ಗುರುವಾರ , ಮೇ 19, 2022
20 °C

ಅಳಿವಿನಂಚಿನಲ್ಲಿ ಚಾಲುಕ್ಯ ದೇಗುಲ

ಸಿದ್ದು ತ. ಹತ್ತಳ್ಳಿ Updated:

ಅಕ್ಷರ ಗಾತ್ರ : | |

ವಿಜಾಪೂರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಸಮೀಪದ ಚಟ್ಟರಸಿ (ಚಟ್ಟರಕಿ) ಗ್ರಾಮದಲ್ಲಿನ ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯವೊಂದು ಪುರಾತತ್ವ ಇಲಾಖೆಯ ಕಣ್ಣಿಗೆ ಬೀಳದೆ ಅಳಿವಿನ ಅಂಚಿನಲ್ಲಿದೆ.ತಾಂಬಾದಿಂದ 9 ಕಿ ಮೀ ದೂರದಲ್ಲಿರುವ ಚಟ್ಟರಸಿ ಶಾಸನಗಳಲ್ಲಿ ಉಲ್ಲೇಖ ಇರುವ ದೇಗುಲವಿದು. ನಕ್ಷತ್ರಾಕಾರದ ತೆಳುವಿನ್ಯಾಸ, ಎತ್ತರವಾದ ಜಗುಲಿ ಮೇಲೆ ವಿಶಾಲವಾದ ನವರಂಗ ಗರ್ಭಗೃಹ ಹೊಂದಿದೆ ಈ ದೇವಾಲಯ. ದಕ್ಷಿಣ ಮತ್ತು ಉತ್ತರಕ್ಕೆ ಪ್ರವೇಶದ್ವಾರಗಳಿದ್ದು ಅರ್ಧ ತೆರೆದ ಮಂಟಪದಲ್ಲಿರುವ ನಾಲ್ಕು ಕಂಬಗಳು ಚಾಲುಕ್ಯರ ವಾಸ್ತುಶಿಲ್ಪವನ್ನು ಬಿಂಬಿಸುವಂತಿದೆ.ನವರಂಗ ನಾಲ್ಕು ಸ್ಥಂಭಗಳ ಮಧ್ಯೆ ಛತ್ತಿನ ನಡುವೆ ಕೆಳಮುಖವಾಗಿ ಅರಳಿದ ಕಮಲದ ಕೆತ್ತನೆ ನೋಡುಗರ ಕಣ್ಮನ ಸೆಳೆಯುವಂತಿದೆ. ಗೋಡೆಗಳ ಮೇಲೆ ಸರಸ್ವತಿ, ಗಣೇಶ ಮೂರ್ತಿಗಳಿವೆ. ಹೊರ ಗೋಡೆಗಳು ನಕ್ಷತ್ರಾಕಾರದಲ್ಲಿ ನಿರ್ಮಾಣಗೊಂಡಿದ್ದು, ಕಲ್ಯಾಣ ಚಾಲುಕ್ಯರ ಶಿಲ್ಪ ಕಲಾ ವೈಭವಕ್ಕೆ ಹಿಡಿದ ಕನ್ನಡಿಯಾಗಿದೆ. ದೇವಾಲಯದ ಎದುರಿಗೆ ನಂದಿ ಮಂಟಪವಿದ್ದು, ಶಿವನ ದೇಗುಲ ಕೂಡ ಜೀರ್ಣೋದ್ಧಾರಕ್ಕಾಗಿ ಕಾಯುತ್ತಿದೆ.2002ರಲ್ಲಿ ಇಲ್ಲಿನ ದೇವಾಲಯದಲ್ಲಿನ ಮೂರ್ತಿ ಭಗ್ನಗೊಂಡಾಗ ಧಾರವಾಡದ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸಂರಕ್ಷಣೆಗೆ ಹೆಚ್ಚಿನ ಸಿಬ್ಬಂದಿ ಒದಗಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಆ ಭರವಸೆ ಇಡೇರದೆ ಇರುವುದು ವಿಪರ್ಯಾಸ. ಇಲ್ಲಿ ದತ್ತಾತ್ರೆಯ ದೇಗುಲದ ಕಾವಲಿಗೆ ಮಾತ್ರ ಸಿಬ್ಬಂದಿ ಇದ್ದಾರೆ. ಊರಲ್ಲಿ ಕಂಡ ಕಂಡಲ್ಲಿ ಶಿಲ್ಪ ಕೆತ್ತನೆಗಳು ಅನಾಥವಾಗಿ ಬಿದ್ದುಕೊಂಡಿದ್ದು, ಅವುಗಳ ಬಗ್ಗೆಯೂ ಕಾಳಜಿ ತೋರುವ ಜವಾಬ್ದಾರಿ ಸಂಬಂಧಪಟ್ಟ ಇಲಾಖೆಗಳ ಮೇಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.