ಮಂಗಳವಾರ, ಮೇ 11, 2021
26 °C

ಅರೆರೆ ಅಲಸಂದೆ!

ಗೀತಸದಾ, ಮೋಂತಿಮಾರು Updated:

ಅಕ್ಷರ ಗಾತ್ರ : | |

ಅಲಸಂದೆ (ಅಲಸಂಡೆ) ಮೂರು ತಿಂಗಳ ಬೆಳೆ. ಅತ್ಯಲ್ಪ ಅವಧಿ ಹಾಗೂ ಹೆಚ್ಚು ಖರ್ಚಿಲ್ಲದೆ ಅಧಿಕ ಲಾಭ ಗಳಿಸಲು ರೈತರಿಗೆ ಹೇಳಿ ಮಾಡಿಸಿದ್ದು. ಮಾರುಕಟ್ಟೆಯಲ್ಲಿ ಅದಕ್ಕೆ ಉತ್ತಮ ಬೇಡಿಕೆ ಹಾಗು ದರವೂ ಇದೆ.ಅಧಿಕ ಗೊಬ್ಬರ, ವಿಶೇಷ ಆರೈಕೆ ಬೇಕಿಲ್ಲದ ಅಲಸಂದೆಯನ್ನು ಸ್ವಲ್ಪ ಜಾಣ್ಮೆಯಿಂದ ಬೆಳೆಸಿದರೆ ಒಳ್ಳೆ ಫಸಲು ಪಡೆದು ಅಧಿಕ ಲಾಭ ಗಳಿಸಬಹುದು ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು ರಾಮಕುಂಜ ಗ್ರಾಮದ ಹೊನ್ನಪ್ಪ ಗೌಡರು.ಇವರು ತಮ್ಮ ಪುಟ್ಟ ಹೊಲದಲ್ಲಿ ಭತ್ತದ ಬೇಸಾಯ ಮಾಡಿ ನಂತರ ಆ ಜಾಗದಲ್ಲಿ ಅಲಸಂದೆ, ಸೌತೆಕಾಯಿ, ಸಿಹಿಕುಂಬಳ, ಬೆಂಡೆಕಾಯಿ, ಹೀರೆಕಾಯಿ, ಸೋರೆಕಾಯಿ, ಗೆಣಸು ಇತ್ಯಾದಿ ವಿವಿಧ ತರಕಾರಿಗಳನ್ನು ಆಯಾ ಸಮಯಕ್ಕೆ ಸರಿಯಾಗಿ ಬೆಳೆಸುತ್ತಾರೆ. ಕೂಡುಕುಟುಂಬದಲ್ಲಿ ವಾಸಿಸುವ ಇವರೆಲ್ಲರೂ ಜೊತೆಯಾಗಿ ಕೃಷಿ ಕಾರ್ಯಗಳನ್ನು ಹಂಚಿಕೊಂಡು ನಡೆಸುತ್ತಾರೆ.ಇತ್ತೀಚೆಗೆ ಇವರು ತಮ್ಮ ಹೊಲದಲ್ಲಿ ಸಾವಯವ ರೀತಿಯಲ್ಲಿ ಅಲಸಂದೆ ಕೃಷಿ ಮಾಡಿದ್ದಾರೆ. ಮಣ್ಣಿನ ಫಲವತ್ತತೆ ಮತ್ತು ಸಾವಯವ ಪದ್ಧತಿಯಿಂದಾಗಿ ಫಸಲು ಚೆನ್ನಾಗಿದ್ದು ಉತ್ತಮ ಧಾರಣೆಯೂ ಸಿಕ್ಕಿದೆ.ಬೀಜ ಬಿತ್ತಿ ಮೊಳಕೆಯೊಡೆದ ಅಲಸಂದೆ ಸಸ್ಯಗಳಲ್ಲಿ  ಬಳ್ಳಿ ಹಬ್ಬಲು ಪ್ರಾರಂಭವಾದ ಕೂಡಲೇ ಬುಡಕ್ಕೆ ಸೊಪ್ಪು, ಗೊಬ್ಬರ ಹುಡಿ ಹಾಕಿ ಫಲವತ್ತಾದ ಮಣ್ಣನ್ನು ಕೊಡುತ್ತಾರೆ.ನಂತರ ಉತ್ತಮ ರೀತಿಯ ಆಧಾರ ಕೊಡುವುದರಿಂದ ಬಳ್ಳಿ ಚೆನ್ನಾಗಿ ಹಬ್ಬಲು ಸಹಾಯಕವಾಗುತ್ತದೆ. ಸಾಮಾನ್ಯವಾಗಿ ಎರಡು ತಿಂಗಳಲ್ಲೆೀ ಕಾಯಿ ಕೊಯ್ಲಿಗೆ ಸಿಗುತ್ತದೆ. ಎರಡು ಅಥವಾ ಮೂರು ದಿವಸಕ್ಕೊಮ್ಮೆ ಕೊಯ್ಲು ಮಾಡುತ್ತಾ ಮಾರುಕಟ್ಟೆಗೆ ಸಾಗಿಸಬಹುದು. ಹೀಗೆ ಈ ತರಕಾರಿ ಸುಮಾರು ಮೂರು ತಿಂಗಳು ಚೆನ್ನಾಗಿ ಇಳುವರಿ ಕೊಟ್ಟು ನಂತರ ಕಡಿಮೆ ಆಗುತ್ತಾ ಬರುತ್ತದೆ.ಅಲಸಂದೆ ಸಸ್ಯದ ಬುಡಕ್ಕೆ ಇಪ್ಪತ್ತು ದಿವಸಕ್ಕೊಮ್ಮೆ ಬೂದಿ, ಸುಡುಮಣ್ಣು ಮತ್ತು ಗೊಬ್ಬರದ ಹುಡಿ ಅಥವಾ ಕಹಿಬೇವಿನ ಹಿಂಡಿ ಮತ್ತು ಸಗಣಿ ಮಿಶ್ರಿತ ನೀರು ಹಾಕುತ್ತಾರೆ. ತೆನೆ ಕೀಟಗಳ ಹಾವಳಿಯಿಂದ ಪಾರಾಗಲು ಬೇವಿನ ಎಣ್ಣೆ ಅಥವಾ ಗೋಮೂತ್ರ ಸಿಂಪಡಿಸುತ್ತಾರೆ.`ಹೂವು ಬಿಟ್ಟು ಎಳೆ ಕಾಯಿಗಳು ಬಿಡಲು ಪ್ರಾರಂಭವಾದ ನಂತರವೇ ಗೊಬ್ಬರ ಕೊಡಬೇಕು. ಇದರ ಮೊದಲೇ ಹೇರಳವಾಗಿ ಗೊಬ್ಬರ ಕೊಟ್ಟರೆ ಬಳ್ಳಿ ಹುಲುಸಾಗಿ ಬೆಳೆದು ಇಳುವರಿ ಕಡಿಮೆ ಆಗುತ್ತದೆ. ಆದ್ದರಿಂದ ಇತಿಮಿತಿಯಲ್ಲಿ ಗೊಬ್ಬರ ಕೊಡಬೇಕು. ಹೆಚ್ಚು ಆರೈಕೆ ಬೇಕಿಲ್ಲದ ಅಲಸಂದೆ ಸಸ್ಯಕ್ಕೆ ಕ್ರಮಬದ್ಧವಾಗಿ ನೀರು ಕೊಡುತ್ತಾ ಬಂದರೆ ಉತ್ತಮ ಇಳುವರಿ ಪಡೆಯಬಹುದು~ ಎನ್ನುತ್ತಾರೆ.ಸಾವಯವದಲ್ಲಿ ಬೆಳೆಸಿದ ಅಲಸಂದೆಗೆ ಉತ್ತಮ ಬೇಡಿಕೆ ಮತ್ತು ಧಾರಣೆ ಇದ್ದು ಸ್ಥಳೀಯರು ಮನೆಗೇ ಬಂದು ಕೊಂಡೊಯ್ಯುವುದೂ ಇದೆ. ಪ್ರತೀ ಎರಡು ದಿವಸಕ್ಕೊಮ್ಮೆ ಸ್ಥಳೀಯ ಅಂಗಡಿಗಳಿಗೆ ಮತ್ತು ಪೇಟೆಯಲ್ಲಿ ನಡೆಯುವ ಸಂತೆಗೆ ಅಲಸಂದೆ ಒಯ್ದು ಮಾರುತ್ತಾರೆ.ಹೀಗೆ ಕಡಿಮೆ ಅವಧಿಯಲ್ಲಿ ಹೆಚ್ಚು ಖರ್ಚಿಲ್ಲದೆ ಲಾಭ ಗಳಿಸಲು ಅಲಸಂದೆ ಒಂದು ಉತ್ತಮ ಉಪಬೆಳೆ ಎನ್ನುವುದನ್ನು ಕಂಡುಕೊಂಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.