ಬುಧವಾರ, ಮೇ 12, 2021
18 °C

ಅಪಾರ್ಟ್‌ಮೆಂಟ್: ನಿಯಮ ಗಾಳಿಗೆ

ಶಿವರಾಂ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಮಾಹಿತಿ ತಂತ್ರಜ್ಞಾನ ನಗರ, ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂದೆಲ್ಲಾ ಖ್ಯಾತಿ ಪಡೆದಿರುವ ಬೆಂಗಳೂರು ಏಷ್ಯಾ ಖಂಡದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಮುಂಚೂಣಿ ನಗರಗಳಲ್ಲೊಂದು. ನಗರ ಬೆಳವಣಿಗೆ ಹೊಂದಿದಂತೆಲ್ಲಾ ಶಿಕ್ಷಣ ಹಾಗೂ ಉದ್ಯೋಗವನ್ನರಸಿ ಬೆಂಗಳೂರಿಗೆ ಬರುವವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ.ಮಿತಿ ಮೀರಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮೂಲ ಸೌಲಭ್ಯ ಕಲ್ಪಿಸುವುದು ಸರ್ಕಾರಕ್ಕೂ ಸವಾಲಾಗಿ ಪರಿಣಮಿಸಿದೆ. ನಗರದ ಸುತ್ತಮುತ್ತಲಿನ ಏಳು ನಗರಸಭೆ ಹಾಗೂ ಒಂದು ಪುರಸಭೆಯು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ ನಂತರವಂತೂ ನಗರದ ವ್ಯಾಪ್ತಿಯೂ ಸಾಕಷ್ಟು ವಿಸ್ತರಿಸಿದೆ. ನಗರ ಬೆಳೆದಂತೆ ಜನವಸತಿ ಬಡಾವಣೆಗಳಲ್ಲಿಯೂ ಯದ್ವಾತದ್ವ ಅಪಾರ್ಟ್‌ಮೆಂಟ್‌ಗಳು ತಲೆಯೆತ್ತ ತೊಡಗಿವೆ.ಆದರೆ, ಇವುಗಳಲ್ಲಿ ಬಹಳಷ್ಟು ನಿಯಮಗಳನ್ನು ಗಾಳಿಗೆ ತೂರುತ್ತಿವೆ ಎಂಬುದು ಸಾರ್ವತ್ರಿಕ ಆರೋಪ. ನಿಯಮಗಳ ಉಲ್ಲಂಘನೆಗಳ ಸಂಖ್ಯೆಯಂತೂ ಲೆಕ್ಕಕ್ಕೇ ಇಲ್ಲ. ಆದರೆ, ಇವೆಲ್ಲವನ್ನೂ ನಿಯಂತ್ರಿಸಬೇಕಾದ ಬಿಬಿಎಂಪಿ ಮಾತ್ರ ಕಣ್ಮುಚ್ಚಿ ಕುಳಿತಿದೆ.ಬೆಂಗಳೂರಿನಲ್ಲಿ ವರ್ಷದಲ್ಲಿ ಎಷ್ಟು ಹೊಸ ಸಮುಚ್ಚಯಗಳು ತಲೆಯೆತ್ತುತ್ತಿವೆ? ಅವುಗಳಲ್ಲಿ ಎಷ್ಟು ನಿಯಮ ಉಲ್ಲಂಘಿಸಿ ನಿರ್ಮಾಣವಾಗುತ್ತಿವೆ? ಈ ಬಗ್ಗೆ ಬಿಬಿಎಂಪಿ ನಗರ ಯೋಜನೆ ವಿಭಾಗದಲ್ಲಿ ನಿರ್ದಿಷ್ಟ ಮಾಹಿತಿಯೇ ಇಲ್ಲ!  ಇಂತಹ ಸಮುಚ್ಚಯಗಳ ನಿರ್ಮಾಣಕ್ಕೆ ಆರಂಭಿಕ ಹಾಗೂ ಸ್ವಾಧೀನ ಪ್ರಮಾಣ ಪತ್ರ ನೀಡಿದ ನಂತರ ಪಾಲಿಕೆ ಎಂಜಿನಿಯರ್‌ಗಳು ಆ ಕಡೆ ಮುಖ ಮಾಡುವುದೇ ಇಲ್ಲ. ಹೀಗಾಗಿ, ಮೊದಲು ಪಾಲಿಕೆ ಎಂಜಿನಿಯರ್‌ಗಳ ಪಾರದರ್ಶಕ ಸೇವೆಯ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತವೆ.ತಿರುಗಿ ನೋಡದ ಎಂಜಿನಿಯರ್‌ಗಳು: ಈ ರೀತಿ ಮೂರ‌್ನಾಲ್ಕು ಅಂತಸ್ತಿನ ವಸತಿ ಸಮುಚ್ಚಯಗಳು ನಿಯಮಗಳನ್ನು ಉಲ್ಲಂಘಿಸಲು ಒಂದು ರೀತಿ ಎಂಜಿನಿಯರ್‌ಗಳೇ ಮುಖ್ಯ ಕಾರಣರಾಗುತ್ತಿದ್ದಾರೆ. ಕಟ್ಟಡ ನಿರ್ಮಾಣ ಶುರುವಾದ ನಂತರ ಕನಿಷ್ಠ 15 ದಿನಗಳಿಗೆ ಒಮ್ಮೆಯಾದರೂ ಎಂಜಿನಿಯರ್‌ಗಳು ಕೆಲಸ ಪರಿಶೀಲಿಸಬೇಕು. ಆದರೆ, ಎಷ್ಟು ಮಂದಿ ಎಂಜಿನಿಯರ್‌ಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗದು.ಪಾಲಿಕೆಯಲ್ಲಿ ಕಿರಿಯ ಎಂಜಿನಿಯರ್‌ಗಳು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ನಡುವಿನ ಸಮನ್ವಯದ ಕೊರತೆಯೂ ಎದ್ದು ಕಾಣುತ್ತಿದೆ. ಬಿಬಿಎಂಪಿ ಸದಸ್ಯರೇ ಆರೋಪಿಸುವಂತೆ, ಯಾವ ಎಂಜಿನಿಯರ್‌ಗಳು ಇಂತಹ ನಿಯಮ ಉಲ್ಲಂಘಿಸುತ್ತಿರುವ ಕಟ್ಟಡಗಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಗೋಜಿಗೆ ಹೋಗುತ್ತಿಲ್ಲ! ಹೀಗಾಗಿ, ಪಾಲಿಕೆಯಲ್ಲಿ ಭ್ರಷ್ಟಾಚಾರದ ವಾಸನೆ ಕೂಡ ಕಂಡು ಬರುತ್ತಿದೆ.ನಿಯಮ ಗಾಳಿಗೆ ತೂರುವ ಬಿಲ್ಡರ್‌ಗಳು: ಇನ್ನು ನಿಯಮ ಉಲ್ಲಂಘಿಸುವ ಕಟ್ಟಡ ಮಾಲೀಕರಿಂದ ಹಣ ಜೇಬಿಗಿಸಿಳಿಸಿಕೊಳ್ಳುವ ಎಂಜಿನಿಯರ್‌ಗಳು ಆರಾಮವಾಗಿದ್ದರೆ, ಅತ್ತ ಬಿಲ್ಡರ್‌ಗಳು ರಾಜಾರೋಷವಾಗಿ ನಿಯಮ ಉಲ್ಲಂಘಿಸುತ್ತಾ ಕಟ್ಟಡ ಮೇಲೇರಿಸುತ್ತಾರೆ. ಸಾಮಾನ್ಯವಾಗಿ ಮೂರು ಮತ್ತು ಅದಕ್ಕಿಂತ ಹೆಚ್ಚು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸುವ ಕಡೆಗಳಲ್ಲಿ ಹೊರಗೆ ಯಾರಿಗೂ ಕಾಣದಂತೆ ಪ್ಲಾಸ್ಟಿಕ್ ಅಥವಾ ಅಲ್ಯೂಮಿನಿಯಂ ಶೀಟ್‌ಗಳನ್ನು ಅಡ್ಡ ಹಾಕಿ ನಿರ್ಮಾಣ ಕೆಲಸ ಕೈಗೊಳ್ಳಲಾಗುತ್ತದೆ.ಇದರಿಂದ ಕಟ್ಟಡ ನಿರ್ಮಾಣ ಕೆಲಸ ಮುಗಿಯುವವರೆಗೆ ಒಳಗೇನು ನಡೆಯುತ್ತಿದೆ ಎಂಬುದೇ ಗೊತ್ತಾಗುವುದಿಲ್ಲ. ಎಲ್ಲವೂ ಮುಗಿದ ಮೇಲೆ ಪಾಲಿಕೆ ಸಭೆಗಳಲ್ಲಿ ಕಟ್ಟಡ ನಿಯಮ ಉಲ್ಲಂಘನೆ ಕುರಿತು ಚರ್ಚೆಯಾಗುತ್ತದೆ. ಆದರೆ, ಹೀಗೆ ಸಭೆಗಳಲ್ಲಿ ಬರೀ ಚರ್ಚೆ ನಡೆದರೂ ಬಹುತೇಕ ಪ್ರಕರಣಗಳಲ್ಲಿ ನಿಯಮ ಉಲ್ಲಂಘಿಸಿದ ಕಟ್ಟಡಗಳ ವಿರುದ್ಧ ಕ್ರಮ ಕೈಗೊಂಡಂತಹ ಉದಾಹರಣೆಗಳು ಬಹಳಷ್ಟು ಕಡಿಮೆ.ಹೊಸ ದೆಹಲಿ ನಗರ ಯೋಜನೆ ನಿರ್ವಹಣೆಯಲ್ಲಿ ಬೇರೆ ಮಹಾನಗರ ಪಾಲಿಕೆಗಳಿಗೆ ಮಾದರಿ ಎನ್ನಲಾಗುತ್ತಿದೆ. ಅಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಟ್ಟಡ ನಿಯಮ ಉಲ್ಲಂಘಿಸುವ ಬಿಲ್ಡರ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆಯಂತೆ. ಆದರೆ, ಬೆಂಗಳೂರು ಮಹಾನಗರ ಪಾಲಿಕೆ ಮಾತ್ರ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಸುಮ್ಮನೆ ಕೂತಿದೆ.ಇನ್ನು ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಪ್ರಕ್ರಿಯೆ 2007ರಿಂದ ನೆನೆಗುದಿಗೆ ಬಿದ್ದಿದೆ. ಒಂದು ವೇಳೆ ಸರ್ಕಾರ ಅಕ್ರಮ- ಸಕ್ರಮಗೊಳಿಸುವ ಪ್ರಕ್ರಿಯೆ ನಡೆಸಿದರೂ ಅದರಿಂದ ಏನೂ ನಿರೀಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ, ನಿಯಮ ಉಲ್ಲಂಘಿಸಿದ ಸಾವಿರಾರು ಕಟ್ಟಡಗಳು ತಲೆಯೆತ್ತಿವೆ. ಅಂತಹ ಅಕ್ರಮ ಕಟ್ಟಡಗಳನ್ನು ಒಡೆಯಲು ಸರ್ಕಾರಕ್ಕೆ ಸಾಧ್ಯವೇ? ಎಂಬ ಪ್ರಶ್ನೆ ಎದುರಾಗಿದೆ.ಒಂದು ವೇಳೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡರೆ ನಗರದ ಹೃದಯ ಭಾಗದಲ್ಲಿಯೇ ನೂರಾರು ಕಟ್ಟಡಗಳನ್ನು ಒಡೆಯಬೇಕಾಗುತ್ತದೆ. ಅಂತಹ ಧೈರ್ಯ ಪ್ರದರ್ಶಿಸಲು ಸರ್ಕಾರಕ್ಕೂ ಸಾಮರ್ಥ್ಯ ಇಲ್ಲ. ಏಕೆಂದರೆ, ಇಂತಹ ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವವರು ಬಹಳಷ್ಟು ಜನ ನಮ್ಮ ಜನಪ್ರತಿನಿಧಿಗಳಿಗೆ ಬೇಕಾದವರು, ಇಲ್ಲವೇ ಅವರ ಶಿಷ್ಯರು ಎಂಬುದು ವಾಸ್ತವ ಸಂಗತಿ.ಹೀಗಾಗಿ, ಆ ದೇವರೇ ಬೆಂಗಳೂರನ್ನು ಕಾಪಾಡಬೇಕು ಎನ್ನುತ್ತಾರೆ ಬಿಬಿಎಂಪಿ ಸದಸ್ಯರೊಬ್ಬರು. ಒಂದು ರೀತಿ ಸರ್ಕಾರ, ಬಿಬಿಎಂಪಿ ನಿಯಮ ಉಲ್ಲಂಘಿಸಿ ನಿರ್ಮಿಸುವ ಕಟ್ಟಡಗಳ ಕುರಿತು ಯಾವುದೇ ತೀರ್ಮಾನ ಕೈಗೊಳ್ಳದಿರುವುದರಿಂದ ಅಕ್ರಮ ಕಟ್ಟಡಗಳ ಸಂಖ್ಯೆ ಹೆಚ್ಚಿ ನಗರದ ಸೌಂದರ‌್ಯವೂ ಹಾಳಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.