ಗುರುವಾರ , ಮೇ 13, 2021
39 °C

ಅಪಹರಣಗೊಂಡಿದ್ದ ಬಾಲಕಿಯ ರಕ್ಷಣೆ; ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಹಾರದಿಂದ ಅಪಹರಣಗೊಂಡಿದ್ದ 17 ವರ್ಷದ ಬಾಲಕಿಯನ್ನು ರಕ್ಷಿಸಿರುವ ಕಾಟನ್‌ಪೇಟೆ ಪೊಲೀಸರು ಚಂದನ್ ಕುಮಾರ್ ಸಿಂಗ್ (21) ಎಂಬಾತನನ್ನು ಸೋಮವಾರ ಬಂಧಿಸಿದ್ದಾರೆ.ಬಿಹಾರದ ಕೆಮ್ಮೊರ್ ಜಿಲ್ಲೆಯ ಕುದ್ರಾ ಗ್ರಾಮದಿಂದ ಇತ್ತೀಚೆಗೆ ಕಾಣೆಯಾಗಿದ್ದ ಬಾಲಕಿಯ ಮೊಬೈಲ್, ನಗರದ ಕಾಟನ್‌ಪೇಟೆ ವ್ಯಾಪ್ತಿಯಲ್ಲಿರುವ ಬಗ್ಗೆ ಸುಳಿವು ಪಡೆದ ಕೆಮ್ಮೊರ್ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾಟನ್‌ಪೇಟೆ ಪೊಲೀಸರಿಗೆ ಶನಿವಾರ (ಜೂ.8) ಈ ಮಾಹಿತಿ ನೀಡಿದ್ದರು.ಬಾಲಕಿಯ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು. ಕಾಟನ್‌ಪೇಟೆಯ ಹೋಟೆಲ್ ಒಂದರಲ್ಲಿದ್ದ ಬಾಲಕಿಯನ್ನು ರಕ್ಷಿಸಿ, ಆಕೆಯನ್ನು ಕರೆತಂದಿದ್ದ ಆರೋಪಿ ಚಂದನ್ ಕುಮಾರ್ ಸಿಂಗ್‌ನನ್ನು ಬಂಧಿಸಲಾಯಿತು. ಅವರಿಬ್ಬರನ್ನೂ ಮಂಗಳವಾರ ಬಿಹಾರ ಪೊಲೀಸರಿಗೆ ಒಪ್ಪಿಸಲಾಯಿತು ಎಂದು ಕಾಟನ್‌ಪೇಟೆ ಪೊಲೀಸರು ತಿಳಿಸಿದ್ದಾರೆ.ಮಹಿಳೆ ಆತ್ಮಹತ್ಯೆ: ಪರಪ್ಪನ ಅಗ್ರಹಾರ ಸಮೀಪದ ಶಿವರೆಡ್ಡಿ ಲೇಔಟ್‌ನಲ್ಲಿ ಸೋಮವಾರ ಸಂಜೆ ಮಂಜುಳಾ (27) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ವೇಣುಗೋಪಾಲ್ ಎಂಬುವರನ್ನು ವಿವಾಹವಾಗಿದ್ದ ಮಂಜುಳಾ ಅವರಿಗೆ ಹತ್ತು ತಿಂಗಳ ಗಂಡು ಮಗುವಿದೆ. ಪತಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಅವರು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ.`ಅಳಿಯ ವೇಣುಗೋಪಾಲ್, ಎರಡನೇ ಮದುವೆಯಾಗಲು ಪ್ರಯತ್ನ ನಡೆಸಿದ್ದ, ಕಿರುಕುಳ ನೀಡುತ್ತಿದ್ದ. ಇದರಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ಮಂಜುಳಾ ಅವರ ತಾಯಿ ವೆಂಕಟಲಕ್ಷ್ಮಿ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸರು ವೇಣುಗೋಪಾಲ್ ವಿರುದ್ಧ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕೊಲೆ ಆರೋಪಿಗಳ ಬಂಧನ: ವಿಜಯನಗರ ಬಳಿಯ ಹೊಸಹಳ್ಳಿಯಲ್ಲಿ ನಡೆದಿದ್ದ ರಘು (30) ಎಂಬಾತನ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ತಲಘಟ್ಟಪುರದ ಅಜ್ಮತ್ (24) ಮತ್ತು ಹೊಸಹಳ್ಳಿಯ ಸುಬಾನ್ (20) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ರಘು, ಜೈಲಿನಲ್ಲಿ ರವಿ ಎಂಬ ಆರೋಪಿಗೆ ಹಫ್ತಾ ಕೊಡುವಂತೆ ಬೆದರಿಸುತ್ತಿದ್ದ. ಅಲ್ಲದೇ ರವಿ ಜೈಲಿನಿಂದ ಬಿಡುಗಡೆಯಾದ ನಂತರವೂ ಆತನಿಗೆ ಬೆದರಿಕೆ ಹಾಕುವುದನ್ನು ಮುಂದುವರಿಸಿದ್ದ. ಈ ಕಾರಣಕ್ಕಾಗಿ ರವಿ ಸಹಚರರ ಜತೆ ಸೇರಿಕೊಂಡು ಆತನ ಕೊಲೆಗೆ ಸಂಚು ರೂಪಿಸಿದ್ದ. ಪೂರ್ವಯೋಜಿತ ಸಂಚಿನಂತೆ ರವಿ ಮತ್ತು ಸಹಚರರು ಹೊಸಹಳ್ಳಿಯಲ್ಲಿ ಜೂ. 5ರಂದು ರಘು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಇತರೆ ಆರೋಪಿಗಳಾದ ರವಿ, ತಬ್ರೀಜ್, ವಿಶ್ವ, ಗಿರೀಶ್ ಮತ್ತು ವಿನೋದ್ ಎಂಬುವರು ತಲೆಮರೆಸಿಕೊಂಡಿದ್ದಾರೆ.ಬಂಧನ: ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ಸೌಂದರ್ಯ ವರ್ಧಕಗಳನ್ನು ಮಾರುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿದ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಕಬ್ಬನ್‌ಪೇಟೆಯ ಗುಮಾನ್‌ರಾಜ್ (23) ಎಂಬಾತನನ್ನು ಬಂಧಿಸಿ  ರೂ. 10 ಲಕ್ಷ ಮೌಲ್ಯದ ಸೌಂದಯ ವರ್ಧಕಗಳನ್ನು ವಶಪಡಿಸಿಕೊಂಡಿದ್ದಾರೆ. ಗುಮಾನ್‌ರಾಜ್, ಗಾಂಧಿನಗರ ಮೂರನೇ ಮುಖ್ಯರಸ್ತೆಯ ಎಸ್.ಎನ್.ಬಜಾರ್‌ನಲ್ಲಿ ಅಂಗಡಿ ಇಟ್ಟುಕೊಂಡು ನಕಲಿ ಸೌಂದರ್ಯ ವರ್ಧಕಗಳನ್ನು ಮಾರುತ್ತಿದ್ದ. ಅಲ್ಲದೇ ಕಬ್ಬನ್‌ಪೇಟೆಯ 18ನೇ ಅಡ್ಡರಸ್ತೆಯಲ್ಲಿನ ಗೋದಾಮಿನಲ್ಲಿ ಸೌಂದರ್ಯ ವರ್ಧಕಗಳನ್ನು ದಾಸ್ತಾನು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಕಳವು: ವೈಯಾಲಿಕಾವಲ್ ಸಮೀಪದ ಮುನೇಶ್ವರ ಬ್ಲಾಕ್ ನಿವಾಸಿ ರಾಜೇಂದ್ರ ಎಂಬುವರು ಕುಟುಂಬದ ಸದಸ್ಯೆ ಜತೆ ಹೊರಗೆ ಹೋಗಿದ್ದಾಗ ಕಳ್ಳರು ಬಾಗಿಲ ಬೀಗ ಮುರಿದು  ಮನೆಯಲ್ಲಿ ದುಷ್ಕರ್ಮಿಗಳು 400 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ವೈಯಾಲಿಕಾವಲ್ ಪೊಲೀಸರು ತಿಳಿಸಿದ್ದಾರೆ. ದೂರು ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.