ಭಾನುವಾರ, ಜೂನ್ 20, 2021
25 °C

ಅಭ್ಯರ್ಥಿ ಆಯ್ಕೆ: ಮುಗಿಯದ ಗೊಂದಲ

ಉ.ಮ.ಮಹೇಶ್‌ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಲೋಕಸಭೆ ಚುನಾವಣೆ ಬುಧವಾರ ಘೋಷಣೆಯಾದರೂ ಜಿಲ್ಲೆಯ ಮಟ್ಟಿಗೆ ರಾಜಕೀಯ ಪಕ್ಷಗಳಲ್ಲಿ, ಮುಖ್ಯವಾಗಿ ಕಾರ್ಯಕರ್ತರಲ್ಲೇ ಅಭ್ಯರ್ಥಿಗಳ ಬಗ್ಗೆ  ಗೊಂದಲ ಮುಂದುವರಿದಿದೆ. ಬಿಜೆಪಿಯಲ್ಲಿ ಈ ಗೊಂದಲ ಹೆಚ್ಚಾಗಿ ಕಾಡುತ್ತಿದೆ.ಸುದೀರ್ಘ ಅವಧಿಗೆ ಮೀಸಲು ಕ್ಷೇತ್ರವಾಗಿದ್ದ ಬೀದರ್‌ ಲೋಕಸಭೆ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಯಾಗಿದೆ. ಕ್ಷೇತ್ರ ಪುನರ್ವಿಂಗಡಣೆ ನಂತರ 2009ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಆಯ್ಕೆಯಾಗಿದ್ದರು.ಆಗ ಅವರ ವಿರುದ್ಧ ಬಿಜೆಪಿಯಿಂದ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರು ಕಣಕ್ಕಿಳಿದಿದ್ದರು. ಬಳಿಕ ಗುರುಪಾದಪ್ಪ ಅವರು ಕೆಜೆಪಿ ಸೇರಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೀದರ್‌ ಕ್ಷೇತ್ರದ ಶಾಸಕರಾಗಿಯೂ ಆಯ್ಕೆಯಾದರು. ಲೋಕಸಭೆ ಚುನಾವಣೆ ಘೋಷಣೆಗೂ ಪೂರ್ವದ ಬೆಳವಣಿಗೆಯಲ್ಲಿ ಅವರು ಮತ್ತೆ ಬಿಜೆಪಿಗೆ ಮರಳಿದ್ದಾರೆ.ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಹಿಂಬಾಲಿಸಿ ಬಿಜೆಪಿಗೆ ವಾಪಸಾಗುವಾಗ, ಬೀದರ್ ಲೋಕಸಭೆ ಕ್ಷೇತ್ರದ ಟಿಕೆಟನ್ನು ತನ್ನ ಪುತ್ರನಿಗೆ ನೀಡಬೇಕು ಎಂಬ ಷರತ್ತು ಹಾಕಿದ್ದರು ಎನ್ನಲಾಗಿದೆ. ಈ  ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಮತ್ತೆ ಧರ್ಮಸಿಂಗ್‌ ಮತ್ತು ನಾಗಮಾರಪಳ್ಳಿ ಕುಟುಂಬದ ನಡುವಿನ ಸ್ಪರ್ಧೆಗೆ ಬೀದರ್ ಕ್ಷೇತ್ರ ವೇದಿಕೆಯಾಗಬಹುದೇ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.

 ಆದರೆ ಪರಿಸ್ಥಿತಿ ಸರಳವಾಗಿಲ್ಲ. ಮೊದಲಿಗೆ ಕಾಂಗ್ರೆಸ್‌ನಲ್ಲೇ ಧರ್ಮಸಿಂಗ್‌ ಸ್ಪರ್ಧೆಗೆ ಅಪಸ್ವರದ ದನಿಗಳೂ ಕೇಳಿಬಂದಿವೆ. ವಯಸ್ಸನ್ನು ಗಮನಿಸಿ ಅವರಿಗೆ ಈ ಬಾರಿ ಸ್ಪರ್ಧೆಗೆ ಅವಕಾಶ ನೀಡಬಾರದು ಎಂಬ ಒತ್ತಾಯಗಳಿವೆ. ಅಪಸ್ವರ ಕೇಳಿ ಬಂದಾಗಲೆಲ್ಲಾ ‘ಸಿಟ್ಟಿಂಗ್ ಎಂ.ಪಿ. ಇದೇನಿ. ಮಾಜಿ ಮುಖ್ಯಮಂತ್ರಿ ಇದೇನಿ. ಯಾಕ್‌ ನಿಲ್ಲಬಾರದು?’ ಎಂದು ಪ್ರಶ್ನಿಸುವ ಮೂಲಕ ನಾನೇ ಅಭ್ಯರ್ಥಿ ಎಂದು ಧರ್ಮಸಿಂಗ್‌ ಅವರೂ ಬಲವಾಗಿ ಪ್ರತಿಪಾದಿಸಿದ್ದಾರೆ.‘ವೃದ್ಧಾಪ್ಯದ ಕಾರಣ ಧರ್ಮಸಿಂಗ್‌ ಕುಗ್ಗಿದ್ದಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿಲ್ಲ; ಕ್ಷೇತ್ರವನ್ನು ಕಡೆಗಣಿಸಿದ್ದಾರೆ. ಹೀಗಾಗಿ ಆಡಳಿತ ವಿರೋಧಿ ಅಲೆಯೂ ಬರಬಹುದು’ ಎಂಬುದಕ್ಕೂ ಅವರ ವಿರೋಧಿಗಳು ಒತ್ತು ನೀಡಿದ್ದಾರೆ.ಇನ್ನೊಂದು ಬೆಳವಣಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನೆರೆಯ ಮಹಾರಾಷ್ಟ್ರದ ಲಾತೂರ್‌ನ ಶಿವರಾಜ್‌ ಪಾಟೀಲ (ಕೇಂದ್ರದ ಮಾಜಿ ಗೃಹಮಂತ್ರಿ, ಲೋಕಸಭೆಯ ಮಾಜಿ ಸ್ಪೀಕರ್‌) ಸ್ಪರ್ಧೆ ಮಾಡಬಹುದು ಎಂಬ ಮಾತೂ ಕೇಳಿಬರುತ್ತಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಇದ್ದಾರೆ. ಲಿಂಗಾಯತ ಸಮುದಾಯದ ಪ್ರಭಾವವಿದೆ ಎಂಬುದು ಇದಕ್ಕೆ ಕಾರಣ.  ಆದರೂ ಅಂತಿಮವಾಗಿ ಹಾಲಿ ಸಂಸದರು, ಹಿರಿಯ ಮುಖಂಡರು ಎಂಬ ಹಿನ್ನೆಲೆಯಲ್ಲಿ ಧರ್ಮಸಿಂಗ್‌ ಅವರಿಗೆ ಪಕ್ಷ ಮತ್ತೆ ಮಣೆ ಹಾಕಿದರೆ ಆಶ್ಚರ್ಯವೇನೂ ಇಲ್ಲ.ಇತ್ತ, ನರೇಂದ್ರ ಮೋದಿ ಪರ ಇದೆ ಎನ್ನಲಾದ ಅಲೆಯನ್ನು ನೆಚ್ಚಿಕೊಂಡಿರುವ ಬಿಜೆಪಿಯಲ್ಲಿ ಕೂಡಾ ಟಿಕೆಟ್‌ ಅಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಅದಕ್ಕೂ ಮಿಗಿಲಾಗಿ ಪಕ್ಷಕ್ಕೆ ಮರಳಿರುವ ಗುರುಪಾದಪ್ಪ ನಾಗಮಾರಪಳ್ಳಿ ಅವರಿಗೆ ಅಥವಾ ಅವರ ಪುತ್ರ ಸೂರ್ಯಕಾಂತ್ ಅವರಿಗೆ ಟಿಕೆಟ್‌ ನೀಡಬಾರದು ಎಂಬ ಮಾತು ಜೋರಾಗಿಯೇ ಕೇಳಿಬರುತ್ತಿವೆ.ನಾಗಮಾರಪಳ್ಳಿ ಅವರ ಪಕ್ಷ ಸೇರ್ಪಡೆಗೆ ಮೊದಲು ಬಹಿರಂಗವಾಗಿಯೇ ಕೇಳಿಬರುತ್ತಿದ್ದ ಇಂಥ ಆಗ್ರಹ ಮತ್ತು ವಿರೋಧದ ದನಿಯು ಅವರು ಪಕ್ಷವನ್ನು ಸೇರಿದ ಬಳಿಕ ಕುಗ್ಗಿದ್ದರೂ, ಆಂತರಿಕವಾಗಿ ಇನ್ನೂ ಪಕ್ಷದೊಳಗೆ ಹೊಗೆಯಾಡುತ್ತಿದೆ.ಜೊತೆಗೆ, ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಜಿಲ್ಲಾ ಘಟಕವೇ ಒಟ್ಟು 16 ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನಿಸಿದೆ. ವಿಧಾನಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಭಗವಂತರಾವ್ ಖೂಬಾ, ಮಾಜಿ ಶಾಸಕ ಪ್ರಕಾಶ್‌ ಖಂಡ್ರೆ ಅವರ ಹೆಸರುಗಳು ಈ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿವೆ.ಟಿಕೆಟ್‌ ವಿಷಯ ಪ್ರಸ್ತಾಪವಾದಾಗ ಎಲ್ಲ ಮುಖಂಡರು ಮೋದಿ ಗೆಲುವಿನ ಮಂತ್ರ ಜಪಿಸುತ್ತಾರೆ. ‘ನೀವು ಯಾರಿಗಾದೂ ಟಿಕೆಟ್‌ ಕೊಡಿ. ಆದರೆ, ಪಕ್ಷದಲ್ಲಿಯೇ ಉಳಿದಿದ್ದ ನಿಷ್ಠಾವಂತರಿಗೆ ನೀಡಿ’ ಎಂಬ ಹಕ್ಕೊತ್ತಾಯವನ್ನು ಮಂಡಿಸುವ ಮೂಲಕ ಹೊಸದಾಗಿ ಪಕ್ಷಕ್ಕೆ ಮರಳಿದವರಿಗೆ ಟಿಕೆಟ್‌ ಬೇಡ ಎಂಬ ದನಿಯನ್ನು ಎತ್ತಿದ್ದಾರೆ.ಈ ಎಲ್ಲ ಬೆಳವಣಿಗೆಗಳ ನಡುವೆಯೂ ನಾಗಮಾರಪಳ್ಳಿ ಅವರ ಪುತ್ರ ಸೂರ್ಯಕಾಂತ ಅವರು, ಟಿಕೆಟ್‌ ಖಚಿತವಾಗಿದೆ ಎಂಬ ಉತ್ಸಾಹದಲ್ಲಿಯೇ ಚುನಾವಣಾ ಪೂರ್ವ ಸಿದ್ಧತೆಯನ್ನು ಆರಂಭಿಸಿದ್ದು, ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವುದು, ವಿವಿಧ ಸಂಘ–ಸಂಸ್ಥೆಗಳ ಒಲವು ಗಳಿಸುವ ಮೂಲಕ ತಮ್ಮದೇ ಕಾರ್ಯತಂತ್ರವನ್ನು ರೂಪಿಸಿಕೊಳ್ಳುತ್ತಿದ್ದಾರೆ.ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಅವರ ಸ್ಪರ್ಧೆ ಮಾಡಬಹುದು. ಆದರೆ, ಬಂಡೆಪ್ಪ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಪರಾಭವಗೊಂಡ ಬಳಿಕ  ಅಷ್ಟು ಸಕ್ರಿಯರಾಗಿ ಕಾಣಿಸಿಕೊಂಡಿಲ್ಲ.

ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆ ಪಕ್ಷದ  ಬಸವಕಲ್ಯಾಣ ಕ್ಷೇತ್ರದ ಶಾಸಕ ಮಲ್ಲಿಕಾರ್ಜುನ ಖೂಬಾ ಅವರೂ ಆಸಕ್ತಿಯನ್ನು ತೋರಿದ್ದು, ಸ್ಪರ್ಧೆ ಮಾಡಲು ಸಿದ್ಧ ಎಂದು ಬಹಿರಂಗವಾಗಿಯೂ ಪ್ರತಿಪಾದಿಸಿದ್ದಾರೆ.ಹೀಗಾಗಿ ಎಲ್ಲ ಪಕ್ಷಗಳಲ್ಲಿಯೂ ಅಭ್ಯರ್ಥಿಗಳ ಕುರಿತ ಗೊಂದಲ ಇದ್ದು, ಬಹುಶಃ  ಅಧಿಕೃತವಾಗಿ ಯಾರು ಅಭ್ಯರ್ಥಿ? ಎಂಬ ಗೊಂದಲ ವಾರದಲ್ಲಿ ಬಗೆಹರಿಯಬಹುದು ಎಂಬ ನಿರೀಕ್ಷೆ ಕಾರ್ಯಕರ್ತರಲ್ಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.