ಭಾನುವಾರ, ಜೂಲೈ 12, 2020
22 °C

ಅನುಷ್ಠಾನ ತೃಪ್ತಿಕರವಾಗಿಲ್ಲ: ಅನ್ವರ್ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನುಷ್ಠಾನ ತೃಪ್ತಿಕರವಾಗಿಲ್ಲ: ಅನ್ವರ್ ಅಸಮಾಧಾನ

ಮಂಡ್ಯ: ಉರ್ದು ಶಾಲೆಗಳಿಗೆ ಸೌಲಭ್ಯ ಒದಗಿ ಸುವುದು ಸೇರಿದಂತೆ ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರ ಶಾಲೆಗಳಿಗೆ ಸೌಲಭ್ಯ ಒದಗಿಸುವ ಯೋಜನೆಗಳ ಅನುಷ್ಠಾನ ತೃಪ್ತಿಕರವಾಗಿ ಇಲ್ಲ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಗುರುವಾರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ 15 ಅಂಶದ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಿದ ಅವರು, ಕೆಲವು ಯೋಜನೆಗಳ ಪ್ರಗತಿ ಕುರಿತು ಅಧಿಕಾರಿಗಳು ಸಮರ್ಪಕವಾದ ಮಾಹಿತಿ ಯನ್ನು ಒದಗಿಸುತ್ತಿಲ್ಲ ಎಂದು ಕಿಡಿಕಾರಿದರು.ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ಕೊಡಲು ಒಬ್ಬರಿಂದ ಒಬ್ಬರಿಗೆ ಹೊಣೆ ವರ್ಗಾವಣೆ ಮಾಡುತ್ತಿದ್ದಾರೆ. ಕೆಲಸ ಆಗಿದೆ ಎಂದ ಮೇಲೆಪೂರಕ ದಾಖಲೆ ಒದಗಿಸಲು ಏನು ಸಮಸ್ಯೆ? ನಾನು ಸುಮ್ಮನೆ ನಿಮ್ಮಆತಿಥ್ಯ ಸ್ವೀಕರಿಸಿ ಹೋಗಲು ಬಂದಿಲ್ಲ. ಸಮರ್ಪಕ ಮಾಹಿತಿ ಒದಗಿಸಿ ಎಂದು ಡಿಡಿಪಿಐ ಗೋಪಾಲ್ ವಿರುದ್ಧ ಹರಿಹಾಯ್ದರು.ಈ ಹಂತದಲ್ಲಿ ಜಿಪಂ ಸಿಇಒ ಜಯರಾಂ ಅವರು, ಎಲ್ಲ ಯೋಜನೆಗಳ ಅನುಷ್ಠಾನ ಪ್ರಗತಿಯನ್ನು ನೀವೇ ವೀಕ್ಷಣೆ ಮಾಡದೇ ಇರಬಹುದು. ಆದರೆ, ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಮಾಹಿತಿ ಒದಗಿಸಿ ಎಂದು ಡಿಡಿಪಿಐ ಅವರಿಗೆ ಸಲಹೆ ಮಾಡಿದರು.ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದು ಸೇರಿದಂತೆ ಅಲ್ಪಸಂಖ್ಯಾತ ಧಾರ್ಮಿಕ ಮುಖಂಡರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಎಲ್ಲ ತಾಲ್ಲೂಕುಗಳಲ್ಲಿಯೂ ನಡೆದಿದೆ ಎಂದು ದಾಖಲೆ ಒದಗಿಸಿದ್ದರೆ, ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಅಲ್ಪಸಂಖ್ಯಾತ ವರ್ಗದ ಪ್ರತಿನಿಧಿಗಳು ತಮಗೆ ಮಾಹಿತಿಯೇ ಇಲ್ಲ. ಅಂಥ ಯಾವುದೇ ಸಭೆ ನಡೆದಿಲ್ಲ ಎಂದು ಸಭೆಯಲ್ಲಿಯೇ ಹೇಳುವ ಮೂಲಕ ಅಧಿಕಾರಿಗಳನ್ನು ಇರಿಸುಮುರಿಸಿಗೆ ಸಿಕ್ಕಿಸಿದರು.  ನಾಗಮಂಗಲದಲ್ಲಿ ಇಂಥ ಕಾರ್ಯಕ್ರಮ ನಡೆದಿದೆ ಎಂದು ಆ ತಾಲ್ಲೂಕಿನ ಪ್ರತಿನಿಧಿ ಹೇಳಿ ಅಧಿಕಾರಿಗಳ ರಕ್ಷಣೆಗೆ ಬಂದರು.ಬೈಸಿಕಲ್ ವಿತರಣೆ ಹೊರತುಪಡಿಸಿ ಉಳಿದೆಲ್ಲಾ ಯೋಜನೆಗಳು ಸಮಾಧಾನಕರ ರೀತಿಯಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ನೆರವಾಗುವಂತೆ ಜಾರಿಯಾಗಿದೆ ಎಂದು ಡಿಡಿಪಿಐ ತಿಳಿಸಿದರು. ಬಿಸಿಯೂಟ ಯೋಜನೆಯ ಪ್ರಸ್ತಾಪ ಬಂದಾಗ ನಗರಸಭೆ ಸದಸ್ಯೆ ಆಯೇಷಾ ತಬುಸ್ಸುಂ, ಬಿಸಿಯೂಟಕ್ಕೆ ಹಣಕಾಸುನೆರವು ಕಡಿಮೆ ಇರುವ ಕಾರಣ ಗುಣಮಟ್ಟದ ಊಟ ಒದಗಿಸಲು ಆಗುತ್ತಿಲ್ಲ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಅನ್ವರ್, ರಾಜ್ಯ ಸರ್ಕಾರ ಮಾತ್ರವೇ ಬಿಸಿಯೂಟ ಯೋಜನೆಗೆ ಹೆಚ್ಚಿನ ಹಣ ನೀಡಲಾಗುತ್ತಿದೆ. ಬಿರಿಯಾನಿ ಕೊಡಿ ಎಂದು ನಿಮಗೆ ಕೇಳುತ್ತಿಲ್ಲ.ಗುಣಮಟ್ಟದ ಅನ್ನ, ಸಾರು ಒದಗಿಸಿ. ಅದಕ್ಕೆ ಈಗ ಕೊಡುತ್ತಿರುವ ನೆರವು ಸಾಕಾಗುತ್ತದೆ ಎಂದರು. ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್, ತಹಶೀಲ್ದಾರ್‌ಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.