ಮಂಗಳವಾರ, ಮೇ 18, 2021
24 °C

ಅಭಿನಂದನೆಯ ಮಹಾಪೂರ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಬಾರರಿಗೆ ಬಹಳ ಮೊದಲೇ ಜ್ಞಾನ ಪೀಠ ಬರಬೇಕಿತ್ತು. ತಡವಾಗಿಯಾದರೂ ದೊರೆ ತದ್ದು ಸಮಾಧಾನ ತಂದಿದೆ. ಆಧುನಿಕ ಪುರಾಣ ಗಳನ್ನು ಕಟ್ಟಿ ಕೊಟ್ಟವರು ಅವರು. ಸ್ಥಳೀಯವಾದದ್ದನ್ನು ವಿಶ್ವಾತ್ಮಕ ನೆಲೆಯಲ್ಲಿ ಹಿಡಿದಿಟ್ಟವರು. ಹಳ್ಳಿಯಿಂದ ಬಂದ ಕಂಬಾರನಿಗೆ ಪ್ರಶಸ್ತಿ ದೊರೆತದ್ದು ಖುಷಿ ಹೆಚ್ಚಿಸಿದೆ. ಭಾರತದ ಬಹಳ ಲೇಖಕರಲ್ಲಿ ಅವರು ಪ್ರಮುಖರು. ಪೂರ್ಣಚಂದ್ರ ತೇಜಸ್ವಿ, ಗೋಪಾಲಕೃಷ್ಣ ಅಡಿಗ, ಪು.ತಿ.ನ ಅವರಿಗೂ ಜ್ಞಾನಪೀಠ ದೊರೆತಿದ್ದರೆ ಕನ್ನಡ ಇನ್ನಷ್ಟು ಶ್ರೀಮಂತ ವಾಗಿರುತ್ತಿತ್ತು.

- ಯು.ಆರ್.ಅನಂತಮೂರ್ತಿ

ನನಗೆ ಜ್ಞಾನಪೀಠ ಸಿಕ್ಕಾಗ ನನ್ನ ತಲೆಮಾರಿನ ಬೇರೆಯ ಲೇಖಕರಿಗೆ ಪ್ರಶಸ್ತಿ ಸಲ್ಲಬೇಕಿತ್ತು ಎಂದು ಬಯಸಿದ್ದೆ. ಲಂಕೇಶ್, ತೇಜಸ್ವಿ ಅವರಿಗೆ ಜ್ಞಾನಪೀಠ ದೊರೆಯಲಿಲ್ಲ. ಕಂಬಾರರಿಗೆ ಪ್ರಶಸ್ತಿ ದೊರೆಯುವ ಮೂಲಕ ನನ್ನ ಭವಿಷ್ಯವಾಣಿ ನಿಜವಾಗಿದೆ. ಗೋಕಾಕ್, ಬೇಂದ್ರೆ, ಕಾರಂತರ ನಂತರ ನನ್ನ ತಲೆಮಾರಿನ ಲೇಖಕರು ಸಾಹಿತ್ಯದ ಒಂದು ಮೆಟ್ಟಿಲನ್ನು ಕಟ್ಟಿದರು. ಹೊಸ ಹಂತಕ್ಕೆ ಸಾಹಿತ್ಯ ಜಿಗಿ ಯಿತು. ಭಾಷೆಯ ದೃಷ್ಟಿಯಿಂದ ಕಂಬಾರರು ಮಹತ್ವದ ಕೊಡುಗೆ ನೀಡಿದ್ದಾರೆ.

 - ಗಿರೀಶ ಕಾರ್ನಾಡ, ನಾಟಕಕಾರ

`ಸೃಜನಶೀಲತೆ ಅವನ ಮುಖ್ಯ ಲಕ್ಷಣವಾಗಿತ್ತು. ಒಳ್ಳೆಯ ಪದ್ಯ ಬರೀತಿದ್ದ, ಛಲೋ ಹಾಡುತ್ತಿದ್ದ~ ಎಂದು  ಹಿರಿಯ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಕಂಬಾರ ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

 ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಕಂಬಾರ ಅವರಿಗೆ ಎಂ.ಎ. ಸಹಪಾಠಿಯಾಗಿದ್ದ ಅವರು, ~ತರಗತಿಗಳ ಬಗ್ಗೆ ಅವನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಗ್ರಂಥಾಲಯದಲ್ಲಿ ಕೂತು ಓದಿದವನಲ್ಲ. ಆದರೆ ಆಗಲೇ ಛಲೋ ಪದ್ಯ ಬರೆಯುವ ಮೂಲಕ ಪ್ರಸಿದ್ಧನಾಗಿದ್ದ ಎಂದು ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದನ್ನು ಸ್ವಾಗತಿಸಿದರು.

`ಧಾರವಾಡ ಬಿಟ್ಟು ಹೋಗಿದ್ದು ಕಂಬಾರ ಅವರಿಗೆ ದೊಡ್ಡ ದಾರಿಯಾಯಿತು~ ಎಂದು ಹಿರಿಯ ಕವಿ ಡಾ.ಚೆನ್ನವೀರ ಕಣವಿ ಪ್ರತಿಕ್ರಿಯಿಸಿದರು.~ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಓದಿದ ಚಂದ್ರಶೇಖರ ಕಂಬಾರ ಅವರಿಗೆ ಕರ್ನಾಟಕ ಕಾಲೇಜಿನಲ್ಲಿ ಉಪನ್ಯಾಸಕ ಕೆಲಸ ಸಿಗಲಿಲ್ಲ. ಹೆಚ್ಚಿನ ಸ್ಪರ್ಧೆ ಇತ್ತು. ಹೀಗಾಗಿ ಧಾರವಾಡ ಬಿಟ್ಟರು. ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಡಾ.ಜಿ.ಎಸ್. ಶಿವರುದ್ರಪ್ಪ ಕೆಲಸ ನೀಡಿದರು. ಅಲ್ಲಿ ಕಂಬಾರರು ತೀವ್ರಗತಿಯಲ್ಲಿ ಬೆಳೆದರು. ಆದರೆ ಧಾರವಾಡದ ನಂಟು ಬಿಡಲಿಲ್ಲ. ಕೀರ್ತಿನಾಥ ಕುರ್ತಕೋಟಿಯವರು, ಕಂಬಾರರನ್ನು ದೊಡ್ಡದಾಗಿ ಬೆಳೆಸಿದರು~ ಎಂದು ಅವರು ಮೆಚ್ಚುಗೆಯಿಂದ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.