ಸೋಮವಾರ, ಮೇ 17, 2021
28 °C

ಅಮಾನತು ಕ್ರಮ: ಆಯುಕ್ತೆ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ಉಪನ್ಯಾಸಕರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರಾದ ವಿ.ರಶ್ಮಿ ಎಚ್ಚರಿಕೆ ನೀಡಿದ್ದಾರೆ.ಶನಿವಾರದಿಂದ ಮೌಲ್ಯಮಾಪನ ಕಾರ್ಯ ಆರಂಭವಾಗಿದ್ದು, ಮುಖ್ಯ ಪರೀಕ್ಷಕರು, ಉಪ ಮುಖ್ಯ ಪರೀಕ್ಷಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸಹಾಯಕ ಮೌಲ್ಯಮಾಪಕರು ನಿಗದಿಯಂತೆ ಇದೇ 9ರಿಂದ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರತಿ ವರ್ಷ ಮೌಲ್ಯಮಾಪನವನ್ನೇ ಅಸ್ತ್ರವಾಗಿ ಬಳಸಿಕೊಂಡು, ಉಪನ್ಯಾಸಕರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ, ಧರಣಿ ನಡೆಸುತ್ತಿರುವುದಕ್ಕೆ ಪೋಷಕರು, ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸೋಮವಾರ ಉಪನ್ಯಾಸಕರು ಮೌಲ್ಯಮಾಪನಕ್ಕೆ ಹಾಜರಾಗದಿದ್ದರೆಅಮಾನತುಗೊಳಿಸುವುದು ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಬಹುತೇಕ ಉಪನ್ಯಾಸಕರು ಮೌಲ್ಯಮಾಪನಕ್ಕೆ ಹಾಜರಾಗಲು ಸಿದ್ಧರಿದ್ದಾರೆ. ಆದರೆ ಕೆಲ ಪದಾಧಿಕಾರಿಗಳು ವಿನಾ ಕಾರಣ ಗೊಂದಲವನ್ನುಂಟು ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ಮಧ್ಯೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ.ಕುಮಾರ ನಾಯಕ ಅವರು ಶನಿವಾರ ಉಪನ್ಯಾಸಕರ ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಮೌಲ್ಯಮಾಪನಕ್ಕೆ ಹಾಜರಾಗುವಂತೆ ಮನವಿ ಮಾಡಿದರು.ಕಳೆದ ವರ್ಷ ಮೌಲ್ಯಮಾಪನ ಬಹಿಷ್ಕರಿಸಿದಾಗ ವೇತನ ತಾರತಮ್ಯ ಕುರಿತು ವರದಿ ನೀಡಲು ಸರ್ಕಾರ ಸಮಿತಿ ರಚಿಸಿತ್ತು. ಸಮಿತಿ ನೀಡಿದ್ದ ವರದಿಯನ್ನು ಅಧಿಕಾರಿಗಳ ವೇತನ ಸಮಿತಿ ಪರಿಶೀಲಿಸಿ 11,400-21,600ರಿಂದ 22,800-43,200ಕ್ಕೆ ವೇತನ ಹೆಚ್ಚಿಸಲು ಶಿಫಾರಸು ಮಾಡಿತ್ತು. ಆ ಪ್ರಕಾರ ವೇತನ ಶ್ರೇಣಿ ಜಾರಿಯಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.5.92 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಮೌಲ್ಯಮಾಪನವನ್ನು ಸುಸೂತ್ರವಾಗಿ ನಡೆಸಿ ನಿಗದಿತ ದಿನಾಂಕದ ಒಳಗೆ ಫಲಿತಾಂಶ ಪ್ರಕಟಿಸುವುದು ಪದವಿ ಪೂರ್ವ ಶಿಕ್ಷಣ ಇಲಾಖೆ, ಉಪನ್ಯಾಸಕರು, ಪ್ರಾಂಶುಪಾಲರ ಕರ್ತವ್ಯವಾಗಿದೆ ಎಂದು ರಶ್ಮಿ ತಿಳಿಸಿದ್ದಾರೆ.ಹೊರ ರಾಜ್ಯಗಳ ವೇತನ ಶ್ರೇಣಿಯನ್ನು ಪರಿಶೀಲಿಸಿದಾಗ ಕರ್ನಾಟಕದಲ್ಲಿ ಉಪನ್ಯಾಸಕರ ವೇತನ ಉತ್ತಮವಾಗಿದೆ. ಮಹಾರಾಷ್ಟ್ರದಲ್ಲಿ ರೂ 9,300-34,400. ತಮಿಳುನಾಡಿನಲ್ಲಿ ರೂ 9,300-34,800. ಆಂಧ್ರಪ್ರದೇಶದಲ್ಲಿ ರೂ 18,030-43,630. ಕೇರಳದಲ್ಲಿ ರೂ 16,180-29,180 ಇದ್ದರೆ ಕರ್ನಾಟಕದಲ್ಲಿ ರೂ 22,800-43,200 ಇದೆ. ಇದಲ್ಲದೆ 500 ರೂಪಾಯಿ ವಿಶೇಷ ವೇತನ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.