ಬುಧವಾರ, ಮೇ 18, 2022
23 °C

ಅಪಘಾತ : ರೂ 2.27 ಕೋಟಿ ಪರಿಹಾರಕ್ಕೆ ಕೋರ್ಟ್ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಬಿಡದಿ ಬಳಿ ಅಪಘಾತವೊಂದರಲ್ಲಿ ಮಡಿದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಕುಟುಂಬಕ್ಕೆ 2.27 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.2007ರ ಸೆಪ್ಟೆಂಬರ್ 4ರಂದು ಬಿಡದಿ ಬಳಿಯ ದಾಸಪ್ಪನದೊಡ್ಡಿ ಹಾಗೂ ಕಲ್ಲುಗೋಪನಹಳ್ಳಿ ನಡುವೆ ಟ್ರಾಕ್ಟರ್ ಮೋಟಾರ್ ಬೈಕ್ ನಡುವೆ ಅಪಘಾತ ಸಂಭವಿಸಿ  ಬೈಕ್ ಸವಾರ  ಸಾಫ್ಟ್‌ವೇರ್ ಎಂಜಿನಿಯರ್ ಬಿ.ಎ. ಮಹೇಶ್ ಮೃತಪಟ್ಟಿದ್ದರು.  ಹಿಂಬದಿಯಲ್ಲಿ ಕುಳಿತಿದ್ದ ಮಹೇಶ್ ಅವರ ಪತ್ನಿ ದಿವ್ಯಾ ಎಚ್. ಮಹದೇವಯ್ಯ ಅವರಿಗೂ ಗಾಯಗಳಾಗಿದ್ದವು. ಎರಡು ದಿನಗಳ ಬಳಿಕ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹೇಶ್ ಕೊನೆಯುಸಿರೆಳೆದರು.ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.1988ರ ಮೋಟಾರು ವಾಹನ ಕಾಯ್ದೆಯ 166ನೇ ವಿಧಿ ಪ್ರಕಾರ ಟ್ರಾಕ್ಟರ್ ಚಾಲಕ ರಾಮನಗರ ತಾಲ್ಲೂಕಿನ ಕೆಂಪಯ್ಯ ಹಾಗೂ ಐಸಿಐಸಿಐ ಲೊಂಬಾರ್ಡ್ ವಿಮಾ ಕಂಪೆನಿ 5 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಮಹೇಶ್ ಕುಟುಂಬದ ಸದಸ್ಯರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಗ್ರೀನ್‌ಟ್ರೀ ಕನ್ಸಲ್ಟಿಂಗ್ ಕಂಪೆನಿಯಲ್ಲಿ ಪ್ರಧಾನ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಹೇಶ್ ವಾರ್ಷಿಕ 45 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದರು. ಅವರು ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದರು ಎಂದು ಪತ್ನಿ ದಿವ್ಯಾ ಮಾತ್ರವಲ್ಲದೆ ಮಹೇಶ್ ಪೋಷಕರಾದ ಎನ್. ಅಚ್ಯುತರಾವ್ ಹಾಗೂ ಆರ್ ಗೀತಾ ಅರ್ಜಿಯಲ್ಲಿ ತಿಳಿಸಿದ್ದರು.

 

4 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಜುಲೈನಲ್ಲಿ ಪ್ರಕರಣ ಇತ್ಯರ್ಥವಾಯಿತು. ಸಣ್ಣ ಪ್ರಕರಣಗಳ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಪ್ರದೀಪ್ ಡಿ ವೇಂಗಾವಕರ್ ಅವರು ರೂ 2,27,20,229 ಪರಿಹಾರ ನೀಡುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ.ಅರ್ಜಿದಾರರ ಪರ ವಕೀಲ ಜಿ.ಟಿ.ಕೆಂಚೇಗೌಡ ಅವರು, `ಕೋರ್ಟ್ 4.54 ಕೋಟಿ ರೂಪಾಯಿಗಳ ಪರಿಹಾರ ಘೋಷಿಸಿದ್ದು ಅಪಘಾತಕ್ಕೆ ಮಹೇಶ್ ಮತ್ತು ಕೆಂಪಯ್ಯ ಇಬ್ಬರೂ ಕಾರಣರಾಗಿರುವುದರಿಂದ  ಕೇವಲ ಅರ್ಧದಷ್ಟು ಮೊತ್ತವನ್ನು ಪಾವತಿಸುವಂತೆ ಆದೇಶಿಸಿದೆ. ಆದರೆ ಅಪಘಾತದಲ್ಲಿ ಮಹೇಶ್ ಅವರ ತಪ್ಪೇನೂ ಇಲ್ಲವಾದ್ದರಿಂದ ಪೂರ್ಣ ಪ್ರಮಾಣದ ಪರಿಹಾರ ನೀಡುವಂತೆ ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು~ ಎಂದು ತಿಳಿಸಿದ್ದಾರೆ.`ರಸ್ತೆ ಅಪಘಾತದಲ್ಲಿ ಮಡಿದವರ ಕುಟುಂಬವೊಂದಕ್ಕೆ ದೇಶದಲ್ಲಿಯೇ ಅತಿಹೆಚ್ಚು ಪರಿಹಾರ ದೊರೆತಂತಾಗಿದೆ~ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.