ಬುಧವಾರ, ಏಪ್ರಿಲ್ 14, 2021
24 °C

ಅಪಘಾತ ತಡೆಗೆ ಮಾತಾಡುವ ಕಾರುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅಪಘಾತಗಳನ್ನು ತಗ್ಗಿಸುವುದಕ್ಕೆ ಹಾಗೂ ವಾಹನ ದಟ್ಟಣೆ ಕಡಿಮೆಗೊಳಿಸುವುದಕ್ಕೆ ಪೂರಕವಾಗಿ ಪರಸ್ಪರ ಸಂವಹನ ನಡೆಸಬಲ್ಲ, ವೈ-ಫೈ ತಂತ್ರಜ್ಞಾನ ಆಧರಿಸಿದ `ಬುದ್ಧಿವಂತ (ಸ್ಮಾರ್ಟ್) ಕಾರು~ಗಳನ್ನು ಅಮೆರಿಕ ಅಭಿವೃದ್ಧಿಪಡಿಸಿದೆ.2.5 ಕೋಟಿ ಡಾಲರ್ ವೆಚ್ಚದ ಯೋಜನೆಯಡಿ ಈಗಾಗಲೇ ಇಂತಹ ಕಾರುಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಮಿಷಿಗನ್‌ನ ಆ್ಯನ್ ಆರ್ಬರ್‌ನಲ್ಲಿ ಪ್ರಯೋಗಾರ್ಥ ಪರೀಕ್ಷೆಯೂ ಆರಂಭವಾಗಿದೆ. ರಸ್ತೆಯಲ್ಲಿನ ಸಂಚಾರ ದಟ್ಟಣೆ, ನಿಯಮಗಳನ್ನು ಉಲ್ಲಂಘಿಸಿ ಎರ‌್ರಾಬಿರ‌್ರಿ ಧಾವಿಸುವ ವಾಹನ ಇತ್ಯಾದಿಗಳ ಬಗ್ಗೆ  ಈ ಕಾರುಗಳು ಪರಸ್ಪರ ಸಂಕೇತ ವಿನಿಮಯ ಮಾಡಿಕೊಳ್ಳಲಿವೆ. ಅಷ್ಟೇ ಅಲ್ಲ, ಒಂದೊಮ್ಮೆ ಯಾವುದೇ ವಾಹನಗಳು ಇಲ್ಲದಿದ್ದಾಗ ಕೆಂಪು ಸಿಗ್ನಲ್ ಬಿದ್ದಿದ್ದರೆ ಕಾರೊಳಗೆ ಕುಳಿತೇ ಅದನ್ನು ಆಫ್ ಮಾಡುವ ಜತೆಗೆ ಹಸಿರು ದೀಪ ಹಚ್ಚಿ ಮುಂದಕ್ಕೆ ಸಾಗಬಹುದಾದ ತಾಂತ್ರಿಕ ಸೌಲಭ್ಯವನ್ನೂ ಇದು ಒಳಗೊಂಡಿದೆ. ಅಮೆರಿಕದ ಸಾರಿಗೆ ಇಲಾಖೆಯು ಮಿಷಿಗನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಒಂದು ವರ್ಷದ ಅವಧಿಯಲ್ಲಿ ಈ ತಂತ್ರಜ್ಞಾನವನ್ನು ಸಂಪೂರ್ಣ ಅಭಿವೃದ್ಧಿಪಡಿಸುವ ಗುರಿ ಹಾಕಿಕೊಂಡಿದೆ. ಸದ್ಯ ಇಂತಹ 500 ಕಾರುಗಳನ್ನು ತಯಾರಿಸಲಾಗಿದ್ದು, ಇನ್ನು ಆರು ವಾರಗಳಲ್ಲಿ ಇವುಗಳ ಸಂಖ್ಯೆ 2800ಕ್ಕೆ ಏರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಮೆರಿಕದಲ್ಲಿ ರಸ್ತೆ ಅಪಘಾತದಿಂದ ಸಾವಿಗೀಡಾಗುವವರ ಸಂಖ್ಯೆ ಉಳಿದೆಲ್ಲಾ ದುರ್ಮರಣಗಳಿಗಿಂತ ಹೆಚ್ಚಾಗಿದ್ದು, ಅದಕ್ಕೆ ಕಡಿವಾಣ ಹಾಕುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.ಒಂದೊಮ್ಮೆ ಎಲ್ಲಾ ಕಾರುಗಳಿಗೂ ಈ ತಂತ್ರಜ್ಞಾನ ಅಳವಡಿಸಿದ್ದೇ ಆದರೆ ಅಪಘಾತಗಳ ಹಾಗೂ ಅಪಘಾತಗಳ ತೀವ್ರತೆಯ ಪ್ರಮಾಣವನ್ನು ಶೇ 80ರಷ್ಟು ತಗ್ಗಿಸಬಹುದೆಂಬುದು ತಜ್ಞರ ಅಂದಾಜಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.