ಸೋಮವಾರ, ಮಾರ್ಚ್ 8, 2021
26 °C

ಅಮಾವಾಸ್ಯೆ ಆಚರಣೆಗೆ ‘ಮಣ್ಣೆತ್ತು’ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮಾವಾಸ್ಯೆ ಆಚರಣೆಗೆ ‘ಮಣ್ಣೆತ್ತು’ ಸಿದ್ಧ

ವಿಜಯಪುರ: ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣಗಳು, ಗ್ರಾಮೀಣ ಪ್ರದೇಶದ ಬಜಾರ್‌ ಹಾಗೂ ಕುಂಬಾ­ರರ ಮನೆ­ಗಳಲ್ಲಿ ಇದೀಗ ಮಣ್ಣೆತ್ತುಗಳ ಮಾರಾಟ ಬಿರುಸಿನಿಂದ ನಡೆಯುತ್ತಿದೆ.ಒಕ್ಕಲುತನ ನಡೆಸುವವರು ಸೇರಿ­ದಂತೆ ಕೃಷಿಯೊಟ್ಟಿಗೆ ತಮ್ಮ ಬದುಕನ್ನು ಕಂಡು ಕೊಳ್ಳುವವರು, ಭೂಮಿಯ ಒಡೆತನ ಹೊಂದಿರುವ ಎಲ್ಲರೂ ಇದೇ 16ರ ಮಂಗಳವಾರ ಬರುವ ಮಣ್ಣೆತ್ತಿನ ಅಮಾವಾಸ್ಯೆ ಪೂಜೆ, ಆಚರಣೆಗೆ ಎತ್ತು­ಗಳನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ.ವಿಜಯಪುರ ನಗರದ ಆಜಾದ್‌ ರಸ್ತೆ, ಇಂಡಿ ರಸ್ತೆ, ಎಪಿಎಂಸಿ ಮಾರು­ಕಟ್ಟೆ ಪ್ರಾಂಗಣದ ಸಮೀಪ ಸೇರಿದಂತೆ ವಿವಿಧೆಡೆ ಇದೀಗ ಮಣ್ಣೆತ್ತುಗಳ ಮಾರಾಟ ಭರ್ಜರಿಯಾಗಿದೆ. ಬಸವನ ಬಾಗೇ­ವಾಡಿ, ಮುದ್ದೇಬಿಹಾಳ, ಇಂಡಿ, ಸಿಂದಗಿ ಪಟ್ಟಣಗಳು ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲೂ ಮಣ್ಣೆತ್ತು­ಗಳ ಮಾರಾಟ ಬಿರುಸಿನಿಂದ ನಡೆದಿದೆ.ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮಣ್ಣಿನ ಎತ್ತುಗಳಿಗೆ ಬೇಡಿಕೆ. ಮಾರು­ವವರು ಹೆಚ್ಚಿನ ಸಂಖ್ಯೆಯಲ್ಲಿ ಮಣ್ಣಿನಿಂದ ತಯಾರಿಸಿದ ಎತ್ತಿನ ಜೋಡಿ ಮಾರಿದರೆ, ಕೊಳ್ಳುವವರ ಬೇಡಿಕೆಯೂ ಅದೇ ಆಗಿದೆ. ಆದರೆ ನಗರ ಪ್ರದೇಶದಲ್ಲಿ ಮಣ್ಣೆತ್ತಿನ ಬದಲು ಪಿಒಪಿಯಿಂದ ತಯಾರಿಸಿದ ಎತ್ತುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.ಬಹುತೇಕರು ಪಿಒಪಿ ಎತ್ತುಗಳನ್ನೇ ಖರೀದಿಸುತ್ತಾರೆ. ಆಚಾರವಂತರು, ಶ್ರದ್ಧೆಯಿಂದ ಮಣ್ಣೆತ್ತಿನ ಅಮಾವಾಸ್ಯೆ ಆಚರಿಸುವವರು ಮಾತ್ರ ಮಣ್ಣಿನ ಎತ್ತುಗಳನ್ನೇ ಕೊಂಡು ಮನೆಗೊಯ್ದು ಪೂಜಿಸುತ್ತಾರೆ ಎನ್ನುತ್ತಾರೆ ವಿಜಯಪುರ ನಗರದ ಆಜಾದ್‌ ರಸ್ತೆಯಲ್ಲಿ ತಲೆ ತಲಾಂತರದಿಂದ ಮಣ್ಣಿನ ಎತ್ತುಗಳ ಮಾರಾಟ ನಡೆಸುತ್ತಿರುವ ಕನ್ನಯ್ಯ ಪೇಠಕರ.ಕಾರ ಹುಣ್ಣಿಮೆಯಂದು ಕೆಲವರು ತಮ್ಮ ಮನೆಗಳಲ್ಲಿ ಮಣ್ಣಿನ ಎತ್ತುಗಳನ್ನು ಕೂರಿಸುವ ಮೂಲಕ ಅಮಾವಾಸ್ಯೆ ತನಕ ನಿತ್ಯ ಪೂಜಿಸಿದರೆ, ಬಹುತೇಕರು ಅಮಾವಾಸ್ಯೆ ಮುಂದೆ ಮಣ್ಣೆತ್ತುಗಳನ್ನು ಪೂಜಿಸುತ್ತಾರೆ ಎಂದು ಪೇಠಕರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.ಮಣ್ಣೆತ್ತಿನ ಅಮಾವಾಸ್ಯೆ: ರೈತ ಸಮೂಹ ಕೃಷಿ ಚಟುವಟಿಕೆಗಳ ಜತೆಗೆ ಪಶು ಸಂಪತ್ತಿನ ಪೂಜೆಗೆಂದೇ ವರ್ಷದು­ದ್ದಕ್ಕೂ ಹಲವು ಹಬ್ಬಗಳನ್ನು ಆಚರಿಸುತ್ತದೆ. ಇಂಥ ಹಬ್ಬಗಳಲ್ಲಿ ಕಾರಹುಣ್ಣಿಮೆ ಬಳಿಕ ಬರುವ ಮಣ್ಣೆತ್ತಿನ ಅಮಾವಾಸ್ಯೆಯೂ ಒಂದು.ಅಂದು ಎತ್ತು ಮತ್ತು ಮಣ್ಣನ್ನು ಪೂಜಿಸಿದರೆ ಮಳೆ–ಬೆಳೆ ಚೆನ್ನಾಗಿ ನಡೆದು ಸಮೃದ್ಧಿಯ ಫಸಲು ಸಿಗುತ್ತದೆ ಎಂಬ ನಂಬಿಕೆ ತಲೆತಲಾಂತರದ್ದು. ಕಾರಹುಣ್ಣಿಮೆ ಆಸುಪಾಸು ಕುಂಬಾರರ ಮನೆಯಲ್ಲಿ ಮಣ್ಣೆತ್ತು ತಯಾರಿಗೆ ಚಾಲನೆ ಸಿಗುತ್ತದೆ. ಮಣ್ಣು, ಇತರ ವಸ್ತುಗಳನ್ನು ಸಂಗ್ರಹಿಸಿಕೊಂಡು ಮನೆಯವರೆಲ್ಲರೂ ಸೇರಿ ಎತ್ತುಗಳನ್ನು ತಯಾರಿಸುತ್ತಾರೆ.ಮುಂಗಾರು ಮಳೆ ನಿರೀಕ್ಷೆಯಲ್ಲೇ, ಬಿರುಸಿನ ಬಿತ್ತನೆ ನಡುವೆಯೇ ಜಿಲ್ಲೆಯ ರೈತರು ಸಂಪ್ರದಾಯದಿಂದ ಆಚರಿ­ಸುತ್ತಾ ಬಂದಿರುವ ಮಣ್ಣೆತ್ತಿನ  ಅಮಾವಾಸ್ಯೆಗೆ ಸಿದ್ಧತೆ ನಡೆಸಿದ್ದಾರೆ. ನಗರ ವಾಸಿಗಳು ಶ್ರದ್ಧಾ ಭಕ್ತಿಯಿಂದ ಮಣ್ಣೆತ್ತಿನ ಅಮಾವಾಸ್ಯೆ ಆಚರಿಸುತ್ತಾರೆ.ಅಮವಾಸ್ಯೆಯಂದು ಕುಂಬಾರರ ಮನೆಗೆ ತೆರಳಿ ಮಣ್ಣೆತ್ತುಗಳನ್ನು ತಂದು ದೇವರ ಜಗುಲಿ ಮೇಲಿಟ್ಟು ಸಾಮೂಹಿಕ ಪೂಜೆ ಸಲ್ಲಿಸುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ದೊಡ್ಡದಾದ ಮಣ್ಣೆತ್ತನ್ನು ಪ್ರತಿಷ್ಠಾಪನೆ ಮಾಡಿ ಐದು ದಿನ ಪೂಜೆ ಸಲ್ಲಿಸಲಾಗುತ್ತದೆ. ನಂತರ ಕೆರೆ, ಹಳ್ಳ, ಬಾವಿಯಲ್ಲಿ ಮಣ್ಣೆತ್ತುಗಳನ್ನು ವಿಸರ್ಜಿಸುವ ಕಾರ್ಯವೂ ಸಂಭ್ರಮದಿಂದ ನಡೆಯುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.