ಸೋಮವಾರ, ಜೂನ್ 14, 2021
21 °C

ಅರಿವು ಮೂಡದೇ ಸುಸ್ಥಿರ ಅಭಿವೃದ್ಧಿ ಅಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ:  ಸಾಮಾಜಿಕ ಸಮಸ್ಯೆಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡದ ಹೊರತು ಸುಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಎಸ್‌.ಟಿ.ಅಂಜನಕುಮಾರ್‌ ಅಭಿಪ್ರಾಯಪಟ್ಟರು.ಸಮೀಪದ ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯ ಅಧ್ಯಯನ ವಿಭಾಗವು ‘ಸಾಮಾಜಿಕ ವಿಷಯಗಳು ಹಾಗೂ ಸುಸ್ಥಿರ ಸಾಮಾಜಿಕ ಅಭಿವೃದ್ಧಿ’ ವಿಷಯ ಕುರಿತು ಗುರುವಾರ ಆಯೋಜಿಸಿದ್ದ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.ನೈಸರ್ಗಿಕ ಸಂಪನ್ಮೂಲಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅಭಿವೃದ್ಧಿ ಹೊಂದುವುದನ್ನು ಸುಸ್ಥಿರ ಅಭಿವೃದ್ಧಿ ಎನ್ನಬಹುದು. ಈ ನಿಟ್ಟಿನಲ್ಲಿ ನಡೆದಾಗ ಮಾತ್ರ ಆರ್ಥಿಕ, ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಾಧ್ಯ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಬೇಕು. ವಿದ್ಯಾರ್ಥಿಗಳು ಸಮಾಜದಲ್ಲಿರುವ ಭ್ರಷ್ಟಾಚಾರ, ಭಯೋತ್ಪಾದನೆ, ಏಡ್ಸ್‌ ಹಾಗೂ ಅಪರಾಧ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸುವತ್ತ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಪರಿಸರ ಅಸಮತೋಲನ ನಿವಾರಿಸಬೇಕು. ಆರ್ಥಿಕ ಭದ್ರತೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಸಂಪನ್ಮೂಲಗಳ ಸದುಪಯೋಗಕ್ಕೆ ಗಮನ ನೀಡಬೇಕು ಎಂದರು.ಪ್ರಸ್ತುತ ಎಚ್‌ಐವಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಏಡ್ಸ್‌ ರೋಗಿಗಳ ಸಂಖ್ಯೆಯಲ್ಲಿ ದೇಶದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದರೆ, ರಾಜ್ಯದಲ್ಲಿ ದಾವಣಗೆರೆ 7ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 10 ಸಾವಿರ ಏಡ್ಸ್‌ ಪ್ರಕರಣಗಳು

ಕಂಡುಬಂದಿವೆ. ಹೀಗಾಗಿ, ಏಡ್ಸ್‌ ಬಗ್ಗೆ ಅರಿವು ಅಗತ್ಯ ಎಂದು ತಿಳಿಸಿದರು.ಭ್ರಷ್ಟಾಚಾರ ಪಿಡುಗಿನಂತೆ ಜಗತ್ತಿನಾದ್ಯಂತ ವ್ಯಾಪಿಸುತ್ತಿದೆ. ಭ್ರಷ್ಟಾಚಾರವನ್ನು ಮೇಲ್ಮಟ್ಟದಿಂದ ತೆಗೆದು ಹಾಕಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಬಲಿಷ್ಠ ಲೋಕಾಯುಕ್ತ ವ್ಯವಸ್ಥೆ ಹಾಗೂ ಸುಭದ್ರ ಕಾನೂನುಗಳನ್ನು ಜಾರಿಗೆ ತರುವ ಮೂಲಕಭ್ರಷ್ಟಾಚಾರ ನಿರ್ಮೂಲನೆ ಮಾಡಬಹುದು ಎಂದು ಹೇಳಿದರು.ಯುವಕರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವುದು ಹಾಗೂ ಸರ್ಕಾರದ ವಿವಿಧ ಜನಪರ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಸಮಾಜದ ಮುಖ್ಯವಾಹಿನಿಗೆ ಕರೆತರುವ ಗುರುತರವಾದ ಹೊಣೆಗಾರಿಕೆ ಸಮಾಜಕಾರ್ಯ ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಬಿ.ಕಲಿವಾಳ್‌ ಮಾತನಾಡಿ, ಸಾಮಾಜಿಕ ಸಮಸ್ಯೆಗಳು ಹೆಚ್ಚಾಗಲು ವ್ಯವಸ್ಥೆಯೇ ಕಾರಣ. ಇದನ್ನು ಸರಿಪಡಿಸಲು ಯುವಜನರು ಮುಂದಾಗಬೇಕು ಎಂದು ಕರೆ ನೀಡಿದರು.ಕುಲಸಚಿವ ಸಿ.ಸೋಮಶೇಖರ್‌, ಹಣಕಾಸು ಅಧಿಕಾರಿ ವೀರಭದ್ರಪ್ಪ, ನಿರ್ವಹಣಾ ವಿಭಾಗದ ಮುಖ್ಯಸ್ಥ ಪ್ರೊ.ವಿ.ಮುರುಗಯ್ಯ, ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಬಿ.ಎಸ್‌.ಪ್ರದೀಪ್‌ ಸಮಾರಂಭದಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.