ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರ ಮಧುರ

ನೂರು ಕಣ್ಣು ಸಾಲದು
Last Updated 31 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಕಥೆ, ಕಾದಂಬರಿ, ಕಾವ್ಯಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಪ್ರೇಮ ಕಥನಗಳು ಚಲನಚಿತ್ರಗಳಲ್ಲೂ ಬಹು ಸಾಮಾನ್ಯ. ಈವರೆಗೆ ಭಾರತದ ವಿವಿಧ ಭಾಷೆಗಳ ಚಿತ್ರಪರದೆಗಳಲ್ಲಿ ಸಾವಿರಾರು ಪ್ರೇಮ ಕಥೆಗಳು ಪ್ರತಿಬಿಂಬಿತವಾಗಿದ್ದರೂ ಅವುಗಳ ಸಂಖ್ಯೆ ಈಗಲೂ ನಿಂತಿಲ್ಲ. ಬೇರೆ ಬೇರೆ ರೂಪಗಳಲ್ಲಿ ಪ್ರೇಮ ಕಥೆಗಳು ಆಗಾಗ್ಗೆ ಸಿದ್ಧವಾಗುತ್ತಲೇ ಪ್ರೇಕ್ಷಕರನ್ನು ರಂಜಿಸುತ್ತಿವೆ. 

ಪುರಾಣ, ಇತಿಹಾಸಗಳಲ್ಲಿ ಕಾಣಿಸಿಕೊಳ್ಳುವ ಪ್ರೇಮಕಥೆಗಳು ಸಾಮಾಜಿಕ ಬದುಕಿನಲ್ಲೂ ಕಂಡುಬರುವುದು ಸಹಜ. ಬಣ್ಣ, ಜಾತಿ, ಧರ್ಮ ಇವೆಲ್ಲವುಗಳನ್ನು ಮೀರುವ ಪ್ರೇಮ ಮೂಕಿ ಚಿತ್ರಗಳ ಆರಂಭದಿಂದ ಡಿಜಟಲ್ ತಂತ್ರಜ್ಞಾನದ ಚಿತ್ರಗಳವರೆಗೆ ನಿರಂತರವಾಗಿ ತಯಾರಾಗುತ್ತಲೇ ಬಂದಿವೆ. 

ಪ್ರೇಮಕಥೆಗಳಲ್ಲಿ ಸಾಮಾನ್ಯವಾಗಿ ಸುಖಾಂತ್ಯವಾಗುವ ಕಥೆಗಳೇ ಹೆಚ್ಚಾಗಿದ್ದರೂ ದುರಂತದಲ್ಲಿ ಕೊನೆಗೊಳ್ಳುವ ಅಥವಾ ಪ್ರೇಮಿಗಳು ಬದುಕಿನಲ್ಲಿ ಒಂದಾಗದೇ ತಮ್ಮ ಇಷ್ಟಕ್ಕೆ ವಿರುದ್ಧವಾಗಿ ಸಂಸಾರ ಬಂಧನದಲ್ಲಿ ಸಿಕ್ಕಿಕೊಳ್ಳುವ ಕಥನಗಳೇನು ಅಪರೂಪವಲ್ಲ. ಬಡತನ-–ಸಿರಿತನ, ಜಾತಿ ತಾರತಮ್ಯ, ರೂಪ-ಕುರೂಪ ಇವೆಲ್ಲವುಗಳನ್ನು ಮೀರಿದಂತಹ ಅಸಂಖ್ಯ ಪ್ರೇಮ ಪ್ರಸಂಗಗಳು ಬೆಳ್ಳಿತೆರೆಯಲ್ಲಿ ಬಿಂಬಿತವಾಗುತ್ತಿರುವುದು ನಮ್ಮ ದೇಶದ ಚಿತ್ರ ಜಗತ್ತಿನಲ್ಲಿ ಸಾಮಾನ್ಯ.

ಅನಾರ್ಕಲಿ, ಏಕ್ ದೂಜೇ ಕೆ ಲಿಯೇ, ಕುಛ್ ಕುಛ್ ಹೋತ ಹೈ, ಜೋಧಾ ಅಕ್ಬರ್, ಜಾನ್ ತೇರೆ ನಾಮ್ ಮೊದಲ್ಗೊಂಡು ಹಲವಾರು ಪ್ರೇಮಕಥೆಗಳು ಹಿಂದಿ ಭಾಷೆಯಲ್ಲಿ ಬಂದಿದ್ದರೆ, ಬೇರೆ ಭಾರತೀಯ ಭಾಷೆಗಳಲ್ಲಿ ಮೂಡಿ ಬಂದ ಪ್ರೇಮ ಕಥೆಯಾಧರಿತ ಚಿತ್ರಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಪ್ರಪಂಚದ ಅತ್ಯಂತ ಶ್ರೇಷ್ಠ ಪ್ರೇಮಕಥೆಗಳು ಭಾರತೀಯ ಚಿತ್ರರಂಗದಲ್ಲಿ ಬೇರೆ ಬೇರೆ ಕಾಲಮಾನಗಳಲ್ಲಿ ಚಿತ್ರಗಳಾಗಿ ಅರಳುತ್ತಲೇ ಇವೆ.  
 
ಮೊಘಲ್ ಎ ಆಜಾಂ ಭಾರತೀಯ ಚಿತ್ರ ಜಗತ್ತಿನಲ್ಲಿ ಬಹು ವರ್ಷಗಳಿಂದ ಆಗಾಗ ನೆನಪಿಸಿಕೊಳ್ಳುತ್ತಿರುವ ಅತ್ಯುತ್ತಮ ಪ್ರೇಮಕಥನ ಆಧಾರಿತ ಚಲನಚಿತ್ರ. ೧೯೬೦ರಲ್ಲಿ ತಯಾರಾದ ಈ ಚಿತ್ರದಲ್ಲಿ ದಿಲೀಪ್ ಕುಮಾರ್ ಹಾಗೂ ಮಧುಬಾಲ ನಾಯಕ-ನಾಯಕಿಯರಾಗಿ ಅಭಿನಯಿಸಿದ್ದರು. ಅನಾರ್ಕಲಿ- ಸಲೀಂ ಕಥೆ ಸತ್ಯವೋ ಮಿಥ್ಯವೋ ಸಾಬೀತಾಗದಿದ್ದರೂ ಅದೊಂದು ಅದ್ಭುತ ಪ್ರೇಮ ಕಥೆಯೆಂಬುದರ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಈ ಚಿತ್ರದ ಸುಶ್ರಾವ್ಯ ಸಂಗೀತ, ನಟ ನಟಿಯರ ಭಾವಾಭಿನಯ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತ್ತು. ಕೆ. ಅಸಿಫ್ ನಿರ್ದೇಶಿಸಿದ ಈ ಚಿತ್ರದಲ್ಲಿ ಪೃಥ್ವೀರಾಜ್ ಕಪೂರ್‌ರವರು ಮೊಘಲ್ ಸಾಮ್ರಾಟ ಅಕ್ಬರನ ಪಾತ್ರದಲ್ಲಿ ಮನೋಜ್ಞ ಅಭಿನಯವನ್ನು ನೀಡಿದ್ದರು. ಪ್ರೇಮ, ಭಾವುಕತೆ, ಕುಟಂಬ ಮೌಲ್ಯಗಳು, ನಾಟಕೀಯತೆ ಎಲ್ಲವನ್ನೂ ತನ್ನಲ್ಲಿಟ್ಟುಕೊಂಡ ಈ ಚಿತ್ರ ಸಾರ್ವಕಾಲಿಕ ಮೆಚ್ಚುಗೆಯನ್ನು ಪಡೆದಿದೆ. 

ಕಾಲ್ಪನಿಕ ಕಥೆಯಾದರೂ ಅದ್ದೂರಿಯಿಂದ ನಿರ್ಮಾಣಗೊಂಡ ಮೊಘಲ್ ಎ ಆಜಾಂ ಚಿತ್ರದ ನಂತರ ಜಗತ್ತಿನ ಶ್ರೇಷ್ಠ ಪ್ರೇಮ ಸ್ಮಾರಕವೆನ್ನಿಸಿಕೊಂಡಿರುವ ತಾಜ್ ಮಹಲ್ ಹಿಂದಿನ ನೈಜ ಕಥೆಯನ್ನು ತೆರೆಗೆ ತರಲಾಗಿದೆ. ಅದೇ ತಾಜ್ ಮಹಲ್. ಷಹಾಜಹಾನ್ ಮತ್ತು ಮಮ್ತಾಜ್ ಅಮರ ಪ್ರೇಮವನ್ನು ಶಕ್ತಿಯುತವಾಗಿ ಕಟ್ಟಿಕೊಟ್ಟ ತಾಜ್ ಮಹಲ್ ಇಂಪಾದ ಗೀತೆಗಳಿಂದಲೂ ಸೆಳೆಯುತ್ತದೆ.  ಪ್ರದೀಪ್ ಕುಮಾರ್, ಬೀನಾರಾಯ್ ಅವರುಗಳು ಮುಖ್ಯ ಪಾತ್ರದಲ್ಲಿದ್ದ ತಾಜ್ ಮಹಲ್ ಪ್ರೇಮ ಕಥನಗಳ ಅಧಾರಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಳ ಪಡೆದಿದೆ. 

ನಮ್ಮ ನೆಲದ ಸಾಹಿತ್ಯ ಕೃತಿಗಳು ಪ್ರೇಮಕಥನಗಳಿಗೆ ವಸ್ತುಗಳನ್ನು ಒದಗಿಸಿವೆ. ಭಾರತೀಯ ಪ್ರೇಕ್ಷಕರನ್ನು ಆಗಾಗ ಕಾಡುತ್ತಲೇ ಇರುವ ಚಿತ್ರದ ಕಥೆಗಳಲ್ಲಿ ದೇವದಾಸ್ ಕಥೆಯೂ ಒಂದು. ಹಿಂದಿ ಭಾಷೆಯಲ್ಲಿ ಈವರೆಗೆ ಮೂರು ಬಾರಿ ತಯಾರಾಗಿರುವ ದೇವದಾಸ್ ಈಗಲೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಕೊಂಡಿರುವ ಚಿತ್ರಗಳಲ್ಲೊಂದು. ಬಂಗಾಲಿ, ತೆಲುಗು ಭಾಷೆಗಳಲ್ಲಿಯೂ ದೇವದಾಸ್ ಹಾಡುಗಳು ಎಲ್ಲಾ ಭಾಷೆಗಳಲ್ಲಿಯೂ ಗುನುಗುನಿಸುವಂತಹವು. 

ಎರಡೆರಡು ಜೋಡಿಗಳಿದ್ದ ಬರಸಾತ್ ೧೯೪೯ರಲ್ಲಿ ಹಿಂದಿ ಭಾಷೆಯಲ್ಲಿ ತಯಾರಾದ ರಮ್ಯ ಪ್ರೇಮದ ಅತ್ಯುತ್ತಮ ಚಿತ್ರ. ರಾಜ್ ಕಪೂರ್ ಅವರು ನರ್ಗೀಸ್ ಅವರೊಂದಿಗೆ ಅಭಿನಯಿಸಿದ್ದ ಈ ಚಿತ್ರಕ್ಕೆ ಅವರೇ ನಿರ್ದೇಶನ ನೀಡಿದ್ದರು. ಪ್ರೇಮನಾಥ್ ಹಾಗೂ ನಿಮ್ಮಿ ಈ ಚಿತ್ರದಲ್ಲಿದ್ದ ಇನ್ನೊಂದು ಯುವ ಜೋಡಿ. ಉತ್ಕಟ ಪ್ರೇಮದ ಅನೇಕ ಕ್ಷಣಗಳಿದ್ದ ಈ ಚಿತ್ರದಲ್ಲಿ ಮುಖೇಶ್ ಹಾಗೂ ಲತಾ ಮಂಗೇಶ್ಕರ್ ಅವರ ಮನಮೋಹಕ ಗೀತೆಗಳಿದ್ದವು. ಇದಕ್ಕೆ ಶಂಕರ್ ಜೈಕಿಶನ್ ಅವರು ಸುಶ್ರಾವ್ಯ ಸಂಗೀತವನ್ನು ನೀಡಿದ್ದರು. 

ಹಿಂದಿ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ಎನ್ನಿಸಿಕೊಂಡ ರಾಜೇಶ್ ಖನ್ನಾ ಅವರು ಅಭಿನಯಿಸಿದ ಹಲವಾರು ಚಿತ್ರಗಳು ಪ್ರೇಮಕಥೆಗಳನ್ನೇ ಒಳಗೊಂಡಿದ್ದವು. ಶಕ್ತಿ ಸಾಮಂತ್ ಅವರು ನಿರ್ದೇಶಿಸಿದ ಆರಾಧನಾ ಹಿಂದಿ ಚಿತ್ರರಂಗದ ಅನುಪಮ ಪ್ರೇಮಕಥೆಯ ಚಲನಚಿತ್ರವಾಗಿ ಹೊರಹೊಮ್ಮಿತು. ’ಮೇರೆ ಸಪ್ನೋಂಕಿ ರಾಣಿ’ ಹಾಡು ಈ ಚಿತ್ರದ ಹೈಲೈಟ್. ಶರ್ಮಿಳಾ ಟಾಗೂರ್, ರಾಜೇಶ್ ಖನ್ನಾ ನಾಯಕ-ನಾಯಕಿಯರಾಗಿ ಕಾಣಿಸಿಕೊಂಡ ಆರಾಧನಾ ಯಶಸ್ವಿ ಪ್ರೇಮ ಚಿತ್ರಗಳಲ್ಲೊಂದು. 

ಭಾರತದ ಬಹುತೇಕ ಎಲ್ಲಾ ಭಾಷೆಗಳ ಚಲನಚಿತ್ರಗಳಲ್ಲೂ ಪ್ರೇಮ ಕಥನಗಳ ಆಧಾರಿತ ಚಿತ್ರಗಳು ತಯಾರಾಗಿವೆ. ಕೌಟುಂಬಿಕ, ಸಾಮಾಜಿಕ ಚಿತ್ರಗಳಲ್ಲಿ ಪ್ರೇಮದ ವಿಷಯ ಸಾಮಾನ್ಯವಾಗಿ ಇರುತ್ತಿತ್ತು. ಕನ್ನಡದ ನಾ ನಿನ್ನ ಮರೆಯಲಾರೆ, ಮೈಸೂರ ಮಲ್ಲಿಗೆ, ಅರುಣರಾಗ, ಬೆಸುಗೆ, ಒಲವು ಗೆಲುವು, ಲವ್ ಇನ್ ಬ್ಯಾಂಗಲೂರ್, ಜನುಮದ ಜೋಡಿ ಹೀಗೆ ನೂರಕ್ಕೂ ಹೆಚ್ಚು ಚಿತ್ರಗಳು ಕನ್ನಡ ಚಿತ್ರತೆರೆಯಲ್ಲಿ ಪ್ರೇಮ ಕಥನಗಳನ್ನು ಹೊತ್ತು ಬಂದಿವೆ. ರಾಜ್‌ಕುಮಾರ್, ಕಲ್ಯಾಣ್ ಕುಮಾರ್ ಅವರು ಅಭಿನಯಿಸಿದ ಪ್ರೇಮಕಥೆಗಳುಳ್ಳ ಚಿತ್ರಗಳು ಅತ್ಯುತ್ತಮ ಸಂದೇಶಗಳನ್ನೂ ಹೊತ್ತು ತಂದು ಪ್ರೇಕ್ಷಕರ ಮನಗೆದ್ದಿವೆ. ಕೆಲವು ಸಿನಿಮಾಗಳು ಸುಖಾಂತ್ಯ ಕಂಡರೆ ಇನ್ನೂ ಕೆಲವು ದುರಂತ ಕಥೆಗಳಾಗಿ ಅಂತ್ಯಗೊಂಡಿವೆ. ಇದಕ್ಕೆ ಬಂಧನ, ನಾಗರಹಾವು ಮೊದಲಾದ ಚಿತ್ರಗಳನ್ನು ಉದಾಹರಣೆಯಾಗಿ ನೀಡಬಹುದು. ರವಿಚಂದ್ರನ್ ಅಭಿನಯದ ಪ್ರೇಮಲೋಕ ಚಿತ್ರ ಪ್ರೇಮಕಥನಕ್ಕೆ ಹೊಸ ಹಾದಿಯನ್ನೇ ಕೊಟ್ಟಿತು. ಇದಕ್ಕೆ ಹಂಸಲೇಖ ಅವರ ಸ್ಮರಣೀಯ ಸಂಗೀತದ ಸ್ಪರ್ಶವಿತ್ತು.  ಇದೇ ರೀತಿ ನಮ್ಮೂರ ಮಂದಾರ ಹೂವೇ, ಮುಂಗಾರು ಮಳೆ ಮೊದಲಾದ ಚಿತ್ರಗಳನ್ನು ಉದಾಹರಣೆಯಾಗಿ ನೀಡಬಹುದು. 

ವಿಶಿಷ್ಟ ಗೀತೆಗಳಿಂದ, ಅದ್ದೂರಿತನದಿಂದ ಪ್ರೇಮ ಕಥನಗಳಿಗೆ ತಮ್ಮದೇ ಆದ ಸ್ಪರ್ಶ ನೀಡಿದವರು ರಾಜ್ ಕಪೂರ್. ತಾವು ಅಭಿನಯಿಸಿದ ಚಿತ್ರಗಳ ಜೊತೆಗೆ ತಮ್ಮ ಮಗನಿಗಾಗಿ ಅವರು ನಿರ್ಮಿಸಿದ ಬಾಬಿ ಹದಿಹರೆಯದ ಯುವ ಸಮುದಾಯದಲ್ಲಿ ಹೊಸ ಬಗೆಯ ಅಲೆಗಳನ್ನೆಬ್ಬಿಸಿತ್ತು. ಬಿಸಿ ಬಿಸಿ ದೃಶ್ಯಗಳು, ಕಚಗುಳಿಯಿಡುವಂತಹ ಹಾಡುಗಳು, ಕಣ್ಮನ ಸೆಳೆಯುವ ನೃತ್ಯಗಳು ಹಾಗೂ ಮನಸ್ಸಿಗೆ ನೇರವಾಗಿ ನಾಟುವಂತಹ ಸಂಭಾಷಣೆಗಳಿಂದ ತುಂಬಿದ್ದ ಬಾಬಿ ಭಾರತೀಯ ಪ್ರೇಮಕಥನ ಚಿತ್ರಗಳಿಗೆ ಹೊಸ ದಿಕ್ಕು ತೋರಿಸಿದ್ದಂತೂ ನಿಜ. 

ಹತ್ತು ದಶಕಗಳ ಭಾರತೀಯ ಸಿನಿಮಾ ನಕ್ಷೆಯಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಪ್ರೇಮಕಥನಗಳ ಮೈಲಿಗಲ್ಲುಗಳು ನಿರ್ಮಾಣವಾಗಿವೆ. ಅದು ತೆಲುಗು, ತಮಿಳು ಭಾಷೆಗಳಲ್ಲಿ ಯಶಸ್ಸು ಪಡೆದ ನಂತರ ಹಿಂದಿ ಚಿತ್ರ ತೆರೆಯಲ್ಲೂ ಖ್ಯಾತಿ ಪಡೆದ ಏಕ್ ದೂಜೇ ಕೆ ಲಿಯೇ, ಕನ್ನಡದ ಜನುಮದ ಜೋಡಿ, ಎರಡು ಕನಸು, ಚೈತ್ರದ ಪ್ರೇಮಾಂಜಲಿ, ಹೃದಯ ಹಾಡಿತು ಹೀಗೆ ಹಲವಾರು ಚಿತ್ರಗಳು ಗಲ್ಲಾ ಪೆಟ್ಟಿಗೆ ತುಂಬಿಸಿದ್ದು ಮಾತ್ರವಲ್ಲದೇ ಪ್ರೇಮ ಕಥನಗಳಿಗೆ ಶಾಶ್ವತ ನೆಲೆಯನ್ನೂ ಒದಗಿಸಿವೆ.

ಚಲನಚಿತ್ರಗಳಲ್ಲಿ ಕನಸುಗಳನ್ನು ಮಾರಾಟ ಮಾಡಲಾಗುವುದೆಂಬ ಮಾತುಗಳಿದ್ದರೂ ನಿಜ ಜೀವನದ ಘಟನೆಗಳನ್ನು ಆಧರಿಸಿ ತಯಾರಾದ ನೂರಾರು ಚಿತ್ರಗಳು ಭಾರತೀಯ ಬೆಳ್ಳಿ ತೆರೆಯಲ್ಲಿ ಯಶ ಪಡೆದಿವೆ. ಅನೇಕ ಕಥನಗಳೇ ಒಂದು ಪ್ರೇಮಕಥನವಾಗಿ ತೆರೆಯಲ್ಲಿ ವಿಜೃಂಭಿಸಿದಕ್ಕೆ ದಿಲ್ ವಾಲೇ ದುಲ್ಹಾನಿಯಾ ಲೇ ಜಾಯೇಂಗೆ ಚಿತ್ರ ಒಂದು ಸ್ಪಷ್ಟ ನಿರ್ದೇಶನ. ಎಲ್ಲಾ ವಯೋಮಾನದವರಿಗೂ ಇಷ್ಟವಾಗಿ ಜನಪ್ರಿಯತೆಯ ಉತ್ತುಂಗಕ್ಕೇರಿದ ಈ ಚಿತ್ರ ಹಲವಾರು ವರ್ಷಗಳ ಕಾಲ ಸತತವಾಗಿ ನಡೆದು ದಾಖಲೆಗಳನ್ನು ನಿರ್ಮಿಸಿದ್ದು ಈಗ ಇತಿಹಾಸ.

ಒಂದೊಂದು ಪ್ರೇಮ ಕಥನದ ಚಿತ್ರವೂ ಒಂದೊಂದು ನಮೂನೆಯಲ್ಲಿ ಸಿದ್ಧಗೊಂಡು ಪ್ರೇಕ್ಷಕರನ್ನು ರಂಜಿಸುವ ಕೆಲಸ ಮಾಡುತ್ತಾ ಬಂದಿದೆ.  ಪ್ರೇಮಕ್ಕೆ ಕೊನೆಯಿಲ್ಲ ಎಂಬ ಮಾತಿನಂತೆ ಪ್ರೇಮ ಕಥನಗಳನ್ನು ಆಧರಿಸಿದ ಚಲನಚಿತ್ರಗಳಿಗೂ ಅಂತ್ಯ ಈವರೆಗೆ ಸಿಕ್ಕಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT