ಭಾನುವಾರ, ಏಪ್ರಿಲ್ 11, 2021
32 °C

ಅರಣ್ಯ ಪ್ರದೇಶ ವೃದ್ಧಿ ಅವಾಸ್ತವಿಕ ಗುರಿ : ರಮೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಜನಸಂಖ್ಯೆ ಹೆಚ್ಚಳ, ಅಭಿವೃದ್ಧಿ ಯೋಜನೆಗಳ ಒತ್ತಡದ ನಡುವೆ ಅರಣ್ಯ ಪ್ರದೇಶವನ್ನು ಶೇ 33ಕ್ಕೆ ಹೆಚ್ಚಳ ಮಾಡುತ್ತೇವೆ ಎನ್ನುವುದು ಅವಾಸ್ತವಿಕ ಎಂದ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಜೈರಾಂ ರಮೇಶ್, ಐಟಿ ಉದ್ದಿಮೆಗಳು ‘ಹಸಿರು ವಲಯ’ದ ನಿಯಮಗಳನ್ನು ನಿಖರವಾಗಿ ಪಾಲಿಸುತ್ತಿಲ್ಲ ಎಂದು ದೂಷಿಸಿದರು.ಸಿಐಐ ಆಯೋಜಿಸಿದ್ದ ‘ಹಸಿರು ಭೂದೃಶ್ಯ ಸಮಿತಿ-2011’ ಸಭೆಯಲ್ಲಿ ಮಾತನಾಡಿದ ಅವರು, ನಾವು ಬರೀ ಅರಣ್ಯ ವೃದ್ಧಿ ಮಾಡುತ್ತೇವೆ ಎಂದು ಬಡಬಡಿಸುವುದಕ್ಕಿಂತ ಈಗ ಇರುವ ಅರಣ್ಯದ ಗುಣಮಟ್ಟವನ್ನು ಹೆಚ್ಚಿಸುವ ಬಗ್ಗೆ ಗಮನ ಹರಿಸಬೇಕು ಎಂದರು.‘ಭಾರತದಲ್ಲಿ ಸದ್ಯ ಶೇ 21ರಷ್ಟು ಅರಣ್ಯ ಸಂಪತ್ತು ಇದೆ. ನಮ್ಮಂತಹ ದೇಶದಲ್ಲಿ ಇದನ್ನು ಶೇ 33ಕ್ಕೆ ಹೆಚ್ಚಳ ಮಾಡುವ ಗುರಿ ಹೊಂದಿರುವುದೇ ಅವಾಸ್ತವಿಕ. ಏಕೆಂದರೆ ದೇಶದಲ್ಲಿ ಈಗ 102 ಕೋಟಿ ಜನಸಂಖ್ಯೆ ಇದೆ. 2040ರ ಹೊತ್ತಿಗೆ ಇದು 106 ಕೋಟಿಗೆ ಏರಿಕೆ ಆಗುವ ಅಂದಾಜಿದೆ. ಹೀಗೆ ಜನಸಂಖ್ಯೆ ಏರಿಕೆಯಾದರೆ ಅಭಿವೃದ್ಧಿ ಯೋಜನೆಗಳು ಅತ್ಯಗತ್ಯವಾಗುತ್ತವೆ. ಇಂಥ ಒತ್ತಡಗಳ ಮಧ್ಯೆ ಕಾಡನ್ನು ವೃದ್ಧಿಸುವುದಾದರೂ ಹೇಗೆ?’ ಎಂದು ಪ್ರಶ್ನಿಸಿದರು.‘ಅರಣ್ಯದ ಶೇ 40ರಷ್ಟು ಭಾಗದಲ್ಲಿ ಮರಗಳ ದಟ್ಟಣೆಯೇ ಇಲ್ಲ.  ಸೂರ್ಯನ ರಶ್ಮಿ ಧಾರಳವಾಗಿ ನೆಲಕ್ಕೆ ಬೀಳುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ ಅವರು, ‘ಐಟಿ ಉದ್ದಿಮೆದಾರರು ಹಸಿರು ವಲಯದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಬಿಗಿಯುತ್ತಾರೆ. ಆದರೆ ಅನೇಕ ಐಟಿ ಉದ್ದಿಮೆಗಳು ಹಸಿರು ವಲಯದ ನೀತಿ, ನಿಯಮಗಳ ಅನುಷ್ಠಾನವನ್ನು ಕಡೆಗಣಿಸಿವೆ’ ಎಂದು ಕಿಡಿಕಾರಿದರು. ‘ಐಟಿ ಉದ್ದಿಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇರುತ್ತದೆ. ಇದರಿಂದ ವಿದ್ಯುತ್ ಬಳಕೆ ಕೂಡ ಹೆಚ್ಚು. ವಿದ್ಯುತ್ ಬಳಕೆ ಹೆಚ್ಚಿದಷ್ಟು ಇಂಗಾಲದ ಹೊರಸೂಸುವಿಕೆ ಕೂಡ ಅಧಿಕವಾಗುತ್ತದೆ. ಈಗ ಶೇ 38ರಷ್ಟು ಇಂಗಾಲವು ಹೊರ ಹೊಮ್ಮುತ್ತಿದೆ. ಇದರಲ್ಲಿ ಕೈಗಾರಿಕೆಗಳ ಪಾಲು ಶೇ 23 ಇದ್ದರೆ, ಕೃಷಿ ಕ್ಷೇತ್ರದ ಪಾಲು ಕೇವಲ 17 ಪ್ರತಿಶತ ಮಾತ್ರ’ ಎಂದರು.

ಮುಂಜಾಗ್ರತೆ ಅಗತ್ಯ’

‘ಜಪಾನ್‌ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ನಂತರ ಉಂಟಾಗಿರುವ ಅಣು ಸ್ಥಾವಿರಗಳ ಸ್ಫೋಟ, ವಿಕರಣ ಹೊರಸೂಸುವಿಕೆ ನಮಗೊಂದು ಪಾಠ. ನಮ್ಮ ಅಣು ಸ್ಥಾವರಗಳ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚುವರಿಯಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ’ ಎಂದು ರಮೇಶ್ ಹೇಳಿದರು.‘ಜಪಾನ್‌ನಲ್ಲಿ ವಿಕರಣ ಹೊರ ಹೊಮ್ಮುತ್ತಿರುವುದು ನಿಜಕ್ಕೂ ಕಳವಳಕಾರಿ ವಿಚಾರ. ಇದರಿಂದ ಆತಂಕಗೊಂಡು ಭಾರತ ತನ್ನ ಪರಮಾಣು ಯೋಜನೆಗಳನ್ನು ಕೈಬಿಡುತ್ತದೆಂದು ನನಗೆ ಅನಿಸುವುದಿಲ್ಲ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.