ಸೋಮವಾರ, ಮಾರ್ಚ್ 1, 2021
23 °C

ಅರಿವು ಮತ್ತು ಅಭಿವ್ಯಕ್ತಿ

ಎಂ.ಆರ್‌. ನಾಗರಾಜು Updated:

ಅಕ್ಷರ ಗಾತ್ರ : | |

ಅರಿವು ಮತ್ತು ಅಭಿವ್ಯಕ್ತಿ

ಶಿಕ್ಷಣದಲ್ಲಿ ಉಪೇಕ್ಷಿತವಾದದ್ದು ಸಮಾಜದಲ್ಲಿ ಉದಯಿಸಿ ಉತ್ಕರ್ಷಕ್ಕೆ ಬರುವುದು ಕಷ್ಟ. ಹಾಗಾಗಿ ಸಂವಹನ ಸರಸತೆ, ಸಾಮಾನ್ಯ ಸಂಭಾಷಣೆ, ಸಾಹಿತ್ಯ ಎಲ್ಲೆಲ್ಲಿಯೂ ಕೊರತೆ ಎನಿಸಿದರೆ ಆಶ್ಚರ್ಯವಿಲ್ಲ.

‘ಕು ‘ಕುಹೂ ಕುಹೂ ಕೋಕಿಲವಾಣಿ, ಜಗಜುಮ್ಮೆಂದಿತು ಇದ ಕೇಳಿ, ನೀರವ ಪರ್ವತ ಕಾನನ ಶ್ರೇಣಿ ಮರುದನಿಗೈದಿತು ಮುದತಾಳಿ’ -ಇದು ಕುವೆಂಪು ಅವರ ಕವನವೊಂದರ ಪ್ರಾರಂಭಿಕ ಸಾಲು. ಈ ಸಾಲು ನನ್ನನ್ನು ವಿದ್ಯಾರ್ಥಿದೆಸೆಯಲ್ಲಿಯೇ ಕಟ್ಟಿಹಾಕಿತ್ತು.ಶಾಲಾ ಕಲಿಕೆ ಕುರಿತೇ ಕುವೆಂಪು ಈ ಸಾಲು ಬರೆದಿರಬೇಕು ಎಂದು ಆಗ ನನಗೆ ಅನಿಸಿದ್ದುಂಟು. ಕವಿಗಳು / ಕಲಾವಿದರು / ವಿಜ್ಞಾನಿಗಳು / ಸಮಾಜಸುಧಾರಕರು / ಸಂತರು ನೀಡಿರುವ ಸಾರ್ವಕಾಲಿಕ, ಸಾರ್ವತ್ರಿಕ, ಸಾರ್ವನ್ವಯಿಕ ಸತ್ಯಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಅಧ್ಯಾಪಕರ ವಾಣಿಯಲ್ಲಿ ಯಾಂತ್ರಿಕ ಪ್ರತಿಧ್ವನಿ ಇರಬಾರದು.ಜೀವಂತಿಕೆಯ ಮೊಳಗು ಇರಬೇಕು; ಹಾಗೂ ಅದನ್ನು ಮಕ್ಕಳು ಗ್ರಹಿಸುವಂತಾಗಬೇಕು. ಕೆಲವರ ವಾಣಿಯಾದರೋ ತನ್ನಲ್ಲಿ ತುಂಬಿಕೊಂಡ ಜೀವಂತಿಕೆಯಿಂದಾಗಿ, ಯಾಂತ್ರಿಕ ಪ್ರತಿಧ್ವನಿಯಾದರೂ ಪ್ರಭಾವಶಾಲಿಯಾಗಿರಬಲ್ಲದು ಎಂದೆಲ್ಲಾ ನನಗೆ ಅನಿಸಿತ್ತು. ಈಗಲೂ ಆ ಕುರಿತ ವಿಚಾರ ಆಪ್ಯಾಯಮಾನವಾಗಿಯೇ ತೋರುತ್ತದೆ.ಶಿಕ್ಷಕರ ವಾಣಿಯು ಸಾಧಕರ ವಾಣಿಯ ಮರುದನಿ. ವಿದ್ಯಾರ್ಥಿಯ ಬರವಣಿಗೆ/ ಮಾತು ಅಧ್ಯಾಪಕರ ವಾಣಿಯ ಮರುದನಿ. ಹೀಗಾಗಿ ವಿದ್ಯಾರ್ಥಿಯ ಮುಕ್ತ ಮನವರಿಕೆಯನ್ನು ಮನಸಾರೆ ತನ್ನ ಮಾತಿನಲ್ಲಿ ಇತರರಿಗೆ ಮನದಟ್ಟು ಮಾಡಿಕೊಡುವ ಅವಕಾಶ ಅತ್ಯಂತ ವಿರಳ.ಅಧ್ಯಾಪಕರು ಲಿಖಿತವಾಗಿ ಬರೆಸಿದ ನೋಟ್ಸ್ ಅರ್ಥಾತ್ ಟಿಪ್ಪಣಿಯನ್ನು ಓದಿದ ಮೇಲೂ ನಾನು ಬಾಲ್ಯದಲ್ಲಿ ನನ್ನ ಮಾತುಗಳಲ್ಲಿ ಉತ್ತರಿಸುತ್ತಿದ್ದೆನೇ ವಿನಾ ಅಧ್ಯಾಪಕರು ಬರೆಸಿದ ಶಬ್ದಗಳ ಪುನರಾವರ್ತನೆ ಮಾಡುತ್ತಿರಲಿಲ್ಲ.  ನಾನು ಮಾಡುವ ಭಾಷಿಕ ದೋಷಗಳನ್ನೂ ಅಧ್ಯಾಪಕರು ತಿದ್ದಿದ್ದರಿಂದ ಭಾಷಾಜ್ಞಾನವೂ ಅಧಿಕಗೊಂಡಿತು.ಅದೇನೇ ಇರಲಿ, ಪರೀಕ್ಷೆಯಲ್ಲಿ ಉತ್ತರಿಸಬೇಕಾದ ವಿಷಯ ಪ್ರತಿ ವಿದ್ಯಾರ್ಥಿಯ ಸ್ವತಂತ್ರ ಅನಿಸಿಕೆ ಆಗಿರಲು ಸಾಧ್ಯವೇ ಇಲ್ಲ. ಏಕೆಂದರೆ ಆಗ ವಸ್ತುನಿಷ್ಠ ಮೌಲ್ಯಮಾಪನ ಮಾಡುವುದು ಕಠಿಣವಾಗಿಬಿಡುತ್ತದೆ. ಆದ್ದರಿಂದ ವಿದ್ಯಾರ್ಥಿಯ ಸ್ವೋಪಜ್ಞತೆ ಮೌಲ್ಯಮಾಪನಕ್ಕೆ ಒಳಗಾಗುವುದೇ ಇಲ್ಲ.ವಿಷಯದಲ್ಲಿಯಂತೂ ಸ್ವಾತಂತ್ರ್ಯವಿಲ್ಲ. ಕನಿಷ್ಠ ನಿರೂಪಣೆಯಲ್ಲಿಯಾದರೂ ಸ್ವಾತಂತ್ರ್ಯ ವಹಿಸುವ ಧೈರ್ಯವನ್ನು ವಿದ್ಯಾರ್ಥಿಗಳು ಮಾಡುವುದಿಲ್ಲ. ಹಾಗಾದಾಗ ತಪ್ಪು ಹೊರಬಂದು ಅಂಕ ಗಳಿಕೆ ಎಲ್ಲಿ ಆಗುವುದಿಲ್ಲವೋ ಎಂಬ ಶಂಕೆ ಅಧ್ಯಾಪಕರನ್ನು  ಬಾಧಿಸಿ ಅವರು ವಿದ್ಯಾರ್ಥಿಗಳಿಗೆ ಆ ಸ್ವಸಂವಹನದ ಸ್ವಾತಂತ್ರ್ಯವನ್ನು ನೀಡುವುದೂ ಇಲ್ಲ.ಈ ಬಗೆಯಿಂದ ಕಲಿತು ಅಧ್ಯಾಪಕರಾದವರು ತಮ್ಮ ವಿದ್ಯಾರ್ಥಿಗಳಿಗೆ ಟಿಪ್ಪಣಿಗಳನ್ನು ಬರೆಸುವಾಗ ಅವರ ಭಾಷೆಯೇ ಅನೇಕ ವೇಳೆ ದೋಷಪೂರ್ಣವಾಗಿಯೂ, ನೀರಸ ನಿರೂಪಣೆಯಾಗಿಯೂ ಇರುತ್ತದೆ.   ‘ಅಂತೂ ಇಂತೂ ಅನ್ಯರೊರೆದುದನೇ ಬರೆದು ಭಿನ್ನವಾಗಿ ಮನಸು’- ಎಂಬ ಡಾ. ಗೋಪಾಲಕೃಷ್ಣ ಅಡಿಗರ ವಿಷಾದ ಶಿಕ್ಷಣದಲ್ಲಿ ಬಹುಬಾರಿ ಇಣುಕುತ್ತದೆ.‘ತನ್ನತನದಲ್ಲಿ ಬರೆವ ಪನ್ನಿತಿಕೆ ಬರುವನಕ ನನ್ನ ಬಾಳಿದು ನರಕ’ –  ಎಂದು ಅವರು ಹೇಳಿದ್ದು ನನಗೆ ಅನೇಕ ಬಾರಿ ವಾಸ್ತವವೆನಿಸಿದೆ. ಸ್ವೋಪಜ್ಞತೆಯು ಶಿಕ್ಷಣವ್ಯವಸ್ಥೆಯಿಂದ ಬಹಳ ದೂರದಲ್ಲಿ ಉಳಿದುಬಿಡುತ್ತದೆ. ಇದರ ಪರಿಣಾಮವಾಗಿ ವಿದ್ಯಾವಂತರಲ್ಲೂ - ಪರಿಣಾಮಕಾರಿ ಸಂವಹನಕಾರರು,  ಕನಿಷ್ಠ ಲಿಖಿತ ಸಂವಹನಕಾರರು ತಮ್ಮ ಜೀವಂತಿಕೆಯನ್ನು ಸಂವಹನದಲ್ಲಿ ಮೆರೆಯುವುದು ವಿರಳವಾಗಿದೆ.ಅಂತಹ ಅವಕಾಶ ಕೆಲವೊಮ್ಮೆ ಸ್ಪರ್ಧಾ ಪರೀಕ್ಷೆಗಳ ಒಂದೆರಡು ಪ್ರಶ್ನೆಗಳಿಗೆ ವಿಮರ್ಶಾತ್ಮಕ ಉತ್ತರ ಬರೆಯುವಾಗ ಉಂಟು. ಆಗಲೂ ಸ್ವಸಂವಹನವನ್ನು ಮಿಂಚಿನ ಸಂಚಾರವಾಗುವಂತೆ ಬರೆದವರು ವಿರಳ. ಏಕೆಂದರೆ ಹಾಗೆ ಬರೆದು ಅವರಿಗೆ ಅಭ್ಯಾಸವೇ ಇರುವುದಿಲ್ಲ. ಸ್ವಚ್ಛಂದವಾಗಿ ಬರೆದು ತಪ್ಪುಮಾಡಿ ತಿದ್ದಿಕೊಳ್ಳದೆ, ಎಲ್ಲಿ ತಪ್ಪಾಗುವುದೋ ಎಂಬ ಭೀತಿಯಂದ ಹೊರಗೆ ಬರಲು ಸಾಧ್ಯವೇ ಇಲ್ಲ!ಶಿಕ್ಷಣದಲ್ಲಿ ಉಪೇಕ್ಷಿತವಾದದ್ದು ಸಮಾಜದಲ್ಲಿ ಉದಯಿಸಿ ಉತ್ಕರ್ಷಕ್ಕೆ ಬರುವುದು ಕಷ್ಟ. ಹಾಗಾಗಿ ಸಂವಹನ ಸರಸತೆ, ಸಾಮಾನ್ಯ ಸಂಭಾಷಣೆ, ಸಾಹಿತ್ಯ ಎಲ್ಲೆಲ್ಲಿಯೂ ಕೊರತೆ ಎನಿಸಿದರೆ ಆಶ್ಚರ್ಯವಿಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಂಡು ಅಡಿಗರು ತಮ್ಮ ಅನೇಕ ಕೃತಿಗಳಲ್ಲಿ ಸ್ವೋಪಜ್ಞತೆಯನ್ನು ಕುರಿತು ಪ್ರಸ್ತಾಪ ಮಾಡಿದ್ದಾರೆ.ಜ್ವಲಂತ ಸಂವಹನಕ್ಕೆ ಈಚಿನ ದಿನಗಳಲ್ಲಿ ಇನ್ನೂ ಅನೇಕ ಅಡ್ಡಿಗಳು ಎದುರಾಗಿವೆ. ಕಡಿಮೆ ಅವಧಿಯಲ್ಲಿ ಹೆಚ್ಚು ಉತ್ತರಗಳನ್ನು ಬರೆಯುವತ್ತ ಪರೀಕ್ಷೆಗಳು ಒತ್ತು ನೀಡಿದ ಫಲವಾಗಿ ಶಿಕ್ಷಕರು ಮಕ್ಕಳಿಗೆ ಪ್ರಶ್ನೆಗೆ ಉತ್ತರವು ಪರಾವರ್ತಿತ ಪ್ರತಿಕ್ರಿಯೆ (Reflex Action) ಆಗುವತ್ತ ವಿಶೇಷ ಗಮನ ಹರಿಸುತ್ತಾರೆ.

ಆಲೋಚಿಸಿಲೂ ಬಿಡುವಿಲ್ಲದೆ, ಕೇಳಿದ ಕೂಡಲೇ ಉತ್ತರಿಸುವ ಈ ಪ್ರವೃತ್ತಿಯ ಪ್ರೋತ್ಸಾಹ ಪ್ರಶ್ನೆಉತ್ತರ ಪ್ರತಿಕ್ರಿಯೆಯನ್ನು ಯಾಂತ್ರಿಕವಾಗಿಸುತ್ತದೆ. ಯಾಂತ್ರಿಕತೆ ಅಧಿಕಗೊಂಡ ಮೇಲೆ ಜೀವಂತಿಕೆ ಹಿಂದೆ ಸರಿಯುವುದು ಸಹಜ.ಬಹು ಆಯ್ಕೆಯ ಪ್ರಶ್ನೆಗಳು ಕಲಾತ್ಮಕ ಅಭಿವ್ಯಕ್ತಿಗೆ ಕೊಡಲಿ ಏಟು. ಅಲ್ಲಿ ವಿದ್ಯಾರ್ಥಿ ಸ್ವತಂತ್ರವಾಗಿ ಭಾಷಾ ರಚನೆಯ ಪ್ರಯತ್ನ ಮಾಡುವುದಿರಿಲಿ, ಕಾಗುಣಿತ / ಸ್ಪೆಲಿಂಗ್ ಕೂಡ ಕಲಿತಿರಬೇಕಾಗಿಲ್ಲ. ಸರಿಯುತ್ತರದ ಸಂಕೇತವನ್ನು ಗುರುತಿಸಿದರೆ ಸಾಕು.ತರಗತಿಗಳು ವಾಷಿಂಗ್ ಮೆಷಿನ್ / ನೆರಳಚ್ಚು ಯಂತ್ರಗಳ ಹಾಗೆ. ವಿದ್ಯಾರ್ಥಿಗಳು ಯಂತ್ರಕ್ಕೆ ನೀಡಿ ಪ್ರತಿಯನ್ನು ಹಿಂದೆ ಪಡೆಯುವವರೆಗೆ ಕೈ ಕಟ್ಟಿ ನಿಂತಿರಬೇಕು. ಭಾಗವಹಿಸುವಿಕೆ ಕನಿಷ್ಠಗೊಂಡಾಗ, ಕಲಾತ್ಮಕತೆಯ ಗ್ರಹಿಕೆಯಾಗಲಿ, ಅಭಿವ್ಯಕ್ತಿಯ ವಿಶಿಷ್ಟತೆಯಾಗಲಿ ಕಾರ್ಯ ಪ್ರವೃತ್ತವಾಗುವುದೇ ಇಲ್ಲ.

ಆಲೋಚನಾ ಪ್ರಧಾನ ಶಿಕ್ಷಣವು ಎಂದೂ ಅಲೋಚನೆಯನ್ನು ಗ್ರಹಿಸುವ, ಕಂಡುಕೊಂಡ ಸತ್ಯವನ್ನು ಅಭಿವ್ಯಕ್ತಿಸುವ ಕಲಾತ್ಮಕತೆಯನ್ನು ಪ್ರದಾನ ಮಾಡುವುದಿಲ್ಲ.ಸಮಸ್ಯಾಪೂರಣ ವಿಧಾನದಿಂದ ಕಲಿಸಬೇಕು ಹಾಗೂ ಮಕ್ಕಳಿಗೆ ಮನೆಕೆಲಸ ನೀಡುವಾಗ ಕಲಿತದ್ದನ್ನು ಅನ್ವಯಿಸುವ ಮೂಲಕ ಪರಿಹರಿಸಬಹುದಾದ ಪ್ರಚಲಿತ ಸಮಸ್ಯೆಗಳನ್ನು ನೀಡಬೇಕು ಎಂದು ಶಿಕ್ಷಣತಜ್ಞರು ಖಚಿತ ಮಾತುಗಳಲ್ಲಿ ಹೇಳಿದ್ದಾರೆ.ಆದರೆ ಅಂಕಗಳಿಕೆಗೆ ಇರುವ ಅತಿಯಾದ ಒತ್ತಡ, ಪರೀಕ್ಷೆ ಎದುರಿಸಲು ಪೂರಕವಾದ ಮನೆ ಪಾಠ ಇರುವಾಗ ಈ ಬಗೆಯ ಮನೆಕೆಲಸ ಕೊಡುವುದು ಕೇವಲ ಕಾಗದಲ್ಲಿ ಕೆತ್ತಿದ ಕನಸು ಮಾತ್ರ.ಸಮಸ್ಯಾಪೂರಣ ಕ್ರಮದಲ್ಲಿ ಕಲಿತಿಲ್ಲದ ಅಧ್ಯಾಪಕರು ಸ್ವಪ್ರಯತ್ನದಿಂದ ಸ್ವೋಪಜ್ಞ ಅಭಿವ್ಯಕ್ತಿಯನ್ನು ಸುಧಾರಿಸಿಕೊಂಡಿರದವರು. ಕೇವಲ ತರಬೇತಿ ಪರಿಣತರ ಕಿವಿಮಾತಿನಿಂದ ತಮ್ಮ ರೂಢಿಗತ ವಿಧಾನವನ್ನು ರಾತ್ರೋ-ರಾತ್ರಿ ಬದಲಿಸಿಕೊಳ್ಳುವುದಾದರೂ ಹೇಗೆ? ಪರೀಕ್ಷಾ ವಿಧಾನವನ್ನು ಸುಧಾರಿಸದೆ ಕೇವಲ ಕಲಿಕಾ ಕ್ರಮದ ಸುಧಾರಣೆ ಸೂಚಿಸಿದರೆ, ಅಧ್ಯಾಪಕರು ಪರೀಕ್ಷೆಗಳ ಕ್ರಮಕ್ಕೆಬದ್ಧತೆ ತೋರಿಸುವುದು ತೀರ ಸಹಜವಾದದ್ದು.ವಿಷಯ / ಆಲೋಚನೆಗಳಿಗೆ ಮಹತ್ವ ನೀಡಬಾರದೆಂದು ಇದರ ಆಶಯವಲ್ಲ. ಆದರೆ ಅವಕ್ಕೆ ನೀಡುವ ಅತಿಯಾದ ಒತ್ತು-ಸ್ವತಂತ್ರವಾಗಿ ಅಭಿಪ್ರಾಯ ರೂಢಿಸಿಕೊಳ್ಳಲು, ತನ್ನದೇ ಆದ ರೀತಿಯಲ್ಲಿ ರೂಪಿಸಲು ಅಡ್ಡಿಯಾಗಬಾರದೆಂಬ ಆತಂಕ ಮಾತ್ರ.ಅದುಮಿಟ್ಟ ಆವೇಶ, ಆಲೋಚನೆ, ಅಭಿವ್ಯಕ್ತಿ ಕೌಶಲವುಳ್ಳವರೇ ಅಂಕಗಳಿಕೆಯ ಮುಂಚೂಣಿಯಲ್ಲಿರಲು ಸಾಧ್ಯ! ಉಳಿದವರಿಗೂ ಇವರೇ ಮಾದರಿ. ಒಂದೇ ರೀತಿಯಲ್ಲಿ ವಿದ್ಯಾರ್ಥಿಗಳ ಅಶಾಂತಿಗೆ ಈ ಅಮಿತ ಸಾಮರ್ಥ್ಯಗಳೂ ತಮ್ಮ ಕೊಡುಗೆ ನೀಡಿದರೂ ಆಚ್ಚರಿಯಿಲ್ಲ.ಈ ಪ್ರಸಂಗವನ್ನು ಗಮನಿಸಿ: ಅಧ್ಯಾಪಕರು ಸಾಕುಪ್ರಾಣಿಗಳ ಚಿತ್ರ ಸಂಗ್ರಹಿಸಿ ಪುಸ್ತಕದಲ್ಲಿ ಅಂಟಿಸಿಕೊಂಡು ಬರುವಂತೆ ವಿದ್ಯಾರ್ಥಿಗಳಿಗೆ ಮನೆಕೆಲಸವನ್ನು ಕೊಟ್ಟಿದ್ದರು. ಆ ಮಗು ಅಂಗಡಿಗೆ ಬಂದು ಸಾಕುಪ್ರಾಣಿಗಳ ಚಿತ್ರವಿರುವ ಹಾಳೆ ಬೇಕೆಂದು ಕೇಳಿತು.ಆಗ ಆ ಹಾಳೆಯನ್ನು ಅಂಗಡಿಯಾತ ನೀಡಿದಾಗ, ಅದರ ಶೀರ್ಷಿಕೆ PETS ಎಂದಿತ್ತು. ಮಗು ಆ ಹಾಳೆಯನ್ನು ಕೊಳ್ಳಲು ತಯಾರಿಲ್ಲ. ಏಕೆಂದರೆ ಅವರ ಅಧ್ಯಾಪಕರು ಹೇಳಿರುವುದು Domestic Animals ಎಂದು.ಅಂಗಡಿಯಾತ ಹೇಳಿದ: ನಿಮ್ಮ ಅಧ್ಯಾಪಕರು ಹೇಳಿದ ಪ್ರಾಣಿಗಳ ಚಿತ್ರಗಳೆಲ್ಲ ಇಲ್ಲಿವೆ. ಕೊಳ್ಳಲು ಏನು ಅಡ್ಡಿ?

ಆಗ ಮಗು ಹೇಳಿತು: ನಮಗೆ ಅಧ್ಯಾಪಕರು ಹೇಳಿದ ಹಾಗೆ ಮಾಡುವುದು ಗೊತ್ತು.ಇಲ್ಲವಾದರೆ ಅಂಕವೂ ಹಾಳು, ತಲೆ ಹರಟೆ; ಎಂಬ ಬಿರುದು ಬೇರೆ! ಸ್ವಾತಂತ್ರ್ಯ ಭಾರತಕ್ಕೆ 1947ರಲ್ಲೇ ಬಂದಿತು. ಆದರೆ ಮಕ್ಕಳ ವಿವೇಚನಾ ಸ್ವಾತಂತ್ರ್ಯ ಶಾಲೆಗೆ ಬರಲು ಇನ್ನು ಎಷ್ಟು ವರ್ಷ ಬೇಕು?

(ಲೇಖಕರು ಶಿಕ್ಷಣತಜ್ಞರು ಮತ್ತು ಸಂವಹನಕಾರರು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.