ಶನಿವಾರ, ಮೇ 28, 2022
25 °C

ಅನಾಥ ಮಕ್ಕಳ ಉತ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲ್ಲಿ ಎಲ್ಲೆಲ್ಲೂ ಸಂಗೀತವೇ ಆವರಿಸಿಕೊಂಡಿತ್ತು. ಹಿರಿಯರು, ಮಕ್ಕಳು, ಯುವಕ ಯುವತಿಯರು ಎಲ್ಲರ ಬಾಯಲ್ಲೂ ಹಾಡುಗಳು ಅನುರಣಿಸುತ್ತಿದ್ದವು. ಸಂಗೀತ ಎಲ್ಲರ ಹೃದಯ ತಟ್ಟುವ ಮಾಧ್ಯಮ, ಅಷ್ಟೇ ಅಲ್ಲ, ಅನಾಥ ಮಕ್ಕಳ ಜೀವನವನ್ನು ಸುಧಾರಿಸುವ ಚೈತನ್ಯ ಸಂಗೀತಕ್ಕಿದೆ ಎಂಬುದು ಇಲ್ಲಿ ನಿರೂಪಿತಗೊಂಡಿತ್ತು.ಅದು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆದ `ಮೆಗಾ ಮ್ಯೂಸಿಕ್ ಹಬ್ಬ~. ಆದರೆ ಇದು ಕೇವಲ ಸಂಗೀತ ಕಾರ್ಯಕ್ರಮ ಆಗಿರಲಿಲ್ಲ, ಇದರ ಹಿಂದೆ  ಅರ್ಥಪೂರ್ಣ ಉದ್ದೇಶವೊಂದಿತ್ತು. ಅನಾಥ ಮಕ್ಕಳಿಗೆ ಸೂರು ಕಲ್ಪಿಸುವ ಉದ್ದೇಶದಿಂದ `ಕಾರ್ಟ್‌ಮನ್ ಸೊಸೈಟಿ~ ಮತ್ತು `ಸರಿಗಮ~ ಸಂಸ್ಥೆಗಳು ಒಟ್ಟುಗೂಡಿ ಈ ಸಂಗೀತ ಸಂಜೆಯನ್ನು ಆಯೋಜಿಸಿದ್ದವು.ಈ ಸಮಾರಂಭದ ಮುಖ್ಯ ಉದ್ದೇಶ `ಉತ್ಥಾನ್~ ಮ್ಯೂಸಿಕ್ ಆಲ್ಬಮ್ ಬಿಡುಗಡೆ. ಅನಾಥ ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ರೂಪುಗೊಂಡಿರುವ `ಉತ್ಥಾನ್~ ಪ್ರಸ್ತುತಪಡಿಸಲು ಈ ಕಾರ್ಯಕ್ರಮ ನಡೆಸಿಕೊಡಲಾಯಿತು.ಅನಾಥ ಮಕ್ಕಳಿಗೆ ಆಶ್ರಯ ನೀಡಿರುವ  `ಕಡೇಶ್ ಹೋಮ್~ ನ ಮಕ್ಕಳ ಸಾಮರ್ಥ್ಯ, ಕೌಶಲ್ಯವನ್ನು ಜಗತ್ತಿಗೆ ಪರಿಚಯಿಸಲು ಮಕ್ಕಳೇ ಹಾಡಿದ `ಉತ್ಥಾನ್~ ಮ್ಯೂಸಿಕ್ ಆಲ್ಬಮ್ ಹೊರತರಲಾಗಿದೆ. ಅದರಿಂದ ಬರುವ ಹಣವನ್ನು ಅವರ ಅಭಿವೃದ್ಧಿಗೆ ವಿನಿಯೋಗಿಸಲು ಈ ಕಾರ್ಯಕ್ರಮ ನಡೆದಿತ್ತು. ಅನಾಥ ಮಕ್ಕಳ ಜೀವನ ಗುಣಮಟ್ಟವನ್ನು ಸುಧಾರಿಸಲು ಇಲ್ಲಿ ಹಲವು ಸಂಘ ಸಂಸ್ಥೆ, ಮ್ಯೂಸಿಕ್ ಬ್ಯಾಂಡ್‌ಗಳು ಕೈಜೋಡಿಸಿದ್ದವು.ಕಾರ್ಯಕ್ರಮವನ್ನು ಕೇಂದ್ರ ಯೋಜನಾ ಖಾತೆಯ ಮಾಜಿ ಸಚಿವ ಎಂ. ವಿ. ರಾಜಶೇಖರನ್ ದೀಪ ಬೆಳಗಿಸಿ ಉದ್ಘಾಟಿಸಿದರು. `ಈ ಮುದ್ದು ಮಕ್ಕಳ ಜೀವನವೂ ದೀಪದಂತೆ ಪ್ರಜ್ವಲಗೊಳ್ಳಲಿ, ಅವರ ಬದುಕು ಕತ್ತಲಲ್ಲಿ ಕಮರದೆ, ದೀಪದಂತೆ ಬೆಳಗಲಿ~ ಎಂದು ಹಾರೈಸಿದರು. `ಇವರು ಅನಾಥರಲ್ಲ, ನಾವೆಲ್ಲರೂ ಒಂದೇ. ಇವರ ಬದುಕನ್ನು ಸುಧಾರಿಸಲು ಎಲ್ಲರೂ ಒಗ್ಗೂಡುವ ಅವಶ್ಯಕತೆಯಿದೆ~ ಎಂದು ನುಡಿದರು.ನಂತರ ಒಡಿಶಾದ ಪ್ರಸಿದ್ಧ ನೃತ್ಯಗಾತಿ ಅಶ್ವಿನಿ ರಘುನಾಥ್ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ ನಡೆಯಿತು. ಈ  ನೃತ್ಯಕ್ಕೆ ಎಲ್ಲೆಡೆಯಿಂದಲೂ ಕರತಾಡನ ಕೇಳಿಬಂದಿತ್ತು. ಈ ನೃತ್ಯ ಕಾರ್ಯಕ್ರಮಕ್ಕೆ ಕಳೆ ತಂದಿತ್ತು.ನಂತರ `ಉತ್ಥಾನ್~ ಮ್ಯೂಸಿಕ್ ಆಲ್ಬಮ್ ಅನ್ನು ಸಂಗೀತ ನಿರ್ದೇಶಕ ಅಗ್ನೆಲ್ ರೋಮನ್ ಬಿಡುಗಡೆಗೊಳಿಸಿದರು. `ಈ ಆಲ್ಬಮ್‌ನಲ್ಲಿ ಒಟ್ಟು ಏಳು ಹಾಡುಗಳಿವೆ.

 

ಆರು ಹಾಡುಗಳನ್ನು ಮಕ್ಕಳು ಹಾಡಿದ್ದಾರೆ. ಟೈಟಲ್ ಹಾಡನ್ನು ಪಾಕಿಸ್ತಾನಿ ಸೂಫಿ ಸಂಗೀತಗಾರ ಸಾಜಿದ್ ಅಲಿ ಗಫೂರ್ ಹಾಡಿದ್ದಾರೆ. ಈ ಹಾಡುಗಳು ಮತ್ತು ಸಂಗೀತ ಸಂಯೋಜನೆ ಎಲ್ಲರ ಮನತಟ್ಟುತ್ತದೆ~ ಎಂದರು. ಈ ಹಾಡಿಗೆ ಸಾಹಿತ್ಯ ರೂಪಿಸಿದ್ದ ಅರುಣ್ ಕುಮಾರ್ ಕೂಡ ಎಲ್ಲರನ್ನು ರಂಜಿಸಲು ಇಲ್ಲಿ ಬಂದಿದ್ದರು. `ಮಕ್ಕಳ ನೋವು, ನಲಿವು, ಸಂತಸ, ಬದುಕು ಎಲ್ಲವೂ ಈ ಹಾಡಿನಲ್ಲಿ ಅಡಗಿದೆ, ಅದನ್ನು ಕೇಳಿ ಸವಿಯಬೇಕಷ್ಟೆ~ ಎಂದರು.ನಂತರ ಪಾಕಿಸ್ತಾನದ ಪ್ರಸಿದ್ಧ ಗಾಯಕ ಸಾಜಿದ್ ಅಲಿ ಗಫೂರ್ ಅವರ ಸಂಗೀತ ಸಂಯೋಜನೆಯ ತುಣುಕನ್ನು ಅಲ್ಲಿ ವಿಡಿಯೋ ಮೂಲಕ ಪ್ರದರ್ಶಿಸಲಾಯಿತು. ಅವರ ಸಂಯೋಜನೆಯ ಸಂಗೀತ ಸಾಧನಗಳ ಕಛೇರಿಯನ್ನು ಒಂದಷ್ಟು ಹೊತ್ತು ಅಲ್ಲಿ ತೋರಿಸಲಾಯಿತು. ಇದಾದ ನಂತರದ ಸರದಿ ಭಾರತೀಯ ಸಂಗೀತ ಬ್ಯಾಂಡ್‌ಗಳಾದ `ಅಗಂ~ ಮತ್ತು `ಎಕಾ~ದ್ದಾಗಿತ್ತು. ಅಗಂ ತಂಡ ಕಾರ್ನಾಟಿಕ್ ರಾಕ್ ಸಂಗೀತವನ್ನು ವಿಭಿನ್ನವಾಗಿ ನಡೆಸಿಕೊಟ್ಟಿತು. ಶಾಸ್ತ್ರೀಯ ಗಾಯನಕ್ಕೆ ರಾಕ್ ಸಂಗೀತವನ್ನು ಬೆರೆಸಿ ಹಾಡಿದ್ದು ಅಲ್ಲಿದ್ದವರಿಗೆ ಸಂಗೀತದ ಹುಚ್ಚು ಹಿಡಿಸಿತ್ತು. ಶಾಸ್ತ್ರೀಯ ಹಾಡುಗಳಿಗೆ ಆಧುನಿಕ ಸ್ಪರ್ಶ ನೀಡಿದರೆ ಹೇಗಿರುತ್ತೆ ಎಂಬುದನ್ನು ವಿಭಿನ್ನವಾಗಿ ಪರಿಚಯಿಸಿದ್ದು ಈ ಬ್ಯಾಂಡ್. ಹಲವು ಹಿಂದಿ, ಮಲೆಯಾಳಂ ಹಾಡುಗಳನ್ನು ಗಿಟಾರ್, ಪಿಯಾನೊ, ಡ್ರಂ ಇವುಗಳ ಬಡಿದೆಬ್ಬಿಸುವ ಶಬ್ದದೊಂದಿಗೆ ಕೇಳಿಸಿದ್ದರು. ಆ ಸಂಗೀತಕ್ಕೆ ಹೆಜ್ಜೆ ಹಾಕಲು ಅದಾಗಲೇ ಹಿಂದಿನ ಸಾಲಿನವರು ಆರಂಭಿಸಿದ್ದರು.ಇನ್ನು ಸ್ವತಂತ್ರ ರಾಕ್ ಬ್ಯಾಂಡ್‌ನದ್ದು ಇನ್ನೂ ವಿಭಿನ್ನ. ಹಾಡಿನೊಂದಿಗೆ ನೃತ್ಯಕ್ಕೂ ಹೆಜ್ಜೆ ಹಾಕುತ್ತಿದ ತಂಡಕ್ಕೆ ಪ್ರೇಕ್ಷಕರ ಕಡೆಯಿಂದ ಸಂಪೂರ್ಣ ಪ್ರೋತ್ಸಾಹ. ಆ ತಂಡ ತನ್ನ ಹೆಸರಿಗೆ ತಕ್ಕಂತೆ ಹಾಡಿ ರಂಜಿಸಿತ್ತು. ಹಾಡೆಂದರೆ ಹೀಗಿರಬೇಕು ಎಂಬ ಹೊಗಳಿಕೆಯೊಂದಿಗೆ ಎಲ್ಲರೂ ಒನ್ಸ್ ಮೋರ್ ಎಂದು ಕೂಗುತ್ತಿದ್ದರು.ಸಂಜೆ 5ಕ್ಕೆ ಆರಂಭವಾದ ಈ ಸಂಗೀತ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ರಾತ್ರಿ ಹತ್ತಾಗಿತ್ತು. ಸಂಗೀತದ ರಸಸಂಜೆಯಲ್ಲಿ ತೇಲಿದ್ದ ಜನರ ಬಾಯಲ್ಲಿ ಮನೆಗೆ ಮರಳುವಾಗಲೂ ಸಂಗೀತ ಗುನುಗುತ್ತಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.