ಶುಕ್ರವಾರ, ಮೇ 14, 2021
31 °C

ಅಪ್ಪ ಎಂದರೆ ಏನೋ ಹರುಷವು

ನಿರ್ವಹಣೆ: ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಅಂದೇಕೊ ವಿಪರೀತ ಅಳು. ಕಾರಣದ್ಲ್ಲಲಿ ಸ್ಪಷ್ಟತೆಯಿರಲಿಲ್ಲ. ಕೂಗಿ ಹೇಳೋಣವೆಂದರೆ ಆಗಿನ್ನೂ ಮಾತು ಬಂದಿರಲಿಲ್ಲ. ಓಡಿ ಹೋಗಿ ಅಂಗಿ ಎಳೆದು ಎತ್ತಿಕೊ ಎನ್ನೋಣವೆಂದರೆ ನಡೆಯಲಾರೆ. ಅಮ್ಮ ಮುತ್ತಿಕ್ಕಿ ಹಾಲುಣಿಸಿದರೂ ಮುಗಿಯದ ಗೊಂದಲ. ಏನು ಮಾಡುವುದು ಎಂದು ಎಲ್ಲರೂ ಹೆದರುವಂತೆ ಕಿರುಚಾಟ ಪ್ರಾರಂಭಿಸಿದೆ...ತುಸು ಗಡಬಡಿಸಿ ಬಂದರೂ ಗಂಭೀರ ಮುಖದಲ್ಲಿ ಎದ್ದು ಕಾಣುತ್ತಿದ್ದ ವಾತ್ಸಲ್ಯದ ಕಣ್ಣು. ಸಮಾಧಾನವಾಗಿ ಎವೆಯಿಕ್ಕದೆ ನೋಡಿದೆ. ಕಂಕುಳಲ್ಲಿ ಕೈಹಾಕಿ ಎತ್ತಿಕೊಂಡ ಆ ಜೀವದ ಪ್ರೀತಿಯ ನೇವರಿಕೆ ಸಿಕ್ಕಾಗ ಅಳು ನಿಂತುಹೋಯಿತು. ಅದು ಅಪ್ಪನ ತೋಳು. ಆ ಸಾಂತ್ವನದ, ಪ್ರೀತಿಯ, ಧೈರ್ಯ ತುಂಬುವ ಬಾಹುಗಳು ಸಿಕ್ಕಾಗಲೇ ಮನಸ್ಸು ಖುಷಿಯಲ್ಲಿ ತೇಲಿದ್ದು. ಮಡಿಲು ಸಿಕ್ಕಾಗಲೇ ನೆಮ್ಮದಿಯ ನಿದ್ದೆಗೆ ಜಾರಿದ್ದು.ಬೊಗಸೆ ತುಂಬ ಬಾಚಿ ಕೊಡುತ್ತಿದ್ದ ಪ್ರೀತಿಯನ್ನು ಆಹ್ಲಾದಿಸುತ್ತಿದ್ದ ಮನಸ್ಸು ಅಪ್ಪಂದಿರ ದಿನ ಹತ್ತಿರವಾಗುತ್ತಿದ್ದಂತೆ (ಜೂನ್ 2ನೇ ಭಾನುವಾರ) ಭಾವುಕಗೊಳ್ಳುತ್ತದೆ. ಭರಿಸಲಾಗದ ಆ ವಾತ್ಸಲ್ಯಕ್ಕೆ ಎಡೆಬಿಡದೆ ಧನ್ಯವಾದ ಸಮರ್ಪಿಸುತ್ತದೆ.ಕ್ರೀಡೆ, ಸಿನಿಮಾ, ಶಿಕ್ಷಣ, ಸಂಗೀತ ಯಾವುದೇ ಕ್ಷೇತ್ರವಿರಲಿ ಮಕ್ಕಳ ಏಳಿಗೆಯ ಬಗ್ಗೆ ಹೆಮ್ಮೆ ಪಡುತ್ತಾ ಬದುಕು ಸವೆಸುವ ಅಪ್ಪ ಎಂದರೆ ಮುಗಿಯಲಾರದಷ್ಟು ನೆನಪು ಬಿಚ್ಚಿಕೊಳ್ಳುತ್ತದೆ. ನಿಜ ಬದುಕಿನ ಅಪ್ಪನ ಆದರ್ಶಗಳನ್ನು ಪ್ರತಿಬಿಂಬಿಸುವ ಸಿನಿಮಾಗಳನ್ನು ನೋಡಿದಾಗ ನಮ್ಮ ಅಪ್ಪ `ರೋಲ್ ಮಾಡೆಲ್' ಎನ್ನುವ ಕಲ್ಪನೆ ಹಲವರಿಗೆ ಬಂದದ್ದಿದೆ. ಆದರೆ ಇಂದಿಗೆ ತೆರೆಯ ಹಿಂದಿನ ಅಪ್ಪ ಹಾಗೇ ಇದ್ದಾನೆ. ಆದರೆ ತೆರೆಯ ಮೇಲಿನ ಬದುಕು ಬದಲಾಗಿದೆ.ವಾಸ್ತವ ಹಾಗೂ ಅವಾಸ್ತವ ಬದುಕಿನ ಅಪ್ಪಂದಿರನ್ನು `ಅಪ್ಪಂದಿರ ದಿನ'ದ ವಿಶೇಷಕ್ಕಾಗಿ ಮಾತನಾಡಿಸಿದಾಗ ಸಿಕ್ಕ ಮಾತುಗಳು ಇಲ್ಲಿವೆ.

ಮಹತ್ವ ಇಲ್ಲವೇ ಇಲ್ಲ

ಸಿನಿಮಾದಲ್ಲಿ ತಂದೆಯ ಪಾತ್ರಕ್ಕೆ ಹೆಚ್ಚೇನೂ ಪ್ರಾಧಾನ್ಯ ಇಲ್ಲ. ನಾನು ನಾಯಕನ ಪಾತ್ರ ಮಾಡುತ್ತಿದ್ದ ಸಂದರ್ಭದಲ್ಲಿ ಬಾಲಣ್ಣ, ಅಶ್ವತ್ಥ್ ಅವರಂಥ ನಟರು ತಂದೆಯ ಪಾತ್ರ ಮಾಡುತ್ತಿದ್ದರು. ಅವು ಗೌರವ ಹೆಚ್ಚಿಸುವಂತಿದ್ದವು. ಜೊತೆಗೆ ಅವು ಸರಿದಾರಿ ತೋರುವ ಅಪ್ಪನ ಪಾತ್ರಗಳಾಗಿದ್ದವು. ಈಗಿನ ಸಿನಿಮಾಗಳಲ್ಲಿ ಅಪ್ಪ ಆತುರದಲ್ಲೇ ಬಂದು ಹೋಗುತ್ತಾನೆ.

ನಾಯಕನಿಗೋ, ನಾಯಕಿಗೋ ಅಪ್ಪ ಬೇಕು ಎಂಬ ಕಾರಣಕ್ಕೆ ಆ ಪಾತ್ರವನ್ನು ಸಿನಿಮಾದಲ್ಲಿ ತುರುಕಲಾಗುತ್ತಿದೆ. ಅದು ನೆಪ ಮಾತ್ರ. ಆ ಪಾತ್ರಕ್ಕೆ ಸಂಬಂಧಿಸಿದಂತೆ ಗಂಭೀರವಾದ ಸ್ಕ್ರಿಪ್ಟ್ ರೈಟಿಂಗ್ ಕೂಡ ಆದ ಹಾಗೆ ಕಾಣಿಸುವುದಿಲ್ಲ. ಹೀಗಾಗಿಯೇ ಇತ್ತೀಚೆಗೆ ಅಂಥ ಹಲವಾರು ಪಾತ್ರಗಳನ್ನು ಒಪ್ಪಿಕೊಳ್ಳಲೇ ಇಲ್ಲ.

ಸಿನಿಮಾಕ್ಕೂ ನಿಜ ಬದುಕಿಗೂ ಸಂಬಂಧವಿಲ್ಲ. ವಾಸ್ತವವನ್ನು ಸಿನಿಮಾದಲ್ಲಿ ಶೇ 10ರಷ್ಟೂ ತೋರಿಸುತ್ತಿಲ್ಲ. ಪೀಳಿಗೆ ಬದಲಾದ ಹಾಗೆ ಅಪ್ಪಂದಿರ ಸ್ಥಾನ ಮಾನವೂ ಬದಲಾಗುತ್ತದೆ. ನಿರೀಕ್ಷೆಗಳೂ ಬದಲಾಗುತ್ತವೆ. ಇತ್ತೀಚೆಗಂತೂ ಎಲ್ಲರಲ್ಲೂ ತಾನು ತನ್ನದು ಎಂಬ ಭಾವನೆ ಮನೆ ಮಾಡಿರುವುದರಿಂದ ಮಕ್ಕಳಿಂದ ಏನನ್ನೂ ತಂದೆ ತಾಯಿಗಳು ನಿರೀಕ್ಷಿಸಲೇಬಾರದು.

ಅಂದಹಾಗೆ ಪಾಶ್ಚಾತ್ಯ ಸಂಸ್ಕೃತಿಯ ಹೇರಿಕೆಗಳ ಬಗ್ಗೆ ನನಗೆ ಅಸಡ್ಡೆ ಇದೆ. ನಮ್ಮ ಹಬ್ಬಗಳಾದರೆ ಕ್ಯಾಲೆಂಡರ್ ಪ್ರಕಾರ 28-30 ಇರಬಹುದು. ಆದರೆ ಪಾಶ್ಚಾತ್ಯರು 365ದಿನಕ್ಕೂ ಒಂದೊಂದು ದಿನವನ್ನಾಗಿ ಮಾಡಿ ಹಬ್ಬ ಎನ್ನುತ್ತಿದ್ದಾರೆ. ಹಬ್ಬದ ಕಲ್ಪನೆಯೇ ಇದರಿಂದ ನೆಲಸಮವಾಗುತ್ತದೆ. ಪಾಶ್ಚಾತ್ಯ ಮೌಲ್ಯಗಳಿಗೆ ನಾನು ಬೆಲೆ ಕೊಡುವುದೇ ಇಲ್ಲ.

-ಅನಂತನಾಗ್, ನಟ .

ನಿರೀಕ್ಷೆ ಮೂರ್ಖತನ

ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಅಪ್ಪನ ಪಾತ್ರಕ್ಕೆ ಮಹತ್ವ ಕಡಿಮೆ ಆಗಿದೆ. ಆದರೆ ಮೊದಲಿನ ಸಿನಿಮಾಗಳಲ್ಲಿ ಅಪ್ಪನ ಪಾತ್ರಗಳನ್ನು ಚೆನ್ನಾಗಿ ಬಿಂಬಿಸುತ್ತಿದ್ದರು. ನಟಿ ಪ್ರಧಾನವಾದ ಸಿನಿಮಾಗಳು ಬರುತ್ತಿದ್ದವು. ಆದರೆ ಇತ್ತೀಚೆಗೆ ಎಲ್ಲವೂ ನಾಯಕ ಪ್ರಧಾನ ಸಿನಿಮಾಗಳಾಗಿರುವುದರಿಂದ ಉತ್ತಮ ತಂದೆಯ ಪಾತ್ರಗಳನ್ನು ನೋಡುವುದು ಸಾಧ್ಯವಾಗುತ್ತಲೇ ಇಲ್ಲ.

ಹೇಗ್ಹೇಗೊ ಬಿಂಬಿಸುತ್ತಿದ್ದಾರೆ. ಉತ್ತಮ ತಂದೆಯ ಪಾತ್ರಗಳು ಕೆಲವೇ ಕೆಲವು ಕಾಣಸಿಗುತ್ತವೆ. ಒಂದು ವೇಳೆ ಆದರ್ಶ ತಂದೆಯ ಪಾತ್ರ ಸಿನಿಮಾದಲ್ಲಿದೆ ಎಂದರೆ ಆ ಪಾತ್ರಗಳನ್ನು ನಾಯಕನೇ ಮಾಡುವ ಜಾಯಮಾನ ಬೆಳೆಯುತ್ತಿದೆ. ಬೇರೆ ಕಲಾವಿದರು ಮಾಡಿದರೆ ನಾಯಕನ ಪ್ರಾಧಾನ್ಯ ಕಡಿಮೆ ಆಗುತ್ತದೆ ಎಂಬ ಸಂಕುಚಿತ ಭಾವನೆ ಕಲಾವಿದರಲ್ಲಿ ಮೂಡುತ್ತಿದೆ.ಒಬ್ಬ ತಂದೆಯಾದವನು ಮಕ್ಕಳಿಂದ ಏನನ್ನೂ ನಿರೀಕ್ಷಿಸಬಾರದು ಎಂಬುದು ನನ್ನ ಸಿದ್ಧಾಂತ. ನೀರೀಕ್ಷಿಸಿದರೆ ಅದು ಮೂರ್ಖತನ. ಸಾಕಿ, ವಿದ್ಯಾಭ್ಯಾಸ ಕೊಡಿಸಿ ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳುವಂತೆ ಮಾಡುವುದಷ್ಟೇ ತಂದೆ ತಾಯಿಯ ಕರ್ತವ್ಯ. ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬ ತಂದೆಯನ್ನು ಸರಪಳಿಯಲ್ಲಿ ಕಟ್ಟಿಟ್ಟ ಸುದ್ದಿ ಕೇಳಿದೆ. ಹೀಗೆ ಯಾರಿಗೂ ಆಗಬಾರದು. ಬದುಕಿರುವವರೆಗೆ ದುಡಿದು ಬದುಕಬೇಕು ಎಂಬುದು ಸಿದ್ಧಾಂತವಾಗಬೇಕು.

-ಶ್ರೀನಿವಾಸ ಮೂರ್ತಿ, ನಟ

ಕನಸು ತುಂಬಿದ ಅಪ್ಪ

ಸಂಗೀತ ಕ್ಷೇತ್ರದಲ್ಲಿ ನಾನು ಗುರುತಿಸಿಕೊಂಡಿದ್ದಕ್ಕೆ ಅಪ್ಪನ ಬೆಂಬಲ ಕಾರಣ. ನನ್ನ ಪೀಳಿಗೆಗೆ ಹೋಲಿಸಿದರೆ ಆಗಿನ್ನೂ ಹೆಣ್ಣುಮಕ್ಕಳಿಗೆ ಸಂಗೀತ ಕಲಿಸುವ ಗೋಜಿಗೆ ತಂದೆತಾಯಿಗಳು ಹೋಗುತ್ತಿರಲಿಲ್ಲ. ಆದರೆ ಅಪ್ಪ (ಕೆ.ರಾಮಮೂರ್ತಿ) 8ನೇ ವರ್ಷಕ್ಕೆ ನನ್ನನ್ನು ಸಂಗೀತ ತರಬೇತಿಗೆ ಹಾಕಿದರು.

ಸಂಗೀತ ಕ್ಷೇತ್ರದಲ್ಲಿ ನಾನು ಏನಾದರೊಂದು ಸಾಧನೆ ಮಾಡಬೇಕು ಎಂಬುದು ಅವರ ಕನಸಾಗಿತ್ತು. ಅವರು ನೀಡಿದ ಪ್ರೋತ್ಸಾಹ, ಬೆಂಬಲ ನಾನು ತುಂಬಾ ಅದೃಷ್ಟವಂತೆ ಎಂಬ ಖುಷಿ ನೀಡುತ್ತದೆ.ಅಪ್ಪ ಬೆಂಬಲವಾಗಿ ನಿಂತ ಸಂದರ್ಭಗಳು ಸಾಕಷ್ಟಿವೆ. ಅದರಲ್ಲಿ ನನಗೆ ತುಂಬಾ ಸಮಾಧಾನ ನೀಡಿದ ಸನ್ನಿವೇಶ ಎಂದರೆ ಮೊದಲ ಬಾರಿಗೆ ರೆಕಾರ್ಡಿಂಗ್‌ಗೆ ತೆರಳಿದ್ದು. ಅಪ್ಪನೇ ಮದ್ರಾಸ್‌ಗೆ ಕರೆದುಕೊಂಡು ಹೋದರು. ಇಳಯರಾಜ ಅವರಂಥ ದೊಡ್ಡ ಸಂಗೀತ ಸಂಯೋಜಕರ ಮುಂದೆ ನಾನು ಹಾಡಬೇಕಿತ್ತು.

ಭಯವಾಗಿ ತುಂಬಾ ಕಾನ್ಶಿಯಸ್ ಆಗಿಬಿಟ್ಟೆ. ಇನ್ನು ಮುಂದೆ ನಂಗೆ ಹಾಡೋಕೆ ಆಗುವುದಿಲ್ಲ ಎಂದು ತಿಳಿದು ತುಂಬಾ ಅತ್ತೆ. ಆಗ ಅಪ್ಪ ಸಮಾಧಾನ ಮಾಡಿದರು. ನೀನಿನ್ನೂ ಚಿಕ್ಕವಳು. ಸಾಧಿಸುವುದಕ್ಕೆ ಬೇಕಾದಷ್ಟು ಸಮಯವಿದೆ ಎಂದರು. ಆ ಬೆಂಬಲವೇ ನನ್ನೆಲ್ಲಾ ಸಾಧನೆಗೆ ಬೆನ್ನೆಲುಬು.

-ಬಿ.ಆರ್.ಛಾಯಾ, ಹಿನ್ನೆಲೆ ಗಾಯಕಿ.

ವಿಶೇಷ ಖುಷಿ

ತಂದೆಯಂದಿರ ದಿನಾಚರಣೆ ನಮ್ಮ ದೇಶದ ಸಂಸ್ಕೃತಿ ಅಲ್ಲ ನಿಜ. ಆದರೆ ಸದಾ ಧಾವಂತದಲ್ಲೇ ಬದುಕುತ್ತಿರುವ ಇಂದಿನ ದಿನಮಾನಗಳಲ್ಲಿ ಇಂಥ ದಿನಾಚರಣೆಯ ಅವಶ್ಯಕತೆ ಇದೆ ಎನಿಸುತ್ತದೆ. ತಂದೆಯಂದಿರ ದಿನ ನಾನು ಅಪ್ಪನಿಗೆ ಉಡುಗೊರೆ ನೀಡುತ್ತೇನೆ. ಹಾಗೆಯೇ ನನ್ನ ಮಕ್ಕಳಾದ ಕಿಶನ್, ಕಿರಣ್ ಕೂಡ.

ಆ ದಿನ ಏನೇ ಮಾಡಿದರೂ ನಾನು ಹೇಳಿದಂತೆಯೇ ಆಗುತ್ತದೆ. ತಿಂಡಿ ತಿನ್ನುವುದು, ಸಿನಿಮಾ ನೋಡುವುದು ಹೀಗೆ ಪ್ರತಿಯೊಂದೂ ನನ್ನದೇ ಆಯ್ಕೆ.  ಪ್ರತಿದಿನ ನನ್ನಿಬ್ಬರು ಮಕ್ಕಳು ತಂದೆತಾಯಿಗೆ ನಮಸ್ಕರಿಸಿಯೇ ಮುಂದಿನ ಕೆಲಸ ಮಾಡುತ್ತಾರೆ.ದೇಶಕ್ಕೆ ಒಳ್ಳೆಯ ಪ್ರಜೆ, ಮನೆಗೆ ಒಳ್ಳೆ ಮಕ್ಕಳಾಗಬೇಕು, ಅವರ ಕಾಲಮೇಲೆ ಅವರು ನಿಂತುಕೊಳ್ಳಬೇಕು ಎಂಬುದು ತಂದೆಯಾಗಿ ನನ್ನ ನಿರೀಕ್ಷೆ. ಆದರೆ ದೇವರು ನಿರೀಕ್ಷೆಗೂ ಮೀರಿ ಒಳ್ಳೆಯ ಮಕ್ಕಳನ್ನು ನೀಡಿದ್ದಾನೆ ಎಂಬ ಖುಷಿಯಿದೆ. ಮಕ್ಕಳ ಆಸಕ್ತಿಗೆ ನೀರೆರೆದು, ಅವರನ್ನು ಸರಿಯಾದ ದಾರಿಯಲ್ಲಿ ತಿದ್ದುವವನೇ ಆದರ್ಶ ತಂದೆ. ಎಲ್ಲಾ ತಂದೆತಾಯಿಯರೂ ಮಕ್ಕಳ ಸಾಧನೆಯಲ್ಲೇ ಸಂತೋಷ ಪಡುತ್ತಾರೆ.

-ಶ್ರೀಕಾಂತ್, ಮಾಸ್ಟರ್ ಕಿಶನ್ ಅಪ್ಪ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.