ಬುಧವಾರ, ಏಪ್ರಿಲ್ 21, 2021
29 °C

ಅಮೆರಿಕದ ದುಷ್ಕೃತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳ ಸಮುದ್ರದಲ್ಲಿ ಮೀನು ಹಿಡಿಯಲು ಹೋಗುವ ಭಾರತದ ಮೀನುಗಾರರು ಸಾವುನೋವಿಗೀಡಾಗುವ ಘಟನೆಗಳು ಹೆಚ್ಚುತ್ತಲೇ ಇವೆ. ಮಹಾರಾಷ್ಟ್ರ-ಗುಜರಾತ್‌ಗಳ ನೂರಾರು ಮೀನುಗಾರರು ಮುದ್ರದಲ್ಲಿ ತಮಗೆ ಅರಿವಿಲ್ಲದಂತೆ ಪಾಕಿಸ್ತಾನದ ಗಡಿಪ್ರವೇಶಿಸಿದ ಕಾರಣಕ್ಕೆ ಬಂಧನಕ್ಕೊಳಗಾಗಿ ಆ ದೇಶದ ಜೈಲುಗಳಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ.ಇತ್ತೀಚೆಗೆ ಕೇರಳದ ಕೊಚ್ಚಿ ಸಮೀಪ ಭಾರತೀಯ ಮೀನುಗಾರರ ಮೇಲೆ ಇಟಲಿಯ ತೈಲಸಾಗಾಣಿಕೆಯ ಹಡಗಿನ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದರು. ಆ ಘಟನೆಯ ನೆನಪು ಮಾಸಿಹೋಗುವ ಮೊದಲೇ ಇನ್ನೊಂದು ದುಷ್ಕೃತ್ಯ ನಡೆದಿದೆ.

 

ದುಬೈ ಸಮೀಪದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಭಾರತೀಯ ಮೂಲದ ಮೀನುಗಾರರ ಮೇಲೆ ಅಮೆರಿಕದ ನೌಕಾದಳ ಗುಂಡುಹಾರಿಸಿದ ಪರಿಣಾಮ ಒಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿರುವ ಅಮಾನವೀಯ ಘಟನೆ ನಡೆದಿದೆ.ಸಾಮಾನ್ಯ ದೋಣಿಗಳಲ್ಲಿ ಮೀನುಹಿಡಿಯಲು ಹೋಗುವವರಿಗೆ ಮೀನುಗಾರಿಕೆಯಲ್ಲದೆ ಬೇರೆ ಉದ್ದೇಶಗಳಿರುವುದಿಲ್ಲ. ಇಂತಹವರನ್ನು ಕಡಲುಗಳ್ಳರೋ, ಬೇಹುಗಾರರೋ ಎಂದು ವಿದೇಶಿ ಹಡಗುಗಳ ಸಿಬ್ಬಂದಿ ತಪ್ಪಾಗಿ ತಿಳಿದುಕೊಂಡು ದಾಳಿ ನಡೆಸುವುದೂ ಉಂಟು.

 

ಸಮುದ್ರದಲ್ಲಿನ ಅಂತರರಾಷ್ಟ್ರೀಯ ಗಡಿಯನ್ನು ಉಲ್ಲಂಘಿಸಿದ ಕಾರಣಕ್ಕೆ ಬಂಧನಕ್ಕೊಳಗಾಗಿ ಪಾಕಿಸ್ತಾನದ ಜೈಲಲ್ಲಿರುವ ಬಹುತೇಕ ಮೀನುಗಾರರು ಬೇಹುಗಾರಿಕೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ. ತಾವು ನೀಡಿದ ಸೂಚನೆಯನ್ನು ಉಲ್ಲಂಘಿಸಿ ಮುನ್ನುಗ್ಗಿದ್ದೇ ಗುಂಡು ಹಾರಿಸಲು ಕಾರಣ ಎಂಬ ಅಮೆರಿಕ ರಾಯಭಾರ ಕಚೇರಿಯ ಸ್ಪಷ್ಟೀಕರಣ ನಂಬುವಂತಹದ್ದಲ್ಲ.ಊರು ಬಿಟ್ಟುಬಂದು ಹೊಟ್ಟೆಪಾಡಿಗಾಗಿ ಕಡುಕಷ್ಟದ ಮೀನುಗಾರಿಕೆ ನಡೆಸುತ್ತಿರುವವರು ಅಮೆರಿಕದ ನೌಕಾಪಡೆಯ ಮೇಲೆ ದಾಳಿ ನಡೆಸಲು ಮುಂದಾಗುತ್ತಾರೆ ಎಂಬ ಹೇಳಿಕೆಯೇ ಬಾಲಿಶತನದಿಂದ ಕೂಡಿದ್ದು.

 

ಈ ಘಟನೆ ತಮ್ಮಿಂದ ಆಗಿರುವ ಪ್ರಮಾದ ಎನ್ನುವುದನ್ನೂ ಒಪ್ಪಿಕೊಳ್ಳದೆ ಇರುವ ಅಮೆರಿಕ ತನ್ನ ಎಂದಿನ ಯಜಮಾನಿಕೆಯ ಸೊಕ್ಕನ್ನು ಪ್ರದರ್ಶಿಸಿದೆ. ಭಾರತದ ತೀಕ್ಷ್ಣ ಪ್ರತಿಕ್ರಿಯೆಯ ನಂತರ ಕ್ಷಮೆಯಾಚಿಸಿ ದುಷ್ಕೃತ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ.

 

ಮೀನುಗಾರರ ದೋಣಿಯನ್ನು ಶತ್ರುಸೇನೆ ಎಂದು ತಪ್ಪಾಗಿ ತಿಳಿದುಕೊಳ್ಳಲು ಅಮೆರಿಕವನ್ನು ಕಾಡುತ್ತಿರುವ ಅಪರಾಧಿ ಮನೋಭಾವ ಕೂಡಾ ಕಾರಣ. ಇರಾನ್ ಮೇಲೆ ರಾಜತಾಂತ್ರಿಕ ಒತ್ತಡ ಹೇರುವುದಕ್ಕಾಗಿ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ನೌಕಾಸೇನೆಯನ್ನು ಜಮಾವಣೆ ಮಾಡುತ್ತಿರುವ ಅಮೆರಿಕ ಸಹಜವಾಗಿಯೇ ಶತ್ರುವಿನಿಂದ ದಾಳಿಯ ಭೀತಿಯನ್ನು ಎದುರಿಸುತ್ತಿದೆ. ಹಗ್ಗ ಕಂಡರೂ ಹಾವೆಂದು ಭ್ರಮಿಸುವ  ಭೀತಿಗ್ರಸ್ತ ಮನಸ್ಸಿನಿಂದಾಗುವ ಎಡವಟ್ಟು ಕೂಡಾ ಈ ದುರ್ಘಟನೆಗೆ ಕಾರಣವಾಗಿರಬಹುದು. ಆದರೆ ಅಮೆರಿಕದಂತಹ ದೊಡ್ಡ ದೇಶದ ಸೇನೆ ಹೊಣೆಗೇಡಿಯಂತೆ ಅಸಹಾಯಕರ ಮೇಲೆ ಗುಂಡುಹಾರಿಸುವಂತಹ ಅತಿರೇಕದ ಕ್ರಮಗಳಿಗೆ ಮುಂದಾಗುವುದು ಸರಿಯಲ್ಲ. ಮೀನುಗಾರರ ಮೇಲೆ ನಿರ್ದಿಷ್ಟ ಆರೋಪಗಳಿದ್ದರೆ ಅವರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಪ್ರಕಾರ ವಿಚಾರಣೆಗೊಳಪಡಿಸಬೇಕು.ಇಂತಹ ಘಟನೆಗಳು ಪುನರಾವರ್ತನೆಗೊಳ್ಳುತ್ತಿರುವುದರಿಂದ ಭಾರತ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅಮೆರಿಕದ ಒಂದು ಕ್ಷಮೆಯಾಚನೆಗೆ ತಲೆದೂಗಿ ಈ ದುಷ್ಕೃತ್ಯವನ್ನು ಮರೆತುಬಿಡಬಾರದು. ಇದನ್ನು ಒಂದು ಹತ್ಯೆಯೆಂದೇ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.

 

ಸಾವಿಗೀಡಾದ ಮೀನುಗಾರನ ಕುಟುಂಬಕ್ಕೆ ಪರಿಹಾರವನ್ನು ಅಮೆರಿಕ ಸರ್ಕಾರದಿಂದಲೇ ಕೊಡಿಸಬೇಕು. ಅಮೆರಿಕವೂ ಸೇರಿದಂತೆ ನೆರೆಯ ದೇಶಗಳ ಜತೆ ಮಾತುಕತೆ ನಡೆಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.