ಶುಕ್ರವಾರ, ಫೆಬ್ರವರಿ 26, 2021
18 °C

ಅಪ್ಪನ ‘ಪ್ರೇಮದ ಕಾಣಿಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪ್ಪನ ‘ಪ್ರೇಮದ ಕಾಣಿಕೆ’

ಚಿತ್ರರಂಗಕ್ಕೆ ತಮ್ಮ ಸುಪುತ್ರರನ್ನು ಪರಿಚಯಿಸುವ ಸರದಿಯಲ್ಲಿ ಈಗ ನಿರ್ಮಾಪಕ ಶಾಂತರಾಜ್‌ ಕುಟುಂಬ ಕಾಣಿಸಿಕೊಂಡಿದೆ. ‘ಮೊದ ಮೊದಲಾ ಮಾತು ಚೆಂದ’ ಎನ್ನುವ ಈ ಸೊಗಸಾದ ಪದಗಳನ್ನು ಶೀರ್ಷಿಕೆ ಆಗಿರಿಸಿಕೊಂಡು, ಶಾಂತರಾಜ್ ಅವರು ತಮ್ಮ ಪುತ್ರ ಕುಶಾಲ್‌ ರಾಜ್‌ಗೆ ಪ್ರೇಮಕಥೆಯನ್ನು ಹೆಣೆಸಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿರುವ ‘ಮೊದ ಮೊದಲಾ ಮಾತು ಚೆಂದ’ ಚಿತ್ರತಂಡ ಅಪಾರ ಉತ್ಸಾಹದಲ್ಲಿ ಮೊದಲ ಬಾರಿ ಮಾಧ್ಯಮಗಳಿಗೆ ಮುಖಾಮುಖಿ­ಯಾಯಿತು. ಸೊಗಸಾದ ಚಿತ್ರ ಶೀರ್ಷಿಕೆಗೆ ತಕ್ಕಂತೆಯೇ ನವಿರಾದ ಕಥೆಯನ್ನು ಹೆಣೆದಿರುವ ಸಂತಸ ಅವರಲ್ಲಿತ್ತು. ‘ಸ್ಕೀಯಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮನಾಲಿಗೆ ಬಂದಿರುವ ನಾಯಕ ಮತ್ತು ಅಲ್ಲಿ ಪರಿಚಿತಳಾಗುವ ಹುಡುಗಿಯ ನಡುವೆ ನಡೆಯುವ ನವಿರಾದ ಪ್ರೇಮಕಥನ ಚಿತ್ರದ್ದು. ಒಟ್ಟು 60 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಅದರಲ್ಲಿ 22 ದಿನಗಳನ್ನು ಮನಾಲಿಯ ಸೌಂದರ್ಯವನ್ನು ಸೆರೆಹಿಡಿಯಲೆಂದೇ ಬಳಸಿಕೊಳ್ಳಲಾಗಿದೆ. ನಟ ಸಾಯಿಕುಮಾರ್ ಇಲ್ಲಿ ಕುರುಡನ ಪಾತ್ರ ನಿರ್ವಹಿಸಿದ್ದಾರೆ’ ಎಂದರು ನಿರ್ದೇಶಕ ಶಿವಲಿಂಗು. ಡಿ. ರಾಜೇಂದ್ರ ಬಾಬು, ರವಿಚಂದ್ರನ್ ಮತ್ತಿತರರ ಜತೆ ಸಹ ಮತ್ತು ಸಹಾಯಕ ನಿರ್ದೇಶಕನಾಗಿ ಅನುಭವ ಪಡೆದುಕೊಂಡಿರುವ ಶಿವಲಿಂಗು ಸ್ವತಂತ್ರವಾಗಿ ನಿರ್ದೇಶಿಸುತ್ತಿರುವ ಮೊದಲ ಚಿತ್ರ ಇದು.ನಿರ್ದೇಶಕರಿಗಿಂತ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡಿದ್ದು ಸಾಹಿತ್ಯ ಬರೆದಿರುವ ನಿರ್ದೇಶಕ ರಾಮ್‌ ನಾರಾಯಣ್‌. ಈ ಚಿತ್ರ ನಿರ್ಮಾಣದಲ್ಲಿ ಅವರು ಹಿನ್ನೆಲೆಯಲ್ಲಿ ನಿಂತು ನಿರ್ದೇಶಕರಿಗೆ ಮಾರ್ಗದರ್ಶನ ಮಾಡಿದ್ದಾರಂತೆ. ‘ಒಳ್ಳೆಯ ಕಥೆ ಸಿಕ್ಕಿತು. ನಿಮ್ಮ ಮಗನಿಗೆ ಟ್ಯಾಲೆಂಟ್ ಇದೆ ಮಾಡಿ ಎಂದು ಒತ್ತಾಯಿಸಿದೆವು. ಅಣ್ಣಾವ್ರ ‘ಪ್ರೇಮದ ಕಾಣಿಕೆ’ ಚಿತ್ರವನ್ನು ಮನಾಲಿಯಲ್ಲಿ ಮಾಡಿದ್ದರು. ಆ ಕಾರಣಕ್ಕೆ ಅಲ್ಲಿಯೇ ಈ ಸಿನಿಮಾವನ್ನು ಮಾಡಲು ಒಲವಾಯಿತು’ ಎಂದರು ರಾಮ್ ನಾರಾಯಣ್‌.ಸಿನಿಮಾ ಮಾಡುವ ಕನಸಿಟ್ಟುಕೊಂಡು ಕುಶಾಲ್ ರಾಜ್‌ ಬಾಂಬೆಯಲ್ಲಿ ತರಬೇತಿ ಪಡೆದು ಬಂದಿದ್ದಾರೆ. ದೇಹದ ತೂಕವನ್ನು 16 ಕೇಜಿ ಇಳಿಸಿಕೊಂಡಿದ್ದಾರೆ. ಸಿನಿಮಾವನ್ನು ಚಿಕ್ಕಂದಿನಿಂದ ಧ್ಯಾನಿಸಿದ್ದು ಮತ್ತು ನಟನೆಯ ಕಸರತ್ತು ಕಲಿತದ್ದನ್ನು ಬಣ್ಣಿಸಿದರು ಕುಶಾಲ್. ‘ಮನಾಲಿಯಲ್ಲಿ ಶೂಟಿಂಗ್ ಮಾಡುವಾಗ ಖುಷಿ, ಉದ್ವೇಗ ಅನುಭವಿಸಿದೆವು. ನನ್ನ ಅಭಿನಯ ಕಲೆ ಪ್ರದರ್ಶಿಸಲು ಮೊದ ಮೊದಲಾ ಮಾತು ಚೆಂದ ವೇದಿಕೆಯಾಗಲಿದೆ’ ಎಂದು ಚೆಂದವಾಗಿ ನುಡಿದರು ನಾಯಕಿ ತೇಜಸ್ವಿನಿ. ಅವರ ನುಡಿಗಳಿಂದ ಹೆಚ್ಚು ಕ್ರೆಡಿಟ್ ಪಡೆದುಕೊಂಡಿದ್ದು ಕುಶಾಲ್ ರಾಜ್. ಕೇರಳ ಮೂಲದ ಲಿಯೋನಾ ಚಿತ್ರದ ಮತ್ತೊಬ್ಬ ನಾಯಕಿ. ಪೆಟ್ರೋಲ್ ಪ್ರಸನ್ನ, ಕುರಿ ಪ್ರತಾಪ್, ಚಿಕ್ಕಣ್ಣ ಮತ್ತಿತರರು ತಾರಾಗಣದಲ್ಲಿದ್ದಾರೆ. ಛಾಯಾಗ್ರಾಹಕ ಸುರೇಶ್, ನಿರ್ಮಾಪಕಿ ಮಂಜುಳ ಶಾಂತರಾಜ್ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.