ಶನಿವಾರ, ಏಪ್ರಿಲ್ 10, 2021
29 °C

ಅನುಷ್ಠಾನವಷ್ಟೇ ಬಾಕಿ: ಸಿಎಂಗೆ ಅಗ್ನಿಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ತವರು ಜಿಲ್ಲೆ ದಕ್ಷಿಣ ಕನ್ನಡವನ್ನು ಮಾದರಿ ಜಿಲ್ಲೆಯಾಗಿ ರೂಪಿಸುವ ನಿಟ್ಟಿನಲ್ಲಿ ಜಿ.ಪಂ. ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಇಲಾಖೆಗಳು 600 ಪುಟಗಳ ಹಾಗೂ 2,500 ಕೋಟಿ ರೂಪಾಯಿ ವೆಚ್ಚದ ದೂರದೃಷ್ಟಿ ಯೋಜನೆ (ವಿಷನ್ ಡಾಕ್ಯುಮೆಂಟ್) ಸಿದ್ಧಪಡಿಸಲಾಗಿದೆ.

 

ಭಾರಿ ಮಳೆಯಿಂದಾಗಿ ವರ್ಷದಿಂದ ವರ್ಷಕ್ಕೆ ಹದಗೆಡುತ್ತಿರುವ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಶಿಕ್ಷಣ ಮತ್ತು ಗ್ರಾಮೀಣ ನೀರು ಪೂರೈಕೆ ಸಹಿತ ಇತರೆ ಹಲವು ಇಲಾಖೆಗಳಿಗೆ ವಿಶೇಷ ಗಮನ ಹರಿಸಲು ಯೋಜನೆ ರೂಪಿಸಲಾಗಿದೆ.ಜಿಲ್ಲೆಯಲ್ಲಿ 7914.89 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳಿದ್ದು, ಅವುಗಳಲ್ಲಿ ಡಾಂಬರು ರಸ್ತೆಯ ಉದ್ದ 2453 ಕಿ.ಮೀ., ಜಲ್ಲಿ ರಸ್ತೆಯ ಉದ್ದ 154 ಕಿ.ಮೀ. ಹಾಗೂ ಮಣ್ಣಿನ ರಸ್ತೆಯ ಉದ್ದ 5306 ಕಿ.ಮೀ. ಉದ್ದವಿದೆ. ವಾರ್ಷಿಕ 4000 ಮಿ.ಮೀ.ಗಿಂತಲೂ ಅಧಿಕ ಮಳೆ ಬೀಳುವ ಜಿಲ್ಲೆಯ ರಸ್ತೆಗಳಿಗೆ ನಿರಂತರ ನಿರ್ವಹಣೆಯ ಅಗತ್ಯ ಇದೆ. 5314 ಕಿ.ಮೀ. ರಸ್ತೆ ಅಭಿವೃದ್ಧಿ ತುರ್ತಾಗಿ ಆಗಬೇಕಿದ್ದು, ಇದಕ್ಕೆ 875.26 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು ಎಂದು ವಿಷನ್ ಡಾಕ್ಯುಮೆಂಟ್‌ನಲ್ಲಿ ತಿಳಿಸಲಾಗಿದೆ.246 ಕಡೆಗಳಲ್ಲಿ ಸೇತುವೆ ನಿರ್ಮಿಸಲು ರೂ. 119 ಕೋಟಿ, 643 ಸ್ಥಳಗಳಲ್ಲಿ ತೋಡು/ಹಳ್ಳಗಳಿಗೆ ಕಾಲುಸಂಕ ನಿರ್ಮಿಸಲು ರೂ. 28.27 ಕೋಟಿ, ಸೇತುವೆ ಮತ್ತು ಕಾಲುಸಂಕ ನಿರ್ಮಿಸಲು ಸಾಧ್ಯವಿದ್ದ ಎರಡು ಕಡೆಗಳಲ್ಲಿ ತೂಗು ಸೇತುವೆ ನಿರ್ಮಿಸಲು ಪ್ರಸ್ತಾಪಿಸಲಾಗಿದೆ.ನೇತ್ರಾವತಿ, ಫಲ್ಗುಣಿ, ಗೌರಿ ಹೊಳೆ, ಪಯಸ್ವಿನಿ, ಕುಮಾರಧಾರ, ಗುಂಡುಹೊಳೆ, ನಂದಿನಿ ನದಿಗಳನ್ನು ಬಳಸಿಕೊಂಡು 46 ಬಹುಗ್ರಾಮ ಬೃಹತ್ ಮೇಲ್ಮೈ ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸಲಾಗಿದೆ. ಇದಕ್ಕಾಗಿ ರೂ. 564.31 ಕೋಟಿ ರೂಪಾಯಿ ಅನುದಾನ ಪ್ರಸ್ತಾಪಿಸಲಾಗಿದೆ. ಇದರಿಂದಾಗಿ 206 ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಶಾಶ್ವತ ಸೌಲಭ್ಯ ಸಿಗುತ್ತದೆ ಎಂದು ಅಂದಾಜಿಸಲಾಗಿದೆ.ಮಂಗಳೂರಿನಲ್ಲಿ ರೂ. 2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಗುರುಭವನ ನಿರ್ಮಾಣ, ಪ್ರೌಢಶಾಲೆಗಳಿಗೆ 5.20 ಕೋಟಿ ವೆಚ್ಚದಲ್ಲಿ 104 ಹೆಚ್ಚುವರಿ ಕೊಠಡಿಗಳ ನಿರ್ಮಾಣ, 160 ಪ್ರೌಢಶಾಲೆಗಳ ಕಟ್ಟಡಗಳ ನಿರ್ವಹಣೆಗೆ ವಾರ್ಷಿಕ 32 ಕೋಟಿ ಅನುದಾನ ನಿಗದಿ, 110 ಪ್ರಾಥಮಿಕ ಶಾಲೆಗಳಲ್ಲಿ ರೂ. 2.05 ಕೋಟಿ ವೆಚ್ಚದಲ್ಲಿ ಆಟದ ಮೈದಾನ ನಿರ್ಮಾಣ, 422 ಪ್ರಾಥಮಿಕ ಶಾಲೆಗಳಲ್ಲಿ ರೂ. 4.22 ಕೋಟಿ ವೆಚ್ಚದಲ್ಲಿ ಆವರಣ ಗೋಡೆ ನಿರ್ಮಾಣ ಸಹಿತ ಹಲವು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ.ಈಗಾಗಲೇ ಮಂಜೂರಾಗಿರುವ 100 ಹಾಸಿಗೆಗಳಿರುವ ಸುಳ್ಯ, ಬೆಳ್ತಂಗಡಿ, ಬಂಟ್ವಾಳ ತಾಲ್ಲೂಕು ಆಸ್ಪತ್ರೆಗಳಿಗೆ ಕಟ್ಟಡಗಳೊಂದಿಗೆ ಸೂಕ್ತ ಸಿಬ್ಬಂದಿ, ಸಾಧನ, ಸಲಕರಣೆ ನೀಡಬೇಕು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ವಾಹನ ಸೌಕರ್ಯ ಒದಗಿಸಬೇಕು ಎಂದು ತಿಳಿಸಲಾಗಿದೆ.ಪರಿಶಿಷ್ಟ ಜಾತಿಯ ಜನಾಂಗದವರ ಅಭಿವೃದ್ಧಿಗಾಗಿ ಪುತ್ತೂರು, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಮೆಟ್ರಿಕ್ ನಂತರದ ಬಾಲಕ/ ಬಾಲಕಿಯರ ವಿದ್ಯಾರ್ಥಿನಿಲಯಕ್ಕಾಗಿ ವಾರ್ಷಿಕ ರೂ. 1 ಕೋಟಿ ಅನುದಾನ, ಪರಿಶಿಷ್ಟ ಜಾತಿ ಕಾಲೊನಿಗಳಿಗೆ ಮೂಲ ಸೌಕರ್ಯಗಳಿಗಾಗಿ ಪ್ರತಿ ಗ್ರಾ.ಪಂ.ಗೆ ರೂ. 25 ಲಕ್ಷ ಅನುದಾನ ಒದಗಿಸಬೇಕು ಎಂದು ಸೂಚಿಸಲಾಗಿದೆ. ಇದೇ ರೀತಿ ಗಿರಿಜನ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಗೂ ಹಲವು ಸೌಲಭ್ಯಗಳನ್ನು ಕಲ್ಪಿಸಲು ಶಿಫಾರಸು ಮಾಡಲಾಗಿದೆ.ಕೃಷಿ ಕ್ಷೇತ್ರ: ಜಿಲ್ಲೆಯು ವಿಶೇಷ ಅಭಿವೃದ್ಧಿ ಯೋಜನೆ ವ್ಯಾಪ್ತಿಗೆ ಬಾರದ ಕಾರಣ ವಿವಿಧ ಯೋಜನೆಯಡಿ ಬಿಡುಗಡೆಯಾಗುವ ಅನುದಾನ ಕಡಿಮೆಯಾಗುತ್ತಿದೆ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಕೃಷಿ ಯಾಂತ್ರೀಕರಣ ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಪವರ್ ಟಿಲ್ಲರ್, ಪವರ್ ರೀಪರ್, ಸಸ್ಯ ಸಂರಕ್ಷಣಾ ಉಪಕರಣ ಮುಂತಾದ ಯಂತ್ರಗಳ ಖರೀದಿಗೆ ವಾರ್ಷಿಕ 3 ಕೋಟಿ ರೂಪಾಯಿ ಅನುದಾನ ನೀಡಬೇಕು. ಗುಣಮಟ್ಟದ ಬಿತ್ತನೆ ಬೀಜ ಪೂರೈಕೆಗೆ 5 ವರ್ಷಕ್ಕೆ ರೂ. 15.11 ಕೋಟಿ ಅನುದಾನ ನೀಡಬೇಕು ಎಂದು ತಿಳಿಸಲಾಗಿದೆ.ಹಲವು ಪಶು ಚಿಕಿತ್ಸಾಲಯಗಳನ್ನು ಪಶು ಆಸ್ಪತ್ರೆಗಳಾಗಿ ಮೇಲ್ದರ್ಜೆಗೆ ಏರಿಸಲು ಹಾಗೂ ಸೂಕ್ತ ಸಿಬ್ಬಂದಿ ನೇಮಿಸಲು, ರೈತರಿಗೆ ಹಸುಗಳ ಖರೀದಿಗೆ ನೀಡುವ ಶೇ. 25ರ ಸಹಾಯಧನಕ್ಕಾಗಿ ರೂ. 4.35 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿರುವ 354 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಶೇ. 60ರಷ್ಟು ಸಂಘಗಳಿಗೆ ಸ್ವಂತ ಕಟ್ಟಡವಿಲ್ಲ. ಪ್ರತಿ ಸಂಘಕ್ಕೆ 1 ಲಕ್ಷದಂತೆ ರೂ. 3.54 ಕೋಟಿ ಅನುದಾನ ನೀಡಬೇಕು ಎಂದು ತಿಳಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.