ಮಂಗಳವಾರ, ಮೇ 17, 2022
26 °C

ಅಮೆರಿಕದ ವಾಣಿಜ್ಯ ನೀತಿ ಶೀಘ್ರ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಅಮೆರಿಕ ಶೀಘ್ರದಲ್ಲೇ ಭಾರತ ಕುರಿತಾದ ತನ್ನ ವಾಣಿಜ್ಯ ನೀತಿಯನ್ನು ಪ್ರಕಟಿಸಲಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಗ್ಯಾರಿ ಲೋಕ್ ಅವರು ತಿಳಿಸಿದರು.

ಏರೊ ಇಂಡಿಯಾ-2011 ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಏರೊ ಇಂಡಿಯಾ-2011 ವೈಮಾನಿಕ ಪ್ರದರ್ಶನದಲ್ಲಿ ಅಮೆರಿಕದ ಭಾಗವಹಿಸುವಿಕೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು.‘ಈ ಬಾರಿ ಏರೊ ಇಂಡಿಯಾ ಪ್ರದರ್ಶನದಲ್ಲಿ ಅಮೆರಿಕದ 24 ಕಂಪೆನಿಗಳು ಭಾಗವಹಿಸುತ್ತಿವೆ. ವೈಮಾನಿಕ ಪ್ರದರ್ಶನದಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಐತಿಹಾಸಿಕ ಪಾಲುದಾರಿಕೆ ನಡೆಯಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಭಾರತ ಮತ್ತು ಅಮೆರಿಕದ ನಡುವಿನ ವಾಣಿಜ್ಯ ಸಂಬಂಧದ ಕುರಿತು ಮಾತನಾಡಿದ ಅವರು, ‘ಕಳೆದ ಎರಡು ವರ್ಷಗಳಲ್ಲಿ ಅಮೆರಿಕ, ಭಾರತಕ್ಕೆ ಮಾಡುವ ರಫ್ತಿನ ಪ್ರಮಾಣದಲ್ಲಿ ಶೇ 36ರಷ್ಟು ಏರಿಕೆ ಕಂಡುಬಂದಿದೆ’ ಎಂದರು.‘ನಾವು ಎರಡೂ ದೇಶಗಳ ಸಂಬಂಧಕ್ಕೆ ಅತ್ಯಂತ ಸುಭದ್ರ ತಳಹದಿ ಹಾಕುತ್ತಿದ್ದೇವೆ, 2002ರಿಂದ 2009ರ ನಡುವೆ ಅಮೆರಿಕ ಮತ್ತು ಭಾರತದ ನಡುವಿನ ವಹಿವಾಟು ನಾಲ್ಕು ಪಟ್ಟು ಏರಿಕೆ ಕಂಡಿದೆ’ ಎಂದು ಮಾಹಿತಿ ನೀಡಿದರು.ಭಾರತದಲ್ಲಿನ ಅಮೆರಿಕ ರಾಯಭಾರಿ ಟಿಮೋತಿ ರೋಮರ್ ಮಾತನಾಡಿ, ‘ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತದೊಂದಿಗಿನ ಹಾರ್ದಿಕ ಸಂಬಂಧಕ್ಕೆ ಬಹಳ ಪ್ರಾಧಾನ್ಯತೆ ನೀಡುತ್ತಿದ್ದಾರೆ, ವಾಣಿಜ್ಯ ವಹಿವಾಟು ನಮ್ಮ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ’ ಎಂದರು.ಭಾರತ ಮತ್ತು ಅಮೆರಿಕ ದೇಶಗಳು ವೈಮಾನಿಕ ಕ್ಷೇತ್ರ, ನಾಗರಿಕ ಅಣು ಸಹಕಾರ ಕ್ಷೇತ್ರಗಳಲ್ಲಿ ಬಲವಾದ ಸಂಬಂಧಗಳನ್ನು ಸ್ಥಾಪಿಸುತ್ತಿವೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.