ಗುರುವಾರ , ಮೇ 19, 2022
24 °C
ಪ್ರವಾಹ, ಭೂಕುಸಿತ, 9 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಪ್ರಜಾವಾಣಿ ವಾರ್ತೆ

ಅಬ್ಬರಿಸಿದ ಆರಿದ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಆರಿದ್ರಾ ಮಳೆ ಬುಧವಾರ ಅಬ್ಬರಿಸಿ ಸುರಿದಿದೆ.  ಶಿವಮೊಗ್ಗ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ನದಿಗಳು ಉಕ್ಕಿ ಹರಿಯತೊಡಗಿವೆ. ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿಯೂ ಧಾರಾಕಾರ ಮಳೆಯಾಗಿದೆ. ಅನೇಕ ಕಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.ಕೊಡಗು ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಗುರುವಾರ (ಜುಲೈ 4) ರಜೆ ಘೋಷಿಸಲಾಗಿದೆ. ಆದರೆ ದ್ವಿತೀಯ ಪಿಯು ಪೂರಕ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಾದ್ಯಂತ ಕೂಡ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ.  ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಪೀಡಿತ ಪ್ರದೇಶಗಳಲ್ಲಿ ಶಾಲೆಗಳಿಗೆ ಬುಧವಾರ ರಜೆ ಸಾರಲಾಗಿತ್ತು.ಉತ್ತರ ಕನ್ನಡ ಜಿಲ್ಲೆ: ಜಿಲ್ಲೆಯ ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕುಗಳಲ್ಲಿ ಮಂಗಳವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಬುಧವಾರ ಎರಡೂ ತಾಲ್ಲೂಕುಗಳ ಶಾಲೆ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು.ಶಿರಸಿ ತಾಲ್ಲೂಕಿನಲ್ಲಿ ಮಂಗಳವಾರ ಮಧ್ಯಾಹ್ನದಿಂದ ಬುಧವಾರ ಮಧ್ಯಾಹ್ನದ ವರೆಗೆ ಸುರಿದ ಕುಂಭದ್ರೋಣ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಶಿರಸಿ ತಾಲ್ಲೂಕಿನಲ್ಲಿ 254 ಮಿ.ಮೀ. ಮಳೆ ದಾಖಲಾಗಿದೆ. ತಾಲ್ಲೂಕಿನ ಬಹುತೇಕ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದವು.ನಗರದ ಕೋಟೆಕೆರೆ ತುಂಬಿ ಹರಿದ ಪರಿಣಾಮ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಸಂಪರ್ಕ ಕಡಿತವಾಗಿತ್ತು. ತೆಗ್ಗು ಪ್ರದೇಶದ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿವೆ.ಸೋಂದಾ ಭಾಗದಲ್ಲಿ ಶಾಲ್ಮಲಾ ನದಿ, ಉಪನದಿ ಕೆಂಗ್ರೆಹೊಳೆ ಉಕ್ಕಿ ರಸ್ತೆಯ ಮೇಲೆ ಹರಿಯುತ್ತಿದ್ದು, ಹುಲೇಕಲ್ ಭಾಗದ ಸಂಪರ್ಕ ಕಡಿತಗೊಂಡಿದೆ. ನೂರಾರು ಎಕರೆ ಅಡಿಕೆ ತೋಟಗಳು ನೀರಿನಲ್ಲಿವೆ. ಬನವಾಸಿ ಭಾಗದಲ್ಲಿ ವರದಾ ನದಿ ಉಕ್ಕಿ ಹರಿಯುತ್ತಿದ್ದು, ಅಜ್ಜರಣಿ ಗ್ರಾಮಕ್ಕೆ ತೆರಳುವ ಸೇತುವೆ ಮುಳುಗಿದೆ. ಸಹಸ್ರಾರು ಎಕರೆ ಭತ್ತದ ಗದ್ದೆ ಜಲಾವೃತವಾಗಿದೆ.ಮಳೆಯ ಕಾರಣದಿಂದ ಸಿದ್ದಾಪುರ ಪಟ್ಟಣದ ಹಲವಾರು ಶಾಲೆಗಳಿಗೆ ಬುಧವಾರ ರಜೆ ನೀಡಲಾಯಿತು. `ತಾಲ್ಲೂಕಿನಲ್ಲಿ ಶಾಲೆಗಳಲ್ಲಿ ರಜೆ ನೀಡುವ ಅಧಿಕಾರವನ್ನು ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ನೀಡಲಾಗಿದೆ. ಪರಿಸ್ಥಿತಿಯ್ನು ಅವಲೋಕಿಸಿ ಅವರು ಶಾಲೆಗಳಿಗೆ ರಜೆ ನೀಡಿದ್ದಾರೆ' ಎಂದು ಬಿಇಒ ಬಿ.ವಿ. ನಾಯ್ಕ ತಿಳಿಸಿದ್ದಾರೆ.ಬುಧವಾರ ಬೆಳಿಗ್ಗೆ 8ಕ್ಕೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ಸಿದ್ದಾಪುರ ತಾಲ್ಲೂಕಿನಲ್ಲಿ 189.2 ಮಿ.ಮೀ.  ಭಾರಿ ಮಳೆ ದಾಖಲಾಗಿದೆ.ಅಂಕೋಲಾ ತಾಲ್ಲೂಕಿನ ಜೀವನದಿಯಾಗಿರುವ ಗಂಗಾವಳಿಯು ಉಕ್ಕಿ ಹರಿಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ನಂ.63 ಬುಧವಾರ ಸಂಪೂರ್ಣ ಜಲಾವೃತಗೊಂಡಿದೆ.ತಾಲ್ಲೂಕಿನ ಹಿಚ್ಕಡ ಕೂರ್ವೆ, ದಂಡೆಬಾಗ್, ಶಿರೂರು, ಮಂಜಗುಣಿ, ಮೊರಳ್ಳಿ, ಹೊಸಕಂಬಿ ಗ್ರಾಮಗಳ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೂರ್ವೆ ನಡುಗಡ್ಡೆಯಲ್ಲಿದ್ದ ಜನರನ್ನು ದೋಣಿ ಮೂಲಕ ಹಿಚ್ಕಡ ಗ್ರಾಮದಲ್ಲಿನ ಸುರಕ್ಷಿತ ನೆಲೆಗಳಿಗೆ ಸಾಗಿಸಲಾಗಿದೆ.ಸುಂಕಸಾಳ ಗ್ರಾ.ಪಂ. ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನದಿಪಾತ್ರವನ್ನು ಮೀರಿ ಗಂಗಾವಳಿ ನದಿ ಹರಿದಿದ್ದು, ಸಂಚಾರ ಸ್ಥಗಿತಗೊಂಡಿದೆ.ಮುಂಜಾಗ್ರತಾ ಕ್ರಮವಾಗಿ 8 ದೋಣಿ ಸಿದ್ಧಪಡಿಸಿಕೊಳ್ಳಲಾಗಿದ್ದು, ಪರಿಸ್ಥಿತಿಯ ನಿಗಾ ಇಡಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.ಕುಮಟಾ ಹಾಗೂ ಸಿದ್ದಾಪುರ ತಾಲ್ಲೂಕುಗಳಲ್ಲಿ ಧಾರಾಕಾರ ಮಳೆ ಸುರಿದು ಅಘನಾಶಿನಿ ನದಿಯಲ್ಲಿ ಪ್ರವಾಹ ಉಂಟಾಗಿ ಸುಮಾರು 15ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.ಪ್ರವಾಹದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕುಮಟಾ ತಾಲ್ಲೂಕಿನ ದೀವಗಿಯ ಸುಮಾರು 30 ಮನೆಗಳ 110 ಜನರನ್ನು ಸ್ಥಳೀಯ ಹಿರಿಯ ಪ್ರಾಥಮಿಕ ಶಾಲೆಯ ಗಂಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ತಾಲ್ಲೂಕಿನ ಉಪ್ಪಿನಪಟ್ಟಣ, ಧಕ್ಕೆ, ಬೊಗರಿಬೈಲ, ಕುಡುವಳ್ಳಿ, ಶಿರಗುಂಜಿ, ಅಳಕೋಡ, ಕುಡ್ಲೆ, ಕರ್ಕಿಮಕ್ಕಿ, ಹೊಂಡದಕ್ಕಲ, ಮಣಕೋಣ, ದೀವಗಿ, ಹೆಗಡೆ, ಮಿರ್ಜಾನ, ಖೈರೆ, ಐಗಳಕುರ್ವೆ ಮುಂತಾದ ಗ್ರಾಮಗಳಿಗೆ ನೀರು ನುಗ್ಗಿದೆ.ಈ ಎಲ್ಲ ಗ್ರಾಮಗಳ ಕೃಷಿ ಗದ್ದೆ ಹಾಗೂ ತೋಟಗಳು ಜಲಾವೃತಗೊಂಡಿವೆ. ದ್ವೀಪ ಗ್ರಾಮವಾದ ಐಗಳಕುರ್ವೆ, ಹೆಗಡೆ, ಮಿರ್ಜಾನ, ತಾರಿಬಾಗಿಲುಗಳಲ್ಲಿ ಜನರನ್ನು ಮನೆಗಳಿಂದ ಸುರಕ್ಷಿತ ಪ್ರದೇಶಗಳಿಗೆ ಕರೆತರಲು ದೋಣಿಗಳನ್ನು ಬಳಸಲಾಯಿತು.ನೀರಿಗೆ ಬಿದ್ದು ಸಾವು: ಹೊನ್ನಾವರ ತಾಲ್ಲೂಕಿನ ಬಳ್ಕೂರು ಗ್ರಾಮದ ಹಲಸನಡಿಕೇರಿಯ ಸಮೀಪ ಮಂಗಳವಾರ ರಾತ್ರಿ ಗದ್ದೆಯ ಬದುವಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನೀರಿಗೆ ಬ್ದ್ದಿದು ಗಣಪ ಮಂಜು ನಾಯ್ಕ(55) ಎಂಬುವವರು ಮೃತಪಟ್ಟಿದ್ದಾರೆ.ಶಿವಮೊಗ್ಗ ಜಿಲ್ಲೆ

ಜಿಲ್ಲೆಯಲ್ಲಿ ತುಂಗಾ, ಭದ್ರಾ, ಶರಾವತಿ, ವರದಾ, ದಂಡಾವತಿ, ಕುಮದ್ವತಿ ನದಿಗಳು ಮೈದುಂಬಿ ಹರಿಯುತ್ತಿವೆ. ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಆವರಿಸಿದೆ. ಹಲವೆಡೆ ತಗ್ಗು ಪ್ರದೇಶಗಳು, ರಸ್ತೆಗಳು ಜಲಾವೃತಗೊಂಡಿವೆ.ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ ಹಾಗೂ ಸಾಗರ ತಾಲ್ಲೂಕುಗಳಲ್ಲಿ  ಸುರಿದ ನಿರಂತರ ಮಳೆಯ  ಕಾರಣ ಬುಧವಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.ಮಂಗಳವಾರ ರಾತ್ರಿ ಎಡೆಬಿಡದೇ ಸುರಿದ ಮಳೆಯಿಂದ ಕೆರೆ-ಕಟ್ಟೆ ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಜಲಾಶಯಗಳಿಗೆ ಒಳಹರಿವಿನಲ್ಲಿ ದಿಢೀರ್ ಹೆಚ್ಚಳವಾಗಿದೆ.ಭದ್ರಾ ಜಲಾಶಯದಲ್ಲೂ ಒಳಹರಿವು ಹೆಚ್ಚಿದ್ದು, ಒಂದೇ ದಿನದಲ್ಲಿ 2ಅಡಿ ನೀರು ಬಂದಿದೆ.ಪಕ್ಷಿಧಾಮ ಅಪಾಯದಲ್ಲಿ: ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಮಂಡಗದ್ದೆ ಪಕ್ಷಿಧಾಮ ಮುಳುಗಿದೆ. ಅಲ್ಲಿದ್ದ ಪಕ್ಷಿಗಳು, ಅವುಗಳ ಗೂಡುಗಳು ಕೊಚ್ಚಿ ಹೋಗಿವೆ. ಮಂಡಗದ್ದೆ ರಸ್ತೆ ಅಕ್ಕ-ಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ಶಿವಮೊಗ್ಗ- ಮಂಗಳೂರು ರಾಷ್ಟ್ರೀಯ ಹೆದ್ದಾರಿ -13 ಸಂಪರ್ಕ ಕಡಿತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಂಡಗದ್ದೆ ಮಾರ್ಗದಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಮಂಗಳೂರು, ಉಡುಪಿಗೆ ತೆರಳುವ ವಾಹನಗಳಿಗೆ ಆಯನೂರು, ಹಣಗೆರೆಕಟ್ಟೆ ಮಾರ್ಗದಲ್ಲಿ ಸಂಚರಿಸುವ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.ಸಾಗರ ತಾಲ್ಲೂಕು ತುಮರಿ ಸಮೀಪದ ಗಣಪೋಡಿಯಲ್ಲಿ ಸೇತುವೆ ಮುರಿದು ಬಿದ್ದಿದೆ. ಸಿಗಂದೂರು- ಕೊಲ್ಲೂರು ಮಾರ್ಗ ಸಂಪೂರ್ಣ ಬಂದ್ ಆಗಿದೆ. ಜೋಗ ಜಲಪಾತ ಬಳಿಯ ಸೀತಾಕಟ್ಟೆ ಸೇತುವೆ ಬಳಿ ಗುಡ್ಡ ಕುಸಿದು ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಾಗರ ತಾಲ್ಲೂಕಿನ ಬೀಸನಗದ್ದೆ ಗ್ರಾಮ ಜಲಾವೃತಗೊಂಡಿದೆ.ಸೊರಬ ತಾಲ್ಲೂಕಿನ ಉದ್ರಿ ರಸ್ತೆಯಲ್ಲಿ ಕೆರೆಯೊಂದು ತುಂಬಿ ಹರಿಯುತ್ತಿರುವುದರಿಂದ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಪ್ರವಾಹ ಭೀತಿ ಸೃಷ್ಟಿಸಿದೆ. ಗಾಜನೂರಿನ ತುಂಗಾ ಜಲಾಶಯದಿಂದ 90 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವುದರಿಂದ ಶಿವಮೊಗ್ಗ ನಗರದಲ್ಲಿ ಅಪಾಯದ ಸಂಕೇತ ಸೂಚಿಸುವ ಕೋರ್ಪಲಯ್ಯನ ಛತ್ರದ ಬಳಿಯ ಮಂಟಪ ಮುಳುಗಿದೆ. ಇಲಿಯಾಸ್ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ದುರ್ಗಿಗುಡಿ ಬಡಾವಣೆ ಸರ್ಕಾರಿ ಶಾಲೆಗೂ  ನೀರು ನುಗ್ಗಿದೆ.ಚಿಕ್ಕಮಗಳೂರು ಜಿಲ್ಲೆ

24 ಗಂಟೆಗಳಿಂದ ಜಿಲ್ಲೆಯಲ್ಲಿ  ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಹೇಮಾವತಿ, ಭದ್ರೆ, ತುಂಗಾ ನದಿಗಳಲ್ಲಿ ನೀರಿನ ಹರಿವು ಅಪಾಯದ ಮಟ್ಟ ತಲುಪಿದೆ. ನದಿ ಅಂಚಿನ ಗ್ರಾಮಗಳ ನಿವಾಸಿಗಳು ಆತಂಕದಲ್ಲಿ ದಿನ ದೂಡುವಂತಾಗಿದೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ನರಸಿಂಹರಾಜಪುರ ತಾಲ್ಲೂಕುಗಳಲ್ಲಿ ಮಳೆ ಪೀಡಿತ ಪ್ರದೇಶಗಳಲ್ಲಿ ಶಾಲೆಗಳಿಗೆ ಬುಧವಾರ ರಜೆ ಘೋಷಿಸಲಾಗಿತ್ತು.ಜಿಲ್ಲೆಯಲ್ಲಿ ಮಳೆಯ ಪರಿಸ್ಥಿತಿಯನ್ನು ನೋಡಿಕೊಂಡು ರಜೆ ವಿಸ್ತರಿಸಲು ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.ಬಯಲು ಸೀಮೆಯಾದ ಕಡೂರು, ತರೀಕೆರೆಯಲ್ಲೂ ಮುಂಗಾರು ಮಳೆ ಚುರುಕಾಗಿದೆ. ಶೃಂಗೇರಿ, ಕೊಪ್ಪ, ಮೂಡಿಗೆರೆ, ಕಳಸ, ಹೊರನಾಡು ಭಾಗಗಳಲ್ಲಿ ಸೇತುವೆಗಳು ಮುಳುಗಿದ್ದು, ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.ಮಲೆನಾಡಿನ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲ್ಲೂಕುಗಳಲ್ಲಿ ಬುಧವಾರ ಕೆಲವು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮಳೆ ಪರಿಸ್ಥಿತಿ ನೋಡಿಕೊಂಡು ಗುರುವಾರ ರಜೆ ನೀಡಲು ಶಾಲಾ ಮೇಲುಸ್ತುವಾರಿ ಸಮಿತಿಗಳಿಗೆ ಸೂಚಿಸಲಾಗಿದೆ.ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ರಸ್ತೆ ಮೇಲೆ ನೀರು ಉಕ್ಕಿ ಹರಿಯುತ್ತಿರುವುದರಿಂದ ಶೃಂಗೇರಿ-ಕೆರೆಕಟ್ಟೆ ರಸ್ತೆ ಜಲಾವೃತಗೊಂಡಿದೆ. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಆನೆಗುಂದ -ಕಾವಡಿ ನಡುವೆ ನದಿ ನೀರು ಉಕ್ಕಿ ಹರಿದ ಪರಿಣಾಮ ಕೊಪ್ಪ ರಸ್ತೆಯಲ್ಲೂ ಸುಮಾರು ಒಂದೂವರೆ ತಾಸು ಸಂಪರ್ಕ ಸ್ಥಗಿತಗೊಂಡಿತ್ತು.ಮೂಡಿಗೆರೆ ತಾಲ್ಲೂಕಿನ ಉಗ್ಗಿಹಳ್ಳಿ ಬಳಿ ಹೇಮಾವತಿ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಗದ್ದೆ ಬಯಲು ಸಂಪೂರ್ಣ ಜಲಾವೃತವಾಗಿದೆ. ಮಳೆ ಇದೇ ಪ್ರಮಾಣದಲ್ಲಿ ಮುಂದುವರಿದರೆ ಉಗ್ಗಿಹಳ್ಳಿ ಕಾಲೊನಿ ಮುಳುಗುವ ಅಪಾಯ ಎದುರಾಗಿದೆ. ಕಾಲೊನಿಯ ಜನರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.ಭದ್ರಾ ನದಿ ಅಪಾಯದ ಮಟ್ಟ ತಲುಪಿದೆ. ನದಿ ಅಂಚಿನ ಹೊಳೆಬಾಗಲು ಬಳಿ ಇರುವ 5 ಮನೆಗಳಿಗೆ ನೀರು ನುಗ್ಗುವ ಸಂಭವ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನಿವಾಸಿಗಳಿಗೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ. ಭದ್ರಾ ನದಿಯ ಅಕ್ಕಪಕ್ಕದ ಅಡಿಕೆ ತೋಟಗಳು ಜಲಾವೃತಗೊಂಡಿವೆ. ನದಿ ಉಕ್ಕಿ ಹರಿಯುತ್ತಿರುವುದರಿಂದ ಕಳಸ-ಹೊರನಾಡು ನಡುವಿನ ರಸ್ತೆ ಸಂಪರ್ಕವೂ ತಪ್ಪಿಹೋಗಿದೆ.ಅಬ್ಬರದ ಮಳೆಗೆ ಜಿಲ್ಲೆಯ ವಿವಿಧೆಡೆ ನಾಲ್ಕು ಮನೆಗಳು ನೆಲಕ್ಕುರುಳಿವೆ.ಕರಾವಳಿಯಲ್ಲಿ ಬಿರುಸು

ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲೂ ಮಳೆ ಅಬ್ಬರ ಜೋರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಅತಿ ಹೆಚ್ಚು (141.2 ಮಿ.ಮೀ.), ಬಂಟ್ವಾಳದಲ್ಲಿ 91.5 ಮಿ.ಮೀ. ಮಳೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ 4 ದಿನಗಳಿಂದ  ನಿರಂತರ ಮಳೆ ಸುರಿಯುತ್ತಿದ್ದು ಕುಮಾರಧಾರಾ, ಪಯಸ್ವಿನಿ ನದಿ ಹಾಗೂ ಇತರ ಸಣ್ಣಪುಟ್ಟ ನದಿಗಳು ತುಂಬಿ ಹರಿಯುತ್ತಿವೆ. ಕುಮಾರಧಾರಾ ನದಿ ಅಪಾಯದ ಮಟ್ಟ ತಲುಪಿದೆ.  ಈ ತಾಲ್ಲೂಕಿನಾದ್ಯಂತ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಗುರುವಾರ ರಜೆ ಸಾರಲಾಗಿದೆ.ಪುತ್ತೂರಿನ ಪಾಣಾಜೆ- ಪುತ್ತೂರು ಚೆಲ್ಯಡ್ಕದ ಸೇತುವೆ ಮುಳುಗಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಜಡಿ ಮಳೆ ಸುರಿದಿದ್ದು ಶಾಲಾ - ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ನೇತ್ರಾವತಿ ನದಿ ಸೇರಿದಂತೆ ತಾಲ್ಲೂಕಿನ ಎಲ್ಲಾ ನದಿ - ತೊರೆಗಳು ತುಂಬಿ ಹರಿಯುತ್ತಿವೆ.ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿದ್ದು, 7 ಮೀಟರ್ ತಲುಪಿದೆ. ಅಪಾಯದ ಮಟ್ಟ (9 ಮೀಟರ್) ಆಗಿದೆ.ಕೊಡಗು ಜಿಲ್ಲೆ

ಜಿಲ್ಲೆಯಾದ್ಯಂತ ಬುಧವಾರ ಧಾರಾಕಾರವಾಗಿ ಮಳೆ ಸುರಿದಿದೆ. ಬೆಳಿಗ್ಗೆಯಿಂದಲೇ ಆರಂಭವಾಗಿದ್ದ ಮಳೆ ದಿನವಿಡೀ ಬಿರುಸಿನಿಂದ ಸುರಿದಿದೆ.ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಿ ಭಾಗಮಂಡಲ- ನಾಪೋಕ್ಲು ರಸ್ತೆ ಹಾಗೂ ಭಾಗಮಂಡಲ- ಮಡಿಕೇರಿ ರಸ್ತೆಯ ಮೇಲೆ ನೀರು ಹರಿದಿದೆ. ಇದರಿಂದ ವಾಹನಗಳ ಸಂಚಾರ ಕಡಿತಗೊಂಡಿದೆ.ಹಾಸನ ಜಿಲ್ಲೆ

ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು, ಮಂಗಳವಾರ ರಾತ್ರಿಯಿಂದ ಬಹುತೇಕ ಎಲ್ಲ ಕಡೆಗಳಲ್ಲೂ ಮಳೆಯಾಗುತ್ತಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ಮಾತ್ರ ಭಾರಿ ಮಳೆಯಾಗುತ್ತಿದೆ.ಹಾಸನ, ಬೇಲೂರು, ಹಳೇಬೀಡು, ಜಾವಗಲ್ ಮುಂತಾದ ಭಾಗಗಳಲ್ಲೂ ಸಾಮಾನ್ಯ ಮತ್ತು ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ಹಾಸನದಲ್ಲಿ ಮಂಗಳವಾರ ರಾತ್ರಿಯಿಂದಲೇ ಹದವಾಗಿ ಮಳೆಯಾಗುತ್ತಿದೆ. ಜುಲೈ 3ರ ಬೆಳಿಗ್ಗೆಯ ವರದಿಯಂತೆ ಕಳೆದ 24 ಗಂಟೆಗಳಲ್ಲಿ ತಾಲ್ಲೂಕುಗಳಲ್ಲಿ ಸುರಿದ ಸರಾಸರಿ ಮಳೆಯ ವಿವರ ಇಂತಿದೆ.ಹೇಮಾವತಿ ಜಲಾಶಯದ ಒಳಹರಿವಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದ್ದು, ಬುಧವಾರ ಬೆಳಿಗ್ಗೆ 5 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದುಬಂದಿತ್ತು. ಮಳೆಯಿಂದ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.ಬೆಳಗಾವಿ ಜಿಲ್ಲೆ

ಬೆಳಗಾವಿ- ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅನಮೋಡ-ಮೋಲೇಂ ನಡುವಿನ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ಮಂಗಳವಾರ ರಾತ್ರಿ ಭೂಕುಸಿತ ಉಂಟಾಗಿತ್ತು.ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದ ವರೆಗೆ ಗೋವಾ-ಕರ್ನಾಟಕದ ನಡುವಿನ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬೆಳಗಾವಿಯಿಂದ ಖಾನಾಪುರ, ಲೋಂಡಾ, ರಾಮಗನರ, ಅನಮೋಡ ಮಾರ್ಗವಾಗಿ ಗೋವಾ ರಾಜ್ಯ ಸಂಪರ್ಕಿಸಲು ಅಡಚಣೆಯಾಗಿತ್ತು.ಭೂಕುಸಿತಗೊಂಡ ಸ್ಥಳದಿಂದ 12 ಕಿ.ಮೀ. ದೂರದ ಮೋಲೇಂ ವರೆಗೆ ಹಾಗೂ ರಾಜ್ಯದಿಂದ ಗೋವಾ ಕಡೆಗೆ ಸಾಗುತ್ತಿದ್ದ ವಾಹನಗಳು ಅನಮೋಡ ವರೆಗೆ ಸುಮಾರು 14 ಗಂಟೆಗಳ ಕಾಲ ಸಾಲುಗಟ್ಟಿ ನಿಂತಿದ್ದವು.ನಿಪ್ಪಾಣಿ ಸಮೀಪದ ಸಿದ್ನಾಳ ಗ್ರಾಮದಲ್ಲಿಯ ಹಳೆಯ ಕಿರು ಸೇತುವೆ ಬುಧವಾರ ವೇದಗಂಗಾ ನದಿಯ ಪ್ರವಾಹದ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ.ಹಾವೇರಿ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ತುಂಗಾ ಹಾಗೂ ಭದ್ರಾ ಅಣೆಕಟ್ಟೆಗಳಿಂದ ನೀರು ಬಿಟ್ಟಿರುವುದರಿಂದ ತುಂಗಭದ್ರಾ ನದಿಯ ನೀರಿನ ಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಹಾವೇರಿ ಜಿಲ್ಲೆಯಲ್ಲಿ ನದಿ ತೀರದ 42 ಗ್ರಾಮಗಳ ಜನರಿಗೆ ಮುನ್ನೆಚ್ಚರಿಕೆ  ನೀಡಲಾಗಿದೆ, ಗ್ರಾಮ ಲೆಕ್ಕಾಧಿಕಾರಿಗಳಿಗೆ ಗ್ರಾಮದಲ್ಲಿಯೇ ಮೊಕ್ಕಾಂ ಹೂಡಲು ಸೂಚಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.