಬೇಡಿ ಎಂದು ಹೇಳುವುದು ಸುಸಂಸ್ಕೃತರ ಲಕ್ಷಣವೆ? ಅವರೀಗ ಬಾರದಿದ್ದರೆ ಅವರಿಗೆ ಯಾವ ನಷ್ಟವೂ ಇಲ್ಲ. ಅಪಮಾನವು ಆಗಲಾರದು. ಆದರೆ ಬನ್ನಿ ಎಂದು ಕರೆದು ಈಗ ಬರಬೇಡಿ ಎಂದು ಹೇಳುವ ನಡೆತೆಯಿಂದ ಕರೆದವರ ಮಾನ ಹೋಗುತ್ತದೆ. ನಮ್ಮ ಪ್ರದೇಶ ಸುಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವುದಕ್ಕಾದರೂ ಮಾನ ಉಳಿಸಿಕೊಳ್ಳುವುದಕ್ಕಾದರೂ ಅವರನ್ನು ಬರಬೇಡಿ ಎಂದು ಹೇಳುವುದು ಅನುಚಿತ.ಇನ್ನು ಎರಡನೆಯದಾಗಿ ಸಮ್ಮೇಳನದ ಉದ್ಘಾಟನೆಗೆ ಯಾರು ಅರ್ಹರು ಎಂಬ ವಿಚಾರದಲ್ಲಿ ಯಾರೂ ಯಾವ ಮಾನದಂಡವನ್ನು ನಿರ್ಧರಿಸಿಲ್ಲ.ಸಾಧಾರಣವಾಗಿ ಅಂತಹ ಉತ್ತಮ ಕಾರ್ಯವನ್ನು ನೆರವೇರಿಸುವುದಕ್ಕೆ ಪುಂಡು ಪೋಕರಿಗಳು, ಸಮಾಜ ಘಾತುಕರು, ಕಳ್ಳಕಾಕರು, ಕೊಲೆಗಡುಕರು ಆಗಿರಬಾರದು. ಅವರಿಂದ ಸಮಾಜಕ್ಕೆ, ರಾಜ್ಯಕ್ಕೆ, ಭಾಷೆಗೆ ಸಂಸ್ಕೃತಿಗೆ ಏನಾದರು ಕಿಂಚಿತ್ತು ಸೇವೆ ಸಲ್ಲಿಸಿದ್ದರೂ ಸ್ವಲ್ಪವಾದರೂ ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದರೂ ಅರ್ಹರೆಂದು ಸ್ಥೂಲವಾಗಿ ಭಾವಿಸಬಹುದು. ಈ ಮಾಪಕದಿಂದ ನಾರಾಯಣಮೂರ್ತಿಯವರು ಅರ್ಹತೆ ಅಲ್ಲವೆ ಎಂಬುದನ್ನು ನಿರ್ಧರಿಸಬೇಕು.ಇನ್ನು ನಾರಾಯಣಮೂರ್ತಿ ಅವರು ಆದಾಯ ತೆರಿಗೆ ಕೊಡುವುದರಲ್ಲಿ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಆಪಾದನೆ ಮಾಡಿದ್ದಾರೆ. ಅವರು ತೆರಿಗೆಯನ್ನು ಕಾನೂನು ಬದ್ಧವಾಗಿ ಕೊಡಬೇಕಾಗಿತ್ತೆ ಇಲ್ಲವೆ ಎಂಬುದನ್ನು ನಿರ್ಧರಿಸಲು ವಿವಾದ ನ್ಯಾಯಾಲಯದ ಮುಂದೆ ಇದೆ. ಆದಾಯ ತೆರಿಗೆಯನ್ನು Evade ಮಾಡುವುದಕ್ಕೂ Avoid  ಮಾಡುವುದಕ್ಕೂ ವ್ಯತ್ಯಾಸವಿದೆ. ಕಾನೂನಿನ ಪ್ರಕಾರ ಅವರು ತೆರಿಗೆ ಕೊಡಬೇಕಾಗಿಲ್ಲದಿದ್ದರೆ ಕೊಡಬೇಕಾಗಿಲ್ಲ. ಅದರಲ್ಲಿ ತಪ್ಪೇನು ಇಲ್ಲ. ಅದು ಅವರ ಕೀರ್ತಿಗೆ ಯಾವ ಊನವನ್ನು ಉಂಟುಮಾಡಲಾರದು. ಆದ್ದರಿಂದ ಈ ವಿವಾದವನ್ನು ಅನವಶ್ಯಕವಾಗಿ ಬೆಳಸದೆ ಅವರನ್ನು ನಮ್ಮ ರಾಜ್ಯದ ಹಿತಕ್ಕಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಯೋಚಿಸುವುದು ಉತ್ತಮ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.