ಮಂಗಳವಾರ, ಜೂನ್ 22, 2021
29 °C

ಅಭಿನವ ಗಾಂಧಿ

ಸಂತೆಕಸಲಗೆರೆ ಪ್ರಕಾಶ್ Updated:

ಅಕ್ಷರ ಗಾತ್ರ : | |

ಹಾಗೂ ಉಂಟು ಹೀಗೂ ಉಂಟು

ವಿಧಿಯೂ ಹೊಸೆದ ಹಗ್ಗದ ಕಗ್ಗಂಟು

–ದ.ರಾ.ಬೇಂದ್ರೆ

ಆಧುನಿಕ ಗಾಂಧಿ ಎಂದು ಕರೆಸಿಕೊಂಡ ಶ್ರೀನಿವಾಸ ಆಲಿಯಾಸ್ ಗುಂಡಪ್ಪ ಸತ್ತು ಹೋಗಿದ್ದನು. ಈತನ ನಿಗೂಢ ಸಾವಿನ ತನಿಖೆಗಾಗಿ, ಗಾಂಧಿ ಪ್ರತಿಮೆಗೆ ಅಪಮಾನ ಮಾಡಿದವರ ಬಂಧನಕ್ಕಾಗಿ ಗಾಂಧಿ ಅನುಯಾಯಿಗಳು ಗಾಂಧಿ ಪ್ರತಿಮೆ ಬಳಿ ಧರಣಿ ಕುಳಿತಿದ್ದರು.

***

ಆಧುನಿಕ ಗಾಂಧಿ ಆತ್ಮಕ್ಕೆ ಶಾಂತಿಕೋರಲು ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ನಾಡಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮುದ್ದುಹನುಮಯ್ಯ ಅವರು ಮಾಡಿದ ಭಾಷಣ ಎಂದಿನಂತೆ ಇರಲಿಲ್ಲ, ಅತ್ಯಂತ ಕನಿಕರದಿಂದ ಕೂಡಿತ್ತು. ಸಭಿಕರ ಹೃದಯವನ್ನು ಕಲಕುವಂತಿತ್ತು, ಆತ್ಮವಿಮರ್ಶೆಗೆ ಹಚ್ಚುವಂತಿತ್ತು. 

* * *

ಮುದ್ದು ಹನುಮಯ್ಯ ಅವರಿಗೆ ಈಗ ಸತ್ತು ಹೋದ ಆಧುನಿಕ ಗಾಂಧಿ ಎನಿಸಿಕೊಂಡ ಮಗ ಗುಂಡಪ್ಪನ ಗಾಂಧಿವೇಷದ ವಿಚಿತ್ರ ಚಿತ್ರದ ತುಣುಕು ಕಣ್ಣ ಮುಂದೆ ಹಾದು ಹೋದವು. ಅಸಲಿ ಗಾಂಧಿಗಿಂತ ಗುಂಡಪ್ಪನ ಗಾಂಧಿ ವೇಷಕ್ಕೆ ಮಾರುಹೋದ ಜನ, ಸಂಘಟಕರ ತೃಪ್ತಿಗಾಗಿಯಾದರೂ ಮಾತನಾಡದೆ ಹೋದರೆ ಸುಮ್ಮನೆ ಬಿಡಲಾರರು ಎಂದುಕೊಂಡರು. ಗಾಂಧಿ ಎಂದರೆ ಇಡೀ ಜಗತ್ತು ಪ್ರೀತಿಸುತ್ತದೆ. ಶಾಂತಿ –ಅಹಿಂಸಾ ಮಂತ್ರದ ಅವಶ್ಯಕತೆ ಹೆಚ್ಚಿದೆ. ಕೇವಲ ಗಾಂಧಿ ಪ್ರತಿಮೆ ಸ್ಥಾಪನೆಯಿಂದ ಪ್ರಯೋಜನವಿಲ್ಲ. ಅವರ ಆದರ್ಶ ಎಲ್ಲರಲ್ಲೂ ಒಡಮೂಡಬೇಕು. ಗಾಂಧಿ ಎಂದರೆ ವ್ಯಕ್ತಿ ಅಲ್ಲ, ಶಕ್ತಿ. ಈ ಶಕ್ತಿಯನ್ನು ಹೊಟ್ಟೆಪಾಡಿಗಾಗಿ ಆರಾಧಿಸುವವರು ಹೆಚ್ಚಾಗಿದ್ದಾರೆ. ಸರ್ವರ ಸಮಾನತೆಗಾಗಿ ಸ್ವಾತಂತ್ರ್ಯದ ಕನಸು ಕಂಡವನು. ಹಸಿವನ್ನು ನೀಗಿಸಿಕೊಳ್ಳಲು ಹೇಯ ಕೈತ್ಯಕ್ಕೆ ಕೈ ಹಾಕಬಾರದು. ಸ್ವಾಭಿಮಾನದ ದುಡಿಮೆ ಮುಖ್ಯ ಎಂಬುದನ್ನು ಭಾಷಣದ ಉದ್ದಕ್ಕೂ ಗಾಂಧಿ ಹೇಳಿದ ಕೆಲವು ತುಣಕುಗಳನ್ನು ಉದಾಹರಿಸುತ್ತಿದ್ದರು. 

* * *

ಗಾಂಧಿ ಜೀವನ ಚರಿತ್ರೆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಇಂಥ ಸಂದರ್ಭದಲ್ಲಿ ಗಾಂಧಿ ತನ್ನ ಮಗ ಹರಿಲಾಲನ ವರ್ತನೆ ನಿಯಂತ್ರಣಕ್ಕೆ ಯಾವ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಿತ್ತು ಎಂಬುದನ್ನು ಗಾಂಧಿ ಮತ್ತು ಮಗ ಹರಿಲಾಲನ ಜೀವನವನ್ನು ಓದತೊಡಗಿದರು. ಆದರೆ ಯಾವುದೇ ಪರಿಹಾರ ಸಿಗಲಿಲ್ಲ. ಮಗ ಗುಂಡಪ್ಪನೂ ‘ನೀನೂ ನಾಡಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರನಾಗಿ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಒಂದು ಮಾತು ಹೇಳು ಸಾಕು’ ಎಂದು ತನಗೆ ಬೇಕಾದ ಸರ್ಕಾರಿ ಕೆಲಸದ ಬಗ್ಗೆ ದುಂಬಾಲು ಬಿದ್ದಿದ್ದನು. ಗುಂಡಪ್ಪನ ಮಾತನ್ನು ನಿರಾಕರಿಸಿದ್ದ ಮುದ್ದುಹನುಮಯ್ಯ ಅವರ ಮೇಲೆ ಬೇಸರಗೊಂಡ ಗುಂಡಪ್ಪ ‘ನನಗೆ ನನ್ನ ಅಪ್ಪ ಸಹಾಯ ಮಾಡುವುದಿಲ್ಲ’ ಎಂದು ತಮ್ಮ ತಾಯಿ ಶಾಂತಮ್ಮ ಅವರೊಂದಿಗೆ ಹೇಳಿಕೊಂಡಿದ್ದನು. ಹಾಗೆ ಹೇಳಿಕೊಳ್ಳುವಾಗ ಮಧ್ಯ ಪ್ರವೇಶಿಸಿದ ಮುದ್ದುಹನುಮಯ್ಯ ಅವರಿಗೆ ‘ನನಗೆ ನೀನು ಅಪ್ಪನೇ ಅಲ್ಲ’ ಎಂದು ಮುಖಮುರಿದಂತೆ ಹೇಳಿದ್ದನ್ನು ಜ್ಞಾಪಿಸಿಕೊಂಡರು. ಇದೇ ಮಾತಿಗೆ ಗುಂಡಪ್ಪನೊಂದಿಗೆ ಮಾತು ಬಿಟ್ಟು ಎಷ್ಟೋ ವರ್ಷ ಕಳೆದುಹೋಗಿದ್ದವು. ಗುಂಡಪ್ಪ ಕುಡಿದು ನಡುಬೀದಿಯಲ್ಲಿ ಬೈಯುವುದನ್ನು ತಾಳಲಾರದ ಅಕ್ಕಪಕ್ಕದ ಜನ ಜಜ್ಜಿದ್ದರು. ನೋವು ತಾಳಲಾಗದೆ ಬೊಬ್ಬೆ ಹಾಕಿದ್ದನು.ಮುದ್ದುಹನುಮಯ್ಯ ಅವರು ಗುಂಡಪ್ಪನ ಹೆಂಡತಿ ಸುಬ್ಬಮ್ಮಳೊಂದಿಗೆ ‘ಗುಂಡಪ್ಪ ಪೋಕರಿ ಬಿದ್ದು ಹೋಗಿದ್ದಾನೆ. ಗುಂಡಪ್ಪನ ಭವಿಷ್ಯಕ್ಕಿಂತ ಅವನ ಮಕ್ಕಳ ಭವಿಷ್ಯದ ಕಡೆಗೆ ಗಮನ ಕೊಡುವುದು ಒಳಿತು’ ಎಂದು ಹೇಳಿದ್ದರು.

* * *

ಅಂದು ರಾತ್ರಿ ಹತ್ತೋ ಹನ್ನೊಂದಕ್ಕೋ ಮನೆಗೆ ಬಂದ ಗುಂಡಣ್ಣನಿಗೆ ಹೆಂಡತಿ ಸುಬ್ಬಮ್ಮ ಹೊಟ್ಟೆ ತುಂಬ ಉಣಬಡಿಸಿದಳು. ಹೊಟ್ಟೆ ತುಂಬ ತಿಂದು ತೇಗಿದ ಗುಂಡಪ್ಪನಿಗೆ ನೀವು ಹೀಗೆ ಉಂಡಾಡಿ ಗುಂಡನಂತಿದ್ದರೆ ಹೇಗೆ ಎಂದು ಪ್ರಶ್ನಿಸಿದಳು. ಹೆಂಡತಿ ಮಾತಿಗೆ ಸಿಟ್ಟಿಗೆದ್ದ ಗುಂಡಪ್ಪ  ಅಪ್ಪನನ್ನು ಗುರಿಯಾಗಿಸಿಕೊಂಡು, ‘ಹುಟ್ಟಿಸಿದ ಮಕ್ಕಳಿಗೆ ಸರಿದಾರಿ ತೋರಿಸಬೇಕಿತ್ತು’ ಎಂದು ಕಿಡಿಕಾರಿದನು. 

ಸುಬ್ಬಮ್ಮ ಇಡೀ ರಾತ್ರಿ ಮಗ್ಗುಲಲ್ಲಿ ಮಲಗಿ ಅತ್ತುಕರೆದಿದ್ದರೂ ಗುಂಡಪ್ಪನ ಹೃದಯ ಕರಗಲಿಲ್ಲ. ಬೆಳಗಾಗುವ ಮುನ್ನವೇ ಯಾರಿಗೂ ಮುಖ ತೋರಿಸದೆ ಮನೆಯಿಂದ ಹೊರಟುಬಿಟ್ಟನು.ಗುಂಡಪ್ಪ ಅಪ್ಪನ ಹೆಸರೇಳಿಕೊಂಡು ಅವರ ಸ್ನೇಹಿತರ ಮನೆಗೆ ಹೋಗಿ ಜಾಂಡಾ ಹೊಡೆದು ಬಿಡುತ್ತಿದ್ದನು. ರಾತ್ರಿ ವೇಳೆ ಲಗ್ಗೆ ಹಾಕುವ ಗುಂಡಪ್ಪನಿಗೆ ಅಯ್ಯೋ ಪಾಪ ಎಂದು ಆಶ್ರಯಕೊಟ್ಟರೆ, ಒಂದು ವಾರವಾದರೂ ಕದಲುತ್ತಿರಲಿಲ್ಲ. ಗುಂಡಪ್ಪನನ್ನು ಹೊರಗೆ ಕಳುಹಿಸಲು ಮನೆಯವರೆಲ್ಲ ಸೇರಿ ‘ಹೆಂಗಸರಿಗೆ ಮೈಗೆ ಹುಷಾರಿಲ್ಲ, ನಾವೆಲ್ಲ ಊರಿಗೆ ಹೋಗುತ್ತಿದ್ದೇವೆ’ ಎಂದು ಸಬೂಬು ಹೇಳಿ ಹೊರಹಾಕಬೇಕಾಗಿತ್ತು. ಗುಂಡಪ್ಪನ ಭಂಡತನ ಸಹಿಸಲಾರದೆ ಬಾಗಿಲು ಮುಚ್ಚಿದವರೂ ಇದ್ದರು.                 

* * *

ಸಭೆ-ಸಮಾರಂಭಗಳಿಗೆ ಭಾಷಣ ಮಾಡಲುಹೋಗುತ್ತಿದ್ದ ಮುದ್ದುಹನುಮಯ್ಯ ಅವರ ಭಾಷಣದ ನಡುವೆ ವಿರೋಧ ವ್ಯಕ್ತಪಡಿಸುತ್ತಿದ್ದನು. ಸಭೆಯ ನಡುವೆ ಎದ್ದುನಿಲ್ಲುವ ಗುಂಡಪ್ಪ ‘ನಿಮ್ಮ ಗಾಂಧಿ ಕಾಲದ ಭಾಷಣ ಈ ಹೊತ್ತಿಗೆ ಬೇಕಾಗಿಲ್ಲ. ಅದು ಚಲಾವಣೆಗಿಲ್ಲದ ನಾಣ್ಯ. ಆಧುನಿಕ ಮನಸ್ಥಿತಿಯ ಯುವಕರಿಗೆ ದೇಶಕಟ್ಟುವುದಕ್ಕಿಂತ ಹೊಟ್ಟೆಕಟ್ಟಿಕೊಳ್ಳುವುದು ಮುಖ್ಯ. ದೇಹದಲ್ಲಿ ಶಕ್ತಿ ಇದೆ. ಕೆಲಸ ಇಲ್ಲ, ನಿರುದ್ಯೋಗದಿಂದ ಯುವಕರ ಉತ್ಸಾಹ ಕುಗ್ಗಿದೆ. ಸ್ವಾತಂತ್ರ್ಯ ಬಂದಿದ್ದೇ ತಪ್ಪಾಯಿತು. ಬ್ರಿಟಿಷರೆ ಇದ್ದಿದ್ದರೆ ಒಳ್ಳೆಯದಿತ್ತು. ನಾವು ಈಗ ಸ್ವಾತಂತ್ರ್ಯ ಪಡೆದು ಏನು ಮಾಡಿಕೊಂಡಿದ್ದೇವೆ. ರಾಜಕಾರಣಿಗಳ ಹುಲಿವೇಷಕ್ಕೆ ಬಲಿ ಆಗಿದ್ದೇವೆ. ಹೊಟ್ಟೆ ತುಂಬಿಸುವ ಮಾತಿದ್ದರೆ ಹೇಳಿ ಇಲ್ಲದಿದ್ದರೆ ಜಾಗ ಖಾಲಿ ಮಾಡಿ’ ಎಂದು ಬಹಿರಂಗವಾಗಿ ಸವಾಲುಹಾಕುತ್ತಿದ್ದನು.ಕಾರ್ಯಕ್ರಮ ಆಯೋಜಕರು ಗುಂಡಪ್ಪನನ್ನು ಹಿಡಿದು ತದುಕಬೇಕೆಂದುಕೊಂಡರು. ಹಲ್ಲು ಹಲ್ಲು ಮಸೆದು ತಮ್ಮ ತೋಳಿಗೆ ಬಂದಿದ್ದ ಸಿಟ್ಟನ್ನು ತಡೆದು ಮುದ್ದುಹನುಮಯ್ಯ ಅವರ ಮುಖ ನೋಡಿ ಎಲ್ಲರೂ ನಕ್ಕು ಸುಮ್ಮನಾದರು.   

* * *

ಮುದ್ದುಹನುಮಯ್ಯ ಅವರು ಗಾಂಧಿ ಯಾವ ಹೆಜ್ಜೆಯಲ್ಲಿ ನಡೆದರೋ ಆ ದಾರಿಯಿಂದ ನನ್ನ ಪ್ರಾಣ ಹೋದರೂ ಸರಿ ಹಿಂದೆ ಸರಿಯುವುದಿಲ್ಲ ಎಂದು ಹಟ ಮಾಡಿದ್ದರು. ದಿಢೀರ್ ಶ್ರೀಮಂತಿಕೆ ಬಯಸುವ ಗುಂಡಪ್ಪನಿಗೆ ಎಷ್ಟು ಹಣ ಸಂಪಾದನೆ ಮಾಡಬೇಕಿತ್ತು. ಯಾ ಬಂಗಲೆ ಕಟ್ಟಿಸಿ, ಆಳುಕಾಳು, ಕಾರು ಇಡಬೇಕಿತ್ತು. ಒಂದುದಿನ ಇದೇ ವಿಚಾರಕ್ಕಾಗಿ ‘ನೀನು ಸ್ವಾತಂತ್ರ್ಯ ಹೋರಾಟಗಾರರ ವೇತನವನ್ನು ಯಾವ ಕಾರಣಕ್ಕಾಗಿ ಬೇಡ ಎಂದು ಹಿಂತಿರುಗಿಸಿಬಿಟ್ಟೆ, ಆ ಹಣದಿಂದ ಸರ್ಕಾರಕ್ಕೆ ಭಾರಿ ಲಾಭವಾಯಿತೋ, ನಷ್ಟವಾಯಿತೋ, ಆ ಹಣದಿಂದ ನಮ್ಮ ಜೀವನ ನಡೆದುಬಿಡುತ್ತಿತ್ತು. ನಿನ್ನ ಹಾಗೆ ಗಾಂಧಿ ಫೋಟೋ ಹಾಕಿಕೊಂಡು ಕೋಟ್ಯಂತರ ಸಂಪಾದನೆ ಮಾಡಿ ಬಂಗಲೆಯಲ್ಲಿ ರಾಜರಂತಿದ್ದಾರೆ. ನಿನ್ನ ಗಾಂಧಿ ತತ್ವಕ್ಕೆ ಅಷ್ಟು ಬೆಂಕಿ ಹಾಕಿತು. ನಮ್ಮನ್ನೂ ಉದ್ಧಾರ ಮಾಡಲಿಲ್ಲ, ತಾನೂ ಉದ್ಧಾರ ಆಗಲಿಲ್ಲ. ನೀನೇನು ಗಾಂಧಿ ತುಂಡೋ’ ಎಂದು ಜರಿದಿದ್ದ.

* * *

ಗುಂಡಪ್ಪ ಮಸೀದಿಯಲ್ಲೋ,  ಕ್ರಿಶ್ಚಿಯನ್ನರ ಚರ್ಚಿನಲ್ಲೋ ಆಯಾಯ ಧರ್ಮಕ್ಕನುಗುಣವಾಗಿ ಇದ್ದು ಬಿಡುತ್ತಿದ್ದನು. ದಿಢೀರ್ ಮನೆಗೆ ಬರುವ ಗುಂಡಪ್ಪನನ್ನು ಹೋದ ಮಗ ಬಂದನಲ್ಲ ಎನ್ನುವ ತಾಯಿ ಶಾಂತಮ್ಮನ ಹಾರೈಕೆ, ಹೆಂಡತಿ ಸುಬ್ಬಮ್ಮನ ಕಣ್ಣೀರು ಮತ್ತಷ್ಟು ಪುಷ್ಟಿ ನೀಡುತ್ತಿದ್ದವು. ಇದೆಲ್ಲ ನಾಟಕೀಯ ತಿರುವನ್ನು ಕಂಡ ಮುದ್ದುಹನುಮಯ್ಯ ಅವರು ಮಗ ಇಷ್ಟು ದಿವಸ ಎಲ್ಲಿದ್ದನು, ಹೇಗಿದ್ದನೂ ಎಂಬುದನ್ನು ಸ್ನೇಹಿತರ ಮುಖೇನ ತಿಳಿದುಕೊಳ್ಳುತ್ತಿದ್ದರಿಂದ ಕೇಳುವ ಗೋಜಿಗೆ ಹೋಗುತ್ತಿರಲಿಲ್ಲ.

* * *

ಮನೆಗೆ ಬಂದ ವಾರದಲ್ಲಿ ಗುಂಡಪ್ಪನಲ್ಲಿ ಏನೋ ಬದಲಾವಣೆ ಕಂಡಂತಾಯಿತು. ಸದ್ಯ ಮಗ ಬದಲಾದನಲ್ಲ ಅನ್ನುವುದಕ್ಕಿಂತ ದಿಢೀರ್ ಗಾಂಧಿ ತತ್ವದ ಬೋಧನೆ ಮಾಡುತ್ತಿರುವ ರೀತಿ ನೋಡಿ ಮುಂದೆ ಯಾವ ದುರ್ಗತಿ  ಕಾದಿದೆಯೋ ಎಂಬಂತೆ ಮುದ್ದುಹನುಮಯ್ಯ ಚಿಂತಿತರಾದರು.

* * *

ಮುದ್ದುಹನುಮಯ್ಯ ಅವರು ತಾನು ಕುಳಿತಲ್ಲಿಯೇ ಕಿಟಕಿಯಿಂದ ನೋಡಿದರು. ಹಿತ್ತಲಲ್ಲಿ ಗುಂಡಪ್ಪ ಗಾಂಧಿವೇಷ ತೊಟ್ಟಿದ್ದನ್ನು ಕಂಡು ಅವನ ಗೆಳೆಯರು ಕೇಕೆ ಹಾಕಿ ನಗುತ್ತಿದ್ದರು. ಮೈ ತುಂಬ ಸಿಲ್ವರ್ ಬಣ್ಣ, ಹಳೆ ಕನ್ನಡಕ, ಹಳೆ ಧೋತ್ರ, ಚರ್ಮದ ಎಕ್ಕಡ, ಒಂದು ಹಳೆವಾಚನ್ನು ಧರಿಸಿದ್ದನು. ತಲೆಯಲ್ಲೂ ಒಂದು ಪುಳ್ ಜುಟ್ಟು ಕೂಡ ಏರಿಯಲ್‌ನಂತೆ  ಬಿಟ್ಟಿದ್ದನು.ಗೆಳೆಯರು ಥೇಟ್ ಗಾಂಧಿಯೇ ಎಂದು ಅಚ್ಚರಿಪಟ್ಟಿದ್ದರು. ಗೆಳೆಯರ ಬಹುವರ್ಣನೆಯಿಂದ ತೃಪ್ತನಾದ ಗುಂಡಪ್ಪ ಒಣಗುತ್ತಿದ್ದ ಗಂಟಲನ್ನು ಸರಿಮಾಡಿಕೊಂಡು ‘ಹೊಟ್ಟೆಯೊಳಗಿನ ಒಂದು ಜಂತುಹುಳು ಸತ್ತರೂ ಕೂಡ ಗಾಂಧಿ ಅಹಿಂಸಾವಾದಕ್ಕೆ ಮಸಿ ಬಳಿದಂತೆ, ದೇಶದಲ್ಲಿ ಹಸಿವಿನಿಂದ ಸಾಯುವವರು ಲಕ್ಷಾಂತರ ಮಂದಿ ಇದ್ದಾರೆ, ಪ್ರತಿ ವ್ಯಕ್ತಿಗೂ ಉದ್ಯೋಗ, ಹಣ, ಅಂತಸ್ತು ಮುಖ್ಯ. ಹಸಿವು ಹೆಚ್ಚಾಗಿ ಹಿಂಸಾವಾದ ಹುಟ್ಟಿಕೊಳ್ಳುತ್ತದೆ. ನಾನು ಗಾಂಧಿಯಂತೆ ವೇಷ ತೊಟ್ಟಿದ್ದೇನೆ, ಏಕೆಂದರೆ ನನ್ನ ಹೊಟ್ಟೆಯ ಹಸಿವು ಎಲ್ಲರಿಗೂ ಗೊತ್ತಾಗಬೇಕು. ಅಪ್ಪ ಗಾಂಧಿವಾದಿಯಾಗಿ ಮಾಡಿದ ಮೋಸ ಎಲ್ಲರಿಗೂ ಗೊತ್ತಾಗಬೇಕು. ನಿಮ್ಮ ಮಗ ಗಾಂಧಿ ವೇಷ ತೊಟ್ಟು ನಿಂತಿದ್ದಾನೆ ಎಂದು ಎಲ್ಲರೂ ಹೇಳುವಂತಾಗಬೇಕು’ ಎಂದು ಸುದೀರ್ಘ ಭಾಷಣ ಮಾಡಿದ. ಪ್ರತಿಮೆ ಹಾಗೆ ನಿಂತ ಗುಂಡಪ್ಪನ ಕಣ್ಣಿನಲ್ಲಿ ಕೆಂಡದ ಮಳೆ ಸುರಿದಂತಿತ್ತು. ಅಪ್ಪನ ವಿರುದ್ಧ ಆಕ್ರೋಶದಿಂದ ಭಾಷಣ ಮಾಡಿದ್ದರಿಂದ ಅವನ ಅರೆಬೆತ್ತಲೆ ಮೈ ಕಂಪಿಸುತ್ತಿತ್ತು. ಹುಡುಗರು ಭಾಷಣ ಮುಗಿದ ತಕ್ಷಣ ಕೈಚಪ್ಪಾಳೆ ತಟ್ಟಿದರು.

* * *

ಮುದ್ದು ಹನುಮಯ್ಯ ಅವರು ಇದೆಲ್ಲವನ್ನು ಕಿಟಕಿಯಿಂದಲೇ ನೋಡಿದರು; ಹೆಂಡತಿ ಶಾಂತಮ್ಮ, ಸೊಸೆ ಸುಬ್ಬಮ್ಮನನ್ನು ಕರೆದು ತೋರಿಸಿದರು. ಮಗನ ಗಾಂಧಿವೇಷವನ್ನು ಕಂಡ ಶಾಂತಮ್ಮ ಅವರು ಭಾವಾವೇಷಕ್ಕೆ ಒಳಗಾದರು. ‘ಹೌದುರೀ, ಸ್ವಾತಂತ್ರ್ಯ ಸಂಗ್ರಾಮದ ಮೊದಲ ದಿನ ನಾನು ನಿಮ್ಮೊಂದಿಗೆ ಗಾಂಧಿ ನೋಡಿದೆನಲ್ಲ. ಹಾಗೆ ಮತ್ತೆ ಗಾಂಧಿ ಮನೆಯೊಳಗೆ ಬಂದಂತೆ ಸಂತೋಷವಾಗುತ್ತಿದೆ. ಮಗನಿಗೆ ಗಾಂಧಿ ವೇಷ ಚೆನ್ನಾಗಿ ಒಪ್ಪುತ್ತದೆ. ಜನ ಹೇಳುವ ಹಾಗೆ ನಿಮ್ಮ ಗಾಂಧಿವಾದವನ್ನು ಮಗನೂ ಪಾಲಿಸುತ್ತಿದ್ದಾನಲ್ಲ, ಮತ್ಯಾಕೆ ಅವನ ವಿರುದ್ಧ ಇಷ್ಟೊಂದು ಸಿಟ್ಟು’ ಎಂದು ಕಣ್ಣಿನಲ್ಲಿ ಮಗನ ಗಾಂಧಿವೇಷ ತುಂಬಿಕೊಂಡರು.ಸೊಸೆ ಸುಬ್ಬಮ್ಮ ಕಣ್ಣೀರು ಕರೆದಿದ್ದನ್ನು ಕಂಡ ಮುದ್ದುಹನುಮಯ್ಯ ಅವರಿಗೆ ಹೇಗೆ ಸಮಾಧಾನ ಮಾಡಬೇಕೆಂದು ತಿಳಿಯಲಿಲ್ಲ. ಮೊಮ್ಮಕ್ಕಳು ಅಪ್ಪನ ಗಾಂಧಿವೇಷ ಕಂಡು ಕೇಕೆ ಹಾಕಿ ಮೈಮರೆತಿದ್ದವು.

* * *

ಎಲ್ಲಾ ನೋವನ್ನು ಮರೆತ ಮುದ್ದುಹನುಮಯ್ಯ ಅವರು ಶಾಲೆಯೊಂದರ ವಾರ್ಷಿಕ ಸಮಾರಂಭಕ್ಕೆ ಹೊರಟರು. ಶಾಲೆ ಅಂಗಳದಲ್ಲಿ ಗಾಂಧಿ ವೇಷಧಾರಿಯನ್ನು ಕಂಡ ಮಕ್ಕಳು ಸುತ್ತುವರಿದಿದ್ದರು. ಶಾಲಾ ಮುಖ್ಯೋಪಧ್ಯಾಯರು ಗಾಂಧಿ ಪ್ರತಿಮೆ ಬಳಿ ಮುದ್ದುಹನುಮಯ್ಯ ಅವರನ್ನು ಕರೆ ತಂದರು. ಪ್ರತಿಮೆ ಹಾಗೆ ನಿಂತ ವ್ಯಕ್ತಿಗೆ ಮುದ್ದುಹನುಮಯ್ಯ ಅವರ ಕೈಯಲ್ಲಿ ಹೂವಿನ ಹಾರಹಾಕುವಂತೆ ಒತ್ತಾಯ ಮಾಡಿದರು. ಮುದ್ದುಹನುಮಯ್ಯ ಗಾಂಧಿ ವೇಷಧಾರಿಯನ್ನೊಮ್ಮೆ ನೋಡಿದರು, ಪ್ರತಿಮೆಯೂ ಕೂಡ ಮುದ್ದುಹನುಮಯ್ಯ ಅವರನ್ನು ನೋಡಿತು. ಗುಂಡಪ್ಪನ ವೇಷಕ್ಕೆ ಛೀಮಾರಿ ಹಾಕಬೇಕೋ, ಬೇಡವೋ ಎಂದು ಒಂದು ಗಳಿಗೆ ಯೋಚಿಸಿದರು.ಇದೇ ಸಂದರ್ಭಕ್ಕೆ ಪ್ರತಿಮೆ ಹಾಗೆ ನಿಂತ ಗುಂಡಪ್ಪನೂ ಅಪ್ಪನ ಕೈಯಲ್ಲಿ ಹೂವಿನ ಹಾರ ಹಾಕಿಸಿಕೊಳ್ಳುವುದಕ್ಕಿಂತ ಪ್ರತಿಭಟಿಸುವುದು ಒಳಿತು ಎಂದುಕೊಂಡನು. ಆದರೆ ಪ್ರತಿಮೆ ಹಾಗೆ ನಿಂತಾಗಿದೆ. ಏನೇ ಆದರೂ ಪ್ರತಿಮೆ ಹಾಗೆ ನಿಲ್ಲಲೇಬೇಕು. ಒಂದಿಷ್ಟು ಕದಲಿದರೂ ನೋಡುಗರಿಗೆ ರಸಭಂಗವಾಗಿ ನಿರಾಶೆ ಕಾಡುತ್ತದೆ. ಮುಂದೆ ಎಲ್ಲಾದರೂ ಗಾಂಧಿಪ್ರತಿಮೆ ಹಾಗೆ ನಿಂತರೂ ಗೇಲಿ ಮಾಡುವ ಸಾಧ್ಯತೆ ಇದೆ. ನಾನು ಈಗ ಪ್ರತಿಮೆ, ನಾನು ಈಗ ಪ್ರತಿಮೆ ಎಂದು ಅಪ್ಪನ ಮೇಲಿನ ಆಕ್ರೋಶವನ್ನು ತಡೆದುಕೊಂಡು ಪ್ರತಿಮೆ ಹಾಗೆ ನಿಂತನು. ತಕ್ಷಣ ಎಚ್ಚೆತ್ತುಕೊಂಡ ಮುದ್ದುಹನುಮಯ್ಯ ಅವರು ಯಾವ ಪ್ರತಿಕ್ರಿಯೆಯನ್ನು ನೀಡದೆ ಗಾಂಧಿ ಪ್ರತಿಮೆಗೆ ಹೂವಿನ ಹಾರ ಹಾಕಿ ವೇದಿಕೆಯತ್ತ ನಡೆದರು.

* * *

ಗಾಂಧಿ ವೇಷಧಾರಿ ಗುಂಡಪ್ಪ ಶಾಲಾ- ಕಾಲೇಜಿನ ಆವರಣ, ಉದ್ಯಾನವನ, ವಸ್ತು ಪ್ರದರ್ಶನ, ಜಿಲ್ಲಾಧಿಕಾರಿಗಳ ಕಚೇರಿ, ವಿವಿಧ ಸರ್ಕಾರಿ ಕಚೇರಿಗಳ ಮುಂಭಾಗ, ಮುಂತಾದೆಡೆಗಳಲ್ಲಿ ಪ್ರತಿಮೆಯಂತೆ ನಿಲ್ಲುತ್ತಿದ್ದನು. ಜನ ಗಾಂಧಿವೇಷಧಾರಿ ಮುಂದೆ ಹಾಸಿರುವ ಬಿಳಿ ಬಟ್ಟೆ ಮೇಲೆ ಚಿಲ್ಲರೆ ಹಣವನ್ನು ಎಸೆದು ಹೋಗುತ್ತಿದ್ದರು. ಕೆಲವರು ಈ ಗಾಂಧಿ ಬಳಿ ನಿಂತು ಫೊೋಟೊ ತೆಗೆಸಿಕೊಂಡು, ಅಸಲಿ ಗಾಂಧಿ ಜತೆಯಲ್ಲಿ ಫೊೋಟೊ ತೆಗೆಸಿಕೊಂಡಷ್ಟು ಸಂತೋಷಪಟ್ಟಿದ್ದರು.ರಾಜಕಾರಣಿಗಳು, ವಿವಿಧ ಸಂಘಟನೆಗಳು ನಡೆಸುವ ಪ್ರತಿಭಟನೆ, ಸತ್ಯಾಗ್ರಹ, ಧರಣಿ ಸಂದರ್ಭದಲ್ಲಿ ಗಾಂಧಿವೇಷಧಾರಿಯನ್ನು ಹಣ ಕೊಟ್ಟು ಕರೆಸುತ್ತಿದ್ದರು. ಪ್ರತಿಭಟನೆಗಳಿಗೆ ಮುಂಗಡವಾಗಿ ಹಣ ಪಡೆದು ಗಾಂಧಿವೇಷ ತೊಟ್ಟು ಗುಂಡಪ್ಪ ಮುಂಚೂಣಿಯಲ್ಲಿ ನಿಲ್ಲುತ್ತಿದ್ದನು. ಪ್ರತಿಭಟನೆ ಉದ್ದಕ್ಕೂ ಡೊಳ್ಳು–ನಗಾರಿ ಸದ್ದು ಎದೆನಡುಗಿಸುವಂತಿದ್ದರೂ ಪ್ರತಿಭಟನಾಕಾರರು ಗಾಂಧಿ ವೇಷಧಾರಿ ಮುಂದೆ ಬಿಸಿಲು ಎನ್ನದೆ ಕುಣಿದು ಕುಪ್ಪಳಿಸುತ್ತಿದ್ದರು. ಗಾಂಧಿ ಕೀ ಜೈ ಎಂದು ಜೈಕಾರ ಹಾಕುತ್ತಿದ್ದರು. ಪ್ರತಿಭಟನೆ ಮುಗಿದ ನಂತರ ರಾಜಕಾರಣಿಗಳ, ವಿವಿಧ ಸಂಘಟನೆ ಮುಖಂಡರ ಮನೆ ಮುಂದೆ ನಿಲ್ಲುತ್ತಿದ್ದನು. ಹಣಕ್ಕಾಗಿ ಬೇಡುತ್ತಿದ್ದನು. ಕೆಲವರು ಬಿಡಿಗಾಸನ್ನು ಕೊಡದೆ ಹೊರ ಹಾಕಿದ್ದು ಉಂಟು.

* * *

ಬಿಸಿಲು, ಮಳೆ ಎನ್ನದೆ ಎಲ್ಲೆಂದರಲ್ಲಿ ಗಂಟೆಗಟ್ಟಲೆ ನಿಲ್ಲುವ ಗಾಂಧಿವೇಷಧಾರಿ ಗುಂಡಪ್ಪನಿಗೆ ಆಗಾಗ ಮೈಕೈ ನೋವು, ಜ್ವರ ಕಾಣಿಸಿಕೊಳ್ಳುತ್ತಿತ್ತು. ಡಾಕ್ಟರ್ ಬಳಿ ಹೋಗುವುದಕ್ಕಿಂತ ತಾನೇ ಕಂಡುಕೊಂಡ ಔಷಧಿ, ಸರ್ವರೋಗಕ್ಕೂ ಸಾರಾಯಿ ಮದ್ದು ಎಂಬ ನೀತಿಯನ್ನು ಪಾಲಿಸುತ್ತಿದ್ದನು. ಬೆಳಿಗ್ಗೆಯಿಂದ ಸಂಜೆವರೆಗೂ ಸೊಳ್ಳೆ, ನೊಣ ಮೈ ಮೇಲೆ ಕುಂತರೂ ಕೆರೆದುಕೊಳ್ಳಲಾಗದೆ ತದೇಕಸ್ಥಿತಿಯಲ್ಲಿ ನಿಂತು ಕೈ-ಕಾಲು ಸೆಟೆದುಕೊಂಡಿದ್ದಕ್ಕೆ ಒಂದು ಕ್ವಾರ್ಟರ್ ಎಣ್ಣೆ ಹಾಕಿದರೆ ಸರಿ ಹೋಗುತ್ತದೆಂದು ಪ್ರತಿದಿನವೂ ತನ್ನ ಸ್ನೇಹಿತರೊಡನೆ ಗಡಂಗಿಗೆ ಹೋಗುತ್ತಿದ್ದನು. 

ಕಂಠಪೂರ್ತಿ ಕುಡಿದು ಗಾಂಧಿ ಮತ್ತು ತನ್ನ ವೇಷ, ಅಪ್ಪನ ಹಟಮಾರಿತನ ಕುರಿತು ಇಡೀ ರಾತ್ರಿ ತನ್ನ ಸಿಟ್ಟನ್ನು ತೀರಿಸಿಕೊಳ್ಳುವಷ್ಟು ನಿಂದಿಸುತ್ತಿದ್ದನು. ತನ್ನ ವೇಷಕ್ಕೆ ಮಾರು ಹೋಗಿ, ‘ಆಧುನಿಕ ಗಾಂಧಿ’ ಎಂದು ಬಿರುದುಕೊಟ್ಟವರ ಮೂರ್ಖತನವನ್ನು  ಜರಿದನು.ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ, ಎಲ್ಲೆಂದರಲ್ಲಿ ಬಿದ್ದುಕೊಳ್ಳಲು ಅವಕಾಶ ನೀಡಿದ ಗಾಂಧಿಗೆ ಧನ್ಯವಾದಗಳು ಎಂದು ಗೊಣಗುತ್ತಾ, ರಸ್ತೆ ಬದಿಯಲ್ಲಿ ನಿಂತ ವೇಶ್ಯೆಯರನ್ನು ಕೆಣಕಿದ. ಅವರಲ್ಲಿ ಕೆಲವರು ಸಿಟ್ಟಿಗೆದ್ದು ನಗರದ ಪ್ರಮುಖ ವೃತ್ತದ ಬಳಿ ಇರುವ ಉದ್ಯಾನವನದ ಬಳಿ ನಿಂತರು. ಅಲ್ಲಿ ಪ್ರತಿಷ್ಠಾಪಿಸಿರುವ ಗಾಂಧಿ ಪ್ರತಿಮೆ ಬಳಿ ಕುಳಿತರು. ಗಾಂಧಿ ಮತ್ತು ಗಾಂಧಿವಾದಿ ಮುದ್ದುಹನುಮಯ್ಯ ಅವರನ್ನು ನಿಂದಿಸಿದರು. ಗಾಂಧಿ ಪ್ರತಿಮೆ ಕನ್ನಡಕ ಕಿತ್ತರು.

* * *

ಉದ್ಯಾನವನದಲ್ಲಿ ಗಾಂಧಿ ಪ್ರತಿಮೆ ಛಾವಣಿಯನ್ನೇ ಆಶ್ರಯವನ್ನಾಗಿ ಮಾಡಿಕೊಂಡಿದ್ದ ಕೂಲಿ ಕಾರ್ಮಿಕರು, ನಿಶ್ಶಕ್ತರು, ವೃದ್ಧರು, ಕುರುಡರು, ಕೈಕಾಲು ಕಳೆದುಕೊಂಡವರು, ಗದ್ದಲ, ಟೀಕೆ, ಆಕ್ರೋಶದ ಕೂಗಿಗೆ ಎಚ್ಚೆತ್ತುಕೊಂಡು ನೋಡಿದರು. ಗಾಂಧಿ ಪ್ರತಿಮೆಗೆ ಮಾಡಿದ ಅವಮಾನ ಕಂಡು ದಿಗಿಲಾದರು.  ಗುಂಡಪ್ಪ ಮತ್ತು ಗೆಳೆಯರು ಕೂಲಿಕಾರ್ಮಿಕರ ಹಿಡಿತದಿಂದ ತಪ್ಪಿಸಿಕೊಳ್ಳಲು ಒಂದೊಂದು ದಿಕ್ಕಿಗೆ ಓಡಿ ಹೋದರು. ಕಡು ಕತ್ತಲೆಯಲ್ಲಿ ಮಾಯವಾದರು. 

* * *

ಗಾಂಧಿ ತತ್ವ ಪ್ರಚಾರಕ ಎಂದು, ಆಧುನಿಕ ಗಾಂಧಿ ಎಂದು ನಾಡಿನ ಸಂಘಟನೆಗಳು ಸನ್ಮಾನಿಸಿದ್ದ ಪೋಟೋ ಅಂದಿನ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.  ಪೌರಕಾರ್ಮಿಕರು ಚರಂಡಿಯಲ್ಲಿ ಬಿದ್ದಿದ್ದ ಶವವನ್ನು ಹೊರತೆಗೆದರು. ಅವರಿಗೆ ಗುಂಡಪ್ಪನನ್ನು ಗುರುತಿಸಲು ಕಷ್ಟವಾಗಲಿಲ್ಲ. 

* * *

ಆಧುನಿಕ ಗಾಂಧಿ ಸತ್ತ ವಿಚಾರವನ್ನು ತಿಳಿದ ಗಾಂಧಿ ಅನುಯಾಯಿಗಳು, ರಾಜಕಾರಣಿಗಳು, ಅಧಿಕಾರಿಗಳು, ಶಾಲಾಮಕ್ಕಳು ಪುರಭವನದ ಬಯಲು ಸಭಾಂಗಣದಲ್ಲಿ ಇರಿಸಲಾದ ಪಾರ್ಥಿವ ಶರೀರಕ್ಕೆ ಸಾಲಾಗಿ ಬಂದು ನಮನ ಸಲ್ಲಿಸುತ್ತಿದ್ದರು.

* * *

ಮುದ್ದು ಹನುಮಯ್ಯ ಅವರು ಪ್ರತಿಭಟನೆಗೆ ಬಾರದ ಕಾರಣ ಅವರ ವಿರುದ್ಧವೂ ಗಾಂಧಿ ಅನುಯಾಯಿಗಳು ಕೆಂಡಕಾರಿದ್ದರು. ವಿವಿಧ ಸಂಘಟನೆಗಳವರು ಪ್ರತಿಭಟನೆ ತೀವ್ರಗೊಂಡಿತ್ತು. ಇಡೀ ಪಟ್ಟಣದಲ್ಲಿ ಪ್ರಕ್ಷುಬ್ಧ ಸ್ಥಿತಿ ಇದ್ದ ಕಾರಣ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿಭಟನೆಯ ತೀವ್ರತೆ ಅರಿತು ಸುದ್ದಿಗೋಷ್ಠಿ ಕರೆದಿದ್ದರು. ಗಾಂಧಿಗೆ ಅಪಮಾನ ಮಾಡಿದವರೆಂದು ಅವರ ಮುಂದೆ ನಿಂತ ನಾಲ್ವರನ್ನು ತೋರಿಸಿದರು. ಪತ್ರಿಕಾ ಮಿತ್ರರು, ಛಾಯಾಗ್ರಾಹಕರು ಕಕ್ಕಾಬಿಕ್ಕಿಯಾಗಿ ನೋಡುವ ಕೂಲಿಕಾರ್ಮಿಕರನ್ನು ಸೆರೆಹಿಡಿದರು. ಗಾಂಧಿ ಪ್ರತಿಮೆಗೆ ಅಪಮಾನ ಮಾಡಿದ ಈ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಇನ್ನುಳಿದ ನಾಲ್ವರು ವೇಷಧಾರಿಗಳು ನಾಪತ್ತೆ ಆಗಿದ್ದಾರೆ. ಈ ಕೂಡಲೇ ಅವರನ್ನು ಬಂಧಿಸಲು ವ್ಯಾಪಕ ಶೋಧ ಕೈಗೊಂಡಿರುವುದಾಗಿ ಘೋಷಿಸಿ, ಪ್ರತಿಭಟನಾಕಾರರು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಕೊಟ್ಟು ತಮ್ಮ ಪ್ರತಿಭಟನೆಯನ್ನು ಕೈ ಬಿಡಬೇಕೆಂದು ಪೊಲೀಸರು ಮನವಿ ಮಾಡಿಕೊಂಡರು.

* * *

ಮುದ್ದುಹನುಮಯ್ಯನವರ ಭಾಷಣ ಮುಂದುವರಿದಿತ್ತು. ಮಗನನ್ನು ಕಳೆದುಕೊಂಡ ದುಃಖ ಅದುಮಿಟ್ಟುಕೊಂಡು ಹೆಂಡತಿ, ಸೊಸೆ, ಮೊಮ್ಮಕ್ಕಳಿಗೆ ಸಮಾಧಾನ ಹೇಳುವ ಕರ್ತವ್ಯ ಅವರದಾಗಿತ್ತು. ಈ ಸಂಕಟದ ನಡುವೆಯೇ ‘ಗಾಂಧಿಯ ಸಾವಿನ ದುಃಖ ಯಾವತ್ತೂ ತೀರದಂತಹದ್ದು. ನಾವೀಗ ಗಾಂಧಿಯ ಹೊಸ ಸಾಧ್ಯತೆಗಳ ಬಗ್ಗೆ ಯೋಚಿಸಬೇಕಾಗಿದೆ. ಗಾಂಧಿ ಎಲ್ಲ ಕಾಲಕ್ಕೂ ಸಲ್ಲುವವರು, ಜೀವಿಸುವವರು. ಆದರೆ, ಅಭಿನವ ಗಾಂಧಿಯನ್ನು ನಾವು ಎಚ್ಚರ ಮತ್ತು ವಿವೇಕದಿಂದ ಎದುರುಗೊಳ್ಳಬೇಕಿದೆ...’

ಮಾತುಗಳೆಲ್ಲವೂ ತೀರಿದಂತೆ ಮುದ್ದುಹನುಮಯ್ಯನವರು ಭಾವಪರವಶರಾದರು. ಯಾವುದೋ ಮಾಯೆಯ ಮಿಂಚಿಗೆ ವಶವಾದಂತೆ ತಾವೂ ಪ್ರತಿಮೆಯಂತೆ ನಿಂತುಬಿಟ್ಟರು.

* * *

ಶವಯಾತ್ರೆ ಆರಂಭವಾಯಿತು. ‘ಆಧುನಿಕ ಗಾಂಧಿ ಅಮರ್ ಹೈ’ ಎನ್ನುವ ಘೋಷಣೆ ಮುಗಿಲುಮುಟ್ಟತೊಡಗಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.