ಸೋಮವಾರ, ಮಾರ್ಚ್ 8, 2021
25 °C
ಜಿಟಿ ಜಿಟಿ ಮಳೆ 21 ಮನೆ ಭಾಗಶಃ ಕುಸಿತ

ಅಪಾಯ ಮಟ್ಟ ಮೀರಿದ ನದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪಾಯ ಮಟ್ಟ ಮೀರಿದ ನದಿಗಳು

ಹಾವೇರಿ: ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ 94.2 ಮಿ.ಮೀ. ಅಂದರೆ, ಸರಾಸರಿ 13.5 ಮಿ.ಮೀ. ಮಳೆಯಾಗಿದೆ. ಮಳೆಯಿಂದ 21ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದು, ಒಂದು ಎತ್ತು ಮೃತಪಟ್ಟಿದೆ.



ಹಾವೇರಿ ತಾಲ್ಲೂಕಿನಲ್ಲಿ 11, ರಾಣೆಬೆನ್ನೂರ ತಾಲ್ಲೂಕಿನಲ್ಲಿ 9 ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲಿ ಒಂದು ಸೇರಿ ಒಟ್ಟು 21 ಮನೆಗಳು ಭಾಗಶಃ ಬಿದ್ದಿದ್ದು, ಹಾವೇರಿ ತಾಲ್ಲೂಕಿನ ಕೆರಿಮತ್ತಿಹಳ್ಳಿಯಲ್ಲಿ ದನದ ಮನೆಯೊಂದು ಕುಸಿದು ಒಂದು ಎತ್ತು ಸ್ಥಳದಲ್ಲಿ ಮೃತಪಟ್ಟಿದ್ದು, ಇನ್ನೊಂದು ಎತ್ತು ತೀವ್ರವಾಗಿ ಗಾಯಗೊಂಡಿದೆ.



ಜೂನ್ 1ರಿಂದ 24 ರವರೆಗೆ  ಜಿಲ್ಲೆಯಲ್ಲಿ ಒಟ್ಟು 1,067ಮಿ.ಮೀ. ನಷ್ಟು ಮಳೆಯಾಗಿದೆ. ಜಿಲ್ಲೆಯ ಹಾವೇರಿ ತಾಲ್ಲೂಕಿನಲ್ಲಿ 112.7ಮಿಮೀ, ರಾಣೆಬೆನ್ನೂರ ತಾಲ್ಲೂಕಿನಲ್ಲಿ 89.4, ಬ್ಯಾಡಗಿ 121.4, ಹಿರೇಕೆರೂರ  ತಾಲ್ಲೂಕಿನಲ್ಲಿ 231.1, ಸವಣೂರ  ತಾಲ್ಲೂಕಿನಲ್ಲಿ 97.5, ಶಿಗ್ಗಾವಿ  ತಾಲ್ಲೂಕಿನಲ್ಲಿ 141.2, ಹಾನಗಲ್ ತಾಲ್ಲೂಕಿನಲ್ಲಿ 274.3ಮಿಮೀ ಮಳೆಯಾಗಿದೆ.



ಕಳೆದ 24 ಗಂಟೆಗಳಲ್ಲಿ ಹಾವೇರಿ ತಾಲ್ಲೂಕಿನಲ್ಲಿ 14.5ಮಿ.ಮೀ, ರಾಣೆಬೆನ್ನೂರ ತಾಲ್ಲೂಕಿನಲ್ಲಿ 9.7, ಬ್ಯಾಡಗಿ ತಾಲ್ಲೂಕಿನಲ್ಲಿ 6.4, ಹಿರೇಕೆರೂರ ತಾಲ್ಲೂಕಿನಲ್ಲಿ 15.2, ಸವಣೂರು ತಾಲ್ಲೂಕಿನಲ್ಲಿ 7.6, ಶಿಗ್ಗಾವಿ ತಾಲ್ಲೂಕಿನಲ್ಲಿ 9.0 ಹಾಗೂ ಹಾನಗಲ್ ತಾಲ್ಲೂಕಿನಲ್ಲಿ 31.8 ಮಿ.ಮೀ. ಮಳೆ ಬಿದ್ದ ವರದಿಯಾಗಿದೆ.



ನದಿಗಳ ಅಪಾಯ ಮಟ್ಟ

ಜಿಲ್ಲೆಯಲ್ಲಿ ಹರಿಯುತ್ತಿರುವ ತುಂಗಭದ್ರಾ, ಕುಮುದ್ವತಿ ಹಾಗೂ ವರದಾ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆ ಬೀಳುತ್ತಿರುವುದರಿಂದ ನದಿಗಳ ಒಳ ಹರಿವು ಹೆಚ್ಚಾಗಿದ್ದು, ನದಿ ಒಡಲು ತುಂಬಿ ನೀರು ನೂರಾರು ಎಕರೆ ಜಮೀನುಗಳಿಗೆ ನುಗ್ಗಿದೆ.



ತುಂಗಭದ್ರಾ ನದಿ ದಡದಲ್ಲಿರುವ ರಾಣೆಬೆನ್ನೂರ ತಾಲ್ಲೂಕಿನ ಚೌಡದಾನಪುರ, ಐರಣಿ ಸೇರಿದಂತೆ ಹಲವು ಗ್ರಾಮಗಳು ಹಾಗೂ ಹಾವೇರಿ ತಾಲ್ಲೂಕಿನ ಹಾವನೂರು, ಗಳಗನಾಥ, ವರದಾ ನದಿ ದಡದಲ್ಲಿರುವ ಹಾಲಗಿ, ಮರೋಳ, ಗುಡೂರು, ಹೊಸರಿತ್ತಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ಜಮೀನುಗಳಲ್ಲಿ ನೀರು ನಿಂತು ಬೆಳೆಗೆ ಹಾನಿ ಮಾಡಿದೆ.



ವರದಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಂದ ಪರಿಣಾಮ ಹಿನ್ನೀರಿನಲ್ಲಿ ಹಾವೇರಿ ತಾಲ್ಲೂಕಿನ ಗುಡೂರು ಹಾಗೂ ಮರೋಳ ಗ್ರಾಮಗಳ ಸಂಪರ್ಕ ರಸ್ತೆ ಸಂಪೂರ್ಣ ಕಡಿದು ಹೋಗಿದೆ. ಈ ಗ್ರಾಮದ ಜನರು, ವಿದ್ಯಾರ್ಥಿಗಳು ಎರಡು ಕಿ.ಮೀ. ದೂರವನ್ನು ಈಗ 8 ಕಿ.ಮೀ. ಸುತ್ತು ಹಾಕಿ ತಲುಪಬೇಕಾದ ಅನಿವಾರ್ಯತೆ ಎದುರಾಗಿದೆ.



14.60 ಲಕ್ಷ ರೂ.ಹಾನಿ: ಜಿಲ್ಲೆಯಲ್ಲಿ ಮಳೆಯಿಂದ ಒಟ್ಟು 14.6 ಲಕ್ಷ ರೂಪಾಯಿ ಹಾನಿಯಾಗಿದೆ. ನದಿಗಳ ನೀರು ಜಮೀನುಗಳಿಗೆ ನುಗ್ಗಿ 6.95ಲಕ್ಷ ರೂ.ಗಳಷ್ಟು ಬೆಳೆಹಾನಿ, ಮನೆಗಳು ಕುಸಿತದಿಂದ 7.65 ಲಕ್ಷ ರೂಪಾಯಿಗಳ ಹಾನಿ ಸಂಭವಿಸಿದೆ ಎಂದು ಪ್ರಬಾರ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ.



ಗುತ್ತಲ ವರದಿ

ಒಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾದ ಪರಿಣಾಮ ಹಾಗೂ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಬಿಟ್ಟು ಬಿಡದೇ  ಸುರಿಯುತ್ತಿರುವ ಜಿಟಿ ಜಿಟಿಮಳೆಯಿಂದ ತುಂಗಭದ್ರಾ ಮತ್ತು ವರದಾ ನದಿಗಳ ನೀರಿನ ಮಟ್ಟ ಹೆಚ್ಚಾಗತೊಡಗಿದೆ.



ಹೊಸರಿತ್ತಿಯಲ್ಲಿ ಹರಿದಿರುವ ವರದಾ ನದಿ ಮತ್ತು ಸಮೀಪದ ಕಂಚಾರಗಟ್ಟಿ ಸೇತುವೆಯ ಬಳಿ ಹರಿದಿರುವ ತುಂಗಭದ್ರೆಗೆ ಹೆಚ್ಚಿನ ನೀರು ಬಂದಿದೆ. ಆದರೆ ಇನ್ನೂ ಅಪಾಯದ ಮಟ್ಟ ತಲುಪಿಲ್ಲ.



ಕಳೆದ ಮೂರುನಾಲ್ಕು ದಿನಗಳಿಂದ ಈ ಭಾಗದಲ್ಲಿ ಮೋಡ ಕವಿದು ಜಿಟಿಜಿಟಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗೆ ಸ್ವಲ್ಪ ತೊಂದರೆ ಆಗಿದೆ. ರೈತ ಬೆಳೆದ ಬೆಳೆಯನ್ನು ಸಾಲು ಮಾಡುವುದಾಗಲಿ, ಕಳೆ ತೆಗೆಯುವುದಾಗಲಿ ಆಗುತ್ತಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.