ಬುಧವಾರ, ಮೇ 19, 2021
24 °C

ಅಮೆರಿಕದ ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ ದಾಳಿಯ ಸೂತ್ರಧಾರ ಪಾಕಿಸ್ತಾನದ ಕುಖ್ಯಾತ ಉಗ್ರಗಾಮಿ ಹಫೀಜ್ ಸಯೀದ್‌ನನ್ನು ಬಂಧಿಸಿ ಶಿಕ್ಷಿಸಬಹುದಾದಂಥ ಮಾಹಿತಿ ಕೊಟ್ಟವರಿಗೆ ಒಂದು ಕೋಟಿ ಡಾಲರ್ ಬಹುಮಾನ ಕೊಡುವುದಾಗಿ ಅಮೆರಿಕ ಮಾಡಿರುವ ಘೋಷಣೆಯ ಹಿಂದೆ ಅದರದ್ದೇ ಆದ ಉದ್ದೇಶ ಇರುವಂತಿದೆ.ಮುಖ್ಯವಾಗಿ ಪಾಕಿಸ್ತಾನದಲ್ಲಿ ಆಫ್ಘಾನಿಸ್ತಾನಕ್ಕೆ ಶಸ್ತ್ರಾಸ್ತ್ರ ಸಾಗಿಸುವಲ್ಲಿ ಆಗಿರುವ ತಡೆಯನ್ನು ನಿವಾರಿಸಿಕೊಳ್ಳುವುದು ಈ ಘೋಷಣೆಯ ಮೊದಲ ಉದ್ದೇಶ. ಯುದ್ಧ ಸಾಮಗ್ರಿಗಳನ್ನು ಸಾಗಿಸಲು ಪಾಕಿಸ್ತಾನ ರಸ್ತೆಗಳನ್ನು ಬಂದ್ ಮಾಡಿದ್ದೇ ಹಫೀಜ್ ನೇತೃತ್ವದ ಉಗ್ರಗಾಮಿಗಳ ಒತ್ತಾಯಕ್ಕೆ.

 

ಹೀಗಾಗಿ ಹಫೀಜ್ ಬಂಧನ ಅಮೆರಿಕಕ್ಕೆ ಅನಿವಾರ್ಯವಾಗಿದೆ. ಲಾಡೆನ್ ಬದುಕಿದ್ದಾಗ ಅವನ ಜೊತೆ ನಿಕಟ ಸಂಬಂಧ ಪಡೆದಿದ್ದ ಲಷ್ಕರ್ ಎ ತೊಯ್ಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಈಗ ಆಫ್ಘಾನಿಸ್ತಾನದ ಅಲ್‌ಖೈದಾ, ತಾಲಿಬಾನ್ ಮತ್ತಿತರ ಉಗ್ರರಿಗೆ ಬೆಂಬಲವಾಗಿ ನಿಂತಿದ್ದಾನೆ.ಭದ್ರತೆ ವಿಚಾರದಲ್ಲಿ ಅಮೆರಿಕಕ್ಕೆ ಈಗ ದೊಡ್ಡ ಬೆದರಿಕೆ ಇರುವುದು ಹಫೀಜ್‌ನಿಂದಾಗಿಯೇ. ಹೀಗಾಗಿಯೇ ಅಮೆರಿಕದ ಕಣ್ಣು ಹಫೀಜ್ ಮೇಲೆ ಬಿದ್ದಿದೆ. ಹಫೀಜ್ ಬಗ್ಗೆ ಬಹುಮಾನದ ಘೋಷಣೆ ಮೊದಲು ಬಂದಾಗ ಅದರಲ್ಲಿ ಅವನ ಹತ್ಯೆಯ ಸೂಚನೆ ಕಂಡು ಬಂದಿತ್ತು.ಆದರೆ, ನಂತರ ನೀಡಿದ ಸ್ಪಷ್ಟನೆಯಲ್ಲಿ ಹತ್ಯೆಯ ಪ್ರಸ್ತಾಪವನ್ನು ತಳ್ಳಿಹಾಕಿ ಕಾನೂನು ಬದ್ಧವಾಗಿ ಹಫೀಜ್‌ನನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷಿಸಬಹುದಾದ ಸಾಕ್ಷ್ಯಾಧಾರದ ಅಗತ್ಯದ ಬಗ್ಗೆ ಒತ್ತಿ ಹೇಳಿರುವುದನ್ನು ನೋಡಿದರೆ, ಅಮೆರಿಕದ ಲೆಕ್ಕಾಚಾರ ಏನು ಎನ್ನುವುದು ಅರ್ಥವಾಗುತ್ತದೆ. ರಸ್ತೆಗಳನ್ನು ತೆರವು ಮಾಡಲು ಹಫೀಜ್ ಅವಕಾಶ ನೀಡಿ, ಅಪಪ್ರಚಾರ ನಿಲ್ಲಿಸುವುದಾದರೆ ಅದಕ್ಕಾಗಿ ಅಮೆರಿಕ ರಾಜಿಗೆ ಮುಂದಾದರೂ ಆಶ್ಚರ್ಯವಿಲ್ಲ.ಆದ್ದರಿಂದ ಭಾರತದ ಆಡಳಿತಗಾರರು ಅಮೆರಿಕದ ಈ ಘೋಷಣೆಯಿಂದ ರೋಮಾಂಚನಗೊಳ್ಳಬೇಕಾದ ಅಗತ್ಯವಿಲ್ಲ. ಮುಂಬೈ ದಾಳಿ ವಿಚಾರದಲ್ಲಿ ಹಫೀಜ್ ವಿರುದ್ಧ ಪಾಕಿಸ್ತಾನ ಕ್ರಮ ತೆಗೆದುಕೊಳ್ಳುವಂತೆ ಒತ್ತಡ ಹೇರುವ ಕೆಲಸವನ್ನು ಭಾರತವೇ ಮಾಡಬೇಕು.ಮುಂಬೈ ದಾಳಿಯ ಸಂಚಿನ ಹಿಂದೆ ಹಫೀಜ್ ಕೈವಾಡವಿದೆ ಎನ್ನುವುದಕ್ಕೆ ಅಗತ್ಯ ಸಾಕ್ಷ್ಯಾಧಾರಗಳನ್ನು ಭಾರತ ಒದಗಿಸಿಲ್ಲ ಎಂದು ಪಾಕಿಸ್ತಾನ ಹೇಳುತ್ತ ಬಂದಿದೆ. ಅಮೆರಿಕದ ಘೋಷಣೆಯೂ ಅದನ್ನೇ ಹೇಳುತ್ತಿದೆ. ಭಾರತ ಇದನ್ನು ಎಚ್ಚರಿಕೆಯಿಂದ ಗಮನಿಸಬೇಕು. ಅಮೆರಿಕದ ವಿರುದ್ಧ ಹಫೀಜ್ ಎಷ್ಟೇ ವಿಷ ಕಾರಿದರೂ ಅವನ ಅಂತಿಮ ಗುರಿ ಭಾರತವೇ ಆಗಿದೆ.

 

ಭಾರತದ ಒತ್ತಡದಿಂದಾಗಿ ಅಮೆರಿಕ ಇಂಥ ಕ್ರಮಕ್ಕೆ ಮುಂದಾಗಿದೆ ಎಂದು ಕೂಡಾ ಅವನು ಹೇಳಿದ್ದಾನೆ. ಪಾಕಿಸ್ತಾನ, ಭಾರತ, ಆಫ್ಘಾನಿಸ್ತಾನ ಮತ್ತಿತರ ಈ ವಲಯದ ಎಲ್ಲ ದೇಶಗಳನ್ನು ಸೇರಿಸಿ ಮುಘಲ್ ಸಾಮ್ರಾಜ್ಯದ ಮಾದರಿಯಲ್ಲಿ ಮುಸ್ಲಿಮ್ ಆಡಳಿತದ ಹೊಸ ಸಾಮ್ರಾಜ್ಯ ಸ್ಥಾಪಿಸುವುದು ತಮ್ಮ ಗುರಿಯೆಂದು ಹಿಂದೊಮ್ಮೆ ಅವನು ಹೇಳಿಕೊಂಡಿದ್ದ.ಆದ್ದರಿಂದ ಹಫೀಜ್ ಮತ್ತು ಅವನ ಸಂಘಟನೆಯಿಂದ ಭಾರತಕ್ಕೆ ದೊಡ್ಡ ಬೆದರಿಕೆ ಇದೆ. ಅಂತರರಾಷ್ಟ್ರೀಯ ಅಭಿಪ್ರಾಯ ರೂಪಿಸಿ ಅವನ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮಾಡುವುದು ಭಾರತಕ್ಕೆ ಅನಿವಾರ್ಯ. ಅವನನ್ನು ಹೀಗೆಯೇ ಬೆಳೆಯಲು ಬಿಟ್ಟರೆ ಒಂದು ದಿನ ತಮ್ಮ ದೇಶವನ್ನೂ ಅರಾಜಕತೆಗೆ ನೂಕುತ್ತಾನೆ ಎನ್ನುವುದನ್ನು ಪಾಕಿಸ್ತಾನ ಈಗಲೇ ಅರ್ಥಮಾಡಿಕೊಳ್ಳಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.