ಬುಧವಾರ, ಜನವರಿ 19, 2022
26 °C

ಅರುಣಾಚಲ ಪ್ರದೇಶ ರಾಜಕೀಯದಲ್ಲಿ ನಾಟಕೀಯ ತಿರುವು; ಸಿಎಂ ಸ್ಥಾನಕ್ಕೆ ಪೆಮಾ ಖಂಡು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರುಣಾಚಲ ಪ್ರದೇಶ ರಾಜಕೀಯದಲ್ಲಿ ನಾಟಕೀಯ ತಿರುವು; ಸಿಎಂ ಸ್ಥಾನಕ್ಕೆ ಪೆಮಾ ಖಂಡು?

ಇಟಾನಗರ್ : ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ಮುಂದುವರಿಸಲಿದೆ. ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತುಪಡಿಸಬೇಕಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ಬದಲಾವಣೆ ಮಾಡಿದ್ದು, ಪೆಮಾ ಖಂಡು ಅವರನ್ನು ನೂತನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿಲಾಗಿದೆ.

ಅರುಣಾಚಲಪ್ರದೇಶದ ಪದಚ್ಯುತ ಮುಖ್ಯಮಂತ್ರಿ ನಬಾಮ್‌ ತುಕಿ ಅವರ ಮನವಿಯಂತೆ ಕಾಲಾವಕಾಶ ನೀಡಲು  ರಾಜ್ಯಪಾಲ ತಥಾಗತ ರಾಯ್‌ ತಿರಸ್ಕರಿಸಿರುವ ಕಾರಣ ತುಕಿ ಅವರು ಅನಿವಾರ್ಯವಾಗಿ ಶನಿವಾರವೇ  ಬಹುಮತ ಸಾಬೀತು ಮಾಡಬೇಕಾದ ಪರಿಸ್ಥಿತಿ ಬಂದೊಂದಗಿತ್ತು. ಆದರೆ  ಭಿನ್ನಮತ ಭುಗಿಲೇಳುವ ಮುನ್ನವೇ ಎಚ್ಚೆತ್ತ ಕಾಂಗ್ರೆಸ್ ನಬಾಮ್‌ ತುಕಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಲ್ಲಿ ಸಫಲವಾಗಿದೆ.ಬಹುಮತ ಸಾಬೀತುಪಡಿಸಬೇಕಾದ ಅನಿವಾರ್ಯತೆ ಇರುವುದರಿಂದ ಅತಿ ಹೆಚ್ಚು ಶಾಸಕರ ಬೆಂಬಲ ಹೊಂದಿರುವ ಖಂಡು ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಬಹುಮತ ಸಾಬೀತುಪಡಿಸಿದರೆ, ಪೆಮಾ ಖಂಡು ಅರುಣಾಚಲದ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಕಮೆಂಗ್  ಡೋಲೋ ಹೇಳಿದ್ದಾರೆ.ನಬಾಮ್‌ ತುಕಿ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿತ್ತು. ಇದರ ಬೆನ್ನಲ್ಲೇ ರಾಜ್ಯಪಾಲರು, ವಿಧಾನ ಸಭೆಯಲ್ಲಿ ಶನಿವಾರ ಬಹುಮತ ಸಾಬೀತುಪಡಿಸುವಂತೆ ತುಕಿ ಅವರಿಗೆ ನಿರ್ದೇಶನ ನೀಡಿದ್ದರು. ಆದರೆ ಕಾನೂನು ತಜ್ಞರ ಸಲಹೆ ಮೇರೆಗೆ ತುಕಿ ಅವರು ಗೃಹ ಸಚಿವ ತಂಗಾ ಬ್ಯಾಲಿಂಗ್‌ ಅವರೊಂದಿಗೆ ಶುಕ್ರವಾರ ರಾಜ್ಯಪಾಲರನ್ನು ಭೇಟಿಯಾಗಿ  ಬಹುಮತ ಸಾಬೀತಿಗೆ ಕನಿಷ್ಠ 10 ದಿನಗಳ ಕಾಲಾವಕಾಶ ನೀಡುವಂತೆ ಕೋರಿದ್ದರು. ಆದರೆ ಈ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಇದು ಕಾಂಗ್ರೆಸ್‍ನ್ನು ಸಂಕಷ್ಟಕ್ಕೀಡು ಮಾಡಿತ್ತು.60 ಸದಸ್ಯರ ವಿಧಾನಸಭೆಯಲ್ಲಿ  47 ಶಾಸಕರು ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದರು. ಆದರೆ 21 ಭಿನ್ನಮತೀಯರು ವಿಪಕ್ಷದತ್ತ ಒಲವು ತೋರಿದಾಗ ಸರಕಾರಕ್ಕೆ ಬಹುಮತ ಇಲ್ಲದ ಪರಿಸ್ಥಿತಿಯುಂಟಾಯಿತು. ಪದಚ್ಯುತ ಮುಖ್ಯಮಂತ್ರಿ ಕಲಿಖೋ ಪುಲ್‌ ಅವರು 60 ಸದಸ್ಯ ಬಲದ ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ 43 ಶಾಸಕರ ಬೆಂಬಲ ಇರುವುದಾಗಿ ಹೇಳಿಕೊಂಡಿರುವುದು ಇದಕ್ಕೆ ಕಾರಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.