ಅರಣ್ಯರೋದನವಾದ ರೈತರ ಕೂಗು

7

ಅರಣ್ಯರೋದನವಾದ ರೈತರ ಕೂಗು

Published:
Updated:

ಹಾಸನ: ಮೇಲಿಂದ ಮೇಲೆ ನಡೆಯುತ್ತಿರುವ ಕಾಡಾನೆಗಳ ದಾಳಿಯಿಂದ ಆಲೂರು ತಾಲ್ಲೂಕಿನ ರೈತರು ಕಂಗೆಟ್ಟಿದ್ದು, ರೈತರ ಕೂಗೂ ಈಚೆಗೆ ಅರಣ್ಯ ರೋದನವಾಗುತ್ತಿದೆ.ಆಲೂರು ತಾಲ್ಲೂಕಿನಲ್ಲಿ ಆನೆಗಳ ಸಮಸ್ಯೆ ಮೂರು ದಶಕಗಳಷ್ಟು ಹಳೆಯದು. ಕಾಲಾಂತರದಲ್ಲಿ ಈ ಸಮಸ್ಯೆ ಹೊಸ ಹೊಸ ಮುಖಗಳನ್ನು ಪಡೆಯುತ್ತ ಹೋಗಿರುವುದು ವಿಶೇಷವಾಗಿದೆ. ಆರಂಭದ ದಿನಗಳಲ್ಲಿ ಆನೆ ಹೊಲಕ್ಕೆ ಬಂದು ಹೋಗಿದೆ ಎಂದು ತಿಳಿದರೆ  ರೈತರು ಹಿಗ್ಗುತ್ತಿದ್ದರು.ಗಣೇಶನೇ ಬೆಳೆ ತಿಂದು ಹೋಗಿದ್ದಾನೆ ಎಂಬ ನಂಬಿಕೆಯಿಂದ ಆನೆ ದಾಳಿ ಮಾಡಿದ ಜಾಗದಲ್ಲಿ ಪೂಜೆ ಮಾಡುತ್ತಿದ್ದರು. ವರ್ಷಗಳುರುಳಿದಂತೆ ದಾಳಿ ಹೆಚ್ಚಾಗುತ್ತ ಬಂದು ರೈತರ ನಂಬಿಕೆ ಶಿಥಿಲವಾಗುತ್ತ ಹೋಯಿತು. ಆನೆ ತಡೆಯಲು ಅರಣ್ಯ ಇಲಾಖೆ ಒತ್ತಾಯಿಸಲು ಆರಂಭಿಸಿದರು.ಕಳೆದ ಒಂದು ದಶಕದಲ್ಲಿ ಅನೇಕ ಮಂದಿ ತಮ್ಮ ಹೊಲಗಳಿಗೆ ಸೋಲಾರ್ ಬೇಲಿ ಅಳವಡಿಸಿದ್ದರೆ, ಆರ್ಥಿಕವಾಗಿ ದುರ್ಬಲರಾಗಿರುವವರು ಹೊಲಗಳ ಸುತ್ತ ತಂತಿ ಬೇಲಿ ಹಾಕಿ ರಾತ್ರಿ ವೇಳೆಯಲ್ಲಿ ವಿದ್ಯುತ್ ಹರಿಸಲೂ ಆರಂಭಿಸಿದ್ದರು. ಈಚೆಗೆ ನಡೆದ ಮೂರು ಆನೆಮರಿಗಳ ಸಾವಿಗೆ ವಿದ್ಯುತ್ ಸ್ಪರ್ಶವೇ ಕಾರಣ ಎಂದು ಮರಣೋತ್ತರ ಪರೀಕ್ಷೆಯಿಂದ ದಿಟಗೊಂಡಿದೆ. ಈಚಿನ ಒಂದು ದಶಕದಲ್ಲಿ ಆಲೂರು ಭಾಗದಲ್ಲಿ ಅಕ್ಷರಶಃ ಮಾನವ ಹಾಗೂ ಆನೆಗಳ ನಡುವೆ ಸಂಘರ್ಷ ಆರಂಭವಾಗಿದೆ.ಕಾಣೆಯಾದ ಕಾರಿಡಾರ್

ಆನೆ ಹಾವಳಿ ಹೆಚ್ಚಲು ಅರಣ್ಯ ಒತ್ತುವರಿಯೇ ಕಾರಣ ಎಂದು ಒಂದು ಗುಂಪು ಬಲವಾಗಿ ವಾದಿಸುತ್ತ ಬಂದಿದೆ. ಆದರೆ ಆಲೂರಿನ ರೈತರು ಇದನ್ನು ಒಪ್ಪುವುದಿಲ್ಲ. ಅರಣ್ಯದೊಳಗೆ ನಡೆಯುತ್ತಿರುವ ಅಕ್ರಮ, ಗಣಿಗಾರಿಕೆ, ಮರಗಳ್ಳತನಗಳಿಂದ ಆನೆಗಳು ಹೆದರಿ ನಾಡಿಗೆ ಬರುತ್ತವೆ ಎಂದು ಅವರು ವಾದಿಸುತ್ತಾರೆ. ಆನೆಗಳಿಗೆ ಪ್ರಿಯವಾದ ಮರಗಳು ಈಗ ಕಾಡಿನಲ್ಲಿ ಸಿಗುತ್ತಿಲ್ಲ, ಆದ್ದರಿಂದ ಆಹಾರ ಅರಸಿಕೊಂಡು ನಾಡಿಗೆ ಬರುತ್ತವೆ ಎಂಬುದು ರೈತರ ವಾದ.‘ಆಲೂರು ಪ್ರದೇಶದಲ್ಲಿ ಸುಮಾರು 29 ಆನೆಗಳಿವೆ ಇಲ್ಲಿರುವ ಕಾಡು ಇಷ್ಟೊಂದು ಆನೆಗಳ ಆಹಾರದ ಅಗತ್ಯ ಪೂರೈಸಲಾರದು. ಇವುಗಳನ್ನು ಸ್ಥಳಾಂತರಿಸುವುದೊಂದೇ ಸಮಸ್ಯೆಗೆ ಪರಿಹಾರ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ ನುಡಿಯುತ್ತಾರೆ. ಒಂದು ಆನೆ ಸ್ವಚ್ಛಂದವಾಗಿರಲು 3 ರಿಂದ 5 ಚದರ ಕಿ.ಮೀ. ಅರಣ್ಯ ಬೇಕಾಗುತ್ತದೆ.ಆಲೂರು ಪ್ರದೇಶದಲ್ಲಿರುವುದು ಒಂದು ಚದರ ಕಿ.ಮೀ. ಅರಣ್ಯ ಮಾತ್ರ. ಇಷ್ಟು ಅರಣ್ಯದಲ್ಲಿ 29 ಆನೆಗಳಿವೆ. ಅರಣ್ಯದೊಳಗೆ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳು, ನಿರ್ಮಾಣವಾಗಿರುವ ಜಲಾಶಯಗಳಿಂದಾಗಿ ಆನೆಗಳ ಕಾರಿಡಾರ್ ಛಿದ್ರಗೊಂಡು ಅರಣ್ಯ ಪುಟ್ಟ ದ್ವೀಪದಂತಾಗಿದೆ. ಆನೆಗಳು ಬೇರೆ ಕಡೆಗೆ ಹೋಗಲಾರದಂಥ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಆನೆಗಳನ್ನು ನಿಯಂತ್ರಿಸುವುದು ಅಸಾಧ್ಯ. ಎಲ್ಲ ಆನೆ ಸ್ಥಳಾಂತರಕ್ಕೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಪತ್ರ ಪ್ರಸ್ತಾವನೆ ಕಳುಹಿಸಿದ್ದೇವೆ’ ಎಂದರು ಅಂಬಾಡಿ.

ಆನೆ ರಾಜಕೀಯ

ಆನೆಗಳ ದಾಳಿ ಹೆಚ್ಚುವುದರ ಜತೆಗೇ ಆನೆ ರಾಜಕೀಯವೂ ಆರಂಭವಾಗಿದೆ. ಹಿಂದೆ ಆನೆ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಮುಖಂಡರು ಧಾವಿಸಿ ಸಾಂತ್ವನ ಹೇಳುತ್ತಿದ್ದರು.ಈಗ ಸ್ಥಳೀಯ ರೈತರ ವಿರೋಧವನ್ನು ಎದುರಿಸಲಾಗದೆ ಯಾರೂ ಆ ಕೆಲಸ ಮಾಡುತ್ತಿಲ್ಲ. ಅನಿವಾರ್ಯವಾಗಿ ಸ್ಥಳಕ್ಕೆ ಹೋಗಬೇಕಾಗಿರುವ ಅಧಿಕಾರಿಗಳಿಗೆ ರೈತರಿಂದ ಏಟು ತಿನ್ನದೆ ಮರಳಿ ಬರುವುದೇ ದೊಡ್ಡ ಸಾಹಸವಾಗುತ್ತಿದೆ.ಆದರೆ ದಾಳಿ ಘಟನೆ ನಡೆದ ಬಳಿಕ ಪ್ರತಿಭಟನೆಗಳು ನಡೆಯುತ್ತಿವೆ. ಅರಸೀಕೆರೆಯಲ್ಲಿ ಆನೆ ದಾಳಿ ನಡೆಯುತ್ತಿದ್ದಂತೆ ಶಾಸಕ ಶಿವಲಿಂಗೇಗೌಡ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದಿಗ್ಬಂಧನ, ಕಚೇರಿಗೆ ಬೀಗ ಹಾಕಿ ಇಡೀ ದಿನ ಪ್ರತಿಭಟನೆ ನಡೆದಿತ್ತು. ಇತ್ತ ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ, ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ಕಾಂಗ್ರೆಸ್‌ನ ಮಾಜಿ ಸಚಿವ ಶಿವರಾಮ್ ಮುಂತಾದವರು ಈಚೆಗೆ ರಸ್ತೆ ತಡೆ ನಡೆಸಿದ್ದರು. ಆದರೆ ಇಲ್ಲಿ ಪ್ರತಿಭಟನೆ ನಡೆಸುವವರು ವಿಧಾನಸಭೆಯಲ್ಲಿ ಈ ವಿಚಾರವನ್ನೇ ಎತ್ತುವುದಿಲ್ಲ ಎಂಬುದು ಜನರ ಆರೋಪವಾಗಿದೆ. ಆನೆಗಳ ಸ್ಥಳಾಂತರಕ್ಕೆ ಕೇಂದ್ರದ ಅನುಮತಿ ಬೇಕು, ಅದಕ್ಕೆ ಸಂಸದರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಅರಣ್ಯ ಇಲಾಖೆಯವರು ಕಳುಹಿಸುವ ಪತ್ರಕ್ಕಿಂತ ಸಂಸದರ ಧ್ವನಿ ಕೇಂದ್ರದಲ್ಲಿ ಹೆಚ್ಚು ಪರಿಣಾಮ ಉಂಟುಮಾಡುತ್ತದೆ.ಸಂಸತ್ತಿನಲ್ಲಿ ಹಾಸನ ಜಿಲ್ಲೆಯನ್ನು ಮಾಜಿ ಪ್ರಧಾನಿಯೇ ಪ್ರತಿನಿಧಿಸುತ್ತಿದ್ದರೂ ಅಲ್ಲಿ ಈ ವಿಚಾರವೇ ಪ್ರಸ್ತಾಪವಾಗಿಲ್ಲ. ಈ ಕಾರಣಕ್ಕಾಗಿ ಹಾಸನದಲ್ಲಿ ಹಲವು ವರ್ಷಗಳ ಬಳಿಕ ನಾಗರಿಕರು ದೇವೇಗೌಡರಿಗೆ ಧಿಕ್ಕಾರ ಕೂಗಿದ್ದಾರೆ.ಪರಿಹಾರದ ಆಮಿಷ

ಆನೆ ದಾಳಿಯಿಂದ ಸಿಟ್ಟಿಗೇಳುವ ರೈತರನ್ನು ತಣ್ಣಗಾಗಿಸಲು ಅಧಿಕಾರಿಗಳು ‘ಪರಿಹಾರ ಹೆಚ್ಚಳ’ ಎಂಬ ಹೊಸ ಅಸ್ತ್ರ ಕಂಡುಕೊಂಡಿದ್ದಾರೆ. ಈಚೆಗೆ ನಡೆದ ಪ್ರತಿ ಸಭೆ, ಪ್ರತಿಭಟನೆ ಸಂದರ್ಭದಲ್ಲಿ ಇದರ ಪ್ರಸ್ತಾಪವಾಗಿದೆ. ‘ರೈತರಿಗೆ ನೀಡುವ ಪರಿಹಾರವನ್ನು ಹೆಚ್ಚಿಸಲು ಪ್ರಸ್ತಾವನೆ ಕಳುಹಿಸಲಾಗಿದೆ. ಬೆಳೆ ನಷ್ಟಕ್ಕೆ ಕನಿಷ್ಟ 25ಸಾವಿರ ಹಾಗೂ ಪ್ರಾಣ ಹಾನಿಗೆ ಈಗಿನ 2 ಲಕ್ಷ ರೂಪಾಯಿ ಪರಿಹಾರವನ್ನು ಐದು ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆ ಇದೆ’ ಎಂಬ ಭರವಸೆ ನೀಡುತ್ತಿದ್ದಾರೆ. ಐದು ಲಕ್ಷ ರೂಪಾಯಿ ಮಾತು ಕೇಳುತ್ತಿದ್ದಂತೆ ರೈತರೂ ತಣ್ಣಗಾಗುತ್ತಿದ್ದಾರೆ.ಈ ನಡುವೆ ನೀವು ಆನೆ ದಾಳಿ ನಿಯಂತ್ರಿಸದಿದ್ದರೆ ನಾವೇ ಕೊಲ್ಲುತ್ತೇವೆ ಎಂದೂ ಗ್ರಾಮಸ್ಥರು ನುಡಿಯಲಾರಂಭಿಸಿದ್ದಾರೆ. ಈಗಾಗಲೇ ಮೂರು ಆನೆ ಮರಿಗಳು ದಾರುಣ ಸಾವು ಕಂಡಿದ್ದು, ಇನ್ನಷ್ಟು ಪ್ರಾಣ ಹಾನಿಯಾಗುವ ಮೊದಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry