ಸೋಮವಾರ, ಮೇ 23, 2022
30 °C

ಅಬ್ಬಕ್ಕನ ಆದರ್ಶ ಪಾಲಿಸಿ: ವೀರೇಂದ್ರ ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಡಿಪು: ಇಂದಿನ ಸಮಾಜದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದ್ದು, ಈ ಪಾಶ್ಚಾತ್ಯ ದಾಸ್ಯವನ್ನು ಹೊಡೆದೊಡಿಸುವ ನಿಟ್ಟಿನಲ್ಲಿ  ತುಳುನಾಡಿನ ರಕ್ಷಣೆಗಾಗಿ ಹೋರಾಡಿದ ವೀರರಾಣಿ ಅಬ್ಬಕ್ಕನ  ಉತ್ಸವದ ಮೂಲಕ ಪ್ರಯತ್ನ ನಡೆಸಬೇಕಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ  ಅಭಿಪ್ರಾಯ ಪಟ್ಟರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ  ವತಿಯಿಂದ ಶನಿವಾರ  ಕೊಣಾಜೆಯ ಅಸೈಗೋಳಿಯಲ್ಲಿ ನಡೆದ ವೀರರಾಣಿ ಅಬ್ಬಕ್ಕ ಉತ್ಸವ-2011ರ‘ರಾಣಿ ಅಬ್ಬಕ್ಕ ಉತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸುಮಾರು 500 ವರ್ಷಗಳ ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಸ್ವಾತಂತ್ರ್ಯ ಇರಲಿಲ್ಲ. ಏಕಾಂಗಿಯಾಗಿ ಮನೆಯಿಂದ ಹೊರಗಡೆ ಬರುವುದು ಕೂಡಾ ಕಷ್ಟವಾಗಿತ್ತು. ಅಂದಿನ ಕಾಲದಲ್ಲಿಯೇ ವೀರರಾಣಿ ಅಬ್ಬಕ್ಕ ವಿದೇಶಿ ಶಕ್ತಿಗಳ ವಿರುದ್ಧ ಹೋರಾಡಿ ಸಾಹಸ ಪ್ರದರ್ಶಿಸಿದ್ದಾಳೆ. ಇಂದಿನ ಕಾಲದಲ್ಲೂ ಸಮಾಜವು  ಬಹಳಷ್ಟು ಸುಧಾರಣೆಯಾಗಿದ್ದರೂ ಕೆಲವೆಡೆ  ಮಳೆಯರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅಂತವರಿಗೆ ರಾಣಿ ಅಬ್ಬಕ್ಕನ ಆದರ್ಶ, ಸಾಹಸ, ಧೈರ್ಯವೇ ಮಾರ್ಗದರ್ಶನವಾಗಬೇಕು. ಹೀಗಾದರೆ ಮಾತ್ರ ನಮ್ಮ ಸಮಾಜ ಅಭಿವೃದ್ಧಿಯಾಗಲು ಸಾಧ್ಯ ಎಂದು ಅವರು ಹೇಳಿದರು.ಇತ್ತೀಚೆಗೆ ಗ್ರಾಮೀಣ ಪ್ರದೇಶದ ಜನರು ನಗರ ಜೀವನದತ್ತ ಆಕರ್ಷಿತರಾಗುತ್ತಿದ್ದಾರೆ. ಇದರಿಂದ ನಮ್ಮ ಗ್ರಾಮೀಣ ಸಂಸ್ಕೃತಿ ಅಳಿವಿನಂಚಿನಲ್ಲಿದೆ. ಇಂತಹ ಉತ್ಸವ-ಆಚರಣೆ ಮೂಲಕ ನಾವು ತುಳುನಾಡಿನ ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.  ವಿಧಾನಸಭೆ ಉಪಸಭಾಧ್ಯಕ್ಷ ಯೋಗೀಶ್ ಭಟ್ ಮಾತನಾಡಿ, ನಮ್ಮ ಜಿಲ್ಲೆಯ ಧಾರ್ಮಿಕ ಕೇಂದ್ರಗಳು, ದೇವಸ್ಥಾನಗಳು ಹಾಗೂ ನೈಸರ್ಗಿಕ ತಾಣಗಳನ್ನು ಒಟ್ಟು ಸೇರಿಸಿ ಒಳ್ಳೆಯ ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ಪ್ರಯತ್ನ ಆಗಬೇಕಾಗಿದೆ.  ವೀರರಾಣಿ ಅಬ್ಬಕ್ಕ ಉತ್ಸವದಂತಹ ಕಾರ್ಯಕ್ರಮ ನಮ್ಮಲ್ಲಿ ನೈತಿಕ ಸ್ಥೈರ್ಯವನ್ನು ತುಂಬಿಸುವುದರ ಜತೆಗೆ ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಪ್ರತೀ ತಾಲ್ಲೂಕಿನಲ್ಲೂ ಅಬ್ಬಕ್ಕ ಉತ್ಸವ: ಉಸ್ತುವಾರಿ ಸಚಿವ ಕೃಷ್ಣಪಾಲೆಮಾರ್ ಮಾತನಾಡಿ, ಪ್ರತೀ ತಾಲ್ಲೂಕಿನಲ್ಲೂ ರಾಣಿ ಅಬ್ಬಕ್ಕ ಉತ್ಸವ ನಡೆಯುಬೇಕು ಮಾತ್ರವಲ್ಲದೆ ಕರಾವಳಿ ಉತ್ಸವದೊಂದಿಗೆ ರಾಣಿ ಅಬ್ಬಕ್ಕ ಉತ್ಸವವನ್ನು ವೀಲೀನಗೊಳಿಸಿದರೆ ಈ ಉತ್ಸವವು ಇನ್ನಷ್ಟು ವಿಜೃಂಭಣೆಯಿಂದ ನಡೆಯಲು ಸಾಧ್ಯ. ಇಂತಹ ಉತ್ಸವ ಕೇವಲ ಸರ್ಕಾರಿ ಉತ್ಸವಗಳಾಗಿರದೆ ಜನರ ಉತ್ಸವವಾದರೆ  ಮಾತ್ರ ಕಾರ್ಯಕ್ರಮದ ಪರಿಪೂರ್ಣತೆ ಕಂಡುಕೊಳ್ಳಲು ಸಾಧ್ಯ ಎಂದರು.ಉಳ್ಳಾಲದ  ವೀರರಾಣಿಯ ಆದರ್ಶ ಹಾಗೂ ಸಾಹಸಮಯ ಬದುಕನ್ನು ಅರ್ಥಪೂರ್ಣವಾಗಿ ತಿಳಿದುಕೊಂಡರೆ ಛಿದ್ರಗೊಂಡಿರುವ ಸಮಾಜವನ್ನು ಭದ್ರವಾಗಿ ಕಟ್ಟಿಕೊಳ್ಳಲು ಖಂಡಿತಾ ಸಾಧ್ಯ ಎಂದು ಮಂಗಳೂರು ವಿಶ್ವದ್ಯಾಲಯದ ಕುಲಸಚಿವ ಡಾ.ಕೆ.ಚಿನ್ನಪ್ಪಗೌಡ ಅಭಿಪ್ರಾಯ ಪಟ್ಟರು.ಶಾಸಕ ಅಭಯಚಂದ್ರ ಜೈನ್, ಆಳ್ವಾಸ್ ವಿದ್ಯಾಸಂಸ್ಥೆಯ ಡಾ.ಮೋಹನ್ ಆಳ್ವ, ಶಾಸಕ ಯು.ಟಿ.ಖಾದರ್,  ಪ್ರದೀಪ್ ಕುಮಾರ್ ಕಲ್ಕೂರ, ಮಾಜಿ ಶಾಸಕ ಜಯರಾಮ ಶೆಟ್ಟಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ಎನ್.ಮನ್ಮಥ, ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಹೈದರ್ ಪರ್ತಿಪ್ಪಾಡಿ, ಭಾಸ್ಕರ ರೈ ಕುಕ್ಕುವಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.