ಮಂಗಳವಾರ, ಜೂನ್ 22, 2021
29 °C

ಅಮೆರಿಕ-ಭಾರತ ವಾಣಿಜ್ಯ ಒಕ್ಕೂಟದ ಪ್ರಶಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಮಂಡಿಸಿದ ಬಜೆಟ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಔಷಧ ಹಾಗೂ ಆರೋಗ್ಯ ವಲಯಗಳಲ್ಲಿ ಅತ್ಯವಶ್ಯಕವಾದ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟಿರುವುದನ್ನು ಅಮೆರಿಕ ಮತ್ತು ಭಾರತೀಯ ಉನ್ನತ ವಾಣಿಜ್ಯ ಒಕ್ಕೂಟವು (ಯುಎಸ್‌ಎಐಸಿಸಿ) ಶನಿವಾರ ಇಲ್ಲಿ ಹೊಗಳಿದೆ.ಆದರೆ `ಕೆಲವು ಆರ್ಥಿಕ ಸುಧಾ ರಣೆಗಳಿಗೆ ಬಜೆಟ್ ಆಶಾದಾಯ ಕವಾಗಿಲ್ಲ~ ಎಂದೂ ಅಭಿ ಪ್ರಾಯಪಟ್ಟಿದೆ.

ಹಣದುಬ್ಬರಕ್ಕೆ ಕಾರಣ:`ಅಬಕಾರಿ ತೆರಿಗೆಯಲ್ಲಿ ಹೆಚ್ಚಳ ಮಾಡಿರುವುದು ಹಣದುಬ್ಬರಕ್ಕೆ ಕಾರಣವಾಗಲಿದ್ದು, ಆರ್ಥಿಕ ಬೆಳವಣಿಗೆ ಮತ್ತು ಬಡ್ಡಿದರದ ಮೇಲೆ ಪರಿಣಾಮ ಬೀರಲಿದೆ.

 

ಪ್ರಸಕ್ತ ಹಣಕಾಸು ವರ್ಷದ ಅಂದಾಜು ಬೆಳವಣಿಗೆ ದರವನ್ನು ಶೇ 6.9ಕ್ಕೆ ನಿಗದಿಪಡಿಸಿರುವುದು ನಿರಾಶಾದಾಯಕವಾಗಿದ್ದು, ಇದರಿಂದ ಬೃಹತ್ ಸುಧಾರಣೆಗಳಿಗೆ ಹಿನ್ನಡೆಯಾಗಲಿದೆ. ಅಭಿವೃದ್ಧಿ ದರವನ್ನು ಕಾಯ್ದುಕೊಳ್ಳಲು ಗ್ರಾಮೀಣಾಭಿವೃದ್ಧಿ, ಆರೋಗ್ಯ, ಔಷಧ, ಶಿಕ್ಷಣ ಮತ್ತಿತರ ಕ್ಷೇತ್ರಗಳಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ~ ಎಂದು ಇಲ್ಲಿನ ಅಮೆರಿಕ ಮತ್ತು ಭಾರತೀಯ ವಾಣಿಜ್ಯ ಸಂಸ್ಥೆಗಳನ್ನು ಪ್ರತಿನಿಧಿಸುವ ಈ ಒಕ್ಕೂಟದ ಅಧ್ಯಕ್ಷ ಕರುಣ್ ರಿಷಿ ತಿಳಿಸಿದ್ದಾರೆ.`ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಗೆ ಹಣಕಾಸು ನೆರವನ್ನು ಶೇ 15ರಷ್ಟು ಹೆಚ್ಚಿಸಿರುವುದು ಮತ್ತು ರಾಷ್ಟ್ರೀಯ ನಗರ ಆರೋಗ್ಯ ಯೋಜನೆಯನ್ನು ಆರಂಭಿಸುವ ಮೂಲಕ ಸಾರ್ವಜನಿಕ ಆರೋಗ್ಯ ನೀತಿಗೆ ಬಲ ಒದಗಿಸಿರುವುದು ಯೋಗ್ಯವಾಗಿದೆ.ಶಿಕ್ಷಣಕ್ಕೆ ಶೇ 18ರಷ್ಟು ಅನುದಾನ ಹೆಚ್ಚಿಸಿರುವುದು ಸಹ ಪ್ರಶಂಸಾರ್ಹ. ಮೂಲಸೌಕರ್ಯ ಅಭಿವೃದ್ಧಿ ವಲಯದಲ್ಲಿ ಬಂಡವಾಳ ಹೂಡಿಕೆಗೆ ಬೆಂಬಲ ನೀಡಿರುವುದು ಮತ್ತು ವಿದೇಶಿ ವಾಣಿಜ್ಯ ಸಾಲ ನೀತಿಯನ್ನು ಉದಾರೀಕರಿಸಿರುವುದು ಮತ್ತಿತರ ಕ್ರಮಗಳು ಅಭಿವೃದ್ಧಿ ಪರವಾಗಿವೆ~ ಎಂದು ಅವರು ನುಡಿದಿದ್ದಾರೆ.ಸುಧಾರಣೆ ಕೊರತೆ: ಈ ಮಧ್ಯೆ, ಅಮೆರಿಕ-ಭಾರತ ವಾಣಿಜ್ಯ ಮಂಡಳಿ (ಯುಎಸ್‌ಐಬಿಸಿ)ಯು ಪ್ರಣವ್ ಅವರ 2012-13ನೇ ಸಾಲಿನ ಬಜೆಟ್ ಅತ್ಯಗತ್ಯವಾದ ಬದಲಾವಣೆಯ ಸುಧಾರಣೆಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಟೀಕಿಸಿದೆಯಲ್ಲದೆ, ಹೆಚ್ಚು ವಿದೇಶಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಪಾರದರ್ಶಕ ತೆರಿಗೆ ನೀತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದೆ.`ಪ್ರಬಲ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ಮತ್ತು ಜಾಗತಿಕ ವ್ಯಾಪಾರವನ್ನು ವಿಸ್ತರಿಸುವ ಗುರಿಯೊಂದಿಗೆ ವಿದೇಶಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಸುಧಾರಣಾ ತೆರಿಗೆ ನೀತಿಗಳನ್ನು ಪ್ರಕಟಿಸಬೇಕು~ ಎಂದು ಮಂಡಳಿಯ ಅಧ್ಯಕ್ಷ ರಾನ್ ಸೋಮರ್ಸ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಿಯಾನೆ ಫಾರೆಲ್ ಸಲಹೆ ನೀಡಿದ್ದಾರೆ.ನೈಜತೆಗೆ ಹತ್ತಿರವಿದೆ (ಲಂಡನ್ ವರದಿ):ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಅವರು, `ಕೇಂದ್ರ ಬಜೆಟ್ ಭಾರತದ ನೈಜ ಪರಿಸ್ಥಿತಿಗೆ ಅನುಗುಣವಾಗಿದೆ~ ಎಂದು ಪ್ರತಿಕ್ರಿಯಿಸಿದ್ದಾರೆ. ದೇಶದಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಸುಧಾರಿಸುವುದರ ಜೊತೆಗೆ ಆರ್ಥಿಕತೆಯನ್ನು ಉತ್ತಮಪಡಿಸಬೇಕಿದೆ ಎಂದಿದ್ದಾರೆ. ಇದೊಂದು `ಒಳ್ಳೆಯ ಆಯವ್ಯಯ~ ವಾಗಿದ್ದು, ಇದಕ್ಕಾಗಿ ಪ್ರಣವ್ ಅವರನ್ನು ಅಭಿನಂದಿಸುವುದಾಗಿಯೂ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.