ಬುಧವಾರ, ಮೇ 18, 2022
23 °C

ಅಭಿಲೇಖಾಲಯದಿಂದ ದಾಖಲೆ ಸೋರಿಕೆ?!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಕೋಲಾರ: ಸರ್ಕಾರ ಮತ್ತು ಸಾರ್ವಜನಿಕರ ಜಮೀನುಗಳಿಗೆ ಸಂಬಂಧಿಸಿದ ಸಾವಿರಾರು ಮೂಲ ದಾಖಲೆಗಳ ನಿರ್ವಹಣೆಗೆಂದೇ ಮೀಸಲಾಗಿರುವ, ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಅಭಿಲೇಖಾಯದಲ್ಲಿಯೇ ದಾಖಲೆಗಳ ಸೋರಿಕೆಯಾಗುತ್ತಿದೆ. ಸಲೀಸಾಗಿ ದಾಖಲೆಗಳು ಅಭಿಲೇಖಾಲಯದ ಆವರಣ ದಾಟಿ ಖಾಸಗಿ ಜೆರಾಕ್ಸ್ ಅಂಗಡಿಗಳನ್ನು ತಲುಪಿ ಹಲವು ಪ್ರತಿಗಳಾಗುತ್ತಿವೆ. ಅಕ್ರಮ ತಿದ್ದುಪಡಿಗೂ ಇದು ದಾರಿ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.ಕಾರಣ ಬಹಳ ಸರಳ: ಅಭಿಲೇಖಾಲಯದಲ್ಲಿ ಕಚೇರಿಯದ್ದೆ ಆದ ಜೆರಾಕ್ಸ್ ಯಂತ್ರವಿಲ್ಲ! ಪ್ರತಿ ಬಾರಿಯೂ ಪ್ರತಿ ದಾಖಲೆಯ ಜೆರಾಕ್ಸ್ ಪ್ರತಿ ಬೇಕೆಂದರೆ ಸಿಬ್ಬಂದಿ ಅದನ್ನು ಖಾಸಗಿ ಜೆರಾಕ್ಸ್ ಅಂಗಡಿಗೆ ತೆಗೆದುಕೊಂಡು ಹೋಗಬೇಕು. ಒಮ್ಮೆ ಹಾಗೆ ಹೋದ ಯಾವುದೇ ದಾಖಲೆಯ ಎಷ್ಟು ಜೆರಾಕ್ಸ್ ಪ್ರತಿಗಳನ್ನು ಮಾಡಲಾಗುತ್ತದೆ. ಅವು ಎಷ್ಟು ಮಂದಿಯನ್ನು ತಲುಪುತ್ತವೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ.ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಬುಧವಾರ ಅಭಿಲೇಖಾಲಯದಲ್ಲಿ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿದೆ. ವಿವಿಧ ಕಾರಣಗಳಿಗಾಗಿ ಅಭಿಲೇಖಾಲಯದ ಸಿಬ್ಬಂದಿ ಮೂಲದಾಖಲೆಗಳನ್ನು ಹೊರಕ್ಕೆ ಕೊಂಡೊಯ್ಯುತ್ತಿರುವುದೂ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ಜಿಲ್ಲಾಧಿಕಾರಿಯೇ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಕೂಡಲೇ ಅಭಿಲೇಖಾಲಯಕ್ಕೆ ಜೆರಾಕ್ಸ್ ಯಂತ್ರದ ವ್ಯವಸ್ಥೆ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.ಏನೇನು? ಪ್ರತಿ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲೆ ಅಭಿಲೇಖಾಲಯ ಕಾರ್ಯನಿರ್ವಹಿಸುತ್ತದೆ. ಈ ಕಚೇರಿಯಲ್ಲಿ ಸರ್ಕಾರಿ ಮತ್ತು ಖಾಸಗಿ ವ್ಯಕ್ತಿಗಳ ಜಮೀನುಗಳ ಮಾಲಿಕತ್ವಕ್ಕೆ ಸಂಬಂಧಿಸಿ ಮೂಲ ದಾಖಲೆಗಳಿರುತ್ತವೆ. ಅವುಗಳ ನಿರ್ವಹಣೆಯೇ ಇಲ್ಲಿನ ಪ್ರಮುಖ ಕೆಲಸ. ಇಲ್ಲಿ ಪಹಣಿ ಪತ್ರ, ಮ್ಯೂಟೇಶನ್ ಪತ್ರ, ಸಾಗುವಳಿ ಮಂಜೂರಾತಿ ಪತ್ರ, ದಾಖಲೆಗಳ ಹಕ್ಕುಪತ್ರ, ಭೂ ಸುಧಾರಣೆ, ಭೂ ಮಂಜೂರಾತಿ ಕಡತ ಸೇರಿದಂತೆ ಮಹತ್ವದ ಹಲವು ಮೂಲ ದಾಖಲೆಗಳಿರುತ್ತವೆ.ಸಮರ್ಪಕ ನಿರ್ವಹಣೆ ಇಲ್ಲದಿದ್ದರೆ ಹಲವು ವಿವಾದಗಳ ಮೂಲ ಇಲ್ಲಿಂದಲೇ ಶುರುವಾಗುತ್ತದೆ. ಯಾವುದೇ ಜಮೀನು ದಾಖಲೆ ಬೇಕೆಂದರೂ ಸಂಬಂಧಿಸಿದವರು ಇಲ್ಲಿಗೇ ಬರಬೇಕು. ಎಲ್ಲೂ ಇಲ್ಲ: ಬಲ್ಲ ಮೂಲಗಳು ತಿಳಿಸಿರುವ ಪ್ರಕಾರ, ಜಿಲ್ಲೆಯ ಮಾಲೂರು, ಮುಳಬಾಗಲು, ಶ್ರೀನಿವಾಸಪುರ ಮತ್ತು ಬಂಗಾರಪೇಟೆ ತಹಶೀಲ್ದಾರ್ ಕಚೇರಿಗಳ ಅಭಿಲೇಖಾಲಯದಲ್ಲೂ ಸ್ವಂತ ಜೆರಾಕ್ಸ್ ಯಂತ್ರಗಳಿಲ್ಲ. ಅಲ್ಲಿನ ಸಿಬ್ಬಂದಿಯೂ ಮೂಲದಾಖಲೆ ಹಿಡಿದು ಖಾಸಗಿ ಜೆರಾಕ್ಸ್ ಅಂಗಡಿಗಳತ್ತ ನಡೆಯುತ್ತಿದ್ದಾರೆ!ಜಿಲ್ಲಾಧಿಕಾರಿ ಭೇಟಿ ಬಳಿಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಎಸ್.ಎಂ.ಮಂಗಳಾ, ‘ನಮ್ಮ ಕಚೇರಿಯಲ್ಲಿ ಒಂದು ಜೆರಾಕ್ಸ್ ಯಂತ್ರವಿದೆ. ಅದರಲ್ಲಿ ಎ-4 ಆಕಾರದ ಹಾಳೆಗಳನ್ನು ಮಾತ್ರ ಜೆರಾಕ್ಸ್ ಮಾಡಬಹುದೇ ಹೊರತು ದಾಖಲೆಗಳ ಕಡತಗಳನ್ನು ಪ್ರತಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಿಬ್ಬಂದಿ ಖಾಸಗಿ ಜೆರಾಕ್ಸ್ ಅಂಗಡಿಗಳನ್ನು ಅನಿವಾರ್ಯವಾಗಿ ಅವಲಂಬಿಸಿದ್ದಾರೆ.ಮೂಲದಾಖಲೆಗಳನ್ನು ಅಲ್ಲಿಗೇ ಕೊಂಡೊಯ್ದು ಪ್ರತಿ ಮಾಡಿಸುವುದು ಅನಿವಾರ್ಯವಾಗಿದೆ. ಹಾಗೆಂದ ಮಾತ್ರಕ್ಕೆ ದಾಖಲೆ ಸೋರಿಕೆಯಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಲಾಗುವುದಿಲ್ಲ’ ಎಂದು ತಿಳಿಸಿದರು.ಇನ್ನು 3-4 ದಿನದಲ್ಲಿ ಅಗತ್ಯವಿರುವ ಹೊಸ ಜೆರಾಕ್ಸ್ ಯಂತ್ರ ತರಿಸಲಿದ್ದೇವೆ. ಅಭಿಲೇಖಾಲಯದಲ್ಲಿ ಕಡತಗಳ ನಿರ್ವಹಣೆಗೆ ಅಗತ್ಯವಿರುವಷ್ಟು ರ್ಯಾಕ್‌ಗಳೂ ಇರಲಿಲ್ಲ. ಕೆಲವೇ ದಿನಗಳ ಹಿಂದೆ ತರಿಸಲಾಗಿದೆ. ಕಡತಗಳನ್ನು ಜೋಡಿಸುವ ಕೆಲಸವೂ ಶುರುವಾಗಲಿದೆ’ ಎಂದು ತಿಳಿಸಿದರು. ‘ಪ್ರಸ್ತುತ ಅಭಿಲೇಖಾಲಯದಲ್ಲಿ ಒಬ್ಬ ಶಿರಸ್ತೇದಾರರು, ಐವರು ಗ್ರಾಮ ಸಹಾಯಕರು, ಇಬ್ಬರು ದಫ್ತರು (ಅವರಲ್ಲಿ ಒಬ್ಬರು ಹೊರಗುತ್ತಿಗೆಯವರು) ಇದ್ದಾರೆ. ಇರುವ ದಾಖಲೆಗಳ ನಿರ್ವಹಣೆಗೆ ಇಷ್ಟು ಸಿಬ್ಬಂದಿ ಸಾಕಾಗುವುದಿಲ್ಲ. ಸಿಬ್ಬಂದಿ ಕೊರತೆ ಕಾರಣಕ್ಕಾಗಿಯೇ ಐವರು ಗ್ರಾಮ ಸಹಾಯಕರನ್ನು ಇಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಗ್ರಾಮ ಸಹಾಯಕರು ಅನಧಿಕೃತವಾಗಿ ಅಭಿಲೇಖಾಲಯದಲ್ಲಿರುತ್ತಾರೆ ಎಂಬ ಆರೋಪದಲ್ಲಿ ಹುರುಳಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.