ಗುರುವಾರ , ಮೇ 19, 2022
24 °C
ಸಾಹಿತಿ ವೇಣು ವಿರುದ್ಧ ಚಾಟಿ ಬೀಸಿದ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ

`ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗ ಸಲ್ಲದು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: `ಒಂದು ರೂಪಾಯಿಗೆ ಕೆ.ಜಿ ಅಕ್ಕಿ ನೀಡುವ ಸರ್ಕಾರದ ಯೋಜನೆ ವಿರೋಧಿಸುವರ ಅಪ್ಪನ ಗಂಟೇನು ಹೋಗುತ್ತದೆ? ಸರ್ಕಾರ ಬಡವರಿಗಾಗಿ ರೂಪಿಸಿರುವ ಈ ಯೋಜನೆಯನ್ನು ಸ್ವಾಮೀಜಿಯೊಬ್ಬರು ನಿರಂತರವಾಗಿ ವಿರೋಧಿಸುತ್ತಿದ್ದಾರೆ' ಎಂದೆಲ್ಲ ನಾಲಗೆ ಹರಿಯ ಬಿಟ್ಟು ಮಾತನಾಡುವ ಮೂಲಕ ಸಾಹಿತಿ ಬಿ.ಎಲ್. ವೇಣು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಮಾಡುತ್ತಿದ್ದಾರೆ ಎಂದು ಸಾಣೇಹಳ್ಳಿ  ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆರೋಪಿಸಿದ್ದಾರೆ.ವೇಣು ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸ್ವಾಮೀಜಿ,  `ಈ ಹೇಳಿಕೆ ಯಾರ ವಿರುದ್ಧ ಎಂದು ಅರ್ಥಮಾಡಿಕೊಳ್ಳುವುದು ಕಷ್ಟವೇನೂ ಅಲ್ಲ. ಚಿತ್ರದುರ್ಗದಲ್ಲಿ ಕಳೆದ ತಿಂಗಳು 25ರಂದು ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದೆ. ಜತೆಗೆ ಸರ್ಕಾರ ಅಗ್ಗದ  ಯೋಜನೆಗಳನ್ನು  ನೀಡಿ ಜನರನ್ನು  ಸೋಮಾರಿಗಳನ್ನಾಗಿ  ಮಾಡದೆ  ದುಡಿಯುವ ಕೈಗಳಿಗೆ  ಕೆಲಸ ಕೊಡಬೇಕು.  ಹೀಗೆ ಅಕ್ಕಿ  ವಿತರಣೆಯಿಂದ  ಸರ್ಕಾರದ ಮೇಲೆ ಎಷ್ಟೊಂದು ಹೊರೆ ಬೀಳುತ್ತದೆ ಎಂದೆಲ್ಲ ಪ್ರಸ್ತಾಪಿಸಿದ್ದೆ. ಅದರೊಂದಿಗೆ ಅಗ್ಗದ ಮದ್ಯದ ವಿರುದ್ಧವೂ ಧ್ವನಿ ಎತ್ತಿ ಸರ್ಕಾರ ಇಂಥ ಯೋಜನೆಗಳಿಗೆ ಬದಲು ಜನಪರ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದ್ದೆ' ಎಂದರು.ಅದು ವೇಣು ಅವರಿಗೂ ಗೊತ್ತು. ಸಮ್ಮೇಳನದ ಅಧ್ಯಕ್ಷರಾಗಿ ಅದೇ ಸಭೆಯಲ್ಲಿ ಉಪಸ್ಥಿತರಿದ್ದ ವೇಣು ಆಗ ನಮ್ಮ ಮಾತುಗಳನ್ನು ಮೆಚ್ಚಿ ಈಗ ವಿರುದ್ಧ ಹೇಳಿಕೆ ನೀಡಿರುವುದು ಅವರ ಇಬ್ಬಂದಿತನಕ್ಕೆ ಸಾಕ್ಷಿಯಾಗಿದೆ ಎಂದು ಕುಟುಕಿದ್ದಾರೆ.`ವೇಣು ನಮಗೆ ಆತ್ಮೀಯರು. ಸರಸವಾಗಿಯೇ ಮಾತನಾಡುವರು. ತಪ್ಪು ಕಂಡಾಗ ನೇರವಾಗಿ ಖಂಡಿಸುವ ಗುಣ ಇರಬೇಕು. ಅದರ ಬದಲು ಎದುರಿಗೆ ಮುಖಸ್ತುತಿ ಮಾಡಿ ಹಿಂದೆ ಆಡಿಕೊಳ್ಳುವುದು ವಿವೇಕಿಗಳ ಲಕ್ಷಣವಲ್ಲ. ಪದಗಳ ಬಳಕೆಯಲ್ಲಿ ಎಚ್ಚರವಿರಬೇಕು. `ಅವರಪ್ಪನ ಗಂಟೇನು ಹೋಗುತ್ತದೆ' ಎಂದರೆ ಏನರ್ಥ? ಅಪ್ಪ ಅಮ್ಮನ ಬಗ್ಗೆ ಇದೇ ಏನು ಅವರಿಗಿರುವ ಗೌರವ' ಎಂದು ಪ್ರಶ್ನಿಸಿದ್ದಾರೆ.

`ಮಠಗಳಿಗೆ ಹಣ ಕೊಡುವ ಸರ್ಕಾರದ ನೀತಿಯನ್ನು ನೇರವಾಗಿ, ಖಾರವಾಗಿ ನಾವು ಪ್ರತಿಭಟಿಸುತ್ತ ಬಂದಿರುವುದನ್ನು ವೇಣು ಅರಿಯದವರೇನಲ್ಲ.ನಾವು ನೇರವಾಗಿ ಸರ್ಕಾರಕ್ಕೆ ಪತ್ರ ಬರೆದು ಯಾವ ಮಠಗಳಿಗೂ ಸರ್ಕಾರ ಹಣ ಕೊಡಬೇಕಾಗಿಲ್ಲ. ಬದಲಾಗಿ ಅವರೇನಾದರೂ ಜನಪರ ಕಾರ್ಯಗಳಿಗೆ ಯೋಜನೆ ಸಲ್ಲಿಸಿದರೆ, ಅದು ಸೂಕ್ತ ಎನ್ನಿಸಿದರೇ ಹಣ ಮಂಜೂರು ಮಾಡಬಹುದು. ಅದರ ಬಳಕೆಯ ಬಗ್ಗೆ ತನಿಖೆಯನ್ನೂ ಮಾಡಬೇಕು. ಲೆಕ್ಕ ಪತ್ರಗಳನ್ನೂ ಪರಿಶೀಲಿಸಬೇಕು ಎಂದು ಹೇಳುತ್ತಿದ್ದೇವೆ. ಸರ್ಕಾರ ಸಿರಿಗೆರೆ ಮಠಕ್ಕೆ ಹಣ ಕೊಡುತ್ತೇವೆ ಎಂದಾಗ ನಮ್ಮ ಜಗದ್ಗುರುಗಳು ಅಂಥ ಹಣ ನಮಗೆ ಬೇಕಾಗಿಲ್ಲ.ಮಠಕ್ಕೆ ಹಣ ಕೊಡಲು ಭಕ್ತರಿದ್ದಾರೆ. ನೀವು ಜನರ ಸಮಸ್ಯೆಗಳ ನಿವಾರಣೆಗೆ ಹಣದ ಬಳಕೆ ಮಾಡಿರಿ  ಎಂದು ಸರ್ಕಾರಕ್ಕೆ ಹೇಳಿದ್ದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಿದ್ದೂ, ವೇಣು ಅವರು ಮಠಗಳಿಗೆ ಕೋಟಿಗಟ್ಟಲೆ ಹಣ ಕೊಟ್ಟಾಗ ಯಾಕೆ ವಿರೋಧಿಸಲಿಲ್ಲ ಎಂದಿರುವುದು ಅವರ ಅಜ್ಞಾನದ ಪ್ರತೀಕವೋ ಅಥವಾ ಜಾಣ ಕುರುಡುತನವೋ' ಎಂದು ಸ್ವಾಮೀಜಿ ಕಿಡಿಕಾರಿದ್ದಾರೆ.`ದುಡಿದು ಹಣ ಗಳಿಸಿ ಅಕ್ಕಿ ಖರೀದಿಸಿದ್ದರೆ ಅವರಿಗೆ ಅದರ ಕಷ್ಟ ಏನು ಎಂದು ಗೊತ್ತಾಗುತ್ತಿತ್ತು ಎನ್ನುವ ವೇಣು ಅವರ ಆಪಾದನೆ ಹುರುಳಿಲ್ಲದ್ದು. ದುಡಿಮೆಯ ಮಹತ್ವ ಏನೆಂಬುದನ್ನು ವೇಣು ಅವರಿಂದ ಕಲಿಯಬೇಕಾಗಿಲ್ಲ. ಪ್ರತಿದಿನ ನಾವು ಏನು ಮಾಡುತ್ತೇವೆ ಎಂದು ಅವರಿಗೆ ವರದಿ ಕೊಡುವ ಅಗತ್ಯವೂ ಇಲ್ಲ. ನಮ್ಮ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಅದನ್ನು ತೋರಿಕೆಗಾಗಿ ಮಾಡುತ್ತಿಲ್ಲ'  ಎಂದು ಸ್ಪಷ್ಟಪಡಿದ್ದಾರೆ.`ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಅದರ ದುರ್ಬಳಕೆ ಮಾಡಿಕೊಳ್ಳುವುದು ಸಲ್ಲದು. ಇನ್ನಾದರೂ ವೇಣು  ಕುಟುಕು ಚೇಳಿನ ಗುಣ ಬಿಟ್ಟು ನೇರವಾಗಿ ಮಾತನಾಡುವ ಹೃದಯವಂತಿಕೆ ಬೆಳೆಸಿಕೊಂಡರೆ ಒಳ್ಳೆಯದು' ಎಂದು ಸಲಹೆ ನೀಡಿದ್ದಾರೆ.`ನಗರದಲ್ಲಿರುವ ವೇಣು ಅವರಿಗಿಂತ ಹಳ್ಳಿಗಳಲ್ಲಿದ್ದು, ಹಳ್ಳಿಗರ ನಿರಂತರ ಸಂಪರ್ಕದಲ್ಲಿರುವ ನಮಗೆ ಬಡವರ ಕಷ್ಟ ಏನೆಂದು ಚೆನ್ನಾಗಿ ಗೊತ್ತು. ನಿರಂತರ ಬಡವರ ಮಧ್ಯೆ ಬಾಳುವ ನಮಗೆ ಅಗ್ಗದ ಯೋಜನೆಗಳಿಂದ ಬಡವರ ಪರಿಸ್ಥಿತಿ ಏನಾಗುತ್ತಿದೆ ಎನ್ನುವ ದೂರದೃಷ್ಟಿ ಮತ್ತು ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲೇ ನಾವು ಸರ್ಕಾರದ ಅಗ್ಗದ ಯೋಜನೆಗಳನ್ನು ಪ್ರತಿಭಟಿಸುತ್ತೇವೆ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.